ಬೆಂಗಳೂರಿನಲ್ಲಿ ಕಳೆದ ತಿಂಗಳು..ಅಂದರೆ ಏಪ್ರಿಲ್ 1ರಿಂದ ಹೊಸ ನೀರಿನ ದರವನ್ನು ಜಾರಿಗೆ ತರಲಾಯ್ತು. ಇದು ಹೊಸ ನೀರಿನ ದರ ಎನ್ನುವುದಕ್ಕಿಂತ, ಹೊಸ ಭಾರ ಎನ್ನಬಹುದು. ಏಕೆಂದರೆ ಬೆಂಗಳೂರು ಜೀವನ ಮೊದಲೇ ಕಷ್ಟ ಕಷ್ಟ. ಹೀಗಿರುವಾಗ ಶುಲ್ಕಗಳು, ದರಗಳು ಹೆಚ್ಚಾಗ್ತಾ ಹೋದರೆ ಬದುಕೋದು ಹೇಗೆ. ಈ ಒಂದು ಸಣ್ಣ ಬದಲಾವಣೆಯಿಂದ ಬೆಂಗಳೂರಿನ ವಾಣಿಜ್ಯ ಬಳಕೆದಾರರಿಗೆ ನಿಜಕ್ಕೂ ದೊಡ್ಡ ಹೊರೆಯಾಗಿದೆ.

ಪಿಜಿ, ಹೋಟೆಲ್‌ಗಳಿಗೆ ಬಿಲ್ ಬರೆ:
ಹೌದು, ಈ ನೀರಿನ ದರ ಬದಲಾವಣೆಯಿಂದ ಶಿಕ್ಷಣ ಸಂಸ್ಥೆಗಳು, ಕೈಗಾರಿಕೆಗಳು, ಹೋಟೆಲ್‌ಗಳು ಮತ್ತು ಪಿಜಿಗಳಂತಹ ವಾಣಿಜ್ಯ ಕ್ಷೇತ್ರಗಳಲ್ಲಿ ನೀರು ಹೆಚ್ಚು ಬಳಕೆಯಾಗುತ್ತದೆ. ಹೀಗಾಗಿ ಅವರು ಪಾವತಿಸುವ ದರಗಳು ಕೂಡ ಹೆಚ್ಚಾಗಿದೆ. ಇದರಿಂದ ಎಲ್ಲಾ ವಾಣಿಜ್ಯ ಬಳಕೆದಾರರಿಗೆ ನೀರು ಕೈಗೆಟುಕದ ವಸ್ತುವಾಗಿಬಿಟ್ಟಿದೆ. ಈಗಾಗಲೇ ಬಜೆಟ್ ಸಡಿಲವಾಗಿ ಸಾಗುತ್ತಿರುವ ಸಂಸ್ಥೆಗಳ ಮೇಲೆ ಭಾರೀ ಒತ್ತಡ ಮೂಡಿಸಿದೆ.
1.90 ಪೈಸೆಯವರೆಗೆ ಹೆಚ್ಚುವರಿ ಹಣ ಪಾವತಿ:
ಸದ್ಯ ಇರುವ ಪರಿಷ್ಕೃತ ದರಗಳ ಪ್ರಕಾರ, ವಾಣಿಜ್ಯ ಬಳಕೆದಾರರು ಪ್ರತಿ ಲೀಟರ್‍ಗೆ 0.90 ಪೈಸೆಯಿಂದ 1.90 ಪೈಸೆಯವರೆಗೆ ಹೆಚ್ಚುವರಿ ಹಣ ಪಾವತಿಸಬೇಕಾಗಿದೆ. ಇನ್ನು ದರ ಹೆಚ್ಚಳ ಎಲ್ಲಾ ವಾಣಿಜ್ಯ ಬಳಕೆದಾರರಿಗೆ ಒಂದೇ ರೀತಿಯಾಗಿ ಅನ್ವಯವಾಗುತ್ತದೆ. ಇದೊಂದು ದೊಡ್ಡ ತಕರಾರಾಗುತ್ತದೆ. ಇದರಿಂದ ನೀರಿನ ಬಳಕೆ ಕಡಿಮೆ ಇರುವ ಸಣ್ಣ ಕೈಗಾರಿಕೆಗಳು ಮತ್ತು ಪಿಜಿ ಮಾಲೀಕರು ಹೆಚ್ಚು ಹೊರೆ ಅನುಭವಿಸುತ್ತಿದ್ದಾರೆ.
ವಾಣಿಜ್ಯ ಬಳಕೆದಾರರು ಆಕ್ರೋಶ:
ಪಿಜಿ ಮಾಲೀಕರ ಕಲ್ಯಾಣ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಡಿಟಿ ತಮ್ಮ ಆತಂಕ ವ್ಯಕ್ತಪಡಿಸುತ್ತಾ, 300% ಬಿಲ್ ಏರಿಕೆಯಾಗಿದ್ದು, ನಾವು ಕಾವೇರಿ ನೀರಿಗೆ ಇಷ್ಟು ಹೆಚ್ಚುವರಿ ಬಿಲನ್ನು ನಿರೀಕ್ಷಿಸುತ್ತಿಲ್ಲ. ಬೇಸಿಗೆ ಕಾಲದಲ್ಲಿ ಇದು ಮತ್ತಷ್ಟು ಸಂಕಷ್ಟ ತಂದಿದೆ. ನಾವು ಇದನ್ನು ವಿರೋಧಿಸುತ್ತೇವೆ ಎಂದಿದ್ದಾರೆ. ಹೋಟೆಲ್ ಮಾಲೀಕರು ಸಹ ಹೊಸ ದರಗಳು ತಮ್ಮ ಆರ್ಥಿಕ ಪರಿಸ್ಥಿತಿಗೆ ಆಘಾತ ತಂದಿವೆ ಎಂದು ಹೇಳಿದ್ದಾರೆ. ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘದ ಅಧ್ಯಕ್ಷ ಜಿ.ಕೆ. ಶೆಟ್ಟಿ, "ನಾವು ಸಾರ್ವಜನಿಕರಿಗೆ ಉಚಿತವಾಗಿ ನೀರು ಮತ್ತು ಶೌಚಾಲಯ ಸೌಲಭ್ಯ ಒದಗಿಸುತ್ತಿದ್ದೇವೆ. ಆದರೆ ಬಿಲ್‌ನಲ್ಲಿ ನೈರ್ಮಲ್ಯ ಶುಲ್ಕ, ಬೋರ್‌ವೆಲ್ ಪಾವತಿ ಸೇರಿ ನಿರೀಕ್ಷೆಗಿಂತ ಹೆಚ್ಚಿದೆಯೆಂದು ಕಂಡುಬರುತ್ತಿದೆ, ಎಂದಿದ್ದಾರೆ.
ಕೈಗಾರಿಕೆ ಘಟಕಗಳಿಂದಲೂ ಆಕ್ರೋಶ:
ಇನ್ನು ಪೀಣ್ಯದ ಕೈಗಾರಿಕಾ ಘಟಕಗಳ ಪ್ರತಿನಿಧಿಗಳು ಕೂಡ ಈ ಬಗ್ಗೆ ಕಿಡಿ ಕಾರಿದ್ದಾರೆ. ನೀರು ಬಳಸದೇ ಇದ್ದರೂ ವಾಣಿಜ್ಯ ಬಳಕೆದಾರರಂತೆಯೇ ನಮಗೂ ದರ ವಿಧಿಸುತ್ತಿದ್ದಾರೆ, ಎಂದು ಕೆಂಡಾಮಂಡಲವಾಗಿದ್ದಾರೆ. ಅಂದಹಾಗೆ ಅವರು ಹೇಳುವ ಪ್ರಕಾರ, ಸಣ್ಣ ಘಟಕಗಳು ದಿನಕ್ಕೆ ಒಂದು ಡ್ರಮ್ ಮಾತ್ರ ನೀರು ಬಳಸುತ್ತವೆ. ನಮ್ಮ ಬಳಕೆ ಅತಿಕಡಿಮೆಯಾಗಿದ್ದು, ಹೋಟೆಲ್‌ಗಳ ಜೊತೆ ನಮ್ಮನ್ನು ಹೋಲಿಸುವುದು ನ್ಯಾಯಸಮ್ಮತವಲ್ಲ ಎಂಬುದಾಗಿದೆ.
ನೀರಿನ ದರ ಹೆಚ್ಚಳ - ಸ್ಲ್ಯಾಬ್ ಪ್ರಕಾರ (ಪ್ರತಿ ಲೀಟರ್‌ಗೆ):
0 - 10,000 ಲೀಟರ್: ₹0.90
10,001 - 25,000 ಲೀಟರ್: ₹1.30
25,001 - 50,000 ಲೀಟರ್: ₹1.50
50,001 - 75,000 ಲೀಟರ್: ₹1.90
75,001 - 1,00,000 ಲೀಟರ್: ₹1.10
1,00,000 ಲೀಟರ್ ಮೀರಿದ ಬಳಕೆ: ₹1.20
ಇದೇ ಸಂದರ್ಭದಲ್ಲಿ, ಹಲವಾರು ಸಂಘಟನೆಗಳು BWSSB ಗೆ ಪತ್ರ ಬರೆದು ಸುಧಾರಿತ ದರ ಮರುಪರಿಶೀಲನೆ ಮಾಡುವಂತೆ ಆಗ್ರಹಿಸುತ್ತಿರುವ ದೃಶ್ಯ ಕಂಡುಬರುತ್ತಿದೆ. ವ್ಯಾಪಾರ ಮಾಲೀಕರು ಮತ್ತು ಸಂಸ್ಥೆಗಳು ಈಗ ಹೊಸ ನೀತಿ ಜಾರಿಗೆ ಶಿಸ್ತಿನಿಂದ ಹೊಂದಿಕೊಳ್ಳಬೇಕಾದ ಸಂದರ್ಭ ಎದುರಾಗಿದ್ದು, ನೀರಿನ ಭದ್ರತೆ ಮತ್ತು ಬಳಕೆಯ ಸಮರ್ಪಕ ನಿಯಂತ್ರಣಕ್ಕೆ ಹೊಸ ಆಯಾಮ ನೀಡುವ ಸಾಧ್ಯತೆಯೂ ಇದೆ.


Click it and Unblock the Notifications