ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಭಾರಿ ಆದಾಯ ಸಿಗುತ್ತದೆ ಎಂದು ಜನರನ್ನು ಯಾಮಾರಿಸುವ ಜಾಲವೊಂದನ್ನು ಬೇಧಿಸಿರುವ ಪೊಲೀಸರು 8 ಜನರನ್ನು ಬಂಧಿಸಿದ್ದಾರೆ. ಈ ದಂಧೆಯಲ್ಲಿ ತೊಡಗಿದ್ದವರು ಆಕ್ಸಿಸ್ ಬ್ಯಾಂಕ್‌ನ ಮ್ಯಾನೇಜರ್ ಮತ್ತು ಮೂವರು ಸೇಲ್ಸ್ ಎಕ್ಸಿಕ್ಯೂಟಿವ್‌ಗಳು ಸೇರಿದಂತೆ ಎಂಟು ಜನ ಎನ್ನುವುದು ಆತಂಕಕಾರಿ ವಿಚಾರವಾಗಿದೆ. ನಾಗರಭಾವಿ ಶಾಖೆಯಲ್ಲಿ ಈ ವಂಚನೆ ನಡೆದಿದೆ ಎನ್ನಲಾಗಿದ್ದು, 97 ಕೋಟಿ ರೂಪಾಯಿ ವಂಚನೆ ನಡೆದಿದೆ ಎಂದು ತಿಳಿದುಬಂದಿದೆ.
ಆಕ್ಸಿಸ್ ಬ್ಯಾಂಕ್‌ನ ಉದ್ಯೋಗಿಗಳೇ ಈ ವಂಚನೆ ಮಾಡಿದ್ದಾರೆ ಎನ್ನುವ ಆರೋಪ ಆತಂಕಕ್ಕೆ ಕಾರಣವಾಗಿದೆ. ಈ ರೀತಿಯ ಹಲವು ಘಟನೆಗಳು ನಡೆದಿರುವುದು ವರದಿಯಾಗುತ್ತಿರುತ್ತದೆ. ಇದೇ ರೀತಿ ಕ್ರೆಡಿಟ್ ಕಾರ್ಡ್ ಹೆಸರಿನಲ್ಲಿ ಕೂಡ ವಂಚನೆ ಮಾಡಲಾಗುತ್ತಿದ್ದು, ಜನರ ಹಣಕ್ಕೆ ಕನ್ನ ಹಾಕಲಾಗುತ್ತಿದೆ. ಬೆಂಗಳೂರು ಮೂಲದ ಶಾಂತಿ ಎನ್ನುವವರು ಕೂಡ ಇದೇ ರೀತಿ ವಂಚನೆಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ.

ಶಾಂತಿ ಎನ್ನುವ ಮಹಿಳೆ ತಮ್ಮ ಕ್ರೆಡಿಟ್ ಕಾರ್ಡ್ ಬಳಸಿ ಹೆಚ್ಚಿನ ಹಣವನ್ನು ಖರ್ಚು ಮಾಡುತ್ತಿದ್ದರು, ಇದನ್ನೇ ಬಂಡವಾಳವಾಗಿಸಿಕೊಂಡ ಖದೀಮರು ಕರೆ ಮಾಡುವ ಮೂಲಕ ಮತ್ತು ಇಮೇಲ್ ಬ್ಯಾಂಕ್‌ನಲ್ಲಿ ಕ್ರೆಡಿಟ್ ಕಾರ್ಡ್ ಅನ್ನು ವಿಶೇಷವಾದ ಕಾರ್ಡ್‌ಗೆ ಅಪ್‌ಗ್ರೇಡ್ ಮಾಡಿದರೆ, ಹೆಚ್ಚಿನ ಆಫರ್ ಸಿಗುತ್ತದೆ, ಉಳಿತಾಯ ಕೂಡ ಮಾಡಬಹುದು ಎಂದು ಆಮಿಷ ಒಡ್ಡಿದ್ದಾರೆ.
ಕಾರ್ಡ್ ಬಳಕೆಗೆ ಶುಲ್ಕ ಕೂಡ ಕಡಿಮೆ ಇರುತ್ತದೆ, ಬ್ಯಾಂಕ್ ಶಾಪಿಂಗ್ ವೋಚರ್ ನೀಡುತ್ತದೆ ಎಂದು ಹೇಳಲಾಗಿತ್ತು. ಕೊನೆಗೂ ಶಾಂತಿ ತಮ್ಮ ಕಾರ್ಡ್ ಅಪ್‌ಗ್ರೇಡ್ ಮಾಡಲು ಒಪ್ಪಿಕೊಂಡರು. ಅಪ್‌ಗ್ರೇಡ್ ಮಾಡಲು ಆಕೆಯ ಒಪ್ಪಿಗೆಯನ್ನು ದೃಢೀಕರಿಸುವ ಇಮೇಲ್ ಅನ್ನು ಕಳುಹಿಸಿದರು, ಅದಕ್ಕೆ ಅವರು ದೃಢೀಕರಣದೊಂದಿಗೆ ಪ್ರತ್ಯುತ್ತರಿಸಿದರು. ಆದರೆ ಯಾವುದೇ ಸಂದರ್ಭದಲ್ಲೂ, ಕಾರ್ಡ್ ಸಂಖ್ಯೆಯಂತಹ ಯಾವುದೇ ಮಾಹಿತಿಯನ್ನು ಬ್ಯಾಂಕ್ ಉದ್ಯೋಗಿಗಳೊಂದಿಗೆ ಹಂಚಿಕೊಳ್ಳಲಿಲ್ಲ.
ಆದರೆ ಕೆಲವು ದಿನಗಳ ಬಳಿಕ ಅವರ ಫೋನ್‌ಗೆ 1 ಲಕ್ಷ ರೂಪಾಯಿಗಳ ವೆಚ್ಚದ ಕುರಿತು ಸಂದೇಶಗಳು ಬಂದವು. ವಹಿವಾಟು ಮುಗಿದ ಐದು ಗಂಟೆಗಳ ಬಳಿಕ ಅವರಿಗೆ ಸಂದೇಶಗಳು ಬಂದಿವೆ. ತಕ್ಷಣ ಕಾರ್ಡ್ ಬ್ಲಾಕ್ ಮಾಡಿದ್ದಾರೆ. ಆದರೆ ಅವರು ಹೇಗೆ ವಂಚನೆಗೊಳಗಾದರು ಎಂದು ಗೊತ್ತಾಗಲಿಲ್ಲ. ಅಪ್‌ಗ್ರೇಡ್ ವಿನಂತಿಯನ್ನು ದೃಢೀಕರಿಸುವ ಇಮೇಲ್ ಕಳುಹಿಸಿದ ನಂತರ ಈ ವಂಚನೆಯಾಗಿದೆ. ಡೇಟಾ ಸೋರಿಕೆಯಿಂದ ಹೀಗೆ ಆಗಿರಬಹುದು ಎಂದು ನಿರೀಕ್ಷೆ ಮಾಡಲಾಗಿದೆ, ಬ್ಯಾಂಕಿಗೆ ದೂರು ಕೊಟ್ಟಿದ್ದು, ಪ್ರತಿಕ್ರಿಯೆಗೆ ಕಾಯುತ್ತಿದ್ದಾರೆ.
ಆನ್‌ಲೈನ್ ವಂಚನೆಯಿಂದ ರಕ್ಷಣೆ ಹೇಗೆ?
ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವಂಚನೆಗಳು ಸಾಮಾನ್ಯ ಎನ್ನುವಂತಾಗಿದೆ. ಆದಾಯ ತೆರಿಗೆ ಇಲಾಖೆ, ಕಸ್ಟಮ್ಸ್ ಅಧಿಕಾರಿಗಳು ಎಂದುಕೊಂಡು ಕ್ರೆಡಿಟ್ ಕಾರ್ಡ್ ಮಾಹಿತಿ ಕೇಳುವುದು ಸಾಮಾನ್ಯವಾಗಿದೆ. ಕೆಲವೊಮ್ಮೆ ವಂಚಕರು ಹೊರಗಿನವರಾಗಿರಬಹುದು ಅಥವಾ ಬ್ಯಾಂಕ್ ಸಿಬ್ಬಂದಿಯೇ ಆಗಬಹುದು ನೀವು ಸುರಕ್ಷಿತವಾಗಿರಲು ಈ ಮಾರ್ಗಗಳನ್ನು ಅನುಸರಿಸಿ.
ಫೋನ್ ಅಥವಾ ಇಮೇಲ್ ಮೂಲಕ ವ್ಯವಹಾರ ಮಾಡಬೇಡಿ. ಆನ್‌ಲೈನ್ ವೆಬ್ ಪೋರ್ಟಲ್ ಅಥವಾ ಕಾಲ್ ಸೆಂಟರ್‌ನಂತಹ ಅಧಿಕೃತ ಬ್ಯಾಂಕಿಂಗ್ ಚಾನಲ್‌ಗಳ ಮೂಲಕ ಮಾತ್ರ ವಹಿವಾಟು ನಡೆಸಿ.
ಯಾರಾದರೂ ಕ್ರೆಡಿಟ್ ಕಾರ್ಡ್ ಅಪ್‌ಗ್ರೇಡ್ ಮಾಡುವಂತೆ ನಿಮ್ಮನ್ನು ಸಂಪರ್ಕಿಸಿದರೆ, ನೀವು ಬ್ಯಾಂಕ್ ಕಾಲ್ ಸೆಂಟರ್ ಗೆ ಕರೆ ಮಾಡಿ ಅದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಪ್ರೊಫೈಲ್ ಅಪ್‌ಗ್ರೇಡ್‌ಗೆ ಅರ್ಹವಾಗಿದೆಯಾ ಎನ್ನುವುದನ್ನು ಬ್ಯಾಂಕ್ ಸಿಬ್ಬಂದಿ ಖಚಿತಪಡಿಸುತ್ತಾರೆ.
ಹೆಚ್ಚಿನ ವಹಿವಾಟು ನಡೆಸುತ್ತಿದ್ದರೆ ಮಾತ್ರ ಬ್ಯಾಂಕಿನ ಮೊಬೈಲ್ ಆಪ್ ಅನ್ನು ಇಟ್ಟುಕೊಳ್ಳಿ. ಹೆಚ್ಚಾಗಿ ಆನ್‌ಲೈನ್ ಲಾಗ್ ಇನ್ ಆಗಿ ವ್ಯವಹಾರಗಳನ್ನು ಮಾಡಿ. ಇದು ಒಂದೆರಡು ನಿಮಿಷ ಹೆಚ್ಚಿನ ಸಮಯ ತೆಗೆದುಕೊಂಡರು, ಹೆಚ್ಚು ಸುರಕ್ಷಿತವಾಗಿದೆ.
ಖಾಲಿ ಫಾರ್ಮ್‌ಗಳಿಗೆ ಎಂದಿಗೂ ಸಹಿ ಮಾಡಬೇಡಿ. ಗ್ರಾಹಕರು ನಿಯಮಗಳು ಮತ್ತು ಷರತ್ತುಗಳನ್ನು ಓದಬೇಕು ಮತ್ತು ಸಹಿ ಮಾಡುವ ಮೊದಲು ಎಲ್ಲಾ ಫಾರ್ಮ್‌ಗಳನ್ನು ಸ್ವತಃ ಭರ್ತಿ ಮಾಡುವುದನ್ನು ಖಚಿತಪಡಿಸಿಕೊಳ್ಳಬೇಕು.


Click it and Unblock the Notifications