ಚಿನ್ನದ ಬೆಲೆಯಲ್ಲಿ ಏರಿಳಿತ ಮುಂದುವರೆದಿದೆ. ಗುರುವಾರ ಬರೋಬ್ಬರಿ 175 ರೂಪಾಯಿ ಕುಸಿತ ಕಂಡಿದ್ದ ಒಂದು ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ ಶುಕ್ರವಾರ 91 ರೂಪಾಯಿಗಳು ಏರಿಕೆಯಾಗಿತ್ತು. ಶನಿವಾರ ಮತ್ತೆ ಚಿನ್ನದ ಬೆಲೆ ಅಲ್ಪ ಕುಸಿತ ಕಂಡಿದ್ದು ಆಭರಣ ಪ್ರಿಯರಲ್ಲಿ ಸಂತಸ ಮೂಡಿಸಿದೆ. ಶನಿವಾರ ಒಂದು ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ 11 ರೂಪಾಯಿ ಕುಸಿತ ಕಂಡಿದೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆ ಅನಿಶ್ಚಿತತೆ, ಇಸ್ರೇಲ್ ಇರಾನ್ ನಡುವಿನ ಸಂಘರ್ಷ, ಉಕ್ರೇನ್ ರಷ್ಯಾ ನಡುವಿನ ಜಗಳ ಸೇರಿದಂತೆ ಅನೇಕ ಜಾಗತಿಕ ಕಾರಣಗಳಿಂದ ಚಿನ್ನದ ಬೇಡಿಕೆ ಹೆಚ್ಚಾಗಿತ್ತು. ಆದರೆ ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಜಗತ್ತಿನ ವಿವಿಧ ಷೇರುಮಾರುಕಟ್ಟೆಗಳಲ್ಲಿ ಭರ್ಜರಿ ಏರಿಕೆ ಕಂಡುಬಂದಿತ್ತು. ಚಿನ್ನದ ಬೆಲೆ ಒಂದೇ ದಿನ ಭಾರಿ ಕುಸಿತ ಕಂಡಿತ್ತು.

ಹಾಗಾದರೆ ಚಿನ್ನದ ಬೆಲೆಯಲ್ಲಿ ಏರಿಳಿತ ಇನ್ನೆಷ್ಟು ದಿನ ಇರಲಿದೆ. ಚಿನ್ನದ ಮೇಲೆ ಹೂಡಿಕೆ ಮಾಡಲು ಇದು ಸರಿಯಾದ ಸಮಯವೇ, ಚಿನ್ನದ ಬೆಲೆ ಮುಂದಿನ ದಿನಗಳಲ್ಲಿ ಏರಿಕೆ ಕಾಣುತ್ತಾ, ಹೂಡಿಕೆದಾರರು ಲಾಭ ಪಡೆಯಬಹುದಾ ಎನ್ನುವ ಪ್ರಶ್ನೆಗಳು ಮೂಡುವುದು ಸಹಜ, ಇದಕ್ಕೆಲ್ಲಾ ಉತ್ತರ ಇಲ್ಲಿದೆ.
ಚಿನ್ನದ ಬೆಲೆ ಏರಿಕೆಯಾಗುತ್ತಾ?
ಚಿನ್ನ ಕೇವಲ ಆಭರಣ ಉದ್ದೇಶಕ್ಕಾಗಿ ಮಾತ್ರವಲ್ಲ ಅದೊಂದು ಆಪತ್‌ಕಾಲದ ಬಂಧು ಎನ್ನುವ ಭಾವನೆ ಭಾರತೀಯರಲ್ಲಿದೆ. ಕಷ್ಟ ಬಂದಾಗ ಚಿನ್ನ ಅಡವಿಟ್ಟು ಹಣ ಹೊಂದಿಸಬಹುದು ಎನ್ನುವ ಧೈರ್ಯದ ಮೇಲೆ ಸಾಕಷ್ಟು ಭಾರತೀಯರು ಧೈರ್ಯವಾಗಿ ಚಿನ್ನವನ್ನು ಕೊಳ್ಳುತ್ತಾರೆ. ಚಿನ್ನದ ಬೆಲೆ ಸದ್ಯ ಏರಿಕೆಯ ಹಾದಿಯಲ್ಲಿದ್ದು, ಅಲ್ಪ ಪ್ರಮಾಣದ ಕುಸಿತಗಳು ಸಾಮಾನ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಚಿನ್ನದ ಬೆಲೆ ಎಂದಿಗೂ ಏರಿಕೆಯ ಹಾದಿಯಲ್ಲೇ ಸಾಗಲಿದೆ. ಮುಂದಿನ ವರ್ಷದ ದೀಪಾವಳಿ ವೇಳೆಗೆ ಶುದ್ದ ಚಿನ್ನದ ಬೆಲೆ 86,000 ರೂಪಾಯಿ ದಾಟುತ್ತದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ. ಆದರೆ ಸದ್ಯದ ಪರಿಸ್ಥಿತಿ ನೋಡಿದಾಗ ಇನ್ನೊಂದು ವರ್ಷದಲ್ಲಿ 24 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂಗೆ 90,000 ರೂಪಾಯಿ ದಾಟುವ ಸಾಧ್ಯತೆ ಕೂಡ ಇದೆ.
ಹೂಡಿಕೆ ಉದ್ದೇಶಕ್ಕಾಗಿಯಾಗಲಿ, ಆಭರಣ ಉದ್ದೇಶಕ್ಕಾಗಿ ಚಿನ್ನ ಖರೀದಿ ಮಾಡುವವರು ಧೈರ್ಯವಾಗಿ ಹೂಡಿಕೆ ಮಾಡಬಹುದು. ಯಾಕೆಂದರೆ ಚಿನ್ನದ ಬೆಲೆ ಏರಿಳಿತ ಸಾಮಾನ್ಯವಾದರೂ, ದೀರ್ಘಾವಧಿಯಲ್ಲಿ ಚಿನ್ನದ ಬೆಲೆ ಏರಿಕೆಯತ್ತಲೇ ಸಾಗುತ್ತದೆ.
ಶನಿವಾರ ಚಿನ್ನದ ಬೆಲೆ ಎಷ್ಟಿದೆ?
ಶನಿವಾರ ಒಂದು ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 7275 ರೂಪಾಯಿಗಳಾಗಿದೆ. ಶುಕ್ರವಾರಕ್ಕೆ ಹೋಲಿಕೆ ಮಾಡಿದರೆ 10 ರೂಪಾಯಿ ಕಡಿಮೆಯಾಗಿದೆ. 24 ಕ್ಯಾರಟ್ ಚಿನ್ನದ ಬೆಲೆ ಗ್ರಾಂಗೆ 11 ರೂಪಾಯಿ ಕಡಿಮೆಯಾಗಿದ್ದು, 7,936 ರೂಪಾಯಿ ಆಗಿತ್ತು.


Click it and Unblock the Notifications