ಹಾಸನ, ಜುಲೈ 6: ಹಣ, ಚಿನ್ನ ಹೀಗೆ ದುಬಾರಿ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ ಕಳ್ಳರು ಈಗ ತರಕಾರಿ ಬೆಲೆ ದುಬಾರಿಯಾಗಿರುವ ನಿಟ್ಟಿನಲ್ಲಿ ಟೊಮೆಟೋ ಕದ್ದೊಯ್ದಿರುವ ಘಟನೆ ನಡೆದಿದೆ. ಭಾರತದಾದ್ಯಂತ ತರಕಾರಿ ಬೆಲೆ ತೀವ್ರಗತಿಯಲ್ಲಿ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ರೈತರೊಬ್ಬರು ಹೊಲದಲ್ಲಿ ಬೆಳೆದಿದ್ದ ಟೊಮೆಟೊವನ್ನೇ ಕಳವು ಮಾಡಿಕೊಂಡು ಹೋಗಿರುವ ಘಟನೆ ನಡೆದಿದೆ.
ಟೊಮೆಟೊ ಭಾರತದಲ್ಲಿ ಈಗ ಪೆಟ್ರೋಲ್‌ಗಿಂತಲೂ ಅಧಿಕ ಬೆಲೆಯಾಗಿದೆ. ಹಾಸನದ ರೈತರೊಬ್ಬರ ಹೊಲದಲ್ಲಿ ಸುಮಾರು 2 ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ 2 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಟೊಮೆಟೋ ಬೆಳೆಯನ್ನು ದುಷ್ಕರ್ಮಿಗಳು ಕಳ್ಳತನ ಮಾಡಿದ್ದಾರೆ.

ಹಾಸನದ ಬೇಲೂರು ತಾಲೂಕಿನ ಗೋಣಿ ಸೋಮನಹಳ್ಳಿ ಗ್ರಾಮದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಸುಮಾರು ಒಂದೂವರೆ ಲಕ್ಷಕ್ಕೂ ಅಧಿಕ ಮೌಲ್ಯದ ಟೊಮೆಟೊವನ್ನು ಕಳ್ಳರು ಕದ್ದೊಯ್ದಿದ್ದಾರೆ. ಗ್ರಾಮದ ಸೋಮಶೇಖರ್ ಎಂಬವರು ತಮ್ಮ ಸುಮಾರು 2 ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆದಿದ್ದರು.
ಸೋಮಶೇಖರ್ ಮತ್ತು ಅವರ ಪುತ್ರ ಧರಣಿ ರೈತರಾಗಿದ್ದು, ತಮ್ಮ ಹೊಲದಲ್ಲಿ ಟೊಮೆಟೊ ಬೆಳೆ ಹಾಕಿದ್ದರು. ಈ ಬಾರಿ ಟೊಮೆಟೊ ಉತ್ತಮ ಇಳುವರಿ ಬಂದಿದ್ದ ಹಿನ್ನೆಲೆ ಕಳೆದ ಮೂರು ದಿನದಿಂದ ಟೊಮೆಟೊ ಕೊಯ್ದು ಮಾರಾಟ ಮಾಡುತ್ತಿದ್ದರು. ಟೊಮೆಟೊ ಹಣ್ಣಾಗುತ್ತಾ ಬರುತ್ತಿದ್ದಂತೆ ಉತ್ತಮ ಆದಾಯವನ್ನು ಅವರು ನಿರೀಕ್ಷಿಸಿದ್ದರು.

ತಮ್ಮ ಆದ ಅನ್ಯಾಯದ ಬಗ್ಗೆ ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಸೋಮಶೇಖರ್ ಅವರು ಮಾತನಾಡಿದ್ದಾರೆ. ಐದು ವರ್ಷಗಳ ಹಿಂದೆ ಅವರಿಗೆ ಎಡಗೈ ಪಾರ್ಶ್ವವಾಯುವಿಗೆ ತುತ್ತಾಗಿ ಬಲಗೈಯಲ್ಲಿ ಕೆಲಸ ಮಾಡುತ್ತಿದ್ದು, ಕೃಷಿಯಲ್ಲಿ ಬದ್ಧರಾಗಿರುವ ತಂದೆ ಮತ್ತು ಮಗ ಧರಣಿಗೆ ಮಾರುಕಟ್ಟೆಯಲ್ಲಿ ಟೊಮೆಟೊಗೆ ಭಾರಿ ಬೇಡಿಕೆ ಮತ್ತು ಅತ್ಯಧಿಕ ಬೆಲೆಯ ಬಗ್ಗೆ ತಿಳಿದಿತ್ತು. ಜಾನುವಾರುಗಳ ಹಾವಳಿ ತಪ್ಪಿಸಲು ಅವರು ಪ್ರತಿದಿನ ಬೆಳಿಗ್ಗೆಯಿಂದ ಸಂಜೆಯವರೆಗೆ ಹೊಲದಲ್ಲಿ ಕಾವಲು ಕಾಯುತ್ತಿದ್ದರು.
ಇದೇ ಕಾರಣಕ್ಕಾಗಿ ಅವರು ತಮ್ಮ ಕೃಷಿ ಭೂಮಿಯಲ್ಲೇ ಉಪಹಾರ ಮತ್ತು ಊಟ ಕೂಡ ಸೇವಿಸುತ್ತಿದ್ದರು. ಆದರೆ ಇಷ್ಟು ಭದ್ರತೆಯ ಹೊರತಾಗಿಯೂ ಬೆಳೆ ಕಳ್ಳತನವಾಗಿದೆ. ದುಷ್ಕರ್ಮಿಗಳು ಗಿಡಗಳನ್ನು ಹಾಳು ಮಾಡಿದ್ದು, ಗಿಡದಿಂದ ಅಪಾರ ಪ್ರಮಾಣದ ಹೂವು, ಮೊಗ್ಗುಗಳು ಬಿದ್ದಿದ್ದರಿಂದ ಸಂಪೂರ್ಣ ಬೆಳೆ ನಷ್ಟವಾಗಿದೆ. ಹಾಸನದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಜಮೀನಿನಲ್ಲಿದ್ದ ಟೊಮೆಟೊ ಬೆಳೆ ಕಳ್ಳತನವಾಗಿದೆ.
ಮಂಗಳವಾರ ರಾತ್ರಿ ಹೊತ್ತಿನಲ್ಲಿ ಜಮೀನಿಗೆ ನುಗ್ಗಿರುವ ಕಳ್ಳರು 50ರಿಂದ 60 ಬ್ಯಾಗ್‌ನಷ್ಟು ಟೊಮೆಟೊ ಕೊಯ್ದಿದ್ದು, ಅಂದಾಜು 2 ಲಕ್ಷಕ್ಕೂ ಹೆಚ್ಚು ಮೌಲ್ಯದ ಟೊಮೆಟೊ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಬುಧವಾರ ಬೆಳಗ್ಗೆ ಸೋಮಶೇಖರ್ ತಮ್ಮ ಜಮೀನಿನ ಬಳಿ ಹೋದಾಗ ಟೊಮೆಟೋ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಕಳ್ಳತನದ ಕುರಿತು ಸೋಮಶೇಖರ್ ಹಳೇಬೀಡು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಲಕ್ಷಾಂತರ ಮೌಲ್ಯದ ಟೊಮೆಟೋ ಕಳೆದುಕೊಂಡ ಸೋಮಶೇಖರ್ ಕಂಗಾಲಾಗಿದ್ದಾರೆ.
ಈ ಬಗ್ಗೆ ಎಎನ್‌ಐ ಜೊತೆ ಮಾತನಾಡಿರುವ ಸೋಮಶೇಖರ್, ನಮ್ಮಲ್ಲಿ ಕೃಷಿ ಆದಾಯಕ್ಕಿಂತ ಪರ್ಯಾಯ ಆದಾಯದ ಮೂಲವಿದೆ. ಆದರೆ ಐದು ವರ್ಷಗಳಿಂದ ನಾವು ವಿವಿಧ ಕಾರಣಗಳಿಂದ ಅನೇಕ ಬೆಳೆಗಳನ್ನು ಕಳೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ. ಪೊಲೀಸರ ಪ್ರಕಾರ ದುಷ್ಕರ್ಮಿಗಳು ತಡರಾತ್ರಿ ಗೂಡ್ಸ್ ಕ್ಯಾರಿಯರ್‌ನಲ್ಲಿ ಬಂದು ಬುಧವಾರ ಬೆಳಗಿನ ಜಾವದವರೆಗೆ ಸುಮಾರು 90 ಚೀಲ ಟೊಮೆಟೊಗಳನ್ನು ಕೊಯ್ದು ಕದ್ದೊಯ್ದಿದ್ದಾರೆ.
ಪೊಲೀಸರು ಸ್ಥಳದಲ್ಲಿ ಮದ್ಯದ ಬಾಟಲಿಗಳು ಮತ್ತು ಸಿಗರೇಟ್ ಪ್ಯಾಕ್‌ಗಳನ್ನು ಪತ್ತೆಹಚ್ಚಿದ್ದು, ಕಳ್ಳತನದಲ್ಲಿ ಸ್ಥಳೀಯರ ಕೈವಾಡದ ಶಂಕೆ ವ್ಯಕ್ತಪಡಿಸಿದ್ದಾರೆ. ಹಿರಿಯ ತೋಟಗಾರಿಕಾ ಅಧಿಕಾರಿಗಳು ಕೂಡ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ರಾಜ್ಯದ ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೆಟೊ ಕೆಜಿಗೆ 110 ರಿಂದ 150 ರೂ ಇದ್ದು. ಕರ್ನಾಟಕದ ದಕ್ಷಿಣ ಭಾಗಗಳಲ್ಲಿ ಒಣಹವೆಯಿಂದಾಗಿ ಶೇ.50 ರಷ್ಟು ಬೆಳೆ ಕುಸಿದಿದೆ ಎಂದು ಮೂಲಗಳು ತಿಳಿಸಿವೆ.


Click it and Unblock the Notifications