ತಂತ್ರಜ್ಞಾನ ಅತ್ಯಾಧುನಿಕ ಆಗುತ್ತಿದ್ದಂತೆ ಸೈಬರ್ ಅಪರಾಧ ಎಸಗುವವರು ಕೂಡಾ ತಮ್ಮನ್ನು ತಾವು ಅಪ್ಡೇಟ್ ಮಾಡಿಕೊಳ್ಳುತ್ತಿದ್ದು, ವಂಚನೆಗೆ ಹೊಸ ಹೊಸ ದಾರಿಯನ್ನು ಕಂಡುಕೊಳ್ಳುತ್ತಿದ್ದಾರೆ. ಜೊತೆಗೆ ತಮ್ಮ ತಂತ್ರಗಳನ್ನು ನಿರಂತರವಾಗಿ ಸುಧಾರಿಸಿಕೊಳ್ಳುತ್ತಿದ್ದಾರೆ. ಇದರ ಪರಿಣಾಮವಾಗಿ, ನಾವು ದಿನನಿತ್ಯ ಬಳಸುವ ವಾಟ್ಸಾಪ್ ಈಗ ಆನ್‌ಲೈನ್ ವಂಚನೆಗಳಿಗೆ ಒಂದು ಸಾಮಾನ್ಯ ತಾಣವಾಗಿ ಮಾರ್ಪಟ್ಟಿದೆ ಅಂದ್ರೆ ತಪ್ಪಾಗಲಾರದು. ಈ ಹಿಂದೆ ಸ್ಕ್ಯಾಮರ್ ಗಳು ವಂಚನೆಗೆ ಅಪಾಯಕಾರಿ ಲಿಂಕ್‌ಗಳು,ಉದ್ಯೋಗದ ಆಮಿಷ, ಗೆಳೆಯರು ಅಥವಾ ಕುಟುಂಬಸ್ಥರ ಸೋಗಿನಲ್ಲಿ ವಂಚನೆ, ಲಾಟರಿ ಅಥವಾ ಬಹುಮಾನದ ಆಮಿಷ ಮತ್ತು ಒಟಿಪಿ ವಂಚನೆಯಿಂದ ಹಿಡಿದು ಆತಂಕಕಾರಿ "ಡಿಜಿಟಲ್ ಬಂಧನಗಳು" ವರೆಗೆ ಅನೇಕ ರೀತಿಯ ಸ್ಕ್ಯಾಮ್ ಗಳನ್ನು ವಂಚಕರು ಎಸಗುತ್ತಿದ್ದಾರೆ. ಈಗ, ಇದಕ್ಕೆಲ್ಲಕ್ಕಿಂತಲೂ ಹೊಸದಾದ ಮತ್ತು ನಾವೆಲ್ಲಾ ಗಂಭೀರವಾಗಿ ಚಿಂತಿಸಬೇಕಾದ ವಂಚನೆಯ ವಿಧಾನವೊಂದು ಸುದ್ದಿಯಾಗುತ್ತಿದೆ. ಅದೇ ವಾಟ್ಸಾಪ್ ಇಮೇಜ್ ಸ್ಕ್ಯಾಮ್.!
ವಾಟ್ಸಾಪ್ ಇಮೇಜ್ ಮೂಲಕ ವಂಚನೆ ಹೇಗಾಗುತ್ತದೆ?
ಈ ಹೊಸ ಸ್ವರೂಪದ ಸ್ಕ್ಯಾಮ್ ನಲ್ಲಿ ಸೈಬರ್ ಕ್ರಿಮಿನಲ್‌ಗಳು ಬಳಕೆದಾರರಿಗೆ ನಿರುಪದ್ರವವೆಂದು ತೋರುವ ಚಿತ್ರಗಳನ್ನು ವಾಟ್ಸಾಪ್ ಮೂಲಕ ಕಳುಹಿಸುತ್ತಾರೆ. ಅಂದರೆ ಹೊಸ ಸಂಖ್ಯೆಯಿಂದ ಇಮೇಜ್ ಕಳುಹಿಸಿರುತ್ತಾರೆ. ಆದರೆ ವಾಸ್ತವವಾಗಿ, ಈ ಚಿತ್ರಗಳ ಒಳಗೆ ಅಪಾಯಕಾರಿ ಮಾಲ್‌ವೇರ್ ಅಡಗಿಕೊಂಡಿರುತ್ತದೆ. ಈ ಚಿತ್ರಗಳನ್ನು ಡೌನ್‌ಲೋಡ್ ಮಾಡುವುದರಿಂದ ಅಥವಾ ತೆರೆಯುವುದರಿಂದ ನಿಮ್ಮ ಮೊಬೈಲ್ ಫೋನ್‌ಗೆ ಹಾನಿಯಾಗಬಹುದು ಅಥವಾ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯಬಹುದು. ಹಾಗಾಗಿ, ವಾಟ್ಸಾಪ್‌ನಲ್ಲಿ ಬರುವ ಯಾವುದೇ ಅಪರಿಚಿತ ಅಥವಾ ಅನುಮಾನಾಸ್ಪದ ಚಿತ್ರಗಳ ಬಗ್ಗೆ ಎಚ್ಚರಿಕೆಯಿಂದ ಇರುವುದು ಬಹಳ ಮುಖ್ಯ.

ವಂಚಕರು ಕಳಿಸುವ ಚಿತ್ರಗಳಲ್ಲಿ ಅಡಗಿರುವ ಮಾಲ್‌ವೇರ್ ಬ್ಯಾಂಕಿಂಗ್ ಪಾಸ್‌ವರ್ಡ್‌ಗಳು, OTP ಗಳು ಮತ್ತು UPI ವಿವರಗಳು ಸೇರಿದಂತೆ ಸೂಕ್ಷ್ಮ ಮಾಹಿತಿಯನ್ನು ಕದಿಯುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಕೆಲವು ಸಂದರ್ಭಗಳಲ್ಲಿ, ಸೈಬರ್ ಅಪರಾಧಿಗಳು ಬಲಿಪಶುವಿನ ಸಾಧನದ ಸಂಪೂರ್ಣ ನಿಯಂತ್ರಣವನ್ನು ತೆಗೆದುಕೊಳ್ಳಲು ಅವಕಾಶ ಮಾಡಿಕೊಡುತ್ತದೆ.
ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದ ಘಟನೆಯಲ್ಲಿ ಇದೇ ರೀತಿಯ ವಂಚನೆ ನಡೆದಿದ್ದು, ಒಂದು ನಿರ್ದಿಷ್ಟ ಪ್ರಕರಣದಲ್ಲಿ ವಾಟ್ಸಾಪ್ ಇಮೇಜ್ ಮೂಲಕ ನಡೆಯುವ ವಂಚನೆಯ ಗಂಭೀರತೆಯನ್ನು ಎತ್ತಿ ತೋರಿಸುತ್ತದೆ. ಇಲ್ಲಿ, ಓರ್ವ ವ್ಯಕ್ತಿಗೆ ಅಪರಿಚಿತ ಸಂಖ್ಯೆಯಿಂದ ವಾಟ್ಸಾಪ್ ಸಂದೇಶವೊಂದು ಬರುತ್ತದೆ. ಆ ಸಂದೇಶವು ಒಂದು ಫೋಟೋವನ್ನು ಅಟ್ಯಾಚ್ ಮಾಡಲಾಗಿರುತ್ತದೆ, ಅದರಲ್ಲಿರುವ ವ್ಯಕ್ತಿಯನ್ನು ಗುರುತಿಸಿ ಸಹಾಯ ಮಾಡಿ ಎಂಬ ಸಂದೇಶ ಇರುತ್ತದೆ. ಇದಾದ ಬಳಿಕ ಅದೇ ಸಂಖ್ಯೆಯಿಂದ ಪದೇ ಪದೇ ಕರೆಗಳು ಬರುತ್ತವೆ. ಕುತೂಹಲ ಅಥವಾ ಸಹಾಯ ಮಾಡುವ ಉದ್ದೇಶದಿಂದ ಆ ವ್ಯಕ್ತಿ ಕೊನೆಗೆ ಆ ಚಿತ್ರದ ಮೇಲೆ ಕ್ಲಿಕ್ ಮಾಡುತ್ತಾರೆ. ಅಷ್ಟೇ ತಕ್ಷಣ, ಅವರ ಫೋನ್ ಹ್ಯಾಕ್ ಆಗುತ್ತದೆ. ಫೋನ್ ಹ್ಯಾಕ್ ಆದ ಕೂಡಲೇ, ಮಾಲ್‌ವೇರ್ ಅವರ ಹಣಕಾಸಿನ ಮಾಹಿತಿಯನ್ನು ಪ್ರವೇಶಿಸಿ, ಅವರ ಬ್ಯಾಂಕ್ ಖಾತೆಯಿಂದ ಅಕ್ರಮ ಹಣ ವರ್ಗಾವಣೆಗೆ ಕಾರಣವಾಗುತ್ತದೆ. ಇದರ ಪರಿಣಾಮವಾಗಿ ಆ ವ್ಯಕ್ತಿ ಸುಮಾರು ₹2 ಲಕ್ಷ ರೂಪಾಯಿಗಳನ್ನು ಕಳೆದುಕೊಳ್ಳಬೇಕಾಗುತ್ತದೆ.
ಈ ಹಗರಣವನ್ನು ಪತ್ತೆಹಚ್ಚುವುದು ಕಷ್ಟವಾಗಲು ಪ್ರಮುಖ ಕಾರಣವೆಂದರೆ, ಇದು ಸಾಂಪ್ರದಾಯಿಕ ಫಿಶಿಂಗ್ ಪ್ರಯತ್ನಗಳಿಗಿಂತ ಭಿನ್ನವಾಗಿರುತ್ತದೆ. ಸಾಮಾನ್ಯವಾಗಿ, ಫಿಶಿಂಗ್‌ನಲ್ಲಿ ವಂಚಕರು ನಿಮ್ಮನ್ನು ನಕಲಿ ವೆಬ್‌ಸೈಟ್‌ಗೆ ಕರೆದೊಯ್ಯುವ ಲಿಂಕ್‌ಗಳನ್ನು ಕ್ಲಿಕ್ ಮಾಡಲು ಅಥವಾ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಮೂದಿಸಲು, ಹಂಚಿಕೊಳ್ಳುವಂತೆ ಕೇಳುತ್ತಾರೆ. ಆದರೆ ಈ ಹೊಸ ತಂತ್ರದಲ್ಲಿ, ನೀವು ಯಾವುದೇ ಬಾಹ್ಯ ಲಿಂಕ್ ಅನ್ನು ಕ್ಲಿಕ್ ಮಾಡಬೇಕಾಗಿಲ್ಲ ಅಥವಾ ಯಾವುದೇ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳಬೇಕಾಗಿಲ್ಲ.
ಕೇವಲ ಒಂದು ಇಮೇಜ್ ಫೈಲ್ ಅನ್ನು ಡೌನ್‌ಲೋಡ್ ಮಾಡುವುದು ಮತ್ತು ತೆರೆಯುವುದು ನಿಮ್ಮ ಸಾಧನವನ್ನು ಅಪಾಯಕ್ಕೆ ತಳ್ಳಲು ಸಾಕು. ಒಮ್ಮೆ ನೀವು ಚಿತ್ರವನ್ನು ತೆರೆದರೆ, ಅದರಲ್ಲಡಗಿರುವ ಮಾಲ್‌ವೇರ್ ನಿಮ್ಮ ಫೋನ್‌ಗೆ ಪ್ರವೇಶವನ್ನು ಪಡೆಯುತ್ತದೆ. ಇದು ನಿಮ್ಮ ಅಪ್ಲಿಕೇಶನ್‌ಗಳು ಮತ್ತು ಖಾಸಗಿ ಡೇಟಾವನ್ನು ಕದಿಯಬಹುದು. ಅಷ್ಟೇ ಅಲ್ಲದೆ, ಕೆಲವು ಸಂದರ್ಭದಲ್ಲಿ, ವಂಚಕರು ನಿಮಗೆ ತಿಳಿಯದೆಯೇ ನಿಮ್ಮ ಫೋನ್ ಅನ್ನು ದೂರದಿಂದಲೇ ನಿಯಂತ್ರಿಸುವ ಸಾಮರ್ಥ್ಯವನ್ನು ಸಹ ಪಡೆಯಬಹುದು
WhatsApp ಇಮೇಜ್ ಸ್ಕ್ಯಾಮ್‌ಗಳಿಂದ ಸುರಕ್ಷಿತವಾಗಿರುವುದು ಹೇಗೆ?
- ಯಾವುದೇ ಕಾರಣಕ್ಕೂ ಅಪರಿಚಿತ ಅಥವಾ ಪರಿಶೀಲಿಸದ ಸಂಖ್ಯೆಗಳಿಂದ ಚಿತ್ರಗಳು, ವೀಡಿಯೊಗಳನ್ನು ಡೌನ್‌ಲೋಡ್ ಮಾಡಬೇಡಿ ಅಥವಾ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ
- ವಾಟ್ಸಾಪ್ ಸೆಟ್ಟಿಂಗ್‌ಗಳಲ್ಲಿ ಮೀಡಿಯಾದಲ್ಲಿ ಆಟೋ-ಡೌನ್‌ಲೋಡ್ ಅನ್ನು ಆಫ್ ಮಾಡಿ.
- ಅಪರಿಚಿತ ಸಂಖ್ಯೆಗಳನ್ನು ಪರಿಶೀಲಿಸಲು Truecaller ನಂತಹ ಕಾಲರ್ ಐಡಿ ಅಪ್ಲಿಕೇಶನ್‌ಗಳನ್ನು ಬಳಸಿ
- ವಿಶ್ವಾಸಾರ್ಹ ಆಂಟಿವೈರಸ್ ಸಾಫ್ಟ್‌ವೇರ್ ಅನ್ನು ಸ್ಥಾಪಿಸಿ ಮತ್ತು ನಿಮ್ಮ ಮೊಬೈಲ್ ನ್ನು ಅಪ್ಡೇಟ್ ಮಾಡಿ.
- ಅನುಮಾನಾಸ್ಪದ ಸಂಖ್ಯೆಗಳನ್ನು ತಕ್ಷಣ ರಿಪೋರ್ಟ್ ಮಾಡಿ ಮತ್ತು ಬ್ಲ್ಯಾಕ್ ಮಾಡಿ
- ಸ್ನೇಹಿತರು ಮತ್ತು ಕುಟುಂಬದವರಿಗೆ, ವಿಶೇಷವಾಗಿ ತಂತ್ರಜ್ಞಾನದ ಬಗ್ಗೆ ಕಡಿಮೆ ಜ್ಞಾನವಿರುವವರಿಗೆ, ಅಪಾಯಗಳ ಬಗ್ಗೆ ಮಾಹಿತಿ ನೀಡಲು ಮರೆಯಬೇಡಿ.
- ವಂಚಕರು ನಿಮ್ಮನ್ನು ಗುರಿಯಾಗಿಸಿಕೊಂಡಿದ್ದರೆ, ಘಟನೆಯನ್ನು ಸೈಬರ್ ಕ್ರೈಮ್ ಪೋರ್ಟಲ್‌ಗೆ ವರದಿ ಮಾಡಿ: https://cybercrime.gov.in
ಜಾಗತಿಕವಾಗಿ ಅತಿ ಹೆಚ್ಚು ಜನರು ಬಳಸುವ ಸಂದೇಶ ಕಳುಹಿಸುವ ಅಪ್ಲಿಕೇಶನ್‌ಗಳಲ್ಲಿ ವಾಟ್ಸಾಪ್ ಮುಂಚೂಣಿಯಲ್ಲಿದೆ. ಇದರ ವ್ಯಾಪಕ ಬಳಕೆಯು ಸೈಬರ್ ಅಪರಾಧಿಗಳಿಗೆ ತಮ್ಮ ವಂಚನೆಗಳನ್ನು ನಡೆಸಲು ಒಂದು ದೊಡ್ಡ ವೇದಿಕೆಯನ್ನು ಒದಗಿಸಿದೆ. ಸ.ಮಾನ್ಯವಾಗಿ ಪರಿಶೀಲಿಸದ ಲಿಂಕ್‌ಗಳ ಬಗ್ಗೆ ಎಚ್ಚರಿಕೆ ವಹಿಸುತ್ತೇವೆ. ಆದರೆ ಈಗ ಕೇವಲ ಒಂದು ಅನುಮಾನಾಸ್ಪದ ಚಿತ್ರದ ಮೇಲೆ ಕ್ಲಿಕ್ ಮಾಡುವುದರಿಂದ ಕೇವಲ ನಮ್ಮ ಡೇಟಾ ಮಾತ್ರವಲ್ಲದೆ, ಅದಕ್ಕಿಂತ ಹೆಚ್ಚಿನದನ್ನು ನಾವು ಕಳೆದುಕೊಳ್ಳಬೇಕಾಗಬಹುದು. ನಾವು ಕಷ್ಟಪಟ್ಟು ಸಂಪಾದಿಸಿದ ಹಣ ಮತ್ತು ನಮ್ಮ ನೆಮ್ಮದಿಯ ಜೀವನವನ್ನು ಕಸಿದುಕೊಳ್ಳವುದರಿಂದ ಎಚ್ಚರಿಕೆ ವಹಿಸುವುದು ಅಗತ್ಯ.


Click it and Unblock the Notifications