ಬೇಸಿಗೆಯ ಹೊಸ್ತಿಲಲ್ಲೇ ಇರುವ ಮಹಾನಗರ ಬೆಂಗಳೂರಿಗೆ ಬೇಸಿಗೆ ಮುನ್ನವೇ ನೀರಿನ ಬಿಸಿ ತಟ್ಟಿದಂತೆ ಕಾಣುತ್ತಿದೆ. ಈಗಾಗಲೇ ತಾಪಮಾನ ಹೆಚ್ಚಾಗಿದ್ದು, ಕೆಲವೆಡೆ ನೀರಿನ ಸಮಸ್ಯೆ ಶುರುವಾಗಿದೆ. ಹೀಗಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಹೊಸದೊಂದು ನಿಯಮ ಜಾರಿ ಮಾಡಿದೆ. ಅದೇನೆಂದರೆ ಕುಡಿಯುವ ನೀರನ್ನು ಕೆಲವೊಂದು ಅನಿವಾರ್ಯವಲ್ಲದ ಚಟುವಟಿಕೆಗಳಿಗೆ ಬಳಸುವುದನ್ನು ನಿಷೇಧಿಸಿದೆ. ಅಂದರೆ ಕಾರು ತೊಳೆಯುವುದು, ತೋಟಗಾರಿಕೆ, ಕಟ್ಟಡ ನಿರ್ಮಾಣ, ರಸ್ತೆ ದುರಸ್ತಿ ಮತ್ತು ನಿರ್ವಹಣೆಯಂತರ ಕೆಲಸಗಳಿಗೆ ಕುಡಿಯುವ ನೀರನ್ನು ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಒಂದು ವೇಳೆ ನಿಯಮ ಮೀರಿದಲ್ಲಿ ₹5000 ದಂಡ ವಿಧಿಸುವ ಬಗ್ಗೆ ಎಚ್ಚರಿಕೆ ನೀಡಿದೆ.

ಈ ಹೊಸ ನಿಯಮ ಬೇಸಿಗೆ ಮುಗಿಯುವವರೆಗೆ ಇರುತ್ತದೆ ಎಂದು ತಿಳಿಯಲಾಗಿದೆ. ಫೆಬ್ರವರಿ 17ರಂದು ಹೊರಡಿಸಿರುವ ಈ ಆದೇಶ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯಿದೆ ಹಾಗೂ 1964ರ ಸೆಕ್ಷನ್ 33 ಮತ್ತು 34ರ ಅಡಿಯಲ್ಲಿ ವಾಹನಗಳನ್ನು ತೊಳೆಯುವುದನ್ನು, ಉದ್ಯಾನವನಗಳಿಗೆ ಕುಡಿಯುವ ನೀರು ಬಳಸುವುದನ್ನು, ಕಟ್ಟಡ ನಿರ್ಮಾಣ ಚಟುವಟಿಕೆಗಳಿಗೆ ಬಳಸುವುದು, ಮಾಲ್ ಹಾಗೂ ಚಿತ್ರಮಂದಿರಗಳಲ್ಲಿ ಸ್ವಚ್ಛತೆಗಾಗಿ ಕುಡಿಯುವ ನೀರು ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ನೀರು ಸರಬರಾಜು ಮಂಡಳಿ ಹಾಗೂ ಒಳಚರಂಡಿ ಮಂಡಳಿ ಹೊರಡಿಸಿರುವ ಈ ಆದೇಶ ಉಲ್ಲಂಘಿಸಿದ್ದೇ ಆದಲ್ಲಿ, ಕ್ರಮ ತೆಗೆದುಕೊಳ್ಳಲಾಗುತ್ತದೆ. ಅಂದರೆ ನಿಯಮ ಉಲ್ಲಂಘನೆಯ ಕಾಯಿದೆಯ ಸೆಕ್ಷನ್ 109ರ ಅಡಿಯಲ್ಲಿ ದಿನಕ್ಕೆ 500 ರೂಪಾಯಿಗಳಂತೆ ಹೆಚ್ಚುವರಿಯಾಗಿ 5000 ರೂ. ವರೆಗೆ ದಂಡ ವಿಧಿಸಲಾಗುತ್ತದೆ. ಇಂತಹ ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಯಾರೇ ಆದರೂ BWSSB ಸಹಾಯವಾಣಿಗೆ (1916) ಕರೆ ಮಾಡಿ ವರದಿ ನೀಡಬಹುದು. ಈ ಮೂಲಕ ಕುಡಿಯುವ ನೀರಿನ ದುರ್ಬಳಕೆ ತಡೆಯಬಹುದು.
ಬೆಂಗಳೂರಿನಲ್ಲಿ ಬೇಸಿಗೆ ಬಂತೆಂದರೆ ಸಾಕು ನೀರಿನ ಸಮಸ್ಯೆ ಹೇಳತೀರದಂತಿರುತ್ತದೆ. ಅತಿಹೆಚ್ಚು ತಾಪಮಾನ ಕೂಡ ಇರುವುದರಿಂದ ಬೇಸಿಗೆ ಆರಂಭಕ್ಕೂ ಮುನ್ನವೇ ನೀರು ಸರಬರಾಜು ಮಂಡಳಿ ಹಾಗೂ ಒಳಚರಂಡಿ ಮಂಡಳಿ ಈ ಆದೇಶವನ್ನು ಹೊರಡಿಸಿದೆ.


Click it and Unblock the Notifications