ಭಾರತ ಸರ್ಕಾರ (Indian Govt) ಜಾರಿಗೆ ತಂದ ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಯೋಜನೆ (PMIS) ಯುವಕರಿಗೆ ಉದ್ಯೋಗವಕಾಶ ಮತ್ತು ತರಬೇತಿ ನೀಡುವ ಮಹತ್ವದ ಯೋಜನೆಯಾಗಿದೆ. ಇದೀಗ ಈ ಮಧ್ಯೆ 2026ರ ಕೇಂದ್ರ ಬಜೆಟ್‌ನಲ್ಲಿ ಈ ಸ್ಕೀಮ್‌ನಲ್ಲಿ ಏನಾದರು ಬದಲಾವಣೆಯಾಗುತ್ತಾ ಎಂಬ ಪ್ರಶ್ನೆ ಉದ್ಭವಿಸಿದೆ. ಬಜೆಟ್ 2026ರಲ್ಲಿ (Union Budget 2026) ಈ ಯೋಜನೆಯಲ್ಲಿ ಭಾರೀ ಬದಲಾವಣೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ (MCA) ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆಯನ್ನು (PMIS) ಪರಿಷ್ಕರಿಸಲು ಯೋಜನೆ ರೂಪಿಸಿದೆ ಎನ್ನಲಾಗುತ್ತಿದೆ. ಉದ್ಯೋಗಾಕಾಂಕ್ಷಿಗಳ ಭಾಗವಹಿಸುವಿಕೆಯನ್ನು ಹೆಚ್ಚಿಸಿ, ಹೆಚ್ಚು ಕಂಪನಿಗಳು ತರಬೇತಿ ನೀಡುವಂತೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ.

ಹೌದು, ಕಾರ್ಪೋರೇಟ್ ಅಫೇರ್ಸ್ ಸಚಿವಾಲಯ (MCA) ಈ ಯೋಜನೆಯನ್ನು ಪರಿಷ್ಕರಿಸಲು ಸಿದ್ಧವಾಗಿದೆ ಎನ್ನಲಾಗಿದೆ. ಆ ಪ್ರಕಾರ ಯೋಜನೆಯ ವ್ಯಾಪ್ತಿ, ಕನಿಷ್ಟ ವಯಸ್ಸು ಮತ್ತು ಇಂಟರ್ನ್‌ಶಿಪ್ ಅವಧಿ ಕೂಡಾ ಬದಲಾಗಬಹುದು. ಇನ್ನು ಈ ಎಲ್ಲಾ ನಿರೀಕ್ಷೆಗಳು ಫೆಬ್ರವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರು ಪ್ರಸ್ತುತ ಪಡಿಸಲಿರುವ ಬಜೆಟ್ ಮೇಲೆ ಕೇಂದ್ರೀಕೃತವಾಗಿದೆ.
ಪಿಎಂ ಇಂಟರ್ನ್‌ಶಿಪ್ ಯೋಜನೆಯ ವಿವರ:
ಪಿಎಂ ಇಂಟರ್ನ್‌ಶಿಪ್ ಯೋಜನೆಯನ್ನು 2024ರ ಬಜೆಟ್‌ನಲ್ಲಿ ಉದ್ಯೋಗಾಕಾಂಕ್ಷಿಗಳಿಗಾಗಿ ಘೋಷಿಸಲಾಗಿತ್ತು. ಇದು 5 ವರ್ಷಗಳಲ್ಲಿ 1 ಕೋಟಿ ಯುವಕರಿಗೆ ಟಾಪ್ 500 ಕಂಪನಿಗಳಲ್ಲಿ ಇಂಟರ್ನ್‌ಶಿಪ್ ಅವಕಾಶ ನೀಡುವ ಗುರಿ ಹೊಂದಿದೆ. ಪ್ರಸ್ತುತ ಈ ಯೋಜನೆಯ ನಿಯಮಗಳು ಕೆಳಗೆ ನೀಡಲಾಗಿದೆ.
- ಸ್ಟೈಪೆಂಡ್: ಮಾಸಿಕ 5000. ಜೊತೆಗೆ ಒಂದು ಬಾರಿ 6000 ಸಹಾಯಧನ ಮತ್ತು ಇನ್ಶೂರೆನ್ಸ್ ಕವರ್ ಮಾಡಲಾಗುತ್ತದೆ.
- ಕನಿಷ್ಠ ವಯಸ್ಸು: 21 ವರ್ಷ
- ಅವಧಿ: 6 ತಿಂಗಳು
- ಕಂಪನಿಗಳು: ಪ್ರಸ್ತುತ 549 ಕಂಪನಿಗಳು ಮಾತ್ರ ಈ ಯೋಜನೆಯಲ್ಲಿ ಕೈಜೋಡಿಸಿದೆ.
ಬಜೆಟ್ 2026ರಲ್ಲಿ ಈ ಯೋಜನೆಯ ನಿರೀಕ್ಷೆಗಳೇನು?
- ಕಾರ್ಪೊರೇಟ್ ಅಫೇರ್ಸ್ ಸಚಿವಾಲಯವು ಯೋಜನೆಯನ್ನು ವಿಸ್ತರಿಸುವ ಬಗ್ಗೆ ಪ್ಲಾನ್ ಸಿದ್ಧಪಡಿಸಿದ್ದು, ಈ ಬಗ್ಗೆ ಬಜೆಟ್‌ನಲ್ಲಿ ಘೋಷಣೆಯಾಗುವ ನಿರೀಕ್ಷೆಯಿದೆ.
- ಸ್ಟೈಪೆಂಡ್ ಹೆಚ್ಚಳ: ಮಾಸಿಕ 5000 ರಿಂದ 11,800 ರೂ.ಗೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದು ಇಂಟರ್ನ್‌ಶಿಪ್ ಬರುವವರ ಜೀವನ ವೆಚ್ಚಕ್ಕೆ ಸಹಕಾರಿಯಾಗುವಂತೆ ಜಾರಿಗೆ ತರಲು ಪ್ಲಾನ್ ಮಾಡಲಾಗಿದೆ.
- ಕಂಪನಿಗಳ ವಿಸ್ತರಣೆ: ಪ್ರಸ್ತುತ 549 ಕಂಪನಿಗಳಿಂದ 6,000 ಕಂಪನಿಗಳಿಗೆ ಹೆಚ್ಚಿಸಲು ಯೋಜನೆ ರೂಪಿಸಲಾಗಿದೆ. ಇದರಿಂದ ಹೆಚ್ಚು ಅವಕಾಶಗಳು ಸಹ ಸಿಗಲಿದೆ.
- ಕನಿಷ್ಠ ವಯಸ್ಸಿನಲ್ಲಿ ಇಳಿಕೆ: ಪ್ರಸ್ತುತ ನಿಯಮಗಳ ಪ್ರಕಾರ, 21 ವರ್ಷಕ್ಕೆ ಕನಿಷ್ಠ ವಯಸ್ಸು ನಿಗದಿ ಪಡಿಸಲಾಗಿದೆ. ಆದ್ರೆ ಇದನ್ನು 18 ವರ್ಷಕ್ಕೆ ಇಳಿಸಲಾಗುವುದು ಎಂದು ಹೇಳಲಾಗಿದೆ. ಇದರಿಂದ ಕೇವಲ ಪದವಿ ಪೂರ್ಣಗೊಳಿಸಿದವರಿಗೂ ಸಹಕಾರಿಯಾಗಲಿದೆ.
- ಇಂಟರ್ನ್‌ಶಿಪ್ ಅವಧಿ ಹೆಚ್ಚಳ: ಪ್ರಸ್ತುತ ಇರುವ ಇಂಟರ್ನ್‌ಶಿಪ್ ಅವಧಿಯನ್ನು 6 ತಿಂಗಳಿಂದ 1 ವರ್ಷಕ್ಕೆ ವಿಸ್ತರಿಸುವ ಯೋಜನೆ ರೂಪಿಸಲಾಗಿದೆ.
ಒಂದು ವೇಳೆ ಈ ಎಲ್ಲಾ ನಿರೀಕ್ಷೆಗಳು ಬಜೆಟ್ 2026ರಲ್ಲಿ ಅಧಿಕೃತವಾಗಿ ಘೋಷಣೆಯಾದರೆ, ಯುವಕರಿಗೆ ದೊಡ್ಡ ಅವಕಾಶ ಸಿಗಲಿದೆ. ಅಲ್ಲದೇ ದೇಶದಲ್ಲಿ ನಿರುದ್ಯೋಗ ಸಮಸ್ಯೆಯೂ ಕಡಿಮೆಯಾಗಿ, ಅನೇಕರಿಗೆ ಉದ್ಯೋಗ ಗಿಟ್ಟಿಸಿಕೊಳ್ಳಲು ಸಹಕಾರಿಯಾಗುತ್ತದೆ.


Click it and Unblock the Notifications