ಹೊಸ ಬೆಳೆಗಳು ಮಾರುಕಟ್ಟೆಯಲ್ಲಿ ಲಭ್ಯವಾಗುವುದರಿಂದ ಮುಂದಿನ ತಿಂಗಳು ತರಕಾರಿ ಬೆಲೆಗಳು ಇಳಿಕೆಯಾಗಲು ಪ್ರಾರಂಭವಾಗುವ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ. ಆದರೆ ಕಚ್ಚಾ ತೈಲ ಬೆಲೆಗಳು ಏರಿಕೆಯಾಗುತ್ತಿದೆ. ಈ ತೈಲ ದರವು ಪ್ರತಿ ಬ್ಯಾರೆಲ್‌ಗೆ 90 ಡಾಲರ್‌ನ ಸನಿಹದಲ್ಲಿ ಅಥವಾ ಅದಕ್ಕಿಂತ ಅಧಿಕವಾಗಿ ಉಳಿದರೆ ಮಾತ್ರ ಸ್ಥಿತಿ ಕಳವಳಕಾರಿಯಾಗುತ್ತದೆ ಎಂದು ವರದಿ ಹೇಳಿದೆ.
ಕೇಂದ್ರ ಸರ್ಕಾರವು ಅಬಕಾರಿ ಸುಂಕವನ್ನು ಕಡಿಮೆ ಮಾಡುವ ಚಿಂತನೆಯನ್ನು ಸದ್ಯಕ್ಕೆ ನಡೆಸಿಲ್ಲ, ಇದರ ಬದಲಾಗಿ ಕೇಂದ್ರ ಸರ್ಕಾರವು ಮೂಲಸೌಕರ್ಯ ಹೂಡಿಕೆಗೆ ಅಧಿಕವಾಗಿ ಗಮನಹರಿಸುತ್ತಿದೆ. ಖಾಸಗಿ ವಲಯದ ಬಂಡವಾಳ ಹೂಡಿಕೆ ಇನ್ನಷ್ಟೇ ಹೆಚ್ಚಳವಾಗಬೇಕಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ತಿಳಿಸಿದೆ.

ಅಬಕಾರಿ ಸುಂಕ ಕಡಿಮೆ ಮಾಡುವ ಚಿಂತನೆ ಸರ್ಕಾರಕ್ಕಿಲ್ಲ
ಸರ್ಕಾರವು ಅಬಕಾರಿ ಸುಂಕವನ್ನು ಕಡಿಮೆ ಮಾಡುವ ಚಿಂತನೆಯನ್ನು ನಡೆಸಿಲ್ಲ. ಬದಲಾಗಿ ಮೂಲಸೌಕರ್ಯ ಹೂಡಿಕೆಯನ್ನು ಆರಂಭ ಮಾಡುವತ್ತ ಸರ್ಕಾರವು ಗಮನಹರಿಸುತ್ತಿದೆ. ಖಾಸಗಿ ವಲಯದ ಬಂಡವಾಳ ಹೂಡಿಕೆಯು ಇನ್ನೂ ನಿಧಾನವಾಗಿದೆ. ಆದರೆ ಸರ್ಕಾರವು ಸೆಪ್ಟೆಂಬರ್ ವೇಳೆಗೆ ಅದನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಸೆಪ್ಟೆಂಬರ್ ವೇಳೆಗೆ ಕೇಂದ್ರದ ಬಂಡವಾಳ ವೆಚ್ಚವು ಬಜೆಟ್ ಅಂದಾಜುಗಳ ಶೇಕಡ 50ರಷ್ಟು ತಲುಪುವ ನಿರೀಕ್ಷೆಯಿದೆ.
ಗೋಧಿ ಮತ್ತು ಅಕ್ಕಿ ದಾಸ್ತಾನುಗಳನ್ನು ಮೀಸಲುಗಳಿಂದ ಬಿಡುಗಡೆ ಮಾಡುವುದು, ಅಕ್ಕಿ ಮತ್ತು ಸಕ್ಕರೆ ರಫ್ತಿನ ಮೇಲೆ ನಿರ್ಬಂಧಗಳನ್ನು ಹಾಕುವುದು ಹಾಗೂ ಬೇಳೆಕಾಳುಗಳು ಮತ್ತು ಎಣ್ಣೆಕಾಳುಗಳ ಆಮದನ್ನು ಅನುಮತಿಸುವುದು ಸೇರಿದಂತೆ ಹಣದುಬ್ಬರವನ್ನು ನಿಯಂತ್ರಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ವರದಿ ಹೇಳಿದೆ.
ಸರ್ಕಾರದ ವ್ಯಾಪಾರ ನೀತಿ
"ಸರ್ಕಾರವು ಬೆಲೆಗಳನ್ನು ಕಡಿಮೆ ಮಾಡಲು ಸಹಕಾರಿಯಾಗುವ ವ್ಯಾಪಾರ ನೀತಿಯನ್ನು ಅಳವಡಿಸಿಕೊಂಡಿದೆ. ಉಕ್ರೇನ್ ಯುದ್ಧದಿಂದಾಗಿ ಜಾಗತಿಕ ಆಹಾರದ ಬೆಲೆಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಆಹಾರ ಧಾನ್ಯಗಳ ಪೂರೈಕೆಯ ಮೇಲೆ ಪರಿಣಾಮ ಬೀರಿದೆ. ಇದೊಂದು ಜಾಗತಿಕ ಸಮಸ್ಯೆಯಾಗಿದೆ ಎಂಬುವುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ನಮ್ಮ ಜನರನ್ನು ಹಣದುಬ್ಬರದಿಂದ ದೂರವಿಡುವ ನಿಟ್ಟಿನಲ್ಲಿ ನಾವು ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಇತರರಿಗೆ ಹೋಲಿಕೆ ಮಾಡಿದಾಗ ನಾವು ಉತ್ತಮ ಸ್ಥಿತಿಯಲ್ಲಿದ್ದೇವೆ," ಎಂದು ಸರ್ಕಾರಿ ಅಧಿಕಾರಿ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದೆ.
"ಕಚ್ಚಾ ತೈಲ ಬೆಲೆ ಏರಿಕೆಯು ಕಳವಳಕಾರಿಯಾಗಿದೆ. ಆದರೆ ತೈಲ ಮಾರುಕಟ್ಟೆ ಕಂಪನಿಗಳ ಪ್ರಕಾರ ಬೆಲೆಯು ನಿಯಂತ್ರಣದಲ್ಲಿದೆ. ಇದೀಗ ಯಾವುದೇ ನೀತಿ ಹೊಂದಾಣಿಕೆಯ ಅಗತ್ಯವಿರುವುದಿಲ್ಲ. ಬಜೆಟ್ ಲೆಕ್ಕಾಚಾರಗಳು ಜಾರಿಯಲ್ಲಿವೆ. ನಾವು ಸುಮಾರು ಪ್ರತಿ ಬ್ಯಾರೆಲ್‌ಗೆ 90 ಡಾಲರ್‌ಗಳು ಆಗುವವರೆಗೂ ಚಿಂತೆ ಮಾಡಬೇಕಾದ ಸ್ಥಿತಿ ಇರುವುದಿಲ್ಲ. 90 ಡಾಲರ್ ಆಚೆಗೆ ತಲುಪಿದರೆ, ಹಣದುಬ್ಬರ ಹಾಗೂ ಇತರೆ ಬೆಲೆ ಏರಿಕೆ ಸಮಸ್ಯೆ, ಇತರೆ ಅಂಶಗಳ ಮೇಲೆ ಪ್ರಭಾವ ಬೀರುತ್ತದೆ," ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದಾಖಲೆ ಮಟ್ಟದಲ್ಲಿ ರಿಟೇಲ್ ಹಣದುಬ್ಬರ
ರಿಟೇಲ್ ಹಣದುಬ್ಬರವು ಜೂನ್‌ನಲ್ಲಿ ಶೇಕಡ 4.87 ರಿಂದ ಜುಲೈನಲ್ಲಿ ಶೇಕಡ 7.44 ಕ್ಕೆ ಏರಿಕೆಯಾಗಿದೆ. ಇದು 15 ತಿಂಗಳ ಗರಿಷ್ಠ ಮಟ್ಟವಾಗಿದೆ. ಆದರೂ ಸಗಟು ಹಣದುಬ್ಬರವು ಜುಲೈನಲ್ಲಿ ಶೇಕಡ (-)1.36 ರಲ್ಲಿ ಉಳಿದಿದೆ. ಸತತ ನಾಲ್ಕನೇ ತಿಂಗಳು ಇಷ್ಟು ಕಡಿಮೆ ಮಟ್ಟದಲ್ಲಿದೆ. ತರಕಾರಿ ಹಣದುಬ್ಬರು ಶೇಕಡ 37.44, ಮಸಾಲೆ ಪದಾರ್ಥಗಳ ಹಣದುಬ್ಬರ ಶೇಕಡ 21.63, ಬೇಳೆಕಾಳುಗಳ ಹಣದುಬ್ಬರ ಶೇಕಡ 13.27 ಮತ್ತು ಸರಕುಗಳ ಹಣದುಬ್ಬರವು ಶೇಕಡ 13 ಆಗಿದೆ. ಇನ್ನು ಧಾನ್ಯಗಳು ಮತ್ತು ಉತ್ಪನ್ನಗಳ ಹಣದುಬ್ಬರವು ಶೇಕಡ 13 ಆಗಿದೆ.


Click it and Unblock the Notifications