ಕಳೆದ ವರ್ಷ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ದುರ್ಘಟನೆ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಆ ಒಂದು ಘಟನೆ ನಡೆದ ನಂತರ, ಹಲವಾರು ಕುಟುಂಬಗಳು ಇನ್ನೂ ಕಣ್ಣೀರಿಡುತ್ತಿವೆ. ಕಾಲ್ತುಳಿತ, ಸಾವು-ನೋವು ಇದ್ಯಾವುದನ್ನೂ ಆರ್‍ಸಿಬಿಯ ಗೆಲುವು ಊಹಿಸಿರಲಿಲ್ಲ. ಆದರೆ ಎಲ್ಲವೂ ಕೈಮೀರಿ ನಡೆದೋಯ್ತು. ಇದಾದ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ನಡೆಯುವ ವಿಚಾರದಲ್ಲಿ ಸಾಕಷ್ಟು ಗೊಂದಲ ಮೂಡಿದೆ.

ಹೌದು, ಭಾರತದ ಅತ್ಯಂತ ಜನಪ್ರಿಯ ಟಿ20 ಕ್ರಿಕೆಟ್ ಟೂರ್ನಮೆಂಟ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 19ನೇ ಆವೃತ್ತಿ ಮಾರ್ಚ್ 28ರಿಂದ ಆರಂಭವಾಗಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧಿಕೃತವಾಗಿ ಘೋಷಿಸಿದೆ. ಟೂರ್ನಿಯ ಮೊದಲ 20 ದಿನಗಳ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದ್ದು, ಅಭಿಮಾನಿಗಳಲ್ಲಿ ಈಗಾಗಲೇ ಉತ್ಸಾಹ ಹೆಚ್ಚಾಗಿದೆ. ಸಂಪ್ರದಾಯದಂತೆ ಹಾಲಿ ಚಾಂಪಿಯನ್ ತಂಡವೇ ಟೂರ್ನಿಯ ಮೊದಲ ಪಂದ್ಯವನ್ನು ಆಡಲಿದೆ. ಅದರಂತೆ ಕಳೆದ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು ಈ ವರ್ಷದ ಐಪಿಎಲ್ ಟೂರ್ನಿಯನ್ನು ಸನ್ರೈಸರ್ಸ್ ಹೈದರಾಬಾದ್ (ಎಸ್ಆರ್ಎಚ್) ವಿರುದ್ಧದ ಪಂದ್ಯದಿಂದ ಆರಂಭಿಸಲಿದೆ.
ಈ ಮೊದಲ ಪಂದ್ಯವನ್ನು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಸುವ ಯೋಜನೆ ಮಾಡಲಾಗಿತ್ತು. ಆದರೆ ಈ ಸ್ಥಳದಲ್ಲಿ ಪಂದ್ಯಗಳನ್ನು ಆಯೋಜಿಸುವ ಬಗ್ಗೆ ಇನ್ನೂ ಅಂತಿಮ ಅನುಮತಿ ದೊರಕಿಲ್ಲ. ಕರ್ನಾಟಕ ಸರ್ಕಾರ ರಚಿಸಿರುವ ತಜ್ಞರ ಸಮಿತಿ ಕ್ರೀಡಾಂಗಣದ ಸುರಕ್ಷತೆ ಮತ್ತು ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದ ನಂತರವೇ ಪಂದ್ಯಗಳನ್ನು ನಡೆಸಲು ಅನುಮತಿ ನೀಡಲಾಗುತ್ತದೆ ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಸಮಿತಿ ಮಾರ್ಚ್ 13ರಂದು ಕ್ರೀಡಾಂಗಣದ ಅಂತಿಮ ಪರಿಶೀಲನೆ ನಡೆಸಿ, ನಂತರ ತಮ್ಮ ನಿರ್ಧಾರವನ್ನು ಪ್ರಕಟಿಸಲಿದೆ. ಸಮಿತಿಯು ಅನುಮತಿ ನೀಡದಿದ್ದರೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಯೋಜಿಸಲಾಗುವುದಿಲ್ಲ.
ಈ ಹಿನ್ನೆಲೆಯಲ್ಲಿ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿವಿಧ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಸರ್ಕಾರದ ಸೂಚನೆಯಂತೆ ಕ್ರೀಡಾಂಗಣದಲ್ಲಿ ಜನಸಂದಣಿ ನಿಯಂತ್ರಣ ಕ್ರಮಗಳನ್ನು ಬಲಪಡಿಸುವ ಕೆಲಸ ಮಾಡುತ್ತಿದೆ. ಜೊತೆಗೆ ಟಿಕೆಟ್ ಮಾರಾಟ ವ್ಯವಸ್ಥೆಯನ್ನು ಇನ್ನಷ್ಟು ಕಟ್ಟುನಿಟ್ಟಾಗಿಸಲು ನಿರ್ಧರಿಸಲಾಗಿದೆ. ಪ್ರೇಕ್ಷಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅಗ್ನಿಶಾಮಕ ದಳ ಸೇರಿದಂತೆ ತುರ್ತು ಸೇವೆಗಳು ಕೂಡ ಸಿದ್ಧವಾಗಿರುವಂತೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಈ ಎಲ್ಲಾ ಸುರಕ್ಷತಾ ಕ್ರಮಗಳ ಬಗ್ಗೆ ವಿವರವಾದ ಮಾರ್ಗಸೂಚಿಯನ್ನು ತಜ್ಞರ ಪರಿಶೀಲನಾ ಸಮಿತಿಗೆ ಸಲ್ಲಿಸಲಾಗಿದೆ. ಈ ಕ್ರಮಗಳನ್ನೆಲ್ಲಾ ಪರಿಶೀಲಿಸಿದ ನಂತರ ಸಮಿತಿ ಕ್ರೀಡಾಂಗಣದ ಸಿದ್ಧತೆ ಕುರಿತು ಅಂತಿಮ ಅಭಿಪ್ರಾಯ ನೀಡಲಿದೆ.
ಇದರ ನಡುವೆ ಐಪಿಎಲ್ 2026 ಟೂರ್ನಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಕೆಲವು ತವರು ಪಂದ್ಯಗಳ ಸ್ಥಳದಲ್ಲಿ ಬದಲಾವಣೆ ಮಾಡಿರುವುದನ್ನು ದೃಢಪಡಿಸಿದೆ. ತಂಡವು ತನ್ನ ಐದು ತವರು ಪಂದ್ಯಗಳನ್ನು ಮಹಾರಾಷ್ಟ್ರದ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಆಡಲಿದೆ. ಇನ್ನೂ ಎರಡು ತವರು ಪಂದ್ಯಗಳನ್ನು ಛತ್ತೀಸ್ಗಢದ ರಾಯ್ಪುರದಲ್ಲಿರುವ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಇತ್ತೀಚೆಗೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಘಟನೆ ಬಳಿಕ ಅಲ್ಲಿ ಯಾವುದೇ ಪ್ರಮುಖ ಸ್ಪರ್ಧಾತ್ಮಕ ಪಂದ್ಯಗಳನ್ನು ಆಯೋಜಿಸಲಾಗಿರಲಿಲ್ಲ. ಈ ಹಿನ್ನೆಲೆ ಸುರಕ್ಷತೆಯ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಲಾಗುತ್ತಿದೆ. ಪ್ರೇಕ್ಷಕರ ಸುರಕ್ಷತೆ ಮತ್ತು ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶದಿಂದ ಕೆಲ ಪಂದ್ಯಗಳನ್ನು ಬೇರೆ ನಗರಗಳಿಗೆ ಸ್ಥಳಾಂತರಿಸಲಾಗಿದೆ.
ಆದರೆ ಬೆಂಗಳೂರಿನ ಅಭಿಮಾನಿಗಳಿಗೆ ಇನ್ನೂ ನಿರೀಕ್ಷೆ ಉಳಿದಿದೆ. ತಜ್ಞರ ಸಮಿತಿಯ ಅಂತಿಮ ಪರಿಶೀಲನೆಯ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಐಪಿಎಲ್ ಪಂದ್ಯಗಳು ನಡೆಯುವ ಬಗ್ಗೆ ಸ್ಪಷ್ಟತೆ ಸಿಗಲಿದೆ. ಸಮಿತಿಯ ವರದಿ ಮತ್ತು ಸರ್ಕಾರದ ಅನುಮತಿ ನಂತರ ಅಂತಿಮ ವೇಳಾಪಟ್ಟಿಯಲ್ಲಿ ಬದಲಾವಣೆ ಸಾಧ್ಯತೆ ಇದೆ. ಐಪಿಎಲ್ 2026 ಆರಂಭಕ್ಕೆ ಇನ್ನೂ ಕೆಲವು ದಿನಗಳು ಬಾಕಿ ಇರುವುದರಿಂದ ಮುಂದಿನ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟ ಮಾಹಿತಿ ಪ್ರಕಟವಾಗುವ ಸಾಧ್ಯತೆ ಇದೆ.


Click it and Unblock the Notifications