ಧನತ್ರಯೋದಶಿ ಎಂದು ಕರೆಯುವ ಧನತೇರಸ್ (Dhanteras) ಹಬ್ಬವನ್ನು ದೀಪಾವಳಿಗೂ 2 ದಿನಗಳ ಮೊದಲು ಸಂಭ್ರಮದಿಂದ ಆಚರಿಸಲಾಗುತ್ತದೆ. ಆದರೆ ಈ ವರ್ಷ ಧನ್ತೇರಸ್ ಯಾವಾಗ ಬರುತ್ತೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಅಕ್ಟೋಬರ್ 18 ಅಥವಾ 19 ರಂದು ಬರುತ್ತದೆಯೇ ಎಂದು ಹಲವರು ಗೊಂದಲಕ್ಕೊಳಗಾಗಿದ್ದಾರೆ. ದೀಪಾವಳಿ ಹಬ್ಬದ (Deepavali Festival) 5 ದಿನಗಳ ಆಚರಣೆಯ ಆರಂಭವನ್ನು ಸೂಚಿಸುವ ಧನ್ತೇರಸ್‌ಗೆ ಹಿಂದೂ ಧರ್ಮದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕವಾಗಿ ಬಹಳ ಮಹತ್ವವಿದೆ. ಧನ್ತೇರಸ್ ದಿನವನ್ನು ಸಂಪತ್ತು, ಸಮೃದ್ಧಿ ಮತ್ತು ಅದೃಷ್ಟದೊಂದಿಗೆ ಸಂಬಂಧ ಹೊಂದಿದೆ ಎಂದು ಪರಿಗಣಿಸಲಾಗಿದೆ. ಹಾಗಿದ್ರೆ ಧನ್ತೇರಸ್ 2025ರ ದಿನಾಂಕ, ಪೂಜಾ ಸಮಯಗಳು, ಆಚರಣೆಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಯಾವಾಗ ಧನ್ತೇರಸ್ ಹಬ್ಬ?
ಈ ಬಾರಿ ಧನ್ತೇರಸ್ ಹಬ್ಬ, ಅಕ್ಟೋಬರ್ 18, ಶನಿವಾರದಂದು ಆಚರಿಸಲಾಗುತ್ತದೆ. ಧನ್ತೇರಸ್ ಪೂಜಾ ಮುಹೂರ್ತವು ಸಂಜೆ 7:12 ರಿಂದ ರಾತ್ರಿ 8:16 ರವರೆಗೆ ಇರುತ್ತದೆ. ಈ ಪೂಜೆಯ ಅವಧಿ 1 ಗಂಟೆ 5 ನಿಮಿಷಗಳು. ಅದೇ ರೀತಿ ಯಮ ದೀಪಮ್ ಅನ್ನು ಅಕ್ಟೋಬರ್ 18, 2025 ರಂದು ಆಚರಿಸಲಾಗುತ್ತದೆ. ಪ್ರದೋಷ ಕಾಲವು ಸಂಜೆ 05:45 ರಿಂದ ರಾತ್ರಿ 08:16 ರವರೆಗೆ ಇದ್ದರೆ, ವೃಷಭ ಕಾಲವು ಸಂಜೆ 07:12 ರಿಂದ ರಾತ್ರಿ 09:07 ರವರೆಗೆ ಇರುತ್ತದೆ.
ತ್ರಯೋದಶಿ ತಿಥಿ ಆರಂಭ ಮತ್ತು ಮುಕ್ತಾಯ
ತ್ರಯೋದಶಿ ತಿಥಿಯು ಅಕ್ಟೋಬರ್ 18, 2025 ರಂದು ಮಧ್ಯಾಹ್ನ 12:18 ಕ್ಕೆ ಪ್ರಾರಂಭವಾಗಿ ಅಕ್ಟೋಬರ್ 19, 2025 ರಂದು ಮಧ್ಯಾಹ್ನ 01:51 ಕ್ಕೆ ಕೊನೆಗೊಳ್ಳುತ್ತದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಭಕ್ತರು ಪೂಜೆ, ಆಧ್ಯಾತ್ಮಿಕ ಕಾರ್ಯಗಳನ್ನು ಮಾಡಿದರೆ ಒಳ್ಳೆಯದು ಎಂದು ಹೇಳಲಾಗಿದೆ.
ನಗರಗಳಿಗೆ ಅನುಗುಣವಾಗಿ ಹೇಗಿದೆ ಧನ್ತೇರಸ್ ಮುಹೂರ್ತ?
ಇನ್ನು ಧನ್ತೇರಸ್ ಪೂಜಾ ಮುಹೂರ್ತವು ನಗರದಿಂದ ನಗರಕ್ಕೆ ಬದಲಾಗುತ್ತಿರುತ್ತದೆ.
| ನಗರಗಳು | ಮುಹೂರ್ತ (PM) | ಮುಕ್ತಾಯ (PM) |
| ನವದೆಹಲಿ | 07:49 | 08:41 |
| ಮುಂಬೈ | 06:41 | 07:38 |
| ಚೆನ್ನೈ | 07:28 | 08:15 |
| ಜೈಪುರ | 07:24 | 08:26 |
| ಹೈದರಾಬಾದ್ | 07:29 | 08:20 |
| ಅಹಮದಾಬಾದ್ | 07:44 | 08:41 |
| ಬೆಂಗಳೂರು | 07:39 | 08:25 |
| ಪುಣೆ | 07:46 | 08:38 |
| ಗುರುಗ್ರಾಮ್ | 07:17 | 08:20 |
| ನೋಯ್ಡಾ | 07:15 | 08:19 |
| ಚಂಡೀಗಢ | 07:14 | 08:20 |
ಧನ್ತೇರಸ್ ಹಬ್ಬದ ಮಹತ್ವವೇನು?
ಹೆಚ್ಚಿನವರು ಧನ್ತೇರಸ್ ಹಬ್ಬವನ್ನು ಕೇಳಿರುತ್ತಾರೆ. ಆದ್ರೆ ಇದರ ಮಹತ್ವವೇನು ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಧನ್ತೇರಸ್ ಅಥವಾ ಧನತ್ರಯೋದಶಿ ಹಬ್ಬವನ್ನು, ಸಮುದ್ರ ಮಂಥನದ ಸಮಯದಲ್ಲಿ ಅಮೃತ ಕಲಶದೊಂದಿಗೆ ಸಾಗರದಿಂದ ಹೊರಹೊಮ್ಮಿದ ಆಯುರ್ವೇದ ಮತ್ತು ಆರೋಗ್ಯದ ದೇವರು ಎಂದು ಕರೆಯಲ್ಪಡುವ ಧನ್ವಂತರಿಯನ್ನು ಗೌರವಿಸುವ ದೃಷ್ಟಿಯಿಂದ ಆಚರಿಸಲಾಗುತ್ತದೆ. ಧನ್ತೇರಸ್ ಆಚರಣೆಯಂದು ಸಂಪತ್ತು ಮತ್ತು ಸಮೃದ್ಧಿಯ ದೇವತೆಯಾದ ಲಕ್ಷ್ಮಿ ದೇವಿಯನ್ನೂ ಪೂಜಿಸಲಾಗುತ್ತದೆ. ಆದ್ದರಿಂದ ಈ ದಿನವನ್ನು ಅದೃಷ್ಟ ಮತ್ತು ಸಂಪತ್ತಿನ ದಿನವಾಗಿ ಪರಿಗಣಿಸಲಾಗುತ್ತದೆ.
ಧನ್ತೇರಸ್ ದಿನವನ್ನು ಸಂಪತ್ತಿನ ಅಧಿಪತಿ ಲಕ್ಷ್ಮಿ ದೇವಿಗೆ ಅರ್ಪಣೆಯಾಗಿರುವುದರಿಂದ ಈ ದಿನ ಭಕ್ತರು ಚಿನ್ನ, ಬೆಳ್ಳಿ ಖರೀದಿಸಿದರೆ ಒಳ್ಳೆಯದಾಗುತ್ತದೆ ಎಂದು ನಂಬುತ್ತಾರೆ. ಇದನ್ನು ಖರೀದಿ ಮಾಡುವುದರಿಂದ ಮನೆಯಲ್ಲಿ, ಕುಟುಂಬದಲ್ಲಿ ಅದೃಷ್ಟ, ನೆಮ್ಮದಿ ಮತು ಯಶಸ್ಸು ಸಿಗುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ. ಇನ್ನು ಈ ದಿನ ರಾತ್ರಿ ದೀಪಗಳನ್ನು ಹಚ್ಚುವುದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಎನ್ನಲಾಗಿದೆ.
ಏನಿದು ಯಮ ದೀಪಮ್ ಆಚರಣೆ?
ಧನ್ತೇರಸ್‌ನ ಪ್ರಮುಖ ಆಚರಣೆಗಳಲ್ಲಿ ಯಮ ದೀಪಮ್ ಕೂಡ ಒಂದು. ಪ್ರದೋಷ ಕಾಲದಲ್ಲಿ ಈ ಕ್ರಮವನ್ನು ನೆರವೇರಿಸಲಾಗುತ್ತದೆ. ಕುಟುಂಬ ಸದಸ್ಯರನ್ನು ಅಕಾಲಿಕ ಮರಣದಿಂದ ರಕ್ಷಿಸುವ ದೃಷ್ಟಿಯಿಂದ, ಕುಟುಂಬ ಸದಸ್ಯರಲ್ಲಿ ಆರೋಗ್ಯ ಕೊಟ್ಟು, ದೀರ್ಘಾಯುಷ್ಯ ನೀಡುವಂತೆ ಯಮ ದೇವರನ್ನು ಪೂಜಿಸುವ ಕ್ರಮ ಇದು. ಈ ದಿನ ಮನೆಯ ದಕ್ಷಿಣ ದಿಕ್ಕಿನಲ್ಲಿ ದೀಪ ಇಟ್ಟು ಯಮ ದೇವರನ್ನು ಪೂಜಿಸುವುದಾಗಿದೆ.


Click it and Unblock the Notifications