ಫಿಫಾ ಫುಟ್‌ಬಾಲ್ ವಿಶ್ವಕಪ್ (FIFA World Cup 2026) ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಅಂತರರಾಷ್ಟ್ರೀಐ ಫುಟ್‌ಬಾಲ್‌ನ ಅತಿದೊಡ್ಡ ಸ್ಪರ್ಧೆಯಾದ ಫಿಫಾ ವಿಶ್ವಕಪ್ ಇದೀಗ ಕೆಲವೇ ತಿಂಗಳುಗಳಲ್ಲಿ ಆರಂಭವಾಗಲಿದೆ. 2026 ರ FIFA ವಿಶ್ವಕಪ್‌ಗೆ ಕೇವಲ 100 ದಿನಗಳಿರುವಾಗ, ಎರಡು ದೇಶಗಳ ನಡುವೆ ಸಂಘರ್ಷ ಆರಂಭವಾಗಿದೆ. ಅಮೆರಿಕಾ, ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳ ನಡೆಸಿದ್ದ, ಸದ್ಯ ಯುದ್ಧದ ಭೀತಿ ಎದುರಾಗಿದೆ. ಅಮೆರಿಕಾ ಮತ್ತು ಇರಾನ್ (Amercia vs Iran) ನಡುವಿನ ಸಂಘರ್ಷ, ಇದೀಗ ಫಿಫಾ ವಿಶ್ವಕಪ್ ಮೇಲೂ ತಟ್ಟುವ ನಿರೀಕ್ಷೆಯಿದೆ. ಈ ಮಧ್ಯೆ ದೊಡ್ಡ ಗೊಂದಲವೊಂದು ಸೃಷ್ಟಿಯಾಗಿದೆ.

ಹೌದು, ಅಮೆರಿಕಾ ಮತ್ತು ಇಸ್ರೇಲ್ ನಡೆಸಿದ ದಾಳಿಯ ನಂತರ ಇರಾನ್‌ನಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಅಲ್ಲದೇ ಈ ಘರ್ಷಣೆ ಪರಿಣಾಮ 2026ರ ಫಿಫಾ ವಿಶ್ವಕಪ್‌ನಲ್ಲಿ ಇರಾನ್ ಭಾಗವಹಿಸುತ್ತಾ? ಇಲ್ವಾ? ಎಂಬ ದೊಡ್ಡ ಪ್ರಶ್ನೆ ಹುಟ್ಟಿದೆ. ಮಧ್ಯಪ್ರಾಚ್ಯದಲ್ಲಿ ಭುಗಿಲೆದ್ದಿರುವ ಈ ಸಂಘರ್ಷ, ಇರಾನ್ ಈ ಬಾರಿಯ ವಿಶ್ವಕಪ್‌ನಲ್ಲಿ ಆಡಲಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಶುರುವಾಯ್ತು ಗೊಂದಲ!
ಫುಟ್‌ಬಾಲ್ ವಿಶ್ವಕಪ್ ಆರಂಭಕ್ಕೆ ಇನ್ನೇನು 100 ದಿನಗಳು ಬಾಕಿ ಇದೆ. ಈ ಮಧ್ಯೆ ಘರ್ಷಣೆಯೊಂದು ಆರಂಭವಾಗಿದ್ದು, "ಟೀಂ ಮೆಲ್ಲಿ" ಎಂದೇ ಜನಪ್ರಿಯವಾಗಿರುವ ಇರಾನ್ ರಾಷ್ಟ್ರೀಯ ತಂಡದ ಆಟದ ಬಗ್ಗೆ ಗೊಂದಲ ಶುರುವಾಗಿದೆ. ಈ ಸಂಘರ್ಷ ಆರಂಭವಾದ ಕೆಲವೇ ದಿನಗಳಲ್ಲಿ, ವಿಶ್ವಕಪ್ ಬಹಿಷ್ಕರಿಸುವ ಕುರಿತು ಇರಾನ್‌ನಲ್ಲಿ ಚರ್ಚೆಗಳು ಭುಗಿಲೆದ್ದಿದೆ ಎನ್ನಲಾಗಿದೆ. ಈ ಹಿನ್ನೆಲೆ ಇರಾನ್ ಫುಟ್‌ಬಾಲ್ ವಿಶ್ವಕಪ್‌ನಲ್ಲಿ ಆಡುವ ಬಗ್ಗೆ ಭಾರೀ ಅನುಮಾನಗಳು ಸೃಷ್ಟಿಯಾಗಿದೆ.
ಈ ಕುರಿತು ಇರಾನ್ ಫುಟ್‌ಬಾಲ್ ಫೆಡರೇಶನ್ ಅಧ್ಯಕ್ಷ ಮೆಹ್ದಿ ತಾಜ್, ಇರಾನ್ ದೂರದರ್ಶನದಲ್ಲಿ ಮಾತನಾಡಿ ಗಂಭೀರ ಧ್ವನಿಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಪ್ರಸ್ತುತ ಪರಿಸ್ಥಿತಿಯಲ್ಲಿ ಸ್ಪಷ್ಟವಾಗಿ ಹೇಳುವುದಾದರೆ, ಈ ದಾಳಿ ಮತ್ತು ಕ್ರೂರತೆಯೊಂದಿಗೆ ವಿಶ್ವಕಪ್ ಅನ್ನು ಭರವಸೆಯಿಂದ ನೋಡಲು ಸಾಧ್ಯವಿಲ್ಲ," ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲದೇ ಉದ್ವಿಗ್ನತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಇರಾನ್‌ನ ದೇಶೀಯ ಫುಟ್‌ಬಾಲ್ ಲೀಗ್ ಅನ್ನು ಸಹ ಸ್ಥಗಿತಗೊಳಿಸಲಾಗಿದೆ ಎಂದು ತಾಜ್ ದೃಢಪಡಿಸಿದರು.
ಯುದ್ಧದ ಆರಂಭ
ಫೆಬ್ರವರಿ 28, 2026 ರಂದು ಅಮೆರಿಕಾ ಮತ್ತು ಇಸ್ರೇಲ್ ಒಟ್ಟಾಗಿ ಇರಾನ್ ಮೇಲೆ ಭೀಕರವಾಗಿ ವಾಯುದಾಳಿಯನ್ನು ಆರಂಭಿಸಿತ್ತು. ಅಂದಿನಿಂದ ಶುರುವಾದ ಕದನ, ಇದೀಗ ಪೂರ್ಣ ಪ್ರಮಾಣದ ಯುದ್ಧವಾಗಿ ಬದಲಾಗಿದೆ. ಇಸ್ರೇಲ್, ಯುಸ್ ದಾಳಿಗೆ ಇರಾನ್‌ನ ಸುಪ್ರೀಂ ಲೀಡರ್ ಆಯತೊಲ್ಲಾ ಆಲಿ ಖಮೇನಿ ಹತ್ಯೆಯಾದರು. ಆ ನಂತರ ಪ್ರತೀಕಾರಕ್ಕಾಗಿ ಇರಾನ್, ನಿರಂತರ ದಾಳಿ ದಾಳಿ ನಡೆಸುತ್ತಲೇ ಇದೆ.
ಇದೀಗ ಅಮೆರಿಕಾ, ಕೆನಡಾ ಮತ್ತು ಮೆಕ್ಸಿಕೋ ಸಂಯುಕ್ತವಾಗಿ ಫಿಫಾ ವಿಶ್ವಕಪ್ 2026 ರ ಆತಿಥೇಯ ವಹಿಸಿರುವ ಕಾರಣ, ಇರಾನ್ ಈಗಾಗಲೇ ಕ್ವಾಲಿಫೈ ಆಗಿದ್ದು ಗ್ರೂಪ್ ಜಿ ಯಲ್ಲಿ ಬೆಲ್ಜಿಯಂ, ಈಜಿಪ್ಟ್, ನ್ಯೂಜಿಲೆಂಡ್ ತಂಡಗಳೊಂದಿಗೆ ಸ್ಪರ್ಧಿಸಲಿದೆ. ಆದರೆ ಆಡುತ್ತಾ? ಇಲ್ವಾ? ಎಂದು ಕಾದು ನೋಡಬೇಕಿದೆ.


Click it and Unblock the Notifications