ವಿಶ್ವದ ಅತೀದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ಭಾರತದಲ್ಲಿ ಅನೇಕ ಸ್ಥಳೀಯ ಮಟ್ಟದಿಂದ ಹಿಡಿದು ರಾಷ್ಟ್ರ ಮಟ್ಟದವರೆಗೆ ರಾಜಕೀಯ ಪಕ್ಷಗಳು ಅಸ್ತಿತ್ವದಲ್ಲಿದೆ. ಚುನಾವಣೆಗಳು ಬಂದಾಗ ಶತಾಯಗತಾಯ ತಾವೇ ಗೆಲ್ಲಬೇಕು ಎಂದು ಪಕ್ಷ ಹಾಗೂ ಪಕ್ಷದ ಅಭ್ಯರ್ಥಿ ಹಣದ ಹೊಳೆಯನ್ನು ಹರಿಸುವುದು ಎಲ್ಲರಿಗೂ ತಿಳಿದಿರುವ ಬಹಿರಂಗ ಸತ್ಯವಾಗಿದೆ. ಅದರಲ್ಲೂ ರಾಷ್ಟ್ರೀಯ ಮಟ್ಟದಲ್ಲಿ ಬಲಿಷ್ಟ ಪಕ್ಷ ಎಂದು ಗುರುತಿಸಿಕೊಂಡು ಬಿಜೆಪಿ ಮತ್ತು ಕಾಂಗ್ರೆಸ್ ಬಗ್ಗೆ ಹೇಳಬೇಕೆ? ಹೀಗಿರುವ ಕಾಂಗ್ರೆಸ್ ಮತ್ತು ಬಿಜೆಪಿ ಬ್ಯಾಂಕ್ ಖಾತೆಯಲ್ಲಿ ಹಣ ಎಷ್ಟಿರಬಹುದು. ಹೀಗೊಂದು ಪ್ರಶ್ನೆ ನಿಮ್ಮ ಮನದಲ್ಲಿದ್ದರೆ ಉತ್ತರ ಇಲ್ಲಿದೆ ನೋಡಿ.!
ಯಾವ ಪಕ್ಷದ ಖಾತೆಯಲ್ಲಿ ಎಷ್ಟು ಹಣವಿದೆ ಎಂಬ ವಿಚಾರವು ಚುನಾವಣಾ ಆಯೋಗಕ್ಕೆ ಒದಗಿಸಲಾದ ಅಂಕಿಅಂಶಗಳ ಮೂಲಕ ತಿಳಿದುಬಂದಿದ್ದು , ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವೆಂದು ತನ್ನನ್ನು ತಾನು ಬಿಂಬಿಸಿಕೊಳ್ಳುವ ಬಿಜೆಪಿ, 2024 ರ ಮಾರ್ಚ್ 31ರ ವೇಳೆಗೆ 7,113.80 ಕೋಟಿ ರೂ.ಗಳ ನಗದು ಮತ್ತು ಬ್ಯಾಂಕ್ ಬ್ಯಾಲೆನ್ಸ್ ಹೊಂದಿದ್ದು, ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಪಕ್ಷವು 857.15 ಕೋಟಿ ರೂ.ಗಳನ್ನು ಹೊಂದಿದೆ.

2023-24 ರ ಹಣಕಾಸು ವರ್ಷದಲ್ಲಿ, ಬಿಜೆಪಿ 1,754.06 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದು 2022-23 ರಲ್ಲಿ ಮಾಡಿದ್ದ ಖರ್ಚು 1,092 ಕೋಟಿ ರೂ.ಗಳಿಂದ 60% ಹೆಚ್ಚಳವಾಗಿದೆ. ಜೊತೆಗೆ ಮಾರ್ಚ್ 2024 ರಲ್ಲಿ ಲೋಕಸಭೆ ಚುನಾವಣೆಯ ಘೋಷಣೆಗೆ ಈ ಅಂಕಿಅಂಶ ಹೊಂದಿಕೆಯಾಗುತ್ತದೆ. ಇನ್ನು ಕಾಂಗ್ರೆಸ್ 2023-24 ರಲ್ಲಿ 619.67 ಕೋಟಿ ರೂ. ಖರ್ಚು ಮಾಡಿದ್ದು, ಅದಕ್ಕೂ ಹಿಂದಿನ ವರ್ಷದಲ್ಲಿ 192.56 ಕೋಟಿ ರೂ. ಖರ್ಚು ಮಾಡಿತ್ತು.
ಜಾಹೀರಾತು ಸೇರಿ ಬಿಜೆಪಿ ಮತ್ತು ಕಾಂಗ್ರೆಸ್ ಮಾಡಿದ ಖರ್ಚಿನ ವಿವರ
ಈ ವರ್ಷದಲ್ಲಿ ಬಿಜೆಪಿ ಜಾಹೀರಾತುಗಳಿಗಾಗಿ 591 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದು ಅದರಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ 434.84 ಕೋಟಿ ರೂ.ಗಳು ಮತ್ತು ಮುದ್ರಣ ಮಾಧ್ಯಮದಲ್ಲಿ 115.62 ಕೋಟಿ ರೂ.ಗಳನ್ನು ಒಳಗೊಂಡಿದೆ. ವಿಮಾನ ಮತ್ತು ಹೆಲಿಕಾಪ್ಟರ್‌ಗಳಿಲ್ಲಿನ ಓಡಾಟಕ್ಕೆ 174 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. 2022-23 ರಲ್ಲಿ 78.23 ಕೋಟಿ ರೂ.ಗಳಿಗೆ ಹೋಲಿಸಿದರೆ ಮತ್ತು ತನ್ನ ಅಭ್ಯರ್ಥಿಗಳಿಗೆ 191.06 ಕೋಟಿ ರೂ.ಗಳನ್ನು ಆರ್ಥಿಕ ಸಹಾಯಕ್ಕಾಗಿ ಒದಗಿಸಿದೆ. ಇದು ಹಿಂದಿನ ವರ್ಷಕ್ಕಿಂತ ಸುಮಾರು 75.05 ಕೋಟಿ ರೂ.ಗಳಿಗಿಂತಲೂ ಹೆಚ್ಚಾಗಿದೆ.
ಮತ್ತೊಂದೆಡೆ, ಕಾಂಗ್ರೆಸ್ ಎಲೆಕ್ಟ್ರಾನಿಕ್ ಮಾಧ್ಯಮಕ್ಕಾಗಿ 207.94 ಕೋಟಿ ರೂ.ಗಳು ಮತ್ತು ಮುದ್ರಣ ಮಾಧ್ಯಮಕ್ಕಾಗಿ 43.73 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ವಿಮಾನ ಮತ್ತು ಹೆಲಿಕಾಪ್ಟರ್‌ಗಳಿಗೆ 62.65 ಕೋಟಿ ರೂ.ಗಳನ್ನು ಖರ್ಚು ಮಾಡಿದೆ ಮತ್ತು ತನ್ನ ಅಭ್ಯರ್ಥಿಗಳಿಗೆ 238.55 ಕೋಟಿ ರೂ.ಗಳನ್ನು ಒದಗಿಸಿದೆ.
ಹೆಚ್ಚುವರಿಯಾಗಿ, ಕಾಂಗ್ರೆಸ್ ಪ್ರಚಾರಕ್ಕಾಗಿ 28.03 ಕೋಟಿ ರೂ.ಗಳನ್ನು ಮತ್ತು ಸಾಮಾಜಿಕ ಮಾಧ್ಯಮ ವೆಚ್ಚಗಳಿಗಾಗಿ 79.78 ಕೋಟಿ ರೂ.ಗಳನ್ನು ಹಂಚಿಕೆ ಮಾಡಿದೆ. 2022-23ರಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ಪ್ರಥಮ ಭಾರತ್ ಜೋಡೋ ಯಾತ್ರೆಗೆ 71.84 ಕೋಟಿ ರೂ.ಗಳಿಗೆ ಹೋಲಿಸಿದರೆ, ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ- 2 ಕ್ಕೆ ಪಕ್ಷವು 49.63 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ.
ಬಿಜೆಪಿ ಮತ್ತು ಕಾಂಗ್ರೆಸ್ : ಕೊಡುಗೆ ಸಿಕ್ಕಿದ್ದು ಎಲ್ಲಿಂದ?
ಬಿಜೆಪಿಯ ಫಂಡಿಂಗ್ ನಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ ಸ್ವಯಂಪ್ರೇರಿತ ದೇಣಿಗೆಗಳಿಂದ ಬಂದ 1,685.69 ಕೋಟಿ ರೂ.ಗಳು ಸೇರಿವೆ. ಚುನಾವಣಾ ಬಾಂಡ್ ನಂತರ ಸುಪ್ರೀಂ ಕೋರ್ಟ್ ನಿಷೇಧ ಹೇರಿತು. ಅದಕ್ಕೂ ಹಿಂದಿನ ವರ್ಷದ ಅಂದರೆ 2022-23ರಲ್ಲಿ 1,294.15 ಕೋಟಿ ರೂ.ಗಳು ಇತ್ತು. ಹೆಚ್ಚುವರಿಯಾಗಿ, ಚುನಾವಣಾ ಬಾಂಡ್ ಅಲ್ಲದೇ ಬಿಜೆಪಿ ಇತರ ದೇಣಿಗೆ ರೂಪದಲ್ಲಿ 2,042.75 ಕೋಟಿ ರೂ.ಗಳನ್ನು ಪಡೆದುಕೊಂಡಿದೆ, ಇದು ಹಿಂದಿನ ವರ್ಷ 648.42 ಕೋಟಿ ರೂ.ಗಳಷ್ಟಿತ್ತು.
ಕಾಂಗ್ರೆಸ್ ತನ್ನ ಆಡಿಟ್ ವರದಿಯಲ್ಲಿ, ಒಟ್ಟು 1,225.11 ಕೋಟಿ ರೂ.ಗಳು ಕೊಡುಗೆಗಳನ್ನು ಪಡೆದಿವೆ ಎಂದು ವರದಿ ಮಾಡಿದೆ, ಇದರಲ್ಲಿ 1,129.67 ಕೋಟಿ ರೂ.ಗಳು ಅನುದಾನಗಳು, ದೇಣಿಗೆಗಳು ಮತ್ತು ಇತರ ಮೂಲಗಳಿಂದ ಬಂದಿವೆ. ಇದರಲ್ಲಿ ಸುಪ್ರೀಂ ಕೋರ್ಟ್ ನಿಷೇಧಿಸಿದ ಎಲೆಕ್ಟ್ರಾನಿಕ್ ಬಾಂಡ್‌ಗಳ ಮೂಲಕ ಬಂದ 828.36 ಕೋಟಿ ರೂ.ಗಳು ಸಹ ಸೇರಿವೆ.


Click it and Unblock the Notifications