ಇಂದು ಕರ್ತವ್ಯ ಭವನದಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು, 2026-27 ರ ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದಾಗಿದೆ. ಏರಿಳಿತಗಳು, ಆಗು ಹೋಗುಗಳ ಕುತೂಹಲಕ್ಕೆ ತೆರೆ ಬಿದ್ದಿದೆ. ಈ ವರ್ಷದ ಬಜೆಟ್‌ನಲ್ಲಿ ಹಲವು ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ. ಈ ಬಜೆಟ್ ಮುಖ್ಯವಾಗಿ ದೇಶೀಯ ಉತ್ಪಾದನೆ ಮತ್ತು ನಾಗರಿಕರಿಗೆ ಅಗತ್ಯವಾದ ಆರೋಗ್ಯ ಸೇವೆಗಳನ್ನು ಸುಲಭವಾಗಿ ಲಭ್ಯವಾಗಿಸುವುದಕ್ಕೆ ಒತ್ತು ನೀಡಿದೆ.

ಕಸ್ಟಮ್ಸ್ ಸುಂಕಗಳನ್ನು ಸರಳಗೊಳಿಸಿ, ದೇಶದಲ್ಲಿ ತಯಾರಾಗುವ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಲಾಗಿದೆ. ಇದರಿಂದ ಎಲೆಕ್ಟ್ರಾನಿಕ್ಸ್, ಸಾಗರ ಉತ್ಪನ್ನಗಳು ಮತ್ತು ಔಷಧಿ ಕ್ಷೇತ್ರಗಳಿಗೆ ಹೆಚ್ಚಿನ ಅವಕಾಶ ಸಿಗಲಿದೆ. ಹಾಗಾದ್ರೆ ಈ ವರ್ಷದ ಬಜೆಟ್‌ನಲ್ಲಿ ಯಾವ್ಯಾವ ವಸ್ತುಗಳು ಅಗ್ಗವಾಗಿವೆ, ಯಾವ್ಯಾವ ವಸ್ತುಗಳು ದುಬಾರಿಯಾಗಿವೆ ಎಂದು ತಿಳಿಯಿರಿ.
ಅಗ್ಗವಾಗುವ ವಸ್ತುಗಳು:
ಬಜೆಟ್ನಲ್ಲಿ ಕೆಲವು ಅವಶ್ಯಕ ವಸ್ತುಗಳ ಬೆಲೆ ಇಳಿಸುವುದಕ್ಕೂ ಆದ್ಯತೆ ನೀಡಲಾಗಿದೆ. ಮಧುಮೇಹ ಮತ್ತು ಕ್ಯಾನ್ಸರ್ ಚಿಕಿತ್ಸೆಗೆ ಬೇಕಾದ 17 ಜೀವ ರಕ್ಷಿಸುವ ಔಷಧಿಗಳು ಸುಂಕ ವಿನಾಯಿತಿಯಿಂದ ಕೈಗೆಟಕುವ ಬೆಲೆಗೆ ಲಭ್ಯವಾಗಲಿವೆ. ಮೊಬೈಲ್ ಫೋನ್‌ಗಳ ಉತ್ಪಾದನಾ ಭಾಗಗಳ ತೆರಿಗೆ ಕಡಿತದಿಂದ ಬೆಲೆಗಳು ಇಳಿಯುವ ಸಾಧ್ಯತೆ ಇದೆ. ಲಿಥಿಯಂ-ಐಯಾನ್ ಬ್ಯಾಟರಿಗಳಿಗೆ ನೀಡಿರುವ ವಿನಾಯಿತಿ EV ವಾಹನಗಳ ಬೆಲೆಯನ್ನು ತಗ್ಗಿಸುತ್ತದೆ. ಚರ್ಮ ಉದ್ಯಮ ಮತ್ತು ಜವಳಿ ಉತ್ಪನ್ನಗಳ ಪೂರೈಕೆಗೂ ಬೆಲೆ ಇಳಿಕೆ ಸಿಗಲಿದೆ. ಸಮುದ್ರಾಹಾರ ಸಂಸ್ಕರಣೆಗಾಗಿ ಅಗತ್ಯವಾದ ಕಚ್ಚಾ ವಸ್ತುಗಳ ಸುಂಕರಹಿತ ಆಮದು ಮಿತಿಯನ್ನು 3%ಕ್ಕೆ ಹೆಚ್ಚಿಸಲಾಗಿದೆ.
ದುಬಾರಿಯಾಗುವ ವಸ್ತುಗಳು:
ಕೆಲವು ವಸ್ತುಗಳು ದುಬಾರಿಯಾಗಲು ಸಾಧ್ಯತೆ ಇದೆ. ಇದರಿಂದ ಸ್ಥಳೀಯ ಉತ್ಪಾದಕರಿಗೆ ರಕ್ಷಣೆ ಸಿಗುತ್ತದೆ. ಕೈಗಾರಿಕಾ ಯಂತ್ರೋಪಕರಣಗಳು, ಬಿಡಿಭಾಗಗಳು ಮತ್ತು ತಂಬಾಕು ಉತ್ಪನ್ನಗಳ (ಸಿಗರೇಟ್, ಪಾನ್ ಮಸಾಲಾ) ಬೆಲೆ ಏರುತ್ತವೆ. ಇದರಿಂದ ಅವುಗಳ ಬಳಕೆ ಕಡಿಮೆಯಾಗುವುದು ಮತ್ತು ಸರ್ಕಾರಕ್ಕೆ ಆದಾಯವೂ ಹೆಚ್ಚಾಗುವುದು.
ರಫ್ತು ಮತ್ತು ಉದ್ಯಮಕ್ಕೆ ಉತ್ತೇಜನ:
ಬಜೆಟ್ ರಫ್ತುದಾರರಿಗೆ ಸಹಕಾರ ನೀಡುತ್ತದೆ. ಚರ್ಮ ಉತ್ಪನ್ನಗಳ ರಫ್ತು ಅವಧಿಯನ್ನು 6 ತಿಂಗಳಿನಿಂದ ಒಂದು ವರ್ಷಕ್ಕೆ ವಿಸ್ತರಿಸಲಾಗಿದೆ. ಸಮುದ್ರಾಹಾರ ಮತ್ತು ಜವಳಿ ಉದ್ಯಮಗಳು ಕಚ್ಚಾ ವಸ್ತುಗಳ ಸುಂಕ ಕಡಿತದಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಲು ನೆರವಾಗಲಿದೆ. ಎಲೆಕ್ಟ್ರಾನಿಕ್ಸ್ ವಲಯದಲ್ಲಿ ದೇಶೀಯ ಉತ್ಪಾದನೆಗೆ ಹೆಚ್ಚು ಒತ್ತು ನೀಡಲಾಗಿದೆ, ಹೆಚ್ಚಿನ ಸುಂಕವನ್ನು ಸಿದ್ಧ ಉತ್ಪನ್ನಗಳ ಮೇಲೆ ವಿಧಿಸಲಾಗಿದ್ದು, ಸ್ಥಳೀಯ ಮೌಲ್ಯವರ್ಧನೆಗೆ ಸಹಾಯವಾಗಿದೆ.
ಈ ಬಜೆಟ್ ದೇಶೀಯ ಉದ್ಯಮಕ್ಕೆ ಉತ್ತೇಜನ ನೀಡುವುದರ ಜೊತೆಗೆ ಜನರಿಗೆ ಅಗತ್ಯ ವಸ್ತುಗಳನ್ನು ಕಡಿಮೆ ಬೆಲೆಗೆ ಲಭ್ಯವಾಗುವಂತೆ ಮಾಡುತ್ತದೆ. ಆರೋಗ್ಯ, ಎಲೆಕ್ಟ್ರಾನಿಕ್ಸ್, EV, ಸಮುದ್ರಾಹಾರ ಮತ್ತು ಚರ್ಮ ಉದ್ಯಮಗಳಿಗೆ ವಿಶೇಷ ಗಮನ ನೀಡಲಾಗಿದೆ. ಇದು ದೀರ್ಘಕಾಲದಲ್ಲಿ ಭಾರತದ ಆರ್ಥಿಕತೆಯನ್ನು ಬಲಪಡಿಸುವ ಪ್ರಮುಖ ಬಜೆಟ್ ಎಂದು ತಿಳಿದು ಬಂದಿದೆ.


Click it and Unblock the Notifications