ಚಿಕ್ಕಬಳ್ಳಾಪುರ: 'ಕೋಲಾರ ಡಿಸಿಸಿ ಬ್ಯಾಂಕ್ ನಲ್ಲಿ ಅವ್ಯವಹಾರ ನಡೆದಿರುವುದು ನನ್ನ ಗಮನಕ್ಕೆ ಬಂದಿದೆ. ಕೋಲಾರ ಡಿಸಿಸಿ ಬ್ಯಾಂಕ್ ಹಿಂದೆ ದೊಡ್ಡವರ ಕೈವಾಡ ಇದೆ. ತನಿಖೆ ನಡೆಸಲು ಹೋದರೆ ನಿಮಗೂ ತೊಂದರೆಯಾಗುತ್ತದೆ ಎಂದು ಹಲವರು ಹೇಳಿದ್ದಾರೆ. ಇದಕ್ಕೆಲ್ಲ ನಾನು ಹೆದರುವುದಿಲ್ಲ' ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಸೋಮವಾರ ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ನಾನು ಯಾರಿಗೂ ಯಾವುದೇ ಕಾರಣಕ್ಕೂ ಹೆದರುವವನಲ್ಲ. ಕೋಲಾರ ಡಿಸಿಸಿ ಬ್ಯಾಂಕ್ ಅವ್ಯವಹಾರಗಳ ಹಿಂದೆ ಅದೆಷ್ಟೇ ದೊಡ್ಡ ತಲೆಗಳು ಇದ್ದರೂ ನನಗೆ ಭಯವಿಲ್ಲ. ತನಿಖೆ ನಡೆಸಿಯೇ ನಡೆಸುತ್ತೇನೆ' ಎಂದು ಸಚಿವರು ತಿಳಿಸಿದರು.
''ಮುಖ್ಯಮಂತ್ರಿಗಳ ಜಿಲ್ಲೆಯಾದ ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಲ್ಲಿ ಅವ್ಯವಹಾರ ನಡೆದಿತ್ತು. ಅಲ್ಲೂ ಸಹ ನಿರ್ಭೀತಿಯಿಂದ ಕಾರ್ಯನಿರ್ವಹಿಸಿ ಅವ್ಯವಹಾರದ ತನಿಖೆ ನಡೆಸಿ ಕ್ರಮ ಕೈಗೊಂಡಿದ್ದೇನೆ. ಸೆಕ್ಷನ್ 65ರ ಪ್ರಕಾರ ಆದೇಶ ಹೊರಡಿಸಿ ಪೊಲೀಸ್ ಸಿಬ್ಬಂದಿ ಸುಪರ್ದಿಯಲ್ಲಿ ಎಲ್ಲ ದಾಖಲೆಯನ್ನು ವಾಪಸ್ ಪಡೆದಿದ್ದಲ್ಲದೆ, ತನಿಖೆ ಮಾಡಿ ಕ್ರಮ ಕೈಗೊಳ್ಳಲಾಗಿದೆ'' ಎಂದು ಸಚಿವರು ತಿಳಿಸಿದರು.
''ಕೋಲಾರ ಡಿಸಿಸಿ ಬ್ಯಾಂಕ್ ಅವ್ಯವಹಾರದ ಬಗ್ಗೆ ಮಾಹಿತಿಯನ್ನು ಕೋರಲಾಗಿದ್ದರಿಂದ ಮೂರ್ನಾಲ್ಕು ದಿನದಲ್ಲಿ ತನಿಖೆ ಕೈಗೊಳ್ಳಲಾಗುವುದು. ವರದಿ ಬಳಿಕ ಕ್ರಮ ವಹಿಸಲಾಗುವುದು'' ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.

''ಡಿಸಿಸಿ ಬ್ಯಾಂಕ್ ಗಳಿಂದ ನೂರಾರು ಕೋಟಿ ರೂಪಾಯಿ ಸಾಲವನ್ನು ಸಕ್ಕರೆ ಕಾರ್ಖಾನೆಗಳಿಗೆ ಕೊಡಲಾಗುತ್ತಿದೆ. ಆದರೆ, ಯಾರೂ ಅಸಲು ಹಾಗೂ ಬಡ್ಡಿಯನ್ನೂ ಕಟ್ಟಲ್ಲ. ಕೆಲವೇ ಕೆಲವರು ಬಡ್ಡಿ ಕಟ್ಟುತ್ತಾರೆ. ಹೀಗಾಗಿ ಇಂಥವರಿಗೆ ಸಾಲ ಕೊಡುವ ಬದಲು ನಿಜವಾಗಿ ಸಾಲ ತೀರಿಸುವ ರೈತರಿಗೆ ಹೆಚ್ಚು ಸಾಲವನ್ನು ಕೊಡುವಂತೆ ನಾನು ಈಗಾಗಲೇ ಸೂಚನೆ ನೀಡಿದ್ದೇನೆ'' ಎಂದು ಸಚಿವ ಸೋಮಶೇಖರ್ ತಿಳಿಸಿದರು.


Click it and Unblock the Notifications