ನವದೆಹಲಿ, ಮಾರ್ಚ್ 11: ಕೋಟ್ಯಾಂತರ ಅಭಿಮಾನಿಗಳನ್ನು ಹೊಂದುವ ಮೂಲಕ ಮಹೇಂದ್ರ ಸಿಂಗ್ ಧೋನಿ ಭಾರತ ಕಂಡ ಅಚ್ಚುಮೆಚ್ಚಿನ ಕ್ರಿಕೆಟ್ ಆಟಗಾರ.
ಮೈದಾನದಲ್ಲಿ ಆಟದ ವೇಳೆ ಎಷ್ಟೇ ಕಠಿಣ ಪರಿಸ್ಥಿತಿ ಇದ್ದರೂ , ಕೂಲ್ ಆಗಿರುವ ಅವರ ಸಾಮರ್ಥ್ಯ, ಕ್ರಿಕೆಟ್ ಇತಿಹಾಸದಲ್ಲಿ ಅವರು ಮಾಡಿರುವ ಹತ್ತಾರು ಸಾಧನೆಗಳು, ವಿನಯತೆ ಇವೆಲ್ಲಾ ಅವರ ಅಭಿಮಾನಿಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಕ್ಯಾಪ್ಟನ್ ಕೂಲ್ ಎಂದೇ ಖ್ಯಾತವಾಗಿದ್ದ ಎಂಎಸ್ ಧೋನಿ ಅವರ ಜೀವನದಲ್ಲಿ ಅವರ ಅಕ್ಕನಿಗೆ ಪ್ರಮುಖ ಪಾತ್ರವಿದೆ.

ಎಂಎಸ್ ಧೋನಿ ಕ್ರಿಕೆಟ್ ಇತಿಹಾಸದಲ್ಲಿ ಎಲ್ಲಾ ಐಸಿಸಿ ಟ್ರೋಫಿಗಳನ್ನು ಗೆದ್ದ ಏಕೈಕ ನಾಯಕ. ಎಂಎಸ್ ಧೋನಿ ಐಪಿಎಲ್ ಹೊರತುಪಡಿಸಿ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ಅವರು ಪ್ರಸ್ತುತ ಚೆನ್ನೈ ಸೂಪರ್ ಕಿಂಗ್ಸ್‌ನ ನಾಯಕರಾಗಿದ್ದು, ಇವರು ವಾರ್ಷಿಕವಾಗಿ ಸುಮಾರು 50 ಕೋಟಿ ರೂ. ಸಂಪಾದಿಸುತ್ತಾರೆ. ಧೋನಿಯ ಅಕ್ಕ ಜಯಂತಿ ಗುಪ್ತಾ ಅವರು ಧೋನಿ ಜೀವನ ಪ್ರಮುಖ ಭಾಗವಾಗಿದ್ದಾರೆ.
ಧೋನಿ ನಮ್ಮೆಲ್ಲರಿಗೂ ತಿಳಿದ ಹಾಗೆಯೇ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದವರು. ಅವರ ತಂದೆ ಪಾನ್ ಸಿಂಗ್ ಧೋನಿ ಸಾಮಾನ್ಯ ದರ್ಜೆಯ ಸರ್ಕಾರಿ ಉದ್ಯೋಗದಲ್ಲಿದ್ದರು. ಜಯಂತಿ ಗುಪ್ತಾ ಅವರು ಧೋನಿಯವರಿಗಿಂತ ಸುಮಾರು 3-4 ವರ್ಷ ದೊಡ್ಡವರಾಗಿದ್ದಾರೆ. ಜಯಂತಿ ಬಾಲ್ಯದಿಂದಲೂ ಸಹೋದರ ಮಹೇಂದ್ರ ಸಿಂಗ್ ಧೋನಿಗೆ ಹಾಗೂ ಅವರ ಕನಸುಗಳಿಗೆ ಬೆನ್ನೆಲುಬಾಗಿ ನಿಂತವರು . ಕ್ರಿಕೆಟಿಗನಾಗುವ ಧೋನಿ ಅವರ ಕನಸಿಗೆ ನೀರೆರೆದು ಪೋಷಿಸುತ್ತಿದ್ದರು. ಕ್ರಿಕೆಟಿಗನಾಗುವ ನಿರ್ಧಾರವನ್ನು ಅವರ ತಂದೆ ವಿರೋಧಿಸಿದಾಗ ಅವರು ಧೋನಿ ಪರವಾಗಿ ನಿಂತು ಪ್ರೋತ್ಸಾಹಿಸಿದ್ದರು.
ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಜಗತ್ತಿನಲ್ಲಿ ಖ್ಯಾತಿಗಳಿಸಿದ ನಂತರವೂ, ಧೋನಿ ಅವರ ಅಕ್ಕ ಲೈಮ್ ಲೈಟ್ ನಿಂದ ಹೊರಗುಳಿಯಲು ಇಚ್ಚಿಸಿ, ಸಾರ್ವಜನಿಕ ಜೀವನದಿಂದ ದೂರವಿದ್ದು, ಸರಳ ಮತ್ತು ಸಾಮಾನ್ಯ ಜೀವನ ನಡೆಸುತ್ತಾರೆ. ಅವರು ಪ್ರಸ್ತುತ ಜಾರ್ಖಂಡ್‌ನ ರಾಂಚಿಯ ಪಬ್ಲಿಕ್ ಸ್ಕೂಲ್ ನಲ್ಲಿ ಇಂಗ್ಲಿಷ್ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಜಯಂತಿ ಅವರು ಗೌತಮ್ ಗುಪ್ತಾ ಅವರನ್ನು ವಿವಾಹವಾಗಿದ್ದು, ಗೌತಮ್ ಅವರು ರಾಂಚಿಯಲ್ಲಿ ಧೋನಿಯ ಅತ್ಯಂತ ಹಳೆಯ ಮತ್ತು ಆತ್ಮೀಯ ಸ್ನೇಹಿತರಲ್ಲಿ ಒಬ್ಬರಾಗಿದ್ದಾರೆ. ಗೌತಮ್ ಅವರು ಧೋನಿಯ ಪ್ರಯಾಣದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದು ಅವರ ವೃತ್ತಿಜೀವನದ ಆರಂಭದಲ್ಲಿ ರಾಜ್ಯ ಮತ್ತು ಜಿಲ್ಲೆಯ ಆಟಗಾರರಾಗಿದ್ದ ದಿನಗಳಲ್ಲಿ ಅವರಿಗೆ ಸಹಾಯ ಮಾಡಿದ್ದರು. ಧೋನಿ ಜೀವನಾಧಾರಿತ ಸಿನಿಮಾದಲ್ಲೂ ಇದನ್ನೇ ಚಿತ್ರಿಸಲಾಗಿದೆ.


Click it and Unblock the Notifications