ರೈತರ (Farmers) ಆರ್ಥಿಕ ನೆರವಿಗಾಗಿ, ಕೃಷಿ ನೆರವಿಗಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 2019 ರಲ್ಲಿ ಆರಂಭಿಸಿದ ಯೋಜನೆ "ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ" (PM Kisan Samman Nidhi). ಇದೀಗ ಈ ಯೋಜನೆಯ 21ನೇ ಕಂತಿಗಾಗಿ ಇಡೀ ದೇಶದ ಕೋಟ್ಯಾಂತರ ರೈತರು ಕಾದು ಕುಳಿತಿದ್ದಾರೆ. ಆದ್ರೆ ಸರ್ಕಾರ ಮಾತ್ರ ಇನ್ನೂ ಅಧಿಕೃತ ದಿನಾಂಕವನ್ನು ಘೋಷಣೆ ಮಾಡಿಲ್ಲ. ಅದರಲ್ಲೂ ಕೆಲವು ರಾಜ್ಯಗಳ ರೈತರಿಗೆ ಈಗಾಗಲೇ ಪಿಎಂ ಕಿಸಾನ್ ನಿಧಿಯ 21 ನೇ ಕಂತಿನ ಹಣ ಜಮಾ ಕೂಡಾ ಆಗಿದೆ. ಹಾಗಿದ್ರೆ ಈ ಬಾರಿ ಇಷ್ಟೊಂದು ತಡ ಏಕೆ ಗೊತ್ತಾ?

ಈಗಾಗಲೇ 2025 ರಲ್ಲಿ ಎರಡು ಬಾರಿ ಪಿಎಂ ಕಿಸಾನ್ ಹಣ ಜಮಾ ಆಗಿದೆ. ಇದೀಗ ಮೂರನೇ ಮತ್ತು ಅಂತಿಮ ಹಣಕ್ಕಾಗಿ ಇಡೀ ದೇಶದ ರೈತರು ಕಾತುರದಲ್ಲಿದ್ದಾರೆ. ಫೆಬ್ರವರಿ 24ರಂದು 19ನೇ ಕಂತು ಬಿಡುಗಡೆಯಾಗಿತ್ತು. ಅದೇ ರೀತಿ ಆಗಸ್ಟ್ 2 ರಂದು 20 ನೇ ಕಂತಿನ ಹಣ ಬಿಡುಗಡೆ ಮಾಡಲಾಗಿತ್ತು. ಆದ್ರೆ 21 ನೇ ಕಂತಿನ ಹಣ ಇನ್ನೂ ಬಿಡುಗಡೆಯಾಗಿಲ್ಲ. ಈ ಮಧ್ಯೆ ರೈತರಲ್ಲಿ ಆತಂಖ ಮೂಡಿದ್ದು, ಮತ್ತಷ್ಟು ತಡವಾಗಬಹುದಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲದೇ ಸರ್ಕಾರ ಫಲಾನುಭವಿಗಳ ಸಂಪೂರ್ಣ ಪಟ್ಟಿಯನ್ನು ಪರಿಶೀಲಿಸುತ್ತಿದೆ, ಆ ನಂತರ ಹಣ ಜಮಾ ಮಾಡುತ್ತದೆ ಎಂದು ವರದಿಯಾಗಿದೆ.
ಅನರ್ಹ ಫಲಾನುಭವಿಗಳಿಂದಲೂ ಯೋಜನೆಗೆ ಅರ್ಜಿ:
ಹೌದು, ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ಅರ್ಹರಲ್ಲದ ವ್ಯಕ್ತಿಗಳು ಕೂಡಾ ಅರ್ಜಿ ಸಲ್ಲಿಸಿ, ಹಣ ಪಡೆದಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೂ ಬಂದಿದ್ದು, ಈ ಹಿನ್ನೆಲೆ ಅಗತ್ಯ ಕ್ರಮ ಕೈಗೊಂಡಿದೆ. ಸರ್ಕಾರ ಕೂಡಾ ಈ ಯೋಜನೆಯ ಫಲಾನುಭವಿಗಳ ಬಗ್ಗೆ ಪರಿಶೀಲನೆ ಮತ್ತು ದತ್ತಾಂಶವನ್ನು ಸಂಗ್ರಹಿಸಿ ಪರಿಶೀಲನೆ ನಡೆಸುತ್ತಿದೆ ಎನ್ನಲಾಗಿದೆ.
ಪಿಎಂ ಕಿಸಾನ್ ಹಣ ತಡವಾಗಲು ಇದೇ ಕಾರಣ!
ಈಗಾಗಲೇ ಕೃಷಿ ಸಚಿವಾಲಯ ಸುಮಾರು 29 ಲಕ್ಷಕ್ಕೂ ಅಧಿಕ ಸಂಶಯಾಸ್ಪದ ಪ್ರಕರಣಗಳನ್ನು ಪತ್ತೆ ಮಾಡಿದೆ. ಈ ಪ್ರಕರಣದಲ್ಲಿ ಒಂದೇ ಮನೆಯ ಇಬ್ಬರು ಗಂಡ-ಹೆಂಡತಿ ಯೋಜನೆಯ ಹಣ ಪಡೆಯುತ್ತಿದ್ದಾರೆ ಎನ್ನಲಾಗಿದೆ. ನಿಯಮ ಪ್ರಕಾರ ಇದು ತಪ್ಪು. ಈ ಪರಿಣಾಮ ಈಗಾಗಲೇ ಸರ್ಕಾರ ರಾಜ್ಯ ಮತ್ತು ಜಿಲ್ಲಾಧಿಕಾರಿಗಳ ಸಹಾಯದಿಂದ ಪರಿಶೀಲನೆ ಕಾರ್ಯ ಕೈಗೊಂಡಿದೆ. ಒಂದು ವೇಳೆ ಈ ಪರಿಶೀಲನೆಯ ನಂತರ ಅನರ್ಹ ಪಟ್ಟಿಗೆ ಯಾರು ಸೇರುತ್ತಾರೋ, ಅವರೆಲ್ಲರ ಹೆಸರನ್ನು ಫಲಾನುಭವಿಗಳ ಪಟ್ಟಿಯಲ್ಲಿ ಸೇರಿಸಲಾಗುವುದಿಲ್ಲ ಎನ್ನಲಾಗಿದೆ. ಅಲ್ಲದೇ 2022 ರಲ್ಲೂ ಒಮ್ಮೆ ಇಂತಹ ಕ್ರಮ ಕೈಗೊಂಡಿತ್ತು. ಈ ಸಂದರ್ಭದಲ್ಲಿ ಬರೋಬ್ಬರಿ 1.72 ಕೋಟಿ ಅನರ್ಹ ಹೆಸರುಗಳನ್ನು ತೆಗೆದು ಹಾಕಲಾಗಿತ್ತು ಎಂದು ವರದಿಯಾಗಿದೆ.
ಪರಿಶೀಲನೆಯ ಹಂತದಲ್ಲಿ ತನಿಖಾ ಅಧಿಕಾರಿಗಳು ಈ ಬಾರಿ ಆಧಾರ್, ಭೂ ಒಡೆತನದ ಮಾಹಿತಿ ಮತ್ತು ಬ್ಯಾಂಕ್ ವಿವರಗಳನ್ನು ಖುದ್ದಾಗಿ ಚೆಕ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಆ ನಂತರವೇ ಮುಂದಿನ 21 ನೇ ಕಂತು ರೈತರಿಗೆ ಸೇರಲಿದೆ. ಇನ್ನು ನೀವೂ ಕೂಡಾ ದಾಖಲೆಗಳನ್ನು ಸರಿಯಾಗಿ ನೀಡಿದ್ದೀರಾ ಎಂದು ಪರಿಶೀಲಿಸಿಕೊಳ್ಳಿ. ಆಧಾರ್ ನಂಬರ್, ಭೂ ದಾಖಲೆಗಳು, ಬ್ಯಾಂಕ್ ಖಾತೆಗಳ ಮಾಹಿತಿ ತಪ್ಪಾಗಿದ್ದರೆ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಾಗುವುದಿಲ್ಲ. ಅದಕ್ಕಾಗಿ, pmkisan.gov.in ವೆಬ್‌ಸೈಟ್ ಓಪನ್ ಮಾಡಿ ಚೆಕ್ ಮಾಡಿಕೊಳ್ಳಬಹುದು.


Click it and Unblock the Notifications