ಒಬ್ಬ ವ್ಯಕ್ತಿ ಒಂದು ವರ್ಷದಲ್ಲಿ ಎಷ್ಟು ಹಣ ಸಂಪಾದಿಸಿದ್ದಾರೆ, ಎಷ್ಟು ತೆರಿಗೆ ಕಟ್ಟಬೇಕು, ಎಷ್ಟು ಈಗಾಗಲೇ ಕಟ್ ಆಗಿದೆ, ಇವೆಲ್ಲವನ್ನೂ ಒಂದು ಫಾರ್ಮ್‌ನಲ್ಲಿ ಭರ್ತಿ ಮಾಡಿ ಆದಾಯ ತೆರಿಗೆ ಇಲಾಖೆಗೆ (Income Tax Department) ಕಳಿಸುವುದೇ ಆದಾಯ ತೆರಿಗೆ ರಿಟರ್ನ್. ಹಲವಾರು ತೆರಿಗೆದಾರರು ಈಗಾಗಲೇ 2025-26ರ ಆದಾಯ ತೆರಿಗೆ ರಿಟರ್ನ್ ಫೈಲ್ (ITR) ಮಾಡಿದ್ದಾರೆ. ಅಲ್ಲದೇ ಅದರ ರಿಫಂಡ್‌ಗಾಗಿ ಹೆಚ್ಚಿನವರು ಕಾಯುತ್ತಿದ್ದಾರೆ.

ಹಲವಾರು ತೆರಿಗೆದಾರರು ಸಲ್ಲಿಸಿದ ಆದಾಯ ತೆರಿಗೆ ರಿಟರ್ನ್‌ಗಳ (ITR) ರಿಫಂಡ್‌ಗಾಗಿ ಕಾತುರದಿಂದ ಕಾದು ಕುಳಿತಿದ್ದಾರೆ. ತಮ್ಮ ಸಂಬಳದಿಂದ ಕಟ್ಟಾದ ತೆರಿಗೆ ಮರುಪಾವತಿ ಯಾವಾಗ ಖಾತೆಗೆ ಜಮಾ ಆಗುತ್ತದೆ ಎಂದು ಹಲವರು ಪ್ರಶ್ನೆ ಮಾಡುತ್ತಿದ್ದಾರೆ.
ಈಗಾಗಲೇ ಕೆಲವು ತೆರಿಗೆದಾರರು ತಮ್ಮ ITR ಸಲ್ಲಿಸಿ, ಹಣ ಕೂಡಾ ಸ್ವೀಕರಿಸಿ ಆಗಿದ. ಆದ್ರೆ, ಇನ್ನೂ ಕೆಲವರ ಖಾತೆಗೆ ಇನ್ನೂ ತೆರಿಗೆ ಮರುಪಾವತಿ ಹಣ ಜಮಾ ಆಗಿಲ್ಲ. ಹಾಗಿದ್ರೆ, ಅವರ ಮರುಪಾವತಿಯು ಏಕೆ ಇಷ್ಟೊಂದು ವಿಳಂಬವಾಗುತ್ತಿದೆ ಎಂದು ಅನೇಕರಿಗೆ ತಿಳಿದಿಲ್ಲ. ಕೇಂದ್ರ ನೇರ ತೆರಿಗೆಗಳ ಮಂಡಳಿ (CBDT) ಅಧ್ಯಕ್ಷ ರವಿ ಅಗರ್‌ವಾಲ್ ಅವರು ಇದೀಗ ಈ ವಿಳಂಬಕ್ಕೆ ಕಾರಣಗಳನ್ನು ವಿವರಿಸಿದ್ದಾರೆ.
ಐಟಿಆರ್ ಮರುಪಾವತಿಯಾಗಲು ವಿಳಂಬವೇಕೆ?
ಸೋಮವಾರ ನವದೆಹಲಿಯ ಇಂಡಿಯಾ ಇಂಟರ್ನ್ಯಾಷನಲ್ ಟ್ರೇಡ್ ಫೇರ್ (IITF) ನಲ್ಲಿ ತೆರಿಗೆದಾರರ ಲೌಂಜ್ ಅನ್ನು ಉದ್ಘಾಟಿಸಿದ ನಂತರ ಮಾತನಾಡಿದ ರವಿ ಅಗರ್‌ವಾಲ್, ಕೆಲವು ತೆರಿಗೆದಾರರ ಪ್ರಕರಣಗಳಲ್ಲಿ ತಪ್ಪಾಗಿ ತೆರಿಗೆ ಕಟ್ ಮಾಡಲಾಗಿದ್ದು, ಇದನ್ನು ಸದ್ಯ ಆದಾಯ ತೆರಿಗೆ ಇಲಾಖೆ ಪರಿಶೀಲಿಸುತ್ತಿರುವುದರಿಂದ ಮರುಪಾವತಿ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿದೆ ಎಂದು ತಿಳಿಸಿದ್ದಾರೆ.
ಅಲ್ಲದೇ ಐಟಿಆರ್ ಸಲ್ಲಿಸುವಾಗ ಯಾವುದೇ ಮಾಹಿತಿ ಬಿಟ್ಟು ಹೋಗಿದ್ದರೆ, ಅಪ್ಡೇಟ್ ಮಾಡಿದ ರಿಟರ್ನ್‌ಗಳನ್ನು ಸಲ್ಲಿಸಲು ತೆರಿಗೆದಾರರನ್ನು ಸಂಪರ್ಕಿಸಲಾಗಿದೆ ಎಂದು ಅವರು ವರದಿಗಾರರಿಗೆ ತಿಳಿಸಿದ್ದಾರೆ. ಅಲ್ಲದೇ ಕಡಿಮೆ ಮೊತ್ತದ ಮರುಪಾವತಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
"ಇದೊಂದು ನಿರಂತರ ಪ್ರಕ್ರಿಯೆಯಾಗಿದೆ. ನಾವು ಬಾಕಿ ಉಳಿದ ಐಟಿಆರ್ ಹಣವನ್ನು ಈ ತಿಂಗಳ ಅಥವಾ ಡಿಸೆಂಬರ್ ವೇಳೆಗೆ ಬಿಡುಗಡೆ ಮಾಡುತ್ತೇವೆ" ಎಂದು ಅಗರ್‌ವಾಲ್ ಮಾಧ್ಯಮದೊಂದಿಗೆ ಹೇಳಿದ್ದಾರೆ.
ಆದಾಯ ತೆರಿಗೆ ರಿಟರ್ನ್ಸ್ ಸ್ಟೇಟಸ್ ತಿಳಿದುಕೊಳ್ಳುವುದು ಹೇಗೆ?
ಹಂತ 1: ಇ-ಫೈಲಿಂಗ್ ಪೋರ್ಟಲ್ ಹೋಮ್‌ಪೇಜ್‌ಗೆ ಹೋಗಿ.
ಹಂತ 2: ಬಳಕೆದಾರರ ID ಮತ್ತು ಪಾಸ್‌ವರ್ಡ್ ಅನ್ನು ಹಾಕಬೇಕು.
ಹಂತ 3: ಇ-ಫೈಲ್ ಟ್ಯಾಬ್‌ಗೆ ಹೋಗಿ, ನಂತರ ಆದಾಯ ತೆರಿಗೆ ರಿಟರ್ನ್ಸ್ ಆಯ್ಕೆಯನ್ನು ಆಯ್ಕೆ ಮಾಡಬೇಕು ಮತ್ತು 'View Filed Returns' ಕ್ಲಿಕ್ ಮಾಡಿ.
ಹಂತ 4: ಈಗ ನೀವು ಬಯಸಿದ ಅಸೆಸ್‌ಮೆಂಟ್ ವರ್ಷದ ಮರುಪಾವತಿ ಸ್ಥಿತಿಯನ್ನು ಪರಿಶೀಲಿಸಬಹುದು.
ಇದೇ ವಿಭಾಗದಲ್ಲಿ 'View Details' ಮೇಲೆ ಕ್ಲಿಕ್ ಮಾಡುವ ಮೂಲಕ ಸಲ್ಲಿಸಿದ ITR ನ ಸಂಪೂರ್ಣ ಮಾಹಿತಿಯನ್ನು ಸಹ ಪರಿಶೀಲಿಸಬಹುದು.
ಆದಾಯ ತೆರಿಗೆ ರಿಟರ್ನ್ಸ್ ವಿಳಂಬವಾಗಲು ಕಾರಣವೇನು?
- ತೆರಿಗೆಗಳನ್ನು ಸಲ್ಲಿಸುವಾಗ ಯಾವುದೇ ತಪ್ಪುಗಳನ್ನು ಮಾಡಿದರೆ ಮರುಪಾವತಿ ಪ್ರಕ್ರಿಯೆಯಲ್ಲಿ ಸ್ವಲ್ಪ ವಿಳಂಬವಾಗಬಹುದು.
- ನಿಮ್ಮ ITR ನಲ್ಲಿ ಸಲ್ಲಿಸಿದ ನಂಬರ್‌ನಲ್ಲಿ ಸ್ವಲ್ಪ ತಪ್ಪನ್ನು ಆದಾಯ ತೆರಿಗೆ ಇಲಾಖೆ ಕಂಡುಕೊಂಡರೆ, ಅದು ಮರುಪಾವತಿಯನ್ನು ವಿಳಂಬಗೊಳಿಸಬಹುದು. ಆದ್ದರಿಂದ ಐಟಿಆರ್ ಸಲ್ಲಿಸುವಾಗ ಸರಿಯಾದ ಮಾಹಿತಿಯನ್ನು ಎಚ್ಚರಿಕೆಯಿಂದ ಸಲ್ಲಿಸುವುದು ಮುಖ್ಯ.


Click it and Unblock the Notifications