ವಂದೇ ಭಾರತ್ ರೈಲು (Vande Bharat Train) ಎಂದಾಕ್ಷಣ ಒಮ್ಮೆ ಪ್ರಯಾಣಿಕರ ಮುಖದಲ್ಲಿ ನಗು ಮೂಡುತ್ತೆ. ಕಾರಣ ಅದರ ವೇಗ, ಉತ್ತಮ ಸೇವೆ. ಭಾರತೀಯ ರೈಲ್ವೇನಲ್ಲಿ (Indian Railways) ಹೊಸ ಮೈಲಿಗಲ್ಲು ಸೃಷ್ಟಿಸಿದ ಸೇವೆಯೆಂದರೆ ಅಂದು ವಂದೇ ಭಾರತ್ ರೈಲು ಸೇವೆ. ಅದರಲ್ಲೂ 2026, ಜನವರಿ 17 ರಂದು ವಂದೇ ಭಾರತ್ ಸ್ಲೀಪರ್ ರೈಲು (Vande Bharat Sleeper Train) ಸೇವೆ ಆರಂಭವಾಗಿದೆ. ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಇದಾಗಿದ್ದು, ಗುವಾಹಟಿಯಿಂದ ಕೊಲ್ಕತ್ತಾ ಮಾರ್ಗದಲ್ಲಿ ಕಾರ್ಯಾಚರಣೆ ಆರಂಭವಾಗಿದೆ. ಇದೀಗ ಇದರ ಎರಡನೇ ಹಂತದ ಆರಂಭಕ್ಕೆ ಭಾರತೀಯ ರೈಲ್ವೇ ಸಜ್ಜಾಗಿದೆ ಎಂದು ಹೇಳಲಾಗಿದೆ.

ಕೇರಳದಲ್ಲಿ, ಭಾರತೀಯ ರೈಲ್ವೆ ವಂದೇ ಸ್ಲೀಪರ್ ರೈಲುಗಳನ್ನು ಪರಿಚಯಿಸಲು ಸಿದ್ಧತೆ ನಡೆಸಿದ್ದು, ಮೂರು ಪ್ರಮುಖ ಮಾರ್ಗಗಳಲ್ಲಿ ಈ ರೈಲು ಸಂಚರಿಸಲಿದೆ ಎಂದು ವರದಿಯಾಗಿದೆ. ಒಂದು ವೇಳೆ ಈ ಸೇವೆ ಆರಂಭವಾದ್ರೆ, ಆ ಮಾರ್ಗಗಳಲ್ಲಿ ಪ್ರಯಾಣದ ಸಮಯವನ್ನು ಗರಿಷ್ಠ 3.5 ಗಂಟೆಗಳವರೆಗೆ ಕಡಿಮೆಗೊಳಿಸುವ ಗುರಿ ಹೊಂದಿದೆ.
ಆ 3 ಮಾರ್ಗಗಳು ಯಾವುದು?
- ತಿರುವನಂತಪುರಂನಿಂದ ಚೆನ್ನೈ.
- ಬೆಂಗಳೂರಿನಿಂದ ತಿರುವನಂತಪುರಂ.
- ಮಂಗಳೂರಿನಿಂದ ತಿರುವನಂತಪುರಂ ಮಾರ್ಗಗಳಿಗೆ ಈ ಹೊಸ ವಂದೇ ಸ್ಲೀಪರ್ ಸೇವೆಗಳು ಆರಂಭವಾಗಲಿವೆ.
ತಿರುವನಂತಪುರಂನಿಂದ ಚೆನ್ನೈ ಮತ್ತು ಬೆಂಗಳೂರು ಮಾರ್ಗಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಪ್ರಸ್ತುತ, ಕೇರಳದಲ್ಲಿ ಚಾಲನೆಯಲ್ಲಿರುವ ಎರಡು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಲ್ಲಿ ತಿರುವನಂತಪುರಂ-ಮಂಗಳೂರು ಮಾರ್ಗವು ಉತ್ತಮ ಆದಾಯವನ್ನು ಗಳಿಸುತ್ತಿದೆ. ಕೇರಳ ಮತ್ತು ತಮಿಳುನಾಡು ವಿಧಾನಸಭಾ ಚುನಾವಣೆಗಳಿಗೆ ಮುನ್ನ ರೈಲ್ವೆ ಇಲಾಖೆಯು ಎರಡು ರಾಜ್ಯಗಳ ನಡುವಿನ ರೈಲು ಸಂಪರ್ಕದ ಬಗ್ಗೆ ಮಹತ್ವದ ಕ್ರಮ ಕೈಗೊಳ್ಳುತ್ತಿದೆ..
ವಂದೇ ಭಾರತ್ ಸ್ಲೀಪರ್ ರೈಲಿನ ನಿಯಮ:
ಇನ್ನು ವಂದೇ ಸ್ಲೀಪರ್ ರೈಲುಗಳಿಗೆ ಕೇವಲ ಕನ್ಫರ್ಮ್‌ಡ್ ಟಿಕೆಟ್‌ಗಳನ್ನು ಮಾತ್ರ ನೀಡಲಾಗುವುದು. ರಿಸರ್ವೇಶನ್ ಅಗೈನ್ಸ್ಟ್ ಕ್ಯಾನ್ಸಲೇಷನ್ (RAC) ಮತ್ತು ವೈಟಿಂಗ್ ಲೀಸ್ಟ್ ಟಿಕೆಟ್‌ಗಳು ಲಭ್ಯವಿರುವುದಿಲ್ಲ. ಟಿಕೆಟ್ ಕಾಯ್ದಿರಿಸಲು ಕನಿಷ್ಠ 400 ಕಿಲೋಮೀಟರ್ ದೂರ ಪ್ರಯಾಣಿಸಬೇಕು. ಸಂಪೂರ್ಣ ಹವಾನಿಯಂತ್ರಿತವಾದ 16 ಬೋಗಿಗಳ ಈ ರೈಲು 823 ಪ್ರಯಾಣಿಕರಿಗೆ ಅವಕಾಶ ಕಲ್ಪಿಸುತ್ತದೆ.
ಟಿಕೆಟ್ ದರ ಎಷ್ಟು?
ಒಂದು ವೇಳೆ ಈ ಸ್ಲೀಪರ್ ರೈಲು ಬಂದರೆ ಮಂಗಳೂರು-ತಿರುವನಂತಪುರಂ (ಕೊಟ್ಟಾಯಂ ಮೂಲಕ, 631 ಕಿ.ಮೀ.) ಮಾರ್ಗದಲ್ಲಿ, ಪ್ರಸ್ತುತ 14 ಗಂಟೆಗಳ ಪ್ರಯಾಣ ಸಮಯವು 3.5 ಗಂಟೆಗಳಷ್ಟು ಕಡಿಮೆಯಾಗಲಿದೆ.
ಇನ್ನು ತಿರುವನಂತಪುರಂ-ಚೆನ್ನೈ (ಪಾಲಕ್ಕಾಡ್ ಮೂಲಕ, 922 ಕಿ.ಮೀ.) ಮಾರ್ಗದಲ್ಲಿ, ಪ್ರಸ್ದತುತ 16 ಗಂಟೆ 30 ನಿಮಿಷಗಳ ಪ್ರಯಾಣ ಸಮಯವು ಮೂರು ಗಂಟೆಗಳಷ್ಟು ಕಡಿಮೆಯಾಗಲಿದೆ. ಈ ಸೇವೆಗೆ ₹1,000 ಹೆಚ್ಚಿನ ಶುಲ್ಕವಿರುತ್ತದೆ ಎನ್ನಲಾಘಿದೆ.
ತಿರುವನಂತಪುರಂ-ಬೆಂಗಳೂರು (844 ಕಿ.ಮೀ.) ಮಾರ್ಗದಲ್ಲಿ ಪ್ರಸ್ತುತ 15 ಗಂಟೆ 30 ನಿಮಿಷಗಳ ಪ್ರಯಾಣದ ಸಮಯವು ಮೂರು ಗಂಟೆಗಳಷ್ಟು ಕಡಿತಗೊಳ್ಳಲಿದೆ. ಈ ಸೇವೆಗೆ ₹800 ಹೆಚ್ಚುವರಿ ಶುಲ್ಕ ನೀಡಬೇಕು. ಕೇರಳದಲ್ಲಿ ಏಪ್ರಿಲ್ 2023 ರಲ್ಲಿ ಆರಂಭವಾದ ಮೊದಲ ವಂದೇ ಭಾರತ್ ಸೇವೆಯು ದೊಡ್ಡ ಯಶಸ್ಸನ್ನು ಕಂಡಿತ್ತು. ಅದರ ಬೆನ್ನಲ್ಲೇ ಇದೀಗ ಹೊಸ ವಂದೇ ಭಾರತ್ ಸ್ಲೀಪರ್ ರೈಲನ್ನು ಆರಂಭಿಸಲು ಭಾರತೀಯ ರೈಲ್ವೇ ಸಜ್ಜಾಗಿದೆ ಎನ್ನಲಾಗಿದೆ.


Click it and Unblock the Notifications