ಅಮೆರಿಕಾದಲ್ಲಿ ಉದ್ಯೋಗ ಎಂದರೆ ಯಾರಿಗಿಷ್ಟ ಇಲ್ಲ ಹೇಳಿ. ಅದರಲ್ಲೂ ಉದ್ಯೋಗಾವಕಾಶವೇ ಇಲ್ಲದ ಭಾರತೀಯರಿಗೆ ಅಮೆರಿಕಾದಲ್ಲಿ ಉದ್ಯೋಗ ಸಿಗುವುದೆಂದರೆ ಎಂಥಾ ಖುಷಿಕರ ಸಂಗತಿ. ಆದರೆ ಅಲ್ಲಿಗೆ ಹೋಗಲು ಕೆಲಸದ ವೀಸಾ ಬೇಕೇ ಬೇಕು. ಉದ್ಯೋಗವಕಾಶ ಇಲ್ಲದಿದ್ದರೆ ಕೆಲಸದ ವೀಸಾ ಸಿಗುವುದಿಲ್ಲ. ಯಾವ ಉದ್ಯೋಗವಕಾಶ ಸಿಗದಿದ್ದರೂ ಅಲ್ಲಿ ಹೋಗಿ ಕೆಲಸ ಮಾಡಬೇಕು ಎನ್ನುವವರಿಗೆ ಇಲ್ಲಿದೆ ಒಂದು ಉಪಯುಕ್ತ ಮಾಹಿತಿ.
ಅಮೆರಿಕದಲ್ಲಿ ಕೆಲಸ ಮಾಡುವುದು ಭಾರತೀಯರಲ್ಲಿ ವಿಶೇಷವಾಗಿ ಜನಪ್ರಿಯವಾಗಿದೆ. ಏಕೆಂದರೆ ಇದು ಕಾಲ ಕಳೆದಂತೆಲ್ಲ ಶಾಶ್ವತ ನಿವಾಸಕ್ಕೆ ಕಾರಣವೂ ಆಗುತ್ತದೆ. ಭಾರತೀಯ ವೃತ್ತಿಪರರಿಗೆ ಅಮೆರಿಕ ಸಂಯುಕ್ತ ಸಂಸ್ಥಾನವು ಪ್ರಮುಖ ತಾಣಗಳಲ್ಲಿ ಒಂದಾಗಿದೆ. ಆದರೆ ಅಮೆರಿಕದಲ್ಲಿ ಉದ್ಯೋಗ ಪಡೆಯುವುದು ಅಷ್ಟೊಂದು ಸುಲಭವೂ ಇಲ್ಲ. ಅಮೆರಿಕಾದಲ್ಲಿ ಕೆಲಸ ಮಾಡಬೇಕೆಂದರೆ ಅದಕ್ಕೆ ಮಾನ್ಯವಾದ ಕೆಲಸದ ವೀಸಾ ಕೂಡ ಅಗತ್ಯವಿರುತ್ತದೆ. ವಿವಿಧ ವೀಸಾ ಆಯ್ಕೆಗಳ ಪೈಕಿ H-1B ಅತ್ಯಂತ ಬೇಡಿಕೆಯ ವೀಸಾ ಆಗಿದೆ. ಏಕೆಂದರೆ ಇದು ಐಟಿ ಉದ್ಯೋಗಿಗಳಿಗೆ, ಆರೋಗ್ಯ ಮತ್ತು ಹಣಕಾಸು ವಲಯಗಳಲ್ಲಿ ಕೆಲಸ ಮಾಡುವವರಿಗೆ ಉನ್ನತ ಕಂಪನಿಗಳಿಗೆ ಅನುವು ಮಾಡಿಕೊಡುತ್ತದೆ.

ಯುಎಸ್ ಕೆಲಸದ ವೀಸಾ ಪಡೆಯಲು ಸವಾಲುಗಳೇನು..?
ಯುಎಸ್ (ಯುನೈಟೆಡ್ ಸ್ಟೇಟ್ಸ್) ನಲ್ಲಿ ಕೆಲಸ ಮಾಡಬೇಕೆಂದರೆ, ಅದಕ್ಕಾಗಿ ವೀಸಾ ಬೇಕೇ ಬೇಕು. ಆದರೆ ಈ ಯುಎಸ್ ಕೆಲಸದ ವೀಸಾ ಪಡೆಯುವುದು ಅಷ್ಟೊಂದು ಸುಲಭದ ಕೆಲಸ ಅಲ್ಲವೇ ಅಲ್ಲ. ಕಂಪನಿಯಿಂದ ಉದ್ಯೋಗದ ಆಫರ್ ಪಡೆಯುವುದು ಪ್ರಾಥಮಿಕ ಅವಶ್ಯಕತೆಯಾಗಿದೆ. ಉದ್ಯೋಗದ ಆಫರ್ ಇಲ್ಲದೇ ಅಮೆರಿಕದಲ್ಲಿ ಕೆಲಸ ಮಾಡಲು ಅನುಮತಿಯೇ ಇಲ್ಲ. ಅಲ್ಲದೇ ಪ್ರಾಯೋಜಕತ್ವವನ್ನು ನೀಡುವ ಕಂಪನಿಗಳ ಸಂಖ್ಯೆ ಸೀಮಿತವಾಗಿರುವುದರಿಂದ, ಅನೇಕ ಅರ್ಜಿದಾರರಿಗೆ ಅರ್ಹತೆ ಸಿಗುವುದೇ ಕಷ್ಟಕರ ಸಂಗತಿ. ಹೀಗಿರುವಾಗಲೂ ಕೆಲವು ವೀಸಾ ವಿಭಾಗಗಳು ಉದ್ಯೋಗದ ಕೊಡುಗೆ ಅಥವಾ ಉದ್ಯೋಗದಾತರ ಪ್ರಾಯೋಜಕತ್ವದ ಅಗತ್ಯವಿಲ್ಲದೇ ಯುಎಸ್‌ನಲ್ಲಿ ಕೆಲಸ ಮಾಡುವ ಅವಕಾಶ ನೀಡುತ್ತದೆ.
ಆಫರ್ ಇಲ್ಲದಿದ್ದರೂ ಅಮೆರಿಕಾಗೆ ಹೋಗಲು ಸರಳ ಮಾರ್ಗ:
1. EB-2 NIW ವೀಸಾ ಪಡೆದು ಹೋಗಬಹುದು:
EB-2 NIW ವೀಸಾ ಉದ್ಯೋಗ ಆಧಾರಿತ ವೀಸಾ ಆಗಿದೆ. ಇದಕ್ಕೆ ಯಾವುದೇ ಉದ್ಯೋಗಾವಕಾಶ ಅಥವಾ ಉದ್ಯೋಗದಾತರ ಪ್ರಾಯೋಜಕತ್ವದ ಅಗತ್ಯವಿಲ್ಲ. ಹೀಗಾಗಿ ಈ ವೀಸಾದ ಮೂಲಕ ಅಮೆರಿಕಾಗೆ ಹೋಗಬಹುದು. ಸ್ನಾತಕೋತ್ತರ ಅಥಚಾ ಪಿಹೆಚ್‌ಡಿಯಂತಹ ಉನ್ನತ ಪದವಿಗಳನ್ನು ಹೊಂದಿರುವ ವ್ಯಕ್ತಿಗಳು ಅಥವಾ ಯುನೈಟೆಡ್ ಸ್ಟೇಟ್ಸ್‌ನ ರಾಷ್ಟ್ರೀಯ ಹಿತಾಸಕ್ತಿಯನ್ನು ಪೂರೈಸುವ ಕ್ಷೇತ್ರಗಳಲ್ಲಿ ಅಸಾಧಾರಣ ಸಾಮರ್ಥ್ಯಗಳನ್ನು ಹೊಂದಿರುವ ವ್ಯಕ್ತಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಈ ವೀಸಾದ ಪ್ರಯೋಜನದಿಂದ ಅಮೆರಿಕಾದಲ್ಲಿ ಕಾನೂನು ಬದ್ಧವಾಗಿ ಶಾಶ್ವತ ನಿವಾಸಿಗಳಾಗಿ ಜೀವಿಸಬಹುದು. ಸಾಮಾನ್ಯವಾಗಿ ವಿಜ್ಞಾನ, ಕಲೆ ಮತ್ತು ವ್ಯವಹಾರದ ವೃತ್ತಿಪರರಿಗೆ ಇದನ್ನು ನೀಡಲಾಗುತ್ತದೆ. ಅವರ ಕೆಲಸವು ದೇಶಕ್ಕೆ ಗಮನಾರ್ಹವಾಗಿ ಪ್ರಯೋಜನ ನೀಡುತ್ತದೆ.
2. O-1 ವೀಸಾ ಪಡೆದು ಹೋಗಬಹುದು:
ಯಾವುದೇ ಆಫರ್ ಇಲ್ಲದಿದ್ದರೂ ಅಮೆರಿಕಾಗೆ ಹೋಗಬೇಕೆನ್ನುವವರಿಗೆ, ಈ O-1 ವೀಸಾ ಮತ್ತೊಂದು ಆಯ್ಕೆಯಾಗಿದೆ. ಇದು ಯಾವುದೇ ವ್ಯಕ್ತಿಗಳು ಒಂದೇ ಉದ್ಯೋಗದಾತರಿಂದ ಉದ್ಯೋಗದ ಪ್ರಸ್ತಾಪವಿಲ್ಲದೇ ಯುಎಸ್‌ನಲ್ಲಿ ಕೆಲಸ ಮಾಡಲು ಸಹಾಯವಾಗುತ್ತದೆ. ಈ ವೀಸಾ ಹೊಂದಿರುವವರು ತಮ್ಮ ಕುಟುಂಬಗಳನ್ನು ಕರೆತರಲು ಮತ್ತು ಬಹು ಉದ್ಯೋಗದಾತರಿಗೆ ಕೆಲಸ ಮಾಡಲು ಅಥವಾ ಸ್ವಯಂ ಉದ್ಯೋಗಿಯಾಗಲು ಅನುಮತಿಸುತ್ತದೆ.
ಇನ್ನು ಈ ವೀಸಾದಲ್ಲಿ O-1A ಹಾಗೂ O-1B ಎರಡು ವರ್ಗಗಳಿವೆ. ಅವುಗಳನ್ನು ಏಕೆ ವಿಂಗಡನೆ ಮಾಡಲಾಗಿದೆ. ಹಾಗೂ ಈ ವೀಸಾಗಳು ಯಾರಿಗೆಲ್ಲಾ ಸಹಕಾರಿಯಾಗಿವೆ ಎಂದು ನೋಡುವುದಾದರೆ:
O-1A ವೀಸಾ: ಅಮೆರಿಕಾದಲ್ಲಿ ವ್ಯಾಪಾರ ಮಾಡಬೇಕೆನ್ನುವ ಮಾಲೀಕರಿಗೆ, ಇಂಜಿನಿಯರ್‍ಗಳಿಗೆ, ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ವೃತ್ತಿಪರರಿಗೆ, ಕ್ರೀಡಾಪಟುಗಳಿಗೆ, ಸಂಶೋಧನೆ ಮಾಡುವವರಿಗೆ ಹಾಗೂ ಪ್ರಾಧ್ಯಾಪಕರಿಗೆ ನೀಡಲಾಗುತ್ತದೆ.
O-1B ವೀಸಾ: ಫ್ಯಾಷನ್ ಡಿಸೈನರ್‍ಗಳು, ಕಾಸ್ಟ್ಯೂಮ್ ಡಿಸೈನರ್‍ಗಳು, ನಟರು, ಫೋಟೋಗ್ರಾಫರ್‍ಗಳು, ಸಿನಿಮಾ ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಸೃಜನಶೀಲ ಕ್ಷೇತ್ರದಲ್ಲಿರುವವರಿಗೆ ನೀಡಲಾಗುತ್ತದೆ.
ಅಂದರೆ ಈ ವೀಸಾಗಳನ್ನು ತಮ್ಮ ಕ್ಷೇತ್ರಗಳಿಗೆ ಅನುಗುಣವಾಗಿ ನೀಡಲಾಗುತ್ತದೆ.


Click it and Unblock the Notifications