Whirlpool layoffs: ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದಕ್ಕಿಂತ, ಸಿಕ್ಕ ಕೆಲಸವನ್ನು ಉಳಿಸಿಕೊಳ್ಳುವುದೇ ದೊಡ್ಡ ಸಾಹಸವಾಗಿದೆ. ದೈತ್ಯ ಕಂಪನಿಗಳಲ್ಲಿ ಕೆಲಸ ಮಾಡ್ತಿದ್ದೇವೆ ಎಂದು ಉದ್ಯೋಗಿಗಳು ಹೆಮ್ಮೆ ಪಡುವುದಕ್ಕಿಂತ, ಈ ವಜಾಗೊಳಿಸುವ ಪ್ರಕ್ರಿಯೆ ನಮ್ಮ ಮೇಲಾಗದಿರಲಿ ಎಂಬ ಭಯದ ಪ್ರಾರ್ಥನೆಯೇ ಹೆಚ್ಚಾಗಿದೆ. ಏಕೆಂದರೆ ಇತ್ತೀಚೆಗೆ ದೊಡ್ಡ ದೊಡ್ಡ ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿರುವುದನ್ನು ಕಾಣಬಹುದಾಗಿದೆ. ಇನ್ಫೋಸಿಸ್, ಟಿಸಿಎಸ್, ಬೈಜುಸ್ ಹೀಗೆ ನಾನಾ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸಿದ ಬೆನ್ನಲ್ಲೇ, ಈಗ ಅಮೆರಿಕಾದ ವರ್ಲ್‌ಪೂಲ್ ಕಂಪನಿ ಉದ್ಯೋಗಿಗಳಿಗೆ ಶಾಕ್ ಎದುರಾಗಿದೆ. ಏಕೆಂದರೆ ವರ್ಲ್‌ಪೂಲ್ ಅಮಾನಾ ಕಾರ್ಖಾನೆಯಲ್ಲಿ 651 ಉದ್ಯೋಗಿಗಳನ್ನು ವಜಾಗೊಳಿಸಲು ತೀರ್ಮಾನ ಮಾಡಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.

ಹೌದು, ಈ ವಜಾಗೊಳಿಸುವ ಘೋಷಣೆಯನ್ನು ಸ್ವತಃ ವರ್ಲ್‌ಪೂಲ್ ಕಾರ್ಪೊರೇಷನ್ ಕಂಪನಿಯೇ ಅಧಿಕೃತವಾಗಿ ಘೋಷಿಸಿದೆ. ಅಮೆರಿಕಾದ ಐವೋವಾ ರಾಜ್ಯದ ಅಮಾನಾದಲ್ಲಿರುವ ವರ್ಲ್‌ಪೂಲ್ ಕಂಪನಿಯ 651 ಉದ್ಯೋಗಿಗಳನ್ನು ವಜಾಗೊಳಿಸುವ ಬಗ್ಗೆ ಘೋಷಣೆಯಾಗಿದ್ದು, ಕೆಲಸಗಾರರಿಗೆ ಭೀತಿ ಉಂಟಾಗಿದೆ. ಈ ನಿರ್ಧಾರವು ಜೂನ್ 1, 2025ರಿಂದ ಜಾರಿಗೆ ಬರಲಿದ್ದು, ಕಂಪನಿಯ ಉದ್ಯೋಗ ಬಲದ ಸುಮಾರು ಮೂರನೇ ಒಂದು ಭಾಗದಷ್ಟು ಹಂಚಿಕೆಯಾಗಿದೆ. ಕಂಪನಿಯ ಪ್ರಕಾರ, ಕೆಲವು ಶೈತ್ಯೀಕರಣ ಉತ್ಪನ್ನಗಳ ತಯಾರಣೆಗೆ ಗ್ರಾಹಕರ ಬೇಡಿಕೆ ಕಡಿಮೆಯಾಗಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ವಜಾಗೊಳಿಸುವ ನಿರ್ಧಾರಕ್ಕೆ ಕಾರಣ:
ವರ್ಲ್‌ಪೂಲ್ ಕಂಪನಿಯ ಪ್ರಕಾರ, ಈ ನಿರ್ಧಾರದ ಹಿಂದೆ ಯಾವುದೇ ಬಾಹ್ಯ ಆರ್ಥಿಕ ಅಡಚಣೆಗಳ ಫಲಿತಾಂಶವಲ್ಲ. ಬದಲಾಗಿ ಸದ್ಯದ ಮಾರುಕಟ್ಟೆ ಪರಿಸ್ಥಿತಿಗಳಿಗೆ ಅನುಗುಣವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಂದರೆ ಉತ್ಪಾದನಾ ಮಟ್ಟವನ್ನು ಹೊಂದಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಕಂಪನಿಯ ಪ್ರಕಾರ, ಇದು ಪ್ರಮುಖ ತಂತ್ರಪ್ರಯೋಗದ ಭಾಗವಾಗಿದ್ದು, ನಿರ್ದಿಷ್ಟ ಉತ್ಪನ್ನಗಳ ಮಾರಾಟದ ಪ್ರಮಾಣ ಕುಸಿದಿರುವುದರಿಂದ ಉದ್ಯೋಗಿಗಳನ್ನು ಕಡಿಮೆ ಮಾಡಬೇಕಾದ ಅನಿವಾರ್ಯತೆ ಎದುರಾಗಿತ್ತು.
ಉದ್ಯೋಗಿಗಳಿಗೆ ಬೆಂಬಲದ ಭರವಸೆ:
ಒಂದು ವೇಳೆ ಕೆಲಸದಿಂದ ಉದ್ಯೋಗಿಗಳನ್ನು ವಜಾಗೊಳಿಸಿದರೂ ಅವರಿಗೆ ಬೆಂಬಲ ನೀಡುವ ಭರವಸೆಯನ್ನು ಕಂಪನಿ ನೀಡಿದೆ. ಅಂದರೆ ಕೆಲಸ ಕಳೆದುಕೊಳ್ಳುವವರಿಗೆ ಕಂಪನಿಯು ವಿವಿಧ ರೀತಿಯ ನೆರವು ಕಾರ್ಯಕ್ರಮಗಳನ್ನು ಘೋಷಿಸಿದೆ. HR ಬೆಂಬಲ, ಉದ್ಯೋಗಿ ಸಹಾಯ ಕಾರ್ಯಕ್ರಮಗಳು ಹಾಗೂ ಐವೋವಾ ವರ್ಕ್‌ಫೋರ್ಸ್ ಡೆವಲಪ್‌ಮೆಂಟ್ ಮೂಲಕ ನಿರುದ್ಯೋಗ ಭತ್ಯೆಗಳ ಕುರಿತ ಮಾರ್ಗದರ್ಶನ ಒದಗಿಸಲಾಗುವುದು. ಕಂಪನಿಯು ಪೀಡಿತ ಉದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶಗಳ ಬಗ್ಗೆ ಸಹಾಯ ಮಾಡಲು ಬದ್ಧವಾಗಿದೆ ಎಂದು ಹೇಳಿದೆ.
ಯೂನಿಯನ್ ಮತ್ತು ಸಮುದಾಯದ ಪ್ರತಿಕ್ರಿಯೆ:
ಇನ್ನು ಈ ವಜಾಗೊಳಿಸುವಿಕೆಗೆ ಕಾರ್ಮಿಕ ಸಂಘಗಳು ಹಾಗೂ ಸ್ಥಳೀಯ ಸಮುದಾಯದಿಂದ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ. ಅಂದರೆ ಅಂತರಾಷ್ಟ್ರೀಯ ಯಂತ್ರಶಾಸ್ತ್ರಜ್ಞರು ಮತ್ತು ಏರೋಸ್ಪೇಸ್ ಕಾರ್ಮಿಕರ ಒಕ್ಕೂಟ ಈ ನಿರ್ಧಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉದ್ಯೋಗ ಕಳೆದುಕೊಳ್ಳುವ ಸ್ಥಳೀಯ ಕಾರ್ಮಿಕರ ಭವಿಷ್ಯ ಕುರಿತಾಗಿ ತೀವ್ರ ಕಳವಳ ವ್ಯಕ್ತಪಡಿಸಿದೆ. ಕಂಪನಿಯು ಕಳೆದ ವರ್ಷ $17 ಬಿಲಿಯನ್ ಡಾಲರ್‌ಗಳಷ್ಟು ಮಾರಾಟ ಮಾಡಿದರೂ ಉದ್ಯೋಗ ಕಡಿತಗೊಳಿಸುತ್ತಿರುವುದು ಅತಿರೇಕದ ಕ್ರಮವಾಗಿದೆ ಎಂದು ಒಕ್ಕೂಟ ಆರೋಪಿಸಿದೆ.
ಇನ್ನು ಇದೆಲ್ಲದರ ನಡುವೆ ನಿರುದ್ಯೋಗ ಭತ್ಯೆಗಳನ್ನು ಪುನಃಸ್ಥಾಪಿಸಲು ಪುನಃಸ್ಥಾಪಿಸಲು ಹಾಗೂ ತಮ್ಮ ಉದ್ಯೋಗವನ್ನು ಕಳೆದುಕೊಳ್ಳುವ ಕಾರ್ಮಿಕರಿಗೆ ಹೆಚ್ಚಿನ ಬೆಂಬಲ ಒದಗಿಸಲು, ಯೂನಿಯನ್ ನಾಯಕರು ಒತ್ತಾಯಿಸುತ್ತಿದ್ದಾರೆ. Layoff ಧೋರಣಿಯು ಜಾಗತಿಕವಾಗಿದ್ದು, ಭಾರತದ ಉದ್ಯೋಗಿಗಳಿಗೂ ಇದು ಎಚ್ಚರಿಕೆ ಕೂಗಾಗಬಹುದು ಎಂದು ಹೇಳಬಹುದಾಗಿದೆ. ವರ್ಲ್‌ಪೂಲ್ 651 ಉದ್ಯೋಗಿಗಳನ್ನು ವಜಾಗೊಳಿಸಿದ್ದು, ಜಾಗತಿಕ ಉದ್ಯೋಗ ಕ್ಷೇತ್ರದ ಮೇಲೂ ಪರಿಣಾಮ ಬೀರುತ್ತದೆ. ಅಲ್ಲದೇ ಈಗ ಕೆಲಸಗಾರರಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಆರ್ಟಿಫಿಷಿಯಲ್ ಇಂಟೆಲ್ಲಿಜೆನ್ಸ್ ತಂತ್ರಜ್ಞಾನ ಕೆಲಸ ಮಾಡುತ್ತಿರುವುದರಿಂದ, ಉದ್ಯೋಗದ ಮೇಲೆ ಹೆಚ್ಚು ಪರಿಣಾಮ ಬೀರಬಹುದು. ಹೀಗಾಗಿ ಉದ್ಯೋಗ ಭದ್ರತೆಗೆ ಕೌಶಲ್ಯ ಅಭಿವೃದ್ದಿ, ಮತ್ತು ಹೊಸ ಉದ್ಯೋಗ ಆಯ್ಕೆಗಳತ್ತ ಗಮನಹರಿಸುವುದು ಅತ್ಯಗತ್ಯ.


Click it and Unblock the Notifications