ಬೆಂಗಳೂರು-ಮಂಗಳೂರು ನಡುವಿನ ವಂದೇ ಭಾರತ್ ರೈಲು ಸಂಚಾರಕ್ಕೆ ಕಾದು ಕುಳಿತಿದ್ದವರಿಗೆ ಭರ್ಜರಿ ಗುಡ್‌ನ್ಯೂಸ್ ಸಿಕ್ಕಿದೆ. ಸಕಲೇಶಪುರ-ಸುಬ್ರಹ್ಮಣ್ಯ ಘಾಟ್ ಮಾರ್ಗದ ವಿದ್ಯುದೀಕರಣ ಪೂರ್ಣಗೊಂಡಿರುವುದರಿಂದ, ರೈಲು ಸಂಚಾರಕ್ಕೆ ದೊಡ್ಡ ಮಟ್ಟದ ರಿಲೀಫ್ ಸಿಕ್ಕಿದಂತಾಗಿದೆ. ಇದರಿಂದ ದೊಡ್ಡ ಬದಲಾವಣೆಯೂ ಆದಂತಾಗಿದೆ.

ಸಕಲೇಶಪುರ-ಸುಬ್ರಹ್ಮಣ್ಯ ಘಾಟ್ ಒಂದು ಸುಂದರವಾದ ಪ್ರದೇಶ ಅಲ್ಲದೇ, ಒಂದು ಸವಾಲಿನ ಪ್ರದೇಶ ಅಂತಲೂ ಹೇಳಬಹುದು. ವಂದೇ ಭಾರತ್ ಎಕ್ಸ್‌ಪ್ರಸ್ ರೈಲು ಸಂಚಾರದ ಚರ್ಚೆ ಬಂದಾಗ, ಈ ಮಾರ್ಗ ಸೂಕ್ತವೇ ಎಂಬ ಪ್ರಶ್ನೆಗಳು ಹರಿದಾಡಿದ್ದವು. ಅದರ ಜೊತೆಗೆ ಈ ಪ್ರದೇಶ ಸೂಕ್ತವಲ್ಲ ಎಂಬ ಅಭಿಪ್ರಾಯಗಳು ಕೂಡ ಕೇಳಿಬಂದಿದ್ದವು. ಇದೆಲ್ಲದರ ನಡುವೆ ಖುಷಿ ಸುದ್ದಿ ಏನೆಂದರೆ, ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಇತ್ತೀಚೆಗೆ ಈ ಮಾರ್ಗ ರೈಲು ಓಡಿಸಲು ಸಂಪೂರ್ಣ ಸಿದ್ಧ ಎಂದು ಸ್ಪಷ್ಟನೆ ನೀಡಿದ್ದಾರೆ. ಹಾಗಾದ್ರೆ ಎಷ್ಟು ದಿನಗಳ ಒಳಗೆ ಸಂಚಾರ ಆರಂಭ ಎಂದು ಮುಂದೆ ಓದಿ ತಿಳಿಯಿರಿ.
2023ರಲ್ಲಿ ವಿದ್ಯುದೀಕರಣ ಕಾರ್ಯ ಆರಂಭವಾದಾಗಿನಿಂದ, ಪ್ರಯಾಣಿಕರು ಹಾಗೂ ವಿವಿಧ ರಾಜಕೀಯ ಪಕ್ಷಗಳ ನಾಯಕರು ಈ ಮಾರ್ಗದಲ್ಲಿ ಆಧುನಿಕ ರೈಲು ಬೇಕೆಂದು ಒತ್ತಾಯಿಸುತ್ತಿದ್ದರು. ಸಾರ್ವಜನಿಕರಿಂದ ಉತ್ತಮ ಬೇಡಿಕೆ ಇರುವ ಕಾರಣ, ರೈಲ್ವೆ ಮಂಡಳಿ ವಂದೇ ಭಾರತ್ ರೈಲನ್ನು ಪರಿಗಣಿಸುವ ಸಾಧ್ಯತೆ ಇದೆ ಎಂದು ನೈಋತ್ಯ ರೈಲ್ವೆಯ ಅಧಿಕಾರಿಗಳು ತಿಳಿಸಿದ್ದಾರೆ. ವಿದ್ಯುದೀಕರಣದಿಂದ ಲೋಕೋಮೋಟಿವ್ ಬದಲಾವಣೆ ಅಗತ್ಯವಿಲ್ಲದಾಗಿ ಹಣ ಮತ್ತು ಸಮಯ ಉಳಿಯಲಿದೆ. ಆದರೆ ಘಾಟ್ ಪ್ರದೇಶದ ಕಠಿಣ ಭೂಪ್ರಕೃತಿ ಕಾರಣದಿಂದ ರೈಲು ಸಂಚಾರವನ್ನು ಹೆಚ್ಚು ಹೆಚ್ಚಿಸುವುದು ಸಾಧ್ಯವಿಲ್ಲ ಎನ್ನಲಾಗಿದೆ.
ಸುಮಾರು 55 ಕಿಲೋಮೀಟರ್ ಉದ್ದದ ಈ ಘಾಟ್ ಮಾರ್ಗವು ದಟ್ಟ ಕಾಡು, ತೀವ್ರ ತಿರುವುಗಳು ಮತ್ತು ಸಂಪರ್ಕ ರಸ್ತೆ ಇಲ್ಲದ ಪ್ರದೇಶಗಳನ್ನು ಒಳಗೊಂಡಿದೆ. ವಿಶೇಷವಾಗಿ ಮಳೆಗಾಲದಲ್ಲಿ ಭೂಕುಸಿತದ ಅಪಾಯ ಹೆಚ್ಚಿರುವುದರಿಂದ ಇಲ್ಲಿ ವಿದ್ಯುದೀಕರಣ ಮಾಡುವುದು ದೊಡ್ಡ ಎಂಜಿನಿಯರಿಂಗ್ ಸವಾಲಾಗಿತ್ತು. ಈ ಮಾರ್ಗದಲ್ಲಿ 57 ಸುರಂಗಗಳು, 226 ಸೇತುವೆಗಳು ಮತ್ತು 108 ತೀವ್ರ ತಿರುವುಗಳಿದ್ದು, ಕೆಲಸ ಪೂರ್ಣಗೊಳ್ಳಲು ಸುಮಾರು ಎರಡು ವರ್ಷಗಳ ಸಮಯ ಬೇಕಾಯಿತು.
ಈ ಅವಧಿಯಲ್ಲಿ ಗೋಮಟೇಶ್ವರ ಎಕ್ಸ್‌ಪ್ರೆಸ್ ಸೇರಿದಂತೆ ಕೆಲವು ಪ್ರಮುಖ ರೈಲು ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದವು. ವಿಹಂಗಮ ನೋಟಗಳಿಗಾಗಿ ಪ್ರಸಿದ್ಧವಾಗಿದ್ದ ವಿಸ್ಟಾಡೋಮ್ ಕೋಚ್ ಸೇವೆಯೂ ಡಿಸೆಂಬರ್ 2025ರಲ್ಲಿ ಮಾತ್ರ ಪುನರಾರಂಭವಾಯಿತು. ರೈಲು ಪ್ರೇಮಿಗಳು ಈ ಮಾರ್ಗವನ್ನು ಕನಸಿನ ಪ್ರಯಾಣ ಎಂದು ಕರೆಯುತ್ತಾರೆ. ವಂದೇ ಭಾರತ್ ರೈಲು ಆರಂಭವಾದರೆ, ಹೆಚ್ಚು ಜನರಿಗೆ ಈ ಸುಂದರ ಘಾಟ್ ಮಾರ್ಗದಲ್ಲಿ ಆರಾಮದಾಯಕ ಮತ್ತು ವೇಗದ ಪ್ರಯಾಣ ಅನುಭವಿಸುವ ಅವಕಾಶ ದೊರೆಯಲಿದೆ.


Click it and Unblock the Notifications