ದೇಶದಲ್ಲಿ ಜನಪ್ರಿಯಗೊಂಡಿರುವ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಆಧಾರಿತ ಪಾವತಿಗೆ ಈಗ ಜಗಮನ್ನಣೆ ಸಿಕ್ಕಿದ್ದು ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಲೇ ಸಾಗುತ್ತಿದೆ. ಇದೀಗಾ ಮತ್ತೊಂದು ಶುಭಸುದ್ದಿ ಅಂದ್ರೆ ಶೀಘ್ರದಲ್ಲೇ ಕತಾರ್ ನಲ್ಲೂ ಯುಪಿಐ ಬಳಸಿ ಪಾವತಿಸಲು ಸಾಧ್ಯವಾಗುತ್ತದೆ.!
ಜುಲೈ 2024 ರಲ್ಲಿ ಕತಾರ್ ನ್ಯಾಷನಲ್ ಬ್ಯಾಂಕಿನ (QNB) ಪಾಯಿಂಟ್-ಆಫ್-ಸೇಲ್ ವ್ಯವಸ್ಥೆಗಳೊಂದಿಗೆ ಯಶಸ್ವಿಯಾಗಿ ಸಂಯೋಜಿಸಿದ ನಂತರ, UPI ಈಗ ಕತಾರ್‌ನಲ್ಲಿ ಪೂರ್ಣ ಪ್ರಮಾಣದ ಬಳಕೆಗೆ ಸಿದ್ಧವಾಗಿದ್ದು ಈ ಕುರಿತಾಗಿ ಇತ್ತೀಚೆಗೆ ದೋಹಾದಲ್ಲಿ ನಡೆದ ವೆಬ್ ಶೃಂಗಸಭೆಯಲ್ಲಿ " ಭಾರತ ಮತ್ತು ಕತಾರ್ ನಡುವಿನ ಡಿಜಿಟಲ್ ವಹಿವಾಟುಗಳನ್ನು ಹೆಚ್ಚಿಸುವಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ" ಎಂದು ಕತಾರ್‌ಗೆ ಭಾರತದ ರಾಯಭಾರಿ ವಿಪುಲ್ ಹೇಳಿದ್ದಾರೆ.

ಕತಾರ್‌ನಲ್ಲಿ ಯುಪಿಐ ಪೂರ್ತಿಯಾಗಿ ಕಾರ್ಯನಿರ್ವಹಿಸಲು ಸಿದ್ಧವಾಗಿದೆ. ಕತಾರ್ ನ್ಯಾಷನಲ್ ಬ್ಯಾಂಕ್ (ಕ್ಯೂಎನ್‌ಬಿ) ಜೊತೆಗಿನ ಸಂಪರ್ಕ ಕಾರ್ಯ ಪೂರ್ಣಗೊಂಡಿದೆ, ಪರೀಕ್ಷೆಗಳು ಯಶಸ್ವಿಯಾಗಿ ಮುಗಿದಿವೆ. ಹೀಗಾಗಿ ಕತಾರ್ ಶೀಘ್ರದಲ್ಲೇ ಯುಪಿಐನ ಸಂಪೂರ್ಣ ಬಿಡುಗಡೆಯನ್ನು ಕಾಣಲಿದೆ. ನಮ್ಮ ದೇಶಗಳ ನಡುವೆ ಡಿಜಿಟಲ್ ಪಾವತಿಗಳನ್ನು ಹೆಚ್ಚಿಸುವಲ್ಲಿ ಇದು ಒಂದು ಪ್ರಮುಖ ಮೈಲಿಗಲ್ಲು" ಎಂದು ವಿಪುಲ್ ತಿಳಿಸಿದ್ದಾರೆ.
ಭಾರತವು ಪ್ರತಿಭಾವಂತ ಜನರ ಸಮೂಹವನ್ನು ಹೊಂದಿದೆ, ತಂತ್ರಜ್ಞಾನದ ಬಗ್ಗೆ ಹೆಚ್ಚು ಗಮನವನ್ನು ನೀಡುತ್ತಿದೆ, ಮತ್ತು 150,000 ಕ್ಕಿಂತ ಹೆಚ್ಚು ಸ್ಟಾರ್ಟಪ್‌ಗಳನ್ನು ಹೊಂದಿರುವ ದೊಡ್ಡ ಸ್ಟಾರ್ಟಪ್ ವ್ಯವಸ್ಥೆಯನ್ನು ಸಹ ಹೊಂದಿದೆ. ಚಿಲ್ಲರೆ ವ್ಯಾಪಾರ, ನವೀಕರಿಸಬಹುದಾದ ಇಂಧನ, ಐಟಿ ಮತ್ತು ಶಿಕ್ಷಣದಂತಹ ಕ್ಷೇತ್ರಗಳಲ್ಲಿ ಭಾರತ ಈಗಾಗಲೇ 1.5 ಬಿಲಿಯನ್ ಡಾಲರ್ ಹೂಡಿಕೆ ಮಾಡಿದೆ. ಕತಾರ್‌ನಿಂದ ಮೂಲಸೌಕರ್ಯ, ಫಿನ್‌ಟೆಕ್, ಸ್ಪೇಸ್‌ಟೆಕ್ ಮುಂತಾದ ಕ್ಷೇತ್ರಗಳಿಗೆ ಇನ್ನೂ 10 ಬಿಲಿಯನ್ ಡಾಲರ್ ಹೂಡಿಕೆ ಬರುವ ನಿರೀಕ್ಷೆಯಿದೆ ಎಂದು ವಿಪುಲ್ ಹೇಳಿದ್ದಾರೆ.
ಯುಪಿಐ ವಿಸ್ತರಣೆಯು ಕತಾರ್ ನಲ್ಲಿರುವ ಭಾರತೀಯರಿಗೆ ಪ್ರಯೋಜನವೇನು?
ಯುಪಿಐ ವಿಸ್ತರಣೆಯಿಂದಾಗಿ ಕತಾರ್‌ನಲ್ಲಿ ವಾಸಿಸುವ 8,00,000 ಕ್ಕೂ ಹೆಚ್ಚು ಭಾರತೀಯರಿಗೆ ಹಣಕಾಸಿನ ವಹಿವಾಟುಗಳು ಸುಲಭವಾಗುತ್ತವೆ. ಈ ಕ್ರಮವು ಜಾಗತಿಕವಾಗಿ ತನ್ನ ಫಿನ್‌ಟೆಕ್ ಹೆಜ್ಜೆಗುರುತನ್ನು ಬಲಪಡಿಸುವ ಭಾರತದ ಕಾರ್ಯತಂತ್ರದ ಮತ್ತೊಂದು ಹೆಜ್ಜೆಯಾಗಿದೆ. ಕತಾರ್‌ನಲ್ಲಿರುವ ಭಾರತೀಯರು ಶೀಘ್ರದಲ್ಲೇ UPI ಬಳಸಿಕೊಂಡು ರಿಯಲ್ -ಟೈಮ್, ವೆಚ್ಚ-ಪರಿಣಾಮಕಾರಿ ವಹಿವಾಟುಗಳನ್ನು ನಡೆಸಲು ಸಾಧ್ಯವಾಗುತ್ತದೆ. ಜೊತೆಗೆ ಸಾಂಪ್ರದಾಯಿಕ ಬ್ಯಾಂಕಿಂಗ್ ತೊಂದರೆಗಳಿಲ್ಲದೆ ಪಾವತಿಗಳನ್ನು ನಿರ್ವಹಿಸುವುದು ಸುಲಭವಾಗುತ್ತದೆ. ಫಿನ್‌ಟೆಕ್‌ನ ಹೊರತಾಗಿ, ಭಾರತ ಮತ್ತು ಕತಾರ್ ಸ್ಟಾರ್ಟ್‌ಅಪ್‌ಗಳು ಸಹಯೋಗವನ್ನು ಮತ್ತಷ್ಟು ಸದೃಢಗೊಳಿಸುತ್ತಿದೆ.
ಯುಪಿಐ ಜಗಮನ್ನಣೆ ಹೆಚ್ಚುತ್ತಿದೆ:
ಯುಪಿಐ ಜಗತ್ತಿನಾದ್ಯಂತ ವಿಸ್ತರಿಸುತ್ತಿದೆ. ಕತಾರ್‌ನಲ್ಲಿ ಯುಪಿಐ ಸೇರ್ಪಡೆಯಿಂದ, ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ವ್ಯಾಪ್ತಿಯನ್ನು ಹೆಚ್ಚಿಸುತ್ತಿದೆ. ಈಗಾಗಲೇ ಯುಎಇ, ಸಿಂಗಾಪುರ, ಫ್ರಾನ್ಸ್, ಶ್ರೀಲಂಕಾ, ನೇಪಾಳ ಮತ್ತು ಮಾರಿಷಸ್‌ನಲ್ಲಿ ಯುಪಿಐ ಪಾವತಿ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದೆ. ಮಲೇಷ್ಯಾ, ಫಿಲಿಪೈನ್ಸ್ ಮತ್ತು ಥೈಲ್ಯಾಂಡ್ ದೇಶಗಳ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಜೋಡಿಸುವ ಪ್ರಾಜೆಕ್ಟ್ ನೆಕ್ಸಸ್‌ನಲ್ಲೂ ಯುಪಿಐ ಭಾಗಿಯಾಗಿದೆ.
ಪ್ಲುಟೋಸೋನ್‌ನ ವ್ಯವಸ್ಥಾಪಕ ಪಾಲುದಾರ ಮತ್ತು ಸಂಸ್ಥಾಪಕ ರೋಹಿತ್ ಮಹಾಜನ್ ಈ ವಿಸ್ತರಣೆಯನ್ನು ಗಡಿಯಾಚೆಗಿನ ಆರ್ಥಿಕ ಪ್ರವೇಶಕ್ಕಾಗಿ "ಗೇಮ್-ಚೇಂಜರ್" ಎಂದು ವ್ಯಾಖ್ಯಾನಿಸಿದ್ದಾರೆ.
ಜನವರಿ 2024 ರಲ್ಲಿ 12.2 ಬಿಲಿಯನ್ ಯುಪಿಐ ವಹಿವಾಟುಗಳು ನಡೆದು, ₹18.41 ಲಕ್ಷ ಕೋಟಿಗಳ ವ್ಯವಹಾರವಾಗಿದೆ. ಇದರಿಂದ ಯುಪಿಐ ಎಷ್ಟು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸ್ಪಷ್ಟವಾಗುತ್ತದೆ. ಈ ಬೆಳವಣಿಗೆಯಿಂದ ಜಾಗತಿಕ ಹಣಕಾಸು ತಂತ್ರಜ್ಞಾನದಲ್ಲಿ ಭಾರತದ ನಾಯಕತ್ವ ಇನ್ನಷ್ಟು ಬಲಗೊಳ್ಳುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಯುಪಿಐ ಲಿಂಕ್ಡ್ ಪಾವತಿಗಳ ಅಳವಡಿಕೆಯನ್ನು ಅಭಿವೃದ್ಧಿಪಡಿಸಲು ಮತ್ತು ಹೆಚ್ಚಿಸಲು ಎನ್‌ಪಿಸಿಐ ಘಾನಾ ಮತ್ತು ಇತರ ಆಫ್ರಿಕನ್ ರಾಷ್ಟ್ರಗಳೊಂದಿಗೆ ಇದೇ ರೀತಿಯ ಒಪ್ಪಂದಗಳಿಗೆ ಸಹಿ ಹಾಕಿದೆ.


Click it and Unblock the Notifications