2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ (Union Budget 2026-27) ಬಗ್ಗೆ ಭಾರೀ ನಿರೀಕ್ಷೆಗಳು ಹುಟ್ಟಿಕೊಂಡಿದೆ. ಯಾವ ಕ್ಷೇತ್ರಕ್ಕೆ, ಸರ್ಕಾರದಿಂದ ಹೇಗೆ ಕೊಡುಗೆ ಸಿಗಲಿದೆ ಎಂಬುದರ ಬಗ್ಗೆ ತಿಳಿಯಲು ಕಾತುರದಲ್ಲಿದ್ದಾರೆ. ಅದರಲ್ಲೂ 2026ರ ಕೇಂದ್ರ ಬಜೆಟ್‌ನಿಂದ ಆರೋಗ್ಯ ಕ್ಷೇತ್ರ ಭಾರೀ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ನಾಳೆ, ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (FM Nirmala Sitharaman) ಅವರು ಮಂಡಿಸಲಿರುವ ಈ ಬಜೆಟ್, ವೈದ್ಯಕೀಯ ಕ್ಷೇತ್ರಕ್ಕೆ (Health Sector) ಏನಾದರು ಕೊಡುಗೆ ನೀಡುತ್ತಾ ಎಂದು ಕಾದು ನೋಡಬೇಕಿದೆ. ಅಲ್ಲದೇ ಇದರಿಂದ ಆರೋಗ್ಯ ಸೇವೆಗಳನ್ನು ಇನ್ನಷ್ಟು ಅಗ್ಗವಾಗಿಸಲು ಮತ್ತು ಎಲ್ಲರಿಗೂ ಸುಲಭವಾಗಿ ತಲುಪುವಂತೆ ಮಾಡಲು ಸರ್ಕಾರ ಯಾವ ರೀತಿ ನಿರ್ಧಾರಗಳನ್ನು ಕೈಗೊಳ್ಳುತ್ತೆ ಎಂದು ನಾಳೆ ಬಹಿರಂಗವಾಗಲಿದೆ.

ವೈದ್ಯಕೀಯ ಕ್ಷೇತ್ರದಲ್ಲಿ ಭಾರತದ ಖರ್ಚು!
ವೈದ್ಯಕೀಯ ವೆಚ್ಚದಲ್ಲಿ ಭಾರತವು ತನ್ನ GDPಯ ಕೇವಲ 3-4% ಮಾತ್ರ ವಿನಿಯೋಗಿಸುತ್ತದೆ. ಇದಕ್ಕೆ ಹೋಲಿಸಿದರೆ, ಅಮೆರಿಕ ತನ್ನ GDPಯ 17-18%, ಜಪಾನ್ 10-11%, ರಷ್ಯಾ 5-6%, ಮತ್ತು ಚೀನಾ 6-7% ಅನ್ನು ಆರೋಗ್ಯ ಸೇವೆಗಳಿಗೆ ಮೀಸಲಿಡುತ್ತವೆ. ಆದ್ದರಿಂದ ಈ ಬಾರಿ ಭಾರತ ಯಾವ ರೀತಿ ಗಮನಹರಿಸಲಿದೆ ಎಂಬುದು ಹಲವರ ಕಾತುರ.
ಕಳೆದ ಬಜೆಟ್‌ಗಳಲ್ಲಿ, ಸರ್ಕಾರವು ಡಿಜಿಟಲ್ ಆರೋಗ್ಯ, ವೈದ್ಯಕೀಯ ಮೂಲಸೌಕರ್ಯ, ದೇಶೀಯ ಉತ್ಪಾದನೆ ಮತ್ತು ಕೈಗೆಟುಕುವ ಔಷಧಗಳಿಗೂ ಒತ್ತು ನೀಡಿದೆ. 2025-26ರ ಹಣಕಾಸು ವರ್ಷದಲ್ಲಿ, ಆರೋಗ್ಯ ಸಚಿವಾಲಯಕ್ಕೆ ಸುಮಾರು ₹1 ಲಕ್ಷ ಕೋಟಿ ಹಂಚಿಕೆಯಾಗಿದ್ದು, ಇದು ಹಿಂದಿನ ವರ್ಷಕ್ಕಿಂತ 11% ಹೆಚ್ಚಾಗಿತ್ತು.
ಬಜೆಟ್ ಸಂಬಂಧಿಸಿ ಆರೋಗ್ಯ ವಲಯದಿಂದ ಭಾರೀ ನಿರೀಕ್ಷೆ:
ಆರೋಗ್ಯ ಬಜೆಟ್ ಹೆಚ್ಚಳವು ಪ್ರಮುಖ ನಿರೀಕ್ಷೆಯಾಗಿದೆ. ಸರ್ಕಾರ ತನ್ನ ಭರವಸೆಯಂತೆ ಆರೋಗ್ಯ ವೆಚ್ಚವನ್ನು GDPಯ 2.5%ಕ್ಕೆ ಹೆಚ್ಚಿಸಲು ಹಂಚಿಕೆ ಹೆಚ್ಚಿಸಲು ತಜ್ಞರು ಒತ್ತಾಯಿಸಿದ್ದಾರೆ. ಪ್ರಸ್ತುತ ಇದು ಸುಮಾರು 1.9% ರಷ್ಟಿದೆ. FICCI ಮತ್ತು NASSCOM ನಂತಹ ಸಂಘಟನೆಗಳು ಮೂಲಸೌಕರ್ಯ ಅಭಿವೃದ್ಧಿಗಾಗಿ ಕನಿಷ್ಠ 15-20% ಹೆಚ್ಚಳಕ್ಕೆ ಬೇಡಿಕೆಯಿಟ್ಟಿವೆ.
ಆಯುಷ್ಮಾನ್ ಭಾರತ್ ವಿಸ್ತರಣೆಗೆ ಒತ್ತು
2026ರ ಬಜೆಟ್‌ನಲ್ಲಿ ಆಯುಷ್ಮಾನ್ ಭಾರತ್ (PM-JAY) ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸುವ ನಿರೀಕ್ಷೆಯಿದೆ. "ಮಿಸ್ಸಿಂಗ್ ಮಿಡಲ್" (ಬಡವರೂ ಅಲ್ಲ, ಕಾರ್ಪೊರೇಟ್ ವಿಮೆಯ ವ್ಯಾಪ್ತಿಗೂ ಬಾರದವರು) ವರ್ಗದವರನ್ನು ಸೇರ್ಪಡೆಗೊಳಿಸುವ ಬೇಡಿಕೆಯಿದೆ. 70 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರಿಗೆ ಉಚಿತ ಚಿಕಿತ್ಸಾ ಸೌಲಭ್ಯಗಳನ್ನು ನೀಡುವ ಸಾಧ್ಯತೆ ಇದೆ.
ವೈದ್ಯಕೀಯ ಸಾಧನಗಳು ಮತ್ತು PLI ಯೋಜನೆ
ಭಾರತವನ್ನು 'ವೈದ್ಯಕೀಯ ಸಾಧನಗಳ ಹಬ್' ಆಗಿ ರೂಪಿಸಲು, ಉದ್ಯಮವು PLI (Production Linked Incentive) 2.0 ಯೋಜನೆಗೆ ಬೇಡಿಕೆಯಿಟ್ಟಿದೆ. ಆಮದು ಅವಲಂಬನೆ ಕಡಿಮೆ ಮಾಡಲು ಕಚ್ಚಾ ವಸ್ತುಗಳ ಮೇಲಿನ ಕಸ್ಟಮ್ಸ್ ಸುಂಕ ಕಡಿತಗೊಳಿಸುವ ನಿರೀಕ್ಷೆಯಿದೆ. ಜೀವ ಉಳಿಸುವ ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳ ಮೇಲಿನ GST ದರವನ್ನು 12% ರಿಂದ 5% ಕ್ಕೆ ಇಳಿಸಬೇಕೆಂಬುದು ದೀರ್ಘಕಾಲದ ಬೇಡಿಕೆಯಾಗಿದೆ.
ಸಂಶೋಧನೆ ಮತ್ತು ಅಭಿವೃದ್ಧಿಗೆ (R&D) ಒತ್ತು
ಸಂಶೋಧನೆ ಮತ್ತು ಅಭಿವೃದ್ಧಿಗೆ (R&D) ಒತ್ತು ನೀಡುವುದು ಮತ್ತೊಂದು ಪ್ರಮುಖ ಅಂಶ. ಹೊಸ ಔಷಧಗಳ ಆವಿಷ್ಕಾರಕ್ಕಾಗಿ ಸರ್ಕಾರವು ವಿಶೇಷ ನಿಧಿಗಳನ್ನು ಹಂಚಿಕೆ ಮಾಡಬೇಕೆಂದು ಔಷಧೋದ್ಯಮ ಬಯಸಿದೆ.
ವೈದ್ಯಕೀಯ ವಿಮೆ ಮತ್ತು ತೆರಿಗೆ ಪ್ರಯೋಜನಗಳು:
ವೈದ್ಯಕೀಯ ವಿಮೆ ಪ್ರೀಮಿಯಂ ಮೇಲೆ ತೆರಿಗೆ ವಿನಾಯಿತಿಗಳ ವಿಸ್ತರಣೆ ನಿರೀಕ್ಷಿಸಲಾಗಿದೆ. ಸೆಕ್ಷನ್ 80D ಅಡಿಯಲ್ಲಿ ಈ ಮಿತಿಯನ್ನು ₹25,000 ರಿಂದ ₹50,000 ಕ್ಕೆ (ಹಿರಿಯ ನಾಗರಿಕರಿಗೆ ₹1 ಲಕ್ಷ) ಹೆಚ್ಚಿಸುವ ಸಾಧ್ಯತೆಯಿದೆ. ಇದು ಸಾಮಾನ್ಯ ಜನರಿಗೂ ಹೆಚ್ಚು ಪ್ರಯೋಜನವಾಗಲಿದೆ.
'ಮದರ್ ಆಫ್ ಆಲ್ ಡೀಲ್' (India-EU FTA Deal) ನಂತರ ವೈದ್ಯಕೀಯ ಪ್ರವಾಸೋದ್ಯಮ ಮತ್ತು ಔಷಧ ರಫ್ತಿನಲ್ಲಿ ಭಾರತದ ಪಾತ್ರ ಹೆಚ್ಚಲಿದೆ. ಈ ಬಜೆಟ್‌ನಲ್ಲಿ ಡಿಜಿಟಲ್ ಹೆಲ್ತ್ ಮಿಷನ್ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆಧುನೀಕರಣಕ್ಕೆ ದೊಡ್ಡ ಹೂಡಿಕೆ ನಿರೀಕ್ಷಿಸಬಹುದು ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


Click it and Unblock the Notifications