ಇಸ್ರೇಲ್, ಅಮೆರಿಕಾ ಮತ್ತು ಇರಾನ್ (Israel, America vs Iran) ನಡುವಿನ ಮುನಿಸು ದಿನ ಕಳೆದಂತೆ ತೀವ್ರವಾಗುತ್ತಿದೆ. ಅತ್ತ ದಾಳಿ ಮೇಲೆ ದಾಳಿಗಳನ್ನು ಉಭಯ ರಾಷ್ಟ್ರಗಳು ನಡೆಸುತ್ತಲೇ ಇದೆ. ಇದೀಗ ಯುಎಸ್, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಜಾಗತಿಕ ಮಾರುಕಟ್ಟೆಗಳಲ್ಲೂ ಭಾರೀ ಪರಿಣಾಮ ಬೀರಿದೆ. ಅದರಲ್ಲೂ ಉಭಯ ರಾಷ್ಟ್ರಗಳ ಕದನದಿಂದಾಗಿ, ಪ್ರಮುಖ ಜಲಸಂಧಿ ಸ್ಟ್ರೇಟ್ ಆಫ್ ಹಾರ್ಮುಜ್ ಅನ್ನು ಮುಚ್ಚಿದ್ದು, ತೈಲ ಸರಬರಾಜಿಗೂ ಭಾರೀ ಪರಿಣಾಮ ಬಿದ್ದಿದೆ.

ಮನಿ ಕಂಟ್ರೋಲ್ ವರದಿಯ ಪ್ರಕಾರ, ಭಾರತ ಸರ್ಕಾರವು ಪ್ರಸ್ತುತ 'ಆರಾಮದಾಯಕ ಸ್ಥಿತಿ'ಯಲ್ಲಿದ್ದು, 50 ದಿನಗಳಿಗೂ ಹೆಚ್ಚು ಕಚ್ಚಾ ತೈಲ ಸಂಗ್ರಹವನ್ನು ಹೊಂದಿದೆ ಎಂದು ಹೇಳಲಾಗಿದೆ. ದೇಶದ ಅನುಕೂಲಕ್ಕಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಮತ್ತು ವೈವಿಧ್ಯೀಕರಣಗೊಳಿಸಲು ಸರ್ಕಾರ ಸಿದ್ಧವಾಗಿದ್ದು, ಈ ಕುರಿತು ನಿರಂತರ ಯೋಜನೆ ರೂಪಿಸುತ್ತಲೇ ಇದೆ ಎಂದು ವರದಿಯಾಗಿದೆ..
ಸದ್ಯಕ್ಕಿಲ್ಲ ಭಾರತಕ್ಕೆ ತೈಲದ ಕಂಟಕ!
ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಹಾಗೂ ಹಾರ್ಮುಜ್ ಜಲಸಂಧಿಯ ಸ್ಥಗಿತ ದೇಶದ ತೈಲದ ಮಾರುಕಟ್ಟೆಯಲ್ಲಿ ಭಾರೀ ಆತಂಕ ಸೃಷ್ಟಿಸಿದೆ. ಭಾರತದ ಇಂಧನ ಭದ್ರತೆಯ ಬಗ್ಗೆ ಇದ್ದ ಕಳವಳಕ್ಕೆ ಬ್ರೇಕ್ ನೀಡಿದೆ. ಜಲಸಂಧಿಯ ಮೂಲಕ ಸಾಗುವ ಜಾಗತಿಕ ಕಚ್ಚಾ ತೈಲ ಸಾಗಾಣಿಕೆಯು ಬಹುತೇಕ ಸ್ಥಗಿತಗೊಂಡಿದೆ. ಈ ಹಿನ್ನೆಲೆ ಜಾಗತಿಕ ತೈಲ ಮಾರುಕಟ್ಟೆ ಅತಂತ್ರ ಸ್ಥಿತಿಯಲ್ಲಿದೆ.
ಭಾರತ ಸರ್ಕಾರದ ಮೂಲಗಳ ಪ್ರಕಾರ, ಸದ್ಯ ದೇಶದಲ್ಲಿ ಯಾವುದೇ ತೈಲದ ಕೊರತೆಯಿಲ್ಲ. ಆದರೆ ಹಾರ್ಮುಜ್ ಜಲಸಂಧಿಯಿಂದ ಪ್ರತಿನಿತ್ಯ ಸುಮಾರು 2.5 ಮಿಲಿಯನ್ ಬ್ಯಾರೆಲ್‌ಗಳಷ್ಟು ಭಾರತಕ್ಕೆ ಆಮದು ಆಗುತ್ತಿತ್ತು. ಇದು ಜಗತ್ತಿನ ಒಟ್ಟು ಆಮದಿನ ಅರ್ಧಭಾಗಕ್ಕೂ ಅಧಿಕವಾಗಿತ್ತು. ಒಂದು ವೇಳೆ ಯುದ್ಧ ಮತ್ತಷ್ಟು ದಿನ ಮುಂದುವರೆದರೆ, ಜಲಸಂಧಿ ಮುಚ್ಚಿದರೆ ತೈಲ ಬೆಲೆಯಲ್ಲಿ ಏರಿಕೆಯಾಗಬಹುದು ಎಂದು ಹೇಳಲಾಗಿದೆ. ಈಗಾಗಲೇ ಬ್ರೆಂಟ್ ಕ್ರೂಡ್ $80-85 ರಷ್ಟು ಏರಿಕೆ ಕಂಡಿದ್ದು, ಇದರಿಂದ ಭಾರತದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಅಲ್ಲದೇ ಆಮದು ವೆಚ್ಚ ಹೆಚ್ಚಾದರೆ, ದರಗಳ ಮೇಲೂ ಪರಿಣಾಮ ಬೀರಬಹುದು ಎಂದು ನಿರೀಕ್ಷಿಸಲಾಗಿದೆ.
ಸಮುದ್ರ ಗುಪ್ತಚರ ಸಂಸ್ಥೆಗಳಾದ ವಿಂಡ್‌ವರ್ಡ್ ಮತ್ತು ಕೆಪ್ಲರ್ ಪ್ರಕಾರ, ಸದ್ಯ ಜಲಸಂಧಿ ತೆರೆದಿದ್ದರೂ, ಹಡಗುಗಳ ಸಂಚಾರದಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಮಾರ್ಚ್ 1 ರಂದು, ಕೇವಲ ಮೂರು ತೈಲ ಟ್ಯಾಂಕರ್‌ಗಳು ಒಟ್ಟು 2.8 ಮಿಲಿಯನ್ ಬ್ಯಾರೆಲ್‌ಗಳಷ್ಟು ತೈಲವನ್ನು ಸಾಗಿಸಿವೆ. ಇದು 2026 ರ ದೈನಂದಿನ ಸರಾಸರಿ 19.8 ಮಿಲಿಯನ್ ಬ್ಯಾರೆಲ್‌ಗಳಿಗೆ ಹೋಲಿಸಿದರೆ 86% ಇಳಿಕೆಯಾಗಿದೆ.
ಅತ್ತ ಯುದ್ಧ ತೀವ್ರವಾಗುತ್ತಿದ್ದಂತೆ, ಇತ್ತ ಭಾರತ ಕೂಡಾ ತನ್ನ ಕಚ್ಚಾ ತೈಲ ಅಗತ್ಯತೆಗಳಿಗಾಗಿ ಇತರ ದೇಶಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಸಾರಿಗೆ ವಲಯದಲ್ಲಿನ ಹೆಚ್ಚುತ್ತಿರುವ ಇಂಧನ ಬಳಕೆಯಿಂದಾಗಿ, 2024 ರಲ್ಲಿ ಭಾರತವು ವಿಶ್ವದ ಅತಿದೊಡ್ಡ ತೈಲ ಬೇಡಿಕೆಯ ದೇಶವಾಗಿ ಗುರುತಿಸಿಕೊಂಡು ಚೀನಾವನ್ನು ಹಿಂದಿಕ್ಕಿದೆ.
ಆದ್ದರಿಂದ ದೊಡ್ಡ ಪ್ರಮಾಣದ ಕಚ್ಚಾ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾದರೆ, ಭಾರತವು ಅದಕ್ಕೆ ಸಿದ್ಧವಾಗಿದೆ. ಇಂತಹ ತುರ್ತು ಪರಿಸ್ಥಿತಿಗಳಿಗಾಗಿ ಪೆಟ್ರೋಲಿಯಂ ಮೀಸಲುಗಳನ್ನು ನಿರ್ವಹಿಸಲು ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ಸ್ ಲಿಮಿಟೆಡ್ (ISPRL) ಎಂಬ ವಿಶೇಷ ಸಂಸ್ಥೆಯನ್ನು ಹೊಂದಿದೆ. ಸರ್ಕಾರವು ಮೂರು ಸ್ಥಳಗಳಲ್ಲಿ 5 ಮಿಲಿಯನ್ ಮೆಟ್ರಿಕ್ ಟನ್‌ಗಳ (MMT) ಕಾರ್ಯತಂತ್ರದ ಕಚ್ಚಾ ತೈಲ ಸಂಗ್ರಹ ಘಟಕಗಳನ್ನು ಸ್ಥಾಪಿಸಲು ನಿರ್ಧರಿಸಿದೆ.
ಐಎಸ್‌ಪಿಆರ್‌ಎಲ್ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಯೋಜನೆಯನ್ನು ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ (ಇಐಎಲ್) ಕಾರ್ಯಗತಗೊಳಿಸಿದೆ. ಈ ಕಾರ್ಯತಂತ್ರದ ಘಟಕಗಳನ್ನು ವಿಶಾಖಪಟ್ಟಣಂ, ಮಂಗಳೂರು ಮತ್ತು ಉಡುಪಿ ಸಮೀಪದ ಪಾದೂರು ಪ್ರದೇಶಗಳಲ್ಲಿವೆ.


Click it and Unblock the Notifications