ಡಿಜಿಟಲ್ ಪಾವತಿಗಳ ಯುಗದಲ್ಲಿ, ಸುಲಭ ಮತ್ತು ಕ್ಷಿಪ್ರ ವಹಿವಾಟುಗಳನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ನೂತನ ತಂತ್ರಜ್ಞಾನಗಳನ್ನು ಪರಿಚಯಿಸಿದ್ದು, ಈ ಪೈಕಿ ಏಕೀಕೃತ ಪಾವತಿ ಇಂಟರ್ಫೇಸ್ (UPI) ಭಾರತೀಯರಿಗೆ ಅತ್ಯಂತ ಜನಪ್ರಿಯ ಪಾವತಿ ವಿಧಾನವಾಗಿ ಹೊರಹೊಮ್ಮಿದೆ. ಈಗ, ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) UPI ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆಯನ್ನು ತರಲು ಹೊರಟಿದೆ. ಈ ಅಪ್ಡೇಟ್ ನಿಂದ UPI ವಹಿವಾಟುಗಳನ್ನು ಕೇವಲ 15 ಸೆಕೆಂಡುಗಳಲ್ಲಿ ಪೂರ್ಣಗೊಳಿಸಬಹುದಾಗಿದ್ದು ಇದು ಮೊದಲಿಗಿಂತ ಎರಡು ಪಟ್ಟು ವೇಗವಾಗಿರುತ್ತದೆ. ಈ ಕ್ರಮವು ಡಿಜಿಟಲ್ ಪಾವತಿಗಳ ದಕ್ಷತೆಯನ್ನು ಹೆಚ್ಚಿಸುವುದಲ್ಲದೆ, ಬಳಕೆದಾರರ ಅನುಭವವನ್ನು ಇನ್ನಷ್ಟು ಸುಧಾರುವ ಸಾಧ್ಯತೆ ಇದೆ.
ಹೌದು, ಈ ಪ್ರಮುಖ ಅಪ್‌ಗ್ರೇಡ್‌ನೊಂದಿಗೆ, NPCI ಡಿಜಿಟಲ್ ವಹಿವಾಟಿನ ಪ್ರಕ್ರಿಯೆಯನ್ನು ಇನ್ನಷ್ಟು ಸುಗಮಗೊಳಿಸಲು ಸಜ್ಜಾಗಿದೆ. ಏಪ್ರಿಲ್ 26 ರ ಇತ್ತೀಚಿನ ಸುತ್ತೋಲೆಯಲ್ಲಿ, ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ವಿವಿಧ ವರ್ಗದ ಯುಪಿಐ ವಹಿವಾಟುಗಳಿಗೆ ಪರಿಷ್ಕೃತ ಸಮಯಾವಧಿಯನ್ನು ಘೋಷಿಸಿದ್ದು ಇದು ಜೂನ್ 16 ರಿಂದ ಜಾರಿಗೆ ಬರುವ ಸಾಧ್ಯತೆ ಇದೆ. ಈ ಕ್ರಮವು ಬಳಕೆದಾರರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ವಹಿವಾಟು ಪ್ರಕ್ರಿಯೆಯ ಸಮಯವನ್ನು ಅರ್ಧದಷ್ಟು ಕಡಿತಗೊಳಿಸುವುದರಿಂದ, ಹಣ ವರ್ಗಾವಣೆಗಳು ಮಿಂಚಿನ ವೇಗದಲ್ಲಿ ನಡೆಯುತ್ತವೆ. ಕಾಯುವಿಕೆಯ ಸಮಯ ಕಡಿಮೆಯಾಗುವುದರಿಂದ, ಅಂಗಡಿಗಳಲ್ಲಿ ಪಾವತಿಸುವುದು ಅಥವಾ ಸ್ನೇಹಿತರು ಮತ್ತು ಕುಟುಂಬಕ್ಕೆ ಹಣ ಕಳುಹಿಸುವುದು ಹೆಚ್ಚು ಸುಲಭ ಮತ್ತು ಶೀಘ್ರವಾಗಲಿದೆ.

ರಾಷ್ಟ್ರೀಯ ಪಾವತಿ ನಿಗಮ ಹೊರಡಿಸಿರುವ ಸುತ್ತೋಲೆಯ ಪ್ರಕಾರ, UPI ನಲ್ಲಿನ ವಿನಂತಿ ಪಾವತಿ (request to pay) ಮತ್ತು ಪ್ರತಿಕ್ರಿಯೆ ಪಾವತಿ (response to pay), ಅಂದರೆ ಡೆಬಿಟ್ ಮತ್ತು ಕ್ರೆಡಿಟ್ ವಹಿವಾಟುಗಳಿಗೆ, ಪರಿಷ್ಕೃತ ಪ್ರತಿಕ್ರಿಯೆ ಸಮಯವು ಈಗ ಕೇವಲ 15 ಸೆಕೆಂಡುಗಳು ಆಗಿರುತ್ತದೆ. ಈ ಹಿಂದೆ ಇದು 30 ಸೆಕೆಂಡುಗಳಷ್ಟಿತ್ತು.
ಅಷ್ಟೇ ಅಲ್ಲದೆ, ವಹಿವಾಟುಗಳ ಸ್ಥಿತಿಯನ್ನು ಪರೀಕ್ಷಿಸಲು (status check), ಪ್ರತಿಕ್ರಿಯೆ ಸಮಯವನ್ನು 10 ಸೆಕೆಂಡುಗಳಿಗೆ ಇಳಿಸಲಾಗಿದೆ. ಮೊದಲು ಇದು ಕೂಡ 30 ಸೆಕೆಂಡುಗಳಾಗಿತ್ತು.
ಇನ್ನು, ವಹಿವಾಟುಗಳನ್ನು ಹಿಂತಿರುಗಿಸುವ (transaction reversal) ಪ್ರಕ್ರಿಯೆಯು ಗಮನಾರ್ಹವಾಗಿ ವೇಗಗೊಳ್ಳಲಿದೆ. ಈ ಹಿಂದೆ 30 ಸೆಕೆಂಡುಗಳಿದ್ದ ಪ್ರತಿಕ್ರಿಯೆ ಸಮಯವನ್ನು ಈಗ ಕೇವಲ 10 ಸೆಕೆಂಡುಗಳಿಗೆ ಇಳಿಸಲಾಗಿದೆ. ಯಾರಾದರೂ ವಿಳಾಸವನ್ನು ಮೌಲ್ಯೀಕರಿಸಲು ಬಯಸಿದರೆ, ಪರಿಷ್ಕೃತ ಪ್ರತಿಕ್ರಿಯೆ ಸಮಯವು ಹಿಂದಿನ 15 ಸೆಕೆಂಡುಗಳ ಬದಲು 10 ಸೆಕೆಂಡುಗಳಾಗಿರುತ್ತದೆ.
ರಾಷ್ಟ್ರೀಯ ಪಾವತಿ ನಿಗಮದ ಹೊಸ ಮಾರ್ಗಸೂಚಿಗಳ ಪ್ರಕಾರ, Paytm ಮತ್ತು PhonePe ನಂತಹ ಪ್ರಮುಖ ಡಿಜಿಟಲ್ ಪಾವತಿ ಅಪ್ಲಿಕೇಶನ್‌ಗಳು ವಹಿವಾಟಿನ ಸ್ಥಿತಿಯನ್ನು ಪರಿಶೀಲಿಸುವ ಪ್ರಕ್ರಿಯೆಯನ್ನು ಗಮನಾರ್ಹವಾಗಿ ವೇಗಗೊಳಿಸಲಿವೆ. ಜೂನ್ 16 ರಿಂದ, ಈ ಅಪ್ಲಿಕೇಶನ್‌ಗಳು ವಹಿವಾಟು ಪ್ರಾರಂಭವಾದ ನಂತರ ಗರಿಷ್ಠ 45-60 ಸೆಕೆಂಡುಗಳ ಒಳಗೆ ಸ್ಥಿತಿಯನ್ನು ನಿಮಗೆ ತಿಳಿಸುತ್ತವೆ. ಆದರೆ ಈ ಹಿಂದೆ, ಇದಕ್ಕಾಗಿ 90 ಸೆಕೆಂಡುಗಳವರೆಗೆ ಕಾಯಬೇಕಾಗುತ್ತಿತ್ತು.
UPI ವಹಿವಾಟು ಮಾರ್ಗಸೂಚಿಗಳಲ್ಲಿನ ಈ ಬದಲಾವಣೆಗಳು ಗ್ರಾಹಕರಿಗೆ ಖಂಡಿತವಾಗಿಯೂ ಅನುಕೂಲಕರವಾಗಿಲಿವೆ. ತಜ್ಞರು ಪ್ರಕಾರ, ತ್ವರಿತ ಪರಿಶೀಲನೆಯಿಂದಾಗಿ ಗ್ರಾಹಕರು ಹೆಚ್ಚು ವಿಶ್ವಾಸಾರ್ಹ ಮತ್ತು ಪರಿಣಾಮಕಾರಿ ವಹಿವಾಟಿನ ಅನುಭವವನ್ನು ಪಡೆಯಬಹುದು. ವಹಿವಾಟು ವಿಫಲವಾದಲ್ಲಿ ಅಥವಾ ತಡವಾದಲ್ಲಿ, ಈಗ ಶೀಘ್ರವಾಗಿ ತಿಳಿಯುವುದರಿಂದ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲು ಅನುಕೂಲವಾಗುತ್ತದೆ.
ಇನ್ನು ರಾಷ್ಟ್ರೀಯ ಪಾವತಿ ನಿಗಮದ ಹೊಸ ನಿರ್ದೇಶನಗಳು ಜೂನ್ 16ರಿಂದ ಜಾರಿಗೆ ಬರಲಿರುವ ಕಾರಣ ಈ ಬದಲಾವಣೆಗಳು ಪ್ರತಿಕ್ರಿಯೆ ಸಮಯವನ್ನು ಕಡಿಮೆಗೊಳಿಸುವುದರ ಜೊತೆಗೆ, ತಾಂತ್ರಿಕ ಅಡಚಣೆಗಳ ಮಿತಿಗಳ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರದಂತೆ ನೋಡಿಕೊಳ್ಳಲು ಎಲ್ಲಾ ಸದಸ್ಯ ಡಿಜಿಟಲ್ ಪಾವತಿ ಸಂಸ್ಥೆಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ.


Click it and Unblock the Notifications