ಭಾರತದ ಅತ್ಯಂತ ಸಿರಿವಂತ ಉದ್ಯಮಿ ಗೌತಮ್ ಅದಾನಿ ಅವರ ಕಿರಿಯ ಪುತ್ರ ಜೀತ್ ಅದಾನಿ, ಖ್ಯಾತ ವಜ್ರದ ವ್ಯಾಪಾರಿ ಜೈಮಿನ್ ಶಾ ಅವರ ಪುತ್ರಿ ದೀವಾ ಜೈಮಿನ್ ಶಾ ಅವರನ್ನು ವರಿಸಲಿದ್ದಾರೆ. ಅಂದಹಾಗೆ ಇವರಿಬ್ಬರ ನಿಶ್ವಿತಾರ್ಥ 2023ರ ಮಾರ್ಚ್ 12ರಂದು ನೆರವೇರಿತ್ತು.
ಇತ್ತೀಚೆಗೆ ತಾನೆ ಭಾರತ ಅಂಬಾನಿ ಕುಟುಂಬದ ಅದ್ದೂರಿ ವಿವಾಹಕ್ಕೆ ಸಾಕ್ಷಿಯಾಗಿತ್ತು. ಮಳೆ ನಿಂತರೂ ಮಳೆ ಹನಿ ನಿಂತಿಲ್ಲ ಎಂಬಂತೆ ಏಷ್ಯಾದ ನಂ.೧ ಸಿರಿವಂತ ಎಂದು ಖ್ಯಾತಿ ಪಡೆದ ಮುಖೇಶ್ ಅಂಬಾನಿಯ ಕಿರಿಯ ಪುತ್ರನ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಮದುವೆ ಆರು ದಿನಗಳ ಕಾಲ ಅದ್ದೂರಿಯಾಗಿ ನಡೆದಿತ್ತು. ಮುಕೇಶ್ ಅಂಬಾನಿ ಮಗನ ಮದುವೆಗೆ 4 ರಿಂದ 5 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ವರದಿಯಾಗಿತ್ತು.

ಇದೀಗ ಅದಾನಿ ಕಿರಿಯ ಪುತ್ರನ ಮದುವೆ ಅನಂತ್ ಅಂಬಾನಿ ಮದುವೆಯನ್ನು ಮೀರಿಸಲಿದೆಯಾ ಎಂಬ ಪ್ರಶ್ನೆಗಳು ಕೇಳಿಬರುತ್ತಿದೆ.
ಹೌದು ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರು ತಮ್ಮ ಪತ್ನಿ ಪ್ರೀತಿ ಅದಾನಿ ಮತ್ತು ಹಿರಿಯ ಮಗ ಕರಣ್ ಅದಾನಿ ಅವರೊಂದಿಗೆ ಜನವರಿ 21 ರಂದು ಮಂಗಳವಾರ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾ ಕುಂಭ ಉತ್ಸವದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ, ಅದಾನಿ ಅವರು ತಮ್ಮ ಕಿರಿಯ ಮಗ ಜೀತ್ ಅದಾನಿ ಅವರು ಸಿದ್ಧರಾಗಿದ್ದಾರೆ ಎಂದು ಹೇಳಿದ್ದು ಮದುವೆಯ ದಿನಾಂಕವನ್ನು ಬಹಿರಂಗಪಡಿಸಿದ್ದಾರೆ. ಫೆಬ್ರವರಿ 7 ರಂದು ಇವರಿಬ್ಬರ ವಿವಾಹ ನಡೆಯಲಿದ್ದು ಯಾವ ಸ್ಥಳದಲ್ಲಿ ಮದುವೆ ಎಂಬುವುದು ಇನ್ನು ಬಹಿರಂಗಪಡಿಸಿಲ್ಲ. ಮದುವೆ ಕಾರ್ಯಕ್ರಮ ಖಾಸಗಿ ಕಾರ್ಯಕ್ರಮ ಅಂದ್ರೂ ಇದಕ್ಕಾಗಿ ಹಣ ನೀರಿನಂತೆ ಹರಿಯುವುದು ಖಂಡಿತಾ.!
ಜೀತ್ ಮತ್ತು ದೀವಾ ಅವರು ಮಾರ್ಚ್ 2023 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಅಂದಿನಿಂದ ಇಂದಿನವರೆಗೆ ತಮ್ಮ ಖಾಸಗಿ ಜೀವನವನ್ನು ಗೌಪ್ಯವಾಗಿರಿಸಿಕೊಂಡಿದ್ದಾರೆ. ಅದ್ರೂ ಅವರ ವಿವಾಹವು ಅದರ ಭವ್ಯತೆ ಮತ್ತು ಖ್ಯಾತ ವ್ಯಕ್ತಿಗಳ ಭಾಗವಹಿಸುವಿಕೆಯ ಕಾರಣದಿಂದ ಸುದ್ದಿ ಮಾಧ್ಯಮಗಳಲ್ಲಿ ಸುರಿಮಳೆಯಂತೆ ಹರಿದುಬರುತ್ತಿದೆ. ಕೈಲಿ ಜೆನ್ನರ್, ಕೆಂಡಲ್ ಜೆನ್ನರ್, ಸೆಲೀನಾ ಗೋಮೆಜ್ ಮತ್ತು ಸಿಡ್ನಿ ಸ್ವೀನಿ ಮುಂತಾದ ಅಂತರಾಷ್ಟ್ರೀಯ ಖ್ಯಾತನಾಮರುಗಳು ಮದುವೆಗೆ ಆಗಮಿಸಲಿದ್ದಾರೆ ಎಂಬ ವರದಿಗಳಿವೆ. ಅಲ್ಲದೇ ಟ್ರ್ಯಾವಿಸ್ ಸ್ಕಾಟ್ ಮತ್ತು ಹನಿ ಸಿಂಗ್ ಅವರು ಸಂಗೀತ ಕಾರ್ಯಕ್ರಮಗಳನ್ನು ನಡೆಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಇದರ ಜೊತೆಗೆ ಪ್ರಿ-ವೆಡ್ಡಿಂಗ್ ಕಾರ್ಯಕ್ರಮಕ್ಕಾಗಿ ಟೇಲರ್ ಸ್ವಿಫ್ಟ್ ಅವರನ್ನು ಕರೆತರುವ ಮಾತುಕತೆಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ.
ವರದಿಗಳ ಪ್ರಕಾರ, ಮದುವೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅತಿಥಿಗಳಿಗಾಗಿ 1,000 ಐಷಾರಾಮಿ ಕಾರುಗಳನ್ನು ಒಳಗೊಂಡಿರುತ್ತದೆ. ಜೊತೆಗೆ 58 ದೇಶಗಳ ಬಾಣಸಿಗರಿಂದ ಅದ್ದೂರಿ ಭೋಜನದ ಅನುಭವವನ್ನು ಒಳಗೊಂಡಿರುತ್ತದೆ ಎನ್ನಲಾಗಿದೆ. ಮದುವೆಯ ಅಲಂಕಾರವು ಸಾವಿರಾರು ವಿಶೇಷ ಲಿಲ್ಲಿಗಳನ್ನುಒಳಗೊಂಡಿದ್ದು 20,000 ರಿಂದ 50,000 ಕಲಾವಿದರು ರಚಿಸಿದ ದಾಖಲೆ ಮುರಿಯುವ ರಂಗೋಲಿ ಹೈಲೈಟ್ ಆಗಿರುತ್ತದೆ. ಜೊತೆಗೆ ಡ್ರೋನ್ ಪ್ರದರ್ಶನವು ವಿವಾಹ ವಾತಾವರಣಕ್ಕೆ ಮಾಂತ್ರಿಕತೆ ನೀಡಲಿದೆ ಎಂದು ವರದಿಯಾಗಿದೆ.
ಈ ಜೋಡಿಗಳ ವಿವಾಹಪೂರ್ವ ಉತ್ಸವಗಳು 2024 ರ ಡಿಸೆಂಬರ್ ನಲ್ಲಿ ಉದಯಪುರದಲ್ಲಿ ನಡೆದಿತ್ತು. ಅಹಮದಾಬಾದ್‌ನಲ್ಲಿ ನಡೆದ ಅವರ ನಿಶ್ಚಿತಾರ್ಥವು ಖಾಸಗಿ ಕಾರ್ಯಕ್ರಮವಾಗಿತ್ತು.
ಜೀತ್ ಈಗ ಅದಾನಿ ಏರ್‌ಪೋರ್ಟ್ಸ್ ವಿಭಾಗ ಮತ್ತು ಅದಾನಿ ಡಿಜಿಟಲ್ ಲ್ಯಾಬ್‌ಗಳನ್ನು ಮುನ್ನಡೆಸುತ್ತಿದ್ದಾರೆ, ಇದುದಾನಿ ಗ್ರೂಪ್ ವಿಸ್ತರಣೆಗೆ ಅವರ ಕ್ರಿಯಾತ್ಮಕ ಕೊಡುಗೆಗಳನ್ನು ಪ್ರತಿಬಿಂಬಿಸುತ್ತದೆ. ದೊಡ್ಡ ಪ್ರಮಾಣದ ವ್ಯವಹಾರಗಳನ್ನು ನಿರ್ವಹಿಸುವುದರ ಹೊರತಾಗಿ, ಜೀತ್ ಅವರಿಗೆ ಗಿಟಾರ್ ನುಡಿಸುವುದು, ಐಷಾರಾಮಿ ಸ್ಪೋರ್ಟ್ಸ್ ಕಾರುಗಳನ್ನು ಸಂಗ್ರಹಿಸುವುದು ಹವ್ಯಾಸವಾಗಿದ್ದು ಇತ್ತೀಚೆಗೆ ಅವರು ಪೈಲಟ್ ಆಗಿ ವಿಮಾನ ಹಾರಾಟ ಮಾಡುವ ಕೌಶಲವನ್ನು ಹಂಚಿಕೊಂಡಿದ್ದರು.
ಒಟ್ಟಾರೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಯೊಂದಿಗೆ ಅದಾನಿ ಪುತ್ರನ ವಿವಾಹವನ್ನು ಹೋಲಿಕೆಗಳನ್ನು ಮಾಡಲಾಗುತ್ತಿದ್ದು, ಈ ಮದುವೆಯೂ ಈ ವರ್ಷದಲ್ಲಿ ಹೆಚ್ಚು ಸದ್ದು ಮಾಡಿದ ಕಾರ್ಯಕ್ರಮಗಳಲ್ಲಿ ಒಂದಾಗುತ್ತಾ ಎನ್ನುವ ಕುತೂಹಲ ಎಲ್ಲರದ್ದು.!


Click it and Unblock the Notifications