ಸರ್ಕಾರ ಮತ್ತು ಸಾರಿಗೆ ನೌಕರರ ನಡುವಿನ ಸಂಬಳದ ಗುದ್ದಾಟ ನಿಲ್ಲುವಂತೆ ಕಾಣುತ್ತಿಲ್ಲ. ಕಳೆದ ಕೆಲವು ವರ್ಷಗಳಿಂದ ಸರ್ಕಾರಕ್ಕೆ ಸಾರಿಗೆ ನೌಕರರಿಂದ ಹಲವು ಬೇಡಿಕೆಗಳು ಬರುತ್ತಲೇ ಇದೆ. ಆದ್ರೆ ಸರ್ಕಾರ ಮಾತ್ರ ಸಾರಿಗೆ ನೌಕರರ ಯಾವುದೇ ಬೇಡಿಕೆಯನ್ನು ಪೂರೈಸದೇ, ಸುಮ್ಮನೆ ಕುಳಿತಿದೆ ಎಂಬುದೇ ಆರೋಪ. ಅಲ್ಲದೇ ಕಳೆದ ಆಗಸ್ಟ್‌ನಲ್ಲೊಮ್ಮೆ ಮುಷ್ಕರಕ್ಕೆ ಮುಂದಾಗಿದ್ದ ಸಾರಿಗೆ ನೌಕರರು, ಹೈಕೋರ್ಟ್ ಆದೇಶದಿಂದ, ಸರ್ಕಾರದ ಭರವಸೆಯಿಂದ ಮುಷ್ಕರವನ್ನು ಹಿಂಪಡೆದಿದ್ದರು. ಆದ್ರೆ ಇದೀಗ ಮತ್ತೆ ಸಾರಿಗೆ ನೌಕರರ ಮುಷ್ಕರದ (Transport Staffs Protest) ಧ್ವನಿ ಮೊಳಗುತ್ತಿದೆ. ಹೊಸವರ್ಷದಂದೇ ಸಾರಿಗೆ ನೌಕರರು ಮುಷ್ಕರಕ್ಕೆ ಇಳಿಯಬಹುದು ಎಂದು ಸುದ್ದಿಗಳು ಹರಿದಾಡುತ್ತಿದೆ. ಹಾಗಿದ್ರೆ ಹೊಸವರ್ಷದ ದಿನವೇ ಸಾರಿಗೆ ಮುಷ್ಕರ ಇರುತ್ತಾ? ಇಲ್ವಾ? ಎಂಬ ಗೊಂದಲಕ್ಕೆ ಇಲ್ಲಿದೆ ಉತ್ತರ.

ಕರ್ನಾಟಕದಲ್ಲಿ ರಾಜ್ಯ ಸಾರಿಗೆ ನೌಕರರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಸರ್ಕಾರದೊಂದಿಗಿನ ಮಾತುಕತೆಗಳು ವಿಫಲಗೊಂಡಿರುವ ಹಿನ್ನೆಲೆಯಲ್ಲಿ, ಜನವರಿ ಮೊದಲ ವಾರದಲ್ಲೇ ಸಾರಿಗೆ ನೌಕರರು ಮುಷ್ಕರ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಮುಷ್ಕರಕ್ಕೆ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳು ಕೂಡಾ ಸೈಲೆಂಟಾಗಿ ಸಜ್ಜಾಗಿದ್ದಾರೆ ಎನ್ನಲಾಗಿದೆ. ಆದ್ದರಿಂದ ಹೊಸ ವರ್ಷದ ಆರಂಭದಲ್ಲಿ ಸಾರ್ವಜನಿಕ ಸಾರಿಗೆಯಲ್ಲಿ ಗಂಭೀರ ವ್ಯತ್ಯಯ ಉಂಟಾಗಬಹುದು ಎಂಬ ಆತಂಕ ಪ್ರಸ್ತುತ ಸೃಷ್ಟಿಯಾಗಿದೆ.
ಬೇಡಿಕೆ ಈಡೇರಿಲ್ಲ, ಬಸ್‌ಗಳು ರಸ್ತೆಗಿಳಿಯಲ್ಲ?
ವೇತನ ಹಾಗೂ ಇತರೆ ಸೇವಾ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಸಾರಿಗೆ ಇಲಾಖೆ ಈಗಾಗಲೇ ಹಲವಾರು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿತ್ತು. ಆದ್ರೆ ಇನ್ನೂ ಈಡೇರದ ಕಾರಣ ಇದೀಗ ಸಾರಿಗೆ ನೌಕರರು ಅಸಾಮಾಧಾನಗೊಂಡಿದ್ದಾರೆ. ಮುಖ್ಯಮಂತ್ರಿಗಳು ಮತ್ತು ಹಿರಿಯ ಸಚಿವರ ನೇತೃತ್ವದಲ್ಲಿ ಸಾರಿಗೆ ಇಲಾಖೆಯೊಂದಿಗೆ ಈಗಾಗಲೇ ಹಲವು ಸುತ್ತಿನ ಸಮಾಲೋಚನಾ ಸಭೆಗಳು ನಡೆದಿದೆ. ಆದ್ರೆ ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಇದುವರೆಗೆ ಯಾವುದೇ ಸ್ಪಷ್ಟ ಕ್ರಮ ಕೈಗೊಂಡಿಲ್ಲ ಎಂದು ನೌಕರರು ಆರೋಪಿಸಿದ್ದಾರೆ. ಇದೇ ಕಾರಣದಿಂದ ಮುಂದಿನ ಮುಷ್ಕರಕ್ಕೆ ನಿರ್ಧರಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಆಂತರಿಕ ಸಭೆ, ಮುಷ್ಕರದ ಚರ್ಚೆ
ಕಳೆದ ಕೆಲವು ವಾರಗಳಿಂದ ಸಾರಿಗೆ ನೌಕರರ ಸಂಘಟನೆಗಳು ನಿರಂತರವಾಗಿ ಆಂತರಿಕ ಸಭೆಗಳನ್ನು ನಡೆಸುತ್ತಿದೆ ಎನ್ನಲಾಗಿದೆ. ಅಲ್ಲದೆ, ರಾಜ್ಯಾದ್ಯಂತ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಡಿಪೋಗಳಲ್ಲಿ ನೌಕರರಲ್ಲಿ ಕರಪತ್ರಗಳನ್ನು ಹಂಚಲಾಗುತ್ತಿದೆ ಎನ್ನಲಾಗಿದೆ. ಸಂಘದ ಸದಸ್ಯರು ವೈಯಕ್ತಿಕವಾಗಿ ಡಿಪೋಗಳಿಗೆ ಭೇಟಿ ನೀಡಿ, ತಮ್ಮ ಬೇಡಿಕೆಗಳಿಗೆ ಬೆಂಬಲ ನೀಡುವಂತೆ, ಸಾಮೂಹಿಕ ಹೋರಾಟಕ್ಕೆ ಸಿದ್ಧರಾಗುವಂತೆ ನೌಕರರಿಗೆ ಪ್ರೇರಣೆ ನೀಡುತ್ತಿದ್ದಾರೆ ಎಂದು ವರದಿಯಾಗಿದೆ.
ಹೊಸವರ್ಷದ ಆಗಮನ, ಮುಷ್ಕರದ ಬಿಸಿ!
ಈಗಾಗಲೇ ಹೊಸ ವರ್ಷಕ್ಕೆ ದಿನಗಣನೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಸಾಮಾನ್ಯವಾಗಿ ಸಾರಿಗೆ ವ್ಯವಸ್ಥೆಯ ಮೇಲೆ ಹೆಚ್ಚಿನ ಜನರು ಅವಲಂಬಿತರಾಗುತ್ತಾರೆ. ಆದ್ರೆ ಇದೀಗ ಸಾರಿಗೆ ನೌಕರರು ಸರ್ಕಾರದ ವಿರುದ್ಧ ಅಸಾಮಧಾನಗೊಂಡಿರುವ ಹಿನ್ನೆಲೆ, ಹೊಸ ವರ್ಷದ ಆರಂಭದಲ್ಲೇ ಮುಷ್ಕರ ನಡೆಸಿದರೆ, ಹಲವು ತೊಂದರೆಗಳಿಗೆ ಕಾರಣವಾಗಬಹುದು ಎನ್ನಲಾಗಿದೆ. ಅಲ್ಲದೇ ಸರ್ಕಾರದ ಕಾರ್ಯವೈಖರಿ ಕುರಿತು ಆಕ್ರೋಶ ವ್ಯಕ್ತಪಡಿಸಿರುವ, ಸಾರಿಗೆ ನೌಕರರ ಬೇಡಿಕೆಗೆ ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಿಲ್ಲ ಎಂದು ಆರೋಪಿಸುತ್ತಿದ್ದಾರೆ.


Click it and Unblock the Notifications