Mojtaba Khamenei: ಇರಾನ್‌ಗೆ ಹೊಸ ಸರ್ವೋಚ್ಚ ನಾಯಕ..ಮೊಜ್ತಬಾ ಖಮೇನಿ ಯಾರು? ತಿಳಿಯಿರಿ ಅವರ ಸಂಪೂರ್ಣ ಕಥೆ

ಇಸ್ರೇಲ್-ಅಮೆರಿಕ ಹಾಗೂ ಇರಾನ್ ನಡುವಿನ ರಣರಂಗ ವಿಶ್ವದೆಲ್ಲೆಡೆ ಸಂಚಲನ ಮೂಡಿಸಿದೆ. ಕ್ಷಿಪಣಿ ದಾಳಿಯಿಂದ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲ ಅಲಿ ಖಮೇನಿ, ಮರಣದ ನಂತರ ಇರಾನ್‌ನಲ್ಲಿನ ರಾಜಕೀಯ ಚಟುವಟಿಕೆಗಳ ಮೇಲೆ ವಿಶ್ವದ ಕಣ್ಣು ನೆಟ್ಟಿದೆ. ಇದರ ನಡುವೆಯೇ ಇರಾನ್ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಅದೇನೆಂದರೆ, ಅಯತೊಲ್ಲ ಖಮೇನಿ ಮರಣ ನಂತರ, ಅವರ ಪುತ್ರ ಮೊಜ್ತಬಾ ಖಮೇನಿ ಅವರನ್ನು ಹೊಸ ಸರ್ವೋಚ್ಚ ನಾಯಕರನ್ನಾಗೊ ಘೋಷಿಸಲಾಗಿದೆ. ಅವರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಇರಾನ್‌ಗೆ ಹೊಸ ಸರ್ವೋಚ್ಚ ನಾಯಕ..ಮೊಜ್ತಬಾ ಖಮೇನಿ ಯಾರು?

ಹೌದು, ಅಲಿ ಖಮೇನಿ ಅವರ ಪುತ್ರ ಮೊಜ್ತಬಾ ಖಮೇನಿ ಅವರನ್ನು ಅಧಿಕಾರಕ್ಕೇರಿಸಿರುವ ನಿರ್ಧಾರ, ಅಧಿಕೃತವಾಗಿ ಇರಾನ್‌ನ ಧಾರ್ಮಿಕ ನಾಯಕರ ಸಮಿತಿಯಾದ ತಜ್ಞರ ಸಭೆ ಪ್ರಕಟಿಸಿದೆ. ಈ ಸಮಿತಿಯೇ ದೇಶದ ಸರ್ವೋಚ್ಚ ನಾಯಕನನ್ನು ಆಯ್ಕೆ ಮಾಡುವ ಅಧಿಕಾರ ಹೊಂದಿದೆ.

ಮೊಜ್ತಬಾ ಖಮೇನಿ ಯಾರು?

ಇನ್ನು ಹೊಸ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಬಗ್ಗೆ ಸಾರ್ವಜನಿಕರಿಗೆ ಹೆಚ್ಚು ಮಾಹಿತಿ ಇಲ್ಲ. ಏಕೆಂದರೆ ಇರಾನ್‌ನಲ್ಲಿ ಅವರು ಎಂದಿಗೂ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ದೊಡ್ಡ ದೊಡ್ಡ ಸಾರ್ವಜನಿಕ ಸಭೆಗಳಲ್ಲಾಗಲೀ, ಮಾಧ್ಯಮಗಳ ಮುಂದಾಗಲಿ ಹೆಚ್ಚಾಗಿ ಕಾಣಿಸಿಕೊಂಡ ಮುಖವೂ ಅಲ್ಲ. ಆದರೂ ಅವರು ಹಲವು ವರ್ಷಗಳಿಂದ ಇರಾನ್‌ನ ರಾಜಕೀಯ ಮತ್ತು ಭದ್ರತಾ ವ್ಯವಸ್ಥೆಯೊಳಗೆ ಶಾಂತವಾಗಿ ಪ್ರಭಾವವನ್ನು ಹೆಚ್ಚಿಸಿಕೊಂಡಿದ್ದಾರೆ ಎಂದು ವಿಶ್ಲೇಷಕರು ಹೇಳುತ್ತಾರೆ.

ಅಂದಹಾಗೆ ಖಮೇನಿ ಅವರ ವಯಸ್ಸು ಈಗ 56 ವರ್ಷ. ಅವರು ದಿವಂಗತ ಅಯತೊಲ್ಲಾ ಅಲಿ ಖಮೇನಿ ಅವರ ಎರಡನೇ ಪುತ್ರ. ಹಲವು ವರ್ಷಗಳಿಂದ ಅವರು ತಮ್ಮ ತಂದೆಯ ಆಡಳಿತದ ಒಳಗಿನಿಂದಲೇ ಪ್ರಮುಖ ನಿರ್ಧಾರಗಳಲ್ಲಿ ಪ್ರಭಾವ ಬೀರುತ್ತಿದ್ದಾರೆ ಎಂಬ ಅಭಿಪ್ರಾಯ ಇರಾನ್ ರಾಜಕೀಯ ವಲಯದಲ್ಲಿ ಕೇಳಿಬರುತ್ತಿತ್ತು. ವಿಶೇಷವಾಗಿ ಇರಾನ್‌ನ ಶಕ್ತಿಶಾಲಿ ಭದ್ರತಾ ಸಂಸ್ಥೆಯಾದ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಜೊತೆ ಅವರ ಸಂಪರ್ಕ ಗಟ್ಟಿಯಾಗಿತ್ತು ಎಂದು ಹೇಳಲಾಗುತ್ತದೆ.

ಇರಾನ್‌ನ ಸಂವಿಧಾನ ಪ್ರಕಾರ, ದೇಶದ ಸರ್ವೋಚ್ಚ ನಾಯಕನನ್ನು ಆಯ್ಕೆ ಮಾಡುವ ಜವಾಬ್ದಾರಿ 88 ಸದಸ್ಯರ ಧಾರ್ಮಿಕ ಸಮಿತಿಯಾದ ತಜ್ಞರ ಸಭೆಗೆ ಸೇರಿದೆ. ಈ ಸಮಿತಿಯು ಸಭೆ ನಡೆಸಿ ಮತದಾನದ ಮೂಲಕ ಮೊಜ್ತಬಾ ಖಮೇನಿ ಅವರನ್ನು ಹೊಸ ನಾಯಕರಾಗಿ ಆಯ್ಕೆ ಮಾಡಿದೆ. ಅವರ ಆಯ್ಕೆಯನ್ನು ಸಮಿತಿ "ನಿರ್ಣಾಯಕ ಮತದಾನ" ಎಂದು ವಿವರಿಸಿದೆ. ಸಮಿತಿ ದೇಶದ ಜನತೆಗೆ ಹೊಸ ನಾಯಕತ್ವಕ್ಕೆ ಬೆಂಬಲ ನೀಡಲು ಮತ್ತು ಏಕತೆಯನ್ನು ಕಾಪಾಡಿಕೊಳ್ಳಲು ಕರೆ ನೀಡಿದೆ.

ಮೊಜ್ತಬಾ ಖಮೇನಿ ಅವರ ಆಯ್ಕೆ ವೇಗವಾಗಿ ನಡೆದಿರುವುದು ಗಮನಾರ್ಹ. ಅಲಿ ಖಮೇನಿ ಸಾವಿನ ಕೆಲವೇ ದಿನಗಳ ನಂತರ ಈ ನಿರ್ಧಾರ ಪ್ರಕಟವಾಗಿದೆ. ಇದು ಸರ್ಕಾರದ ಒಳಗಿನ ಶಕ್ತಿಶಾಲಿ ಗುಂಪುಗಳು ಮೊಜ್ತಬಾ ಖಮೇನಿ ಅವರನ್ನು ಮುಂದಿನ ನಾಯಕನಾಗಿ ಈಗಾಗಲೇ ಒಪ್ಪಿಕೊಂಡಿದ್ದರೆಂಬ ಸೂಚನೆ ನೀಡುತ್ತದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ದೇಶದ ಒಳಗಿನ ಮತ್ತು ಹೊರಗಿನ ಒತ್ತಡದ ನಡುವೆ ಸ್ಥಿರತೆ ತೋರಿಸಲು ಕೂಡ ಈ ತ್ವರಿತ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಮೊಜ್ತಬಾ ಖಮೇನಿ ಅವರ ಅಧಿಕಾರಾರೋಹಣ ಒಂದು ರೀತಿಯಲ್ಲಿ ಐತಿಹಾಸಿಕ ವ್ಯಂಗ್ಯವಾಗಿಯೂ ಕಾಣುತ್ತದೆ. 1979ರ ಇಸ್ಲಾಮಿಕ್ ಕ್ರಾಂತಿಯು ಇರಾನ್‌ನ ಪಹ್ಲವಿ ರಾಜವಂಶದ ಆಡಳಿತವನ್ನು ಕೊನೆಗೊಳಿಸಿತ್ತು. ಆ ಕ್ರಾಂತಿಯ ಪ್ರಮುಖ ಉದ್ದೇಶಗಳಲ್ಲಿ ಒಂದು ಆನುವಂಶಿಕ ಆಡಳಿತಕ್ಕೆ ವಿರೋಧವಾಗಿತ್ತು. ಆದರೆ ಈಗ ತಂದೆಯ ನಂತರ ಪುತ್ರನೇ ದೇಶದ ಸರ್ವೋಚ್ಚ ನಾಯಕನಾಗಿರುವುದರಿಂದ ಕೆಲವರು ಇದನ್ನು "ರಾಜವಂಶದ ಮಾದರಿ ಮತ್ತೆ ಮೂಡಿಬರುತ್ತಿದೆ" ಎಂದು ಹೇಳುತ್ತಿದ್ದಾರೆ.

ಮೊಜ್ತಬಾ ಖಮೇನಿ ಅವರು ತಮ್ಮ ಪ್ರಭಾವವನ್ನು ಸಾರ್ವಜನಿಕ ರಾಜಕೀಯ ವೇದಿಕೆಗಳಲ್ಲಿ ನಿರ್ಮಿಸಿಕೊಳ್ಳುವುದಕ್ಕಿಂತ ಸಂಸ್ಥೆಗಳ ಒಳಗೆ ನಿರ್ಮಿಸಿಕೊಂಡಿದ್ದಾರೆ. ವಿಶೇಷವಾಗಿ ಭದ್ರತಾ ವ್ಯವಸ್ಥೆ ಮತ್ತು ಧಾರ್ಮಿಕ ಸಂಸ್ಥೆಗಳೊಂದಿಗೆ ಅವರು ಬಲವಾದ ಸಂಬಂಧ ಹೊಂದಿದ್ದಾರೆ ಎಂದು ಹೇಳಲಾಗುತ್ತದೆ. ಇದೇ ಸಂಬಂಧಗಳು ಅವರ ಅಧಿಕಾರವನ್ನು ಬಲಪಡಿಸಲು ಸಹಾಯ ಮಾಡಿವೆ.

ಅವರ ಬಗ್ಗೆ ಇನ್ನೊಂದು ಚರ್ಚೆಯ ವಿಷಯ ಧಾರ್ಮಿಕ ಹುದ್ದೆ. ಸಾಮಾನ್ಯವಾಗಿ ಇರಾನ್‌ನ ಸರ್ವೋಚ್ಚ ನಾಯಕರು "ಅಯತೊಲ್ಲಾ" ಎಂಬ ಉನ್ನತ ಧಾರ್ಮಿಕ ಹುದ್ದೆ ಹೊಂದಿರುತ್ತಾರೆ. ಆದರೆ ಮೊಜ್ತಬಾ ಖಮೇನಿ ಈಗ "ಹೊಜಟೋಲೆಸ್ಲಾಮ್" ಎಂಬ ಮಧ್ಯಮ ಮಟ್ಟದ ಧಾರ್ಮಿಕ ಹುದ್ದೆ ಹೊಂದಿದ್ದಾರೆ. ಅವರ ತಂದೆಯೂ 1989ರಲ್ಲಿ ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸಿದ್ದರು. ಆ ಸಮಯದಲ್ಲಿ ಕಾನೂನು ಬದಲಾವಣೆಗಳ ಮೂಲಕ ಅವರಿಗೆ ಸರ್ವೋಚ್ಚ ನಾಯಕ ಸ್ಥಾನಕ್ಕೆ ಅವಕಾಶ ನೀಡಲಾಗಿತ್ತು. ಇದೇ ರೀತಿಯ ವ್ಯವಸ್ಥೆ ಮೊಜ್ತಬಾ ಖಮೇನಿ ಅವರಿಗೂ ಆಗಬಹುದು ಎಂಬ ನಿರೀಕ್ಷೆ ಇದೆ.

ಮೊಜ್ತಬಾ ಖಮೇನಿ ಅವರ ಅಧಿಕಾರಕ್ಕೆ ಏರುವುದು ಇರಾನ್‌ನ ಮುಂದಿನ ರಾಜಕೀಯ ದಿಕ್ಕು ಹೇಗಿರಬಹುದು ಎಂಬ ಪ್ರಶ್ನೆಯನ್ನು ಕೂಡ ಎಬ್ಬಿಸಿದೆ. ಹಲವಾರು ವಿಶ್ಲೇಷಕರ ಪ್ರಕಾರ, ಅವರ ಆಯ್ಕೆ ದೇಶದ ಕಠಿಣ ನಿಲುವು ಹೊಂದಿರುವ ರಾಜಕೀಯ ಗುಂಪುಗಳ ಪ್ರಭಾವವನ್ನು ತೋರಿಸುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ಇರಾನ್‌ನ ಒಳರಾಜಕೀಯ ಮತ್ತು ವಿದೇಶಾಂಗ ನೀತಿಯಲ್ಲಿ ಗಟ್ಟಿಯಾದ ನಿಲುವು ಮುಂದುವರಿಯಬಹುದು ಎಂದು ಅಂದಾಜಿಸಲಾಗಿದೆ.

ಒಟ್ಟಿನಲ್ಲಿ, ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದಿದ್ದರೂ, ಹಲವು ವರ್ಷಗಳಿಂದ ಇರಾನ್‌ನ ಅಧಿಕಾರದ ಕೇಂದ್ರದೊಳಗೆ ಪ್ರಭಾವ ಬೆಳೆಸಿಕೊಂಡಿದ್ದ ವ್ಯಕ್ತಿಯಾಗಿದ್ದಾರೆ ಮೊಜ್ತಬಾ ಖಮೇನಿ. ಈಗ ಅವರು ದೇಶದ ಅತ್ಯಂತ ಪ್ರಭಾವಶಾಲಿ ಸ್ಥಾನವನ್ನು ವಹಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಇರಾನ್‌ನ ರಾಜಕೀಯ ಮತ್ತು ಜಾಗತಿಕ ಸಂಬಂಧಗಳು ಹೇಗೆ ರೂಪುಗೊಳ್ಳುತ್ತವೆ ಎಂಬುದು ಗಮನಿಸಬೇಕಾದ ವಿಷಯವಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+