ನವದೆಹಲಿ, ಏಪ್ರಿಲ್ 9: ಭಾರತದ ಪ್ರಮುಖ ಐಟಿ ದೈತ್ಯ ಕಂಪನಿಯಾಗಿರುವ ವಿಪ್ರೋ ಸಿಇಒ ಥಿಯೆರಿ ಡೆಲಾಪೋರ್ಟೆ ಅವರು ಶನಿವಾರ ತಮ್ಮಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಆ ಸ್ಥಾನಕ್ಕೆ ಶ್ರೀನಿವಾಸ್ ಪಲ್ಲಿಯಾ ಅವರನ್ನು ನೇಮಿಸಿರುವುದಾಗಿ ಸಂಸ್ಥೆ ಘೋಷಿಸಿದೆ.
ಶ್ರೀನಿವಾಸ್ ಪಲ್ಲಿಯಾ ಅವರು ಎಂಡಿ ಮತ್ತು ಸಿಇಒ ಪಾತ್ರವನ್ನು ವಹಿಸಿಕೊಳ್ಳಲಿದ್ದಾರೆ ಎಂದು ವಿಪ್ರೋ ತನ್ನ ಹೇಳಿಕೆಯಲ್ಲಿ ತಿಳಿಸಿದ್ದು, ತಕ್ಷಣವೇ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ. "ಅವರು (ಶ್ರೀನಿವಾಸ್ ಪಾಲ್ಲಿಯಾ) ಥಿಯೆರಿ ಡೆಲಾಪೋರ್ಟೆಗೆ ಉತ್ತರಾಧಿಕಾರಿಯಾಗಿದ್ದಾರೆ, ಅವರು ಕಳೆದ ನಾಲ್ಕು ವರ್ಷಗಳಿಂದ ವಿಪ್ರೋದಲ್ಲಿ ಮಹತ್ವದ ಪರಿವರ್ತನೆಗೆ ಕಾರಣರಾಗಿದ್ದಾರೆ " ಎಂದು ವಿಪ್ರೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಶ್ರೀನಿವಾಸ್ ಪಲ್ಲಿಯಾ ಅವರು ವಿಪ್ರೋ ಸಂಸ್ಥೆಯಲ್ಲಿ ದೀರ್ಘ ಕಾಲ ಕೆಲಸ ಮಾಡಿರುವ ಅನುಭವಿಯಾಗಿದ್ದು, ಸುಮಾರು ಮೂರು ದಶಕಗಳ ಕಾಲ ಅಲ್ಲಿ ಸೇವೆ ಸಲ್ಲಿಸಿದ್ದಾರೆ. ತೀರಾ ಇತ್ತೀಚೆಗೆ, ಅವರು ವಿಪ್ರೋದ ಅತಿದೊಡ್ಡ ಮಾರುಕಟ್ಟೆಯಾದ "ಅಮೇರಿಕಾ 1" ಸಂಸ್ಥೆಯಲ್ಲೂ CEO ಆಗಿ ಸೇವೆ ಸಲ್ಲಿಸಿದ್ದರು. ಈ ಹುದ್ದೆಯಲ್ಲಿದ್ದಾಗ, ಅವರು ವಿವಿಧ ಉದ್ಯಮ ಕ್ಷೇತ್ರಗಳನ್ನು ನಿರ್ವಹಿಸಿದ್ದು , ಅವುಗಳ ಗುರಿಗಳ ವಿಸ್ತರಣೆ ಮಾಡಲು ಯೋಜನೆಗಳನ್ನು ಕಾರ್ಯಗತಗೊಳಿಸಿದರು. ಶ್ರೀನಿವಾಸ್ ಅವರು ವಿಪ್ರೋ ಕಾರ್ಯಕಾರಿ ಮಂಡಳಿಯಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀನಿವಾಸ್ ಅವರು 1992 ರಲ್ಲಿ ವಿಪ್ರೊಗೆ ಸೇರಿದ್ದು ಅಲ್ಲಿ, ಗ್ರಾಹಕ ವ್ಯಾಪಾರ ಘಟಕದ ಅಧ್ಯಕ್ಷರು ಮತ್ತು ಬಿಸಿನೆಸ್ ಅಪ್ಲಿಕೇಶನ್ ಸೇವೆಗಳ ಜಾಗತಿಕ ಮುಖ್ಯಸ್ಥರು ಸೇರಿದಂತೆ ಅನೇಕ ಮಹತ್ವದ ನಾಯಕತ್ವ ಸ್ಥಾನಗಳನ್ನು ನಿರ್ವಹಿಸಿದ್ದರು. ಅವರು ವಿಪ್ರೋದಲ್ಲಿ ಆರಂಭದಲ್ಲಿ ಪ್ರೋಡಕ್ಟ್ ಮ್ಯಾನೇಜರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆದಾದ ಬಳಿಕ , ಗ್ರಾಹಕ ವ್ಯಾಪಾರ ಘಟಕದ ಅಧ್ಯಕ್ಷರು ಮತ್ತು RCTG ವ್ಯಾಪಾರ ಘಟಕದ ಮುಖ್ಯ ಕಾರ್ಯನಿರ್ವಾಹಕರಂತಹ ವಿಭಿನ್ನ ಸ್ಥಾನಗಳ ಮೂಲಕ ಉದ್ಯೋಗದ ಸ್ಥಾನದಲ್ಲಿ ಪ್ರಗತಿ ಸಾಧಿಸುತ್ತಾ ಹೋದರು.
ಬೆಂಗಳೂರಿನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್‌ನಿಂದ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನಲ್ಲಿ ಇವರು ಮಾಸ್ಟರ್ ಆಫ್ ಟೆಕ್ನಾಲಜಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮೆಕ್‌ಗಿಲ್ ವಿಶ್ವವಿದ್ಯಾಲಯದಲ್ಲಿ ಅಡ್ವಾನ್ಸಡ್ ಲೀಡರ್‌ಶಿಪ್ ಪ್ರೋಗ್ರಾಂ ಹಾಗೂ ಹಾರ್ವರ್ಡ್ ವಿವಿಯಲ್ಲಿ ಜಾಗತಿಕ ನಾಯಕತ್ವ, ಕಾರ್ಯತಂತ್ರ ಮತ್ತು ನಿರ್ವಹಣೆಗೆ ಸಂಬಂಧಿಸಿದ ಕೋರ್ಸ್ ಮಾಡಿದ್ದಾರೆ.
ತಮ್ಮ ನೇಮಕಾತಿಯ ಬಗ್ಗೆ ಪ್ರತಿಕ್ರಿಯಿಸಿದ ಶ್ರೀನಿವಾಸ್ " ಈ ಐಕಾನಿಕ್ ಸಂಸ್ಥೆಯನ್ನು ಮುನ್ನಡೆಸಲು ಆಯ್ಕೆಯಾಗಿರುವುದು ನನಗೆ ನಿಜವಾಗಿಯೂ ಗೌರವವಾಗಿದೆ. ಉದ್ದೇಶದೊಂದಿಗೆ ಲಾಭವನ್ನು ಸಂಯೋಜಿಸಿರುವ ಬಹಳ ವಿರಳ ಕಂಪೆನಿಗಳಲ್ಲಿ ವಿಪ್ರೋ ಒಂದು. ಈ ಆದರ್ಶಪ್ರಾಯ ಸಂಸ್ಥೆಯನ್ನು ಮುನ್ನಡೆಸಲು ನನ್ನನ್ನು ಆಯ್ಕೆ ಮಾಡಿರುವುದು ನನಗೆ ದೊಡ್ಡ ಗೌರವವಾಗಿದೆ.
ಥಿಯೆರಿ ಡೆಲಾಪೋರ್ಟೆ ಅವರು ಹಾಕಿಕೊಟ್ಟ ಗಟ್ಟಿ ಬುನಾದಿ ಮೇಲೆ ವಿಪ್ರೋವನ್ನು ಕಟ್ಟಲು ಮತ್ತು ಮುನ್ನಡೆಸಲು ನಾನು ಕಾತರನಾಗಿದ್ದೇನೆ. ನನ್ನ ಇಡೀ ವೃತ್ತಿಯನ್ನು ವಿಪ್ರೋದಲ್ಲಿ ಕಟ್ಟಿಕೊಂಡಿದ್ದೇನೆ. ನಮ್ಮ 78 ವರ್ಷಗಳ ಇತಿಹಾಸ ಹಾಗೂ 2.40 ಲಕ್ಷಕ್ಕೂ ಅಧಿಕ ಜತೆಗಾರರ ತಂಡದ ಬಗ್ಗೆ ನನಗೆ ಬಹಳ ಮೆಚ್ಚುಗೆ ಇದೆ.ಭವಿಷ್ಯದ ಬೆಳವಣಿಗೆಯ ಅವಕಾಶಗಳ ಬಗ್ಗೆ ನಾನು ಉತ್ಸುಕನಾಗಿದ್ದೇನೆ" ಎಂದು ಹೇಳಿದ್ದಾರೆ.
ವಿಪ್ರೋ ಸಿಇಒ ಥಿಯೆರಿ ಡೆಲಾಪೋರ್ಟೆ ಕಳೆದ ಏಪ್ರಿಲ್ 5ರಂದು , ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅವರು ವಾರ್ಷಿಕ 82 ಕೋಟಿ ರೂ.ಗೂ ಅಧಿಕ ವೇತನ ಪ್ಯಾಕೇಜ್ ಹೊಂದಿದ್ದು ಭಾರತೀಯ ಐಟಿ ವಲಯದಲ್ಲಿ ಅತಿ ಹೆಚ್ಚು ವೇತನ ಪಡೆಯುವ ಸಿಇಒ ಎನಿಸಿಕೊಂಡಿದ್ದರು.


Click it and Unblock the Notifications