ಬೆಂಗಳೂರು, ಜುಲೈ 14: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಜುಲೈ 23ರಂದು ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಬಾರಿಯ ಬಜೆಟ್ ಬಗ್ಗೆ ತಜ್ಞರ ವಲಯದಲ್ಲಿ ಸಾಕಷ್ಟು ಚರ್ಚೆಗಳು, ವಿಶ್ಲೇಷಣೆಗಳು ನಡೆಯುತ್ತಿದ್ದು, ಯಾವ ವಲಯಕ್ಕೆ ಯಾವ ರೀತಿಯ ಬರಪೂರ ಕೊಡುಗೆ ದೊರೆಯಬಹುದು ಎನ್ನುವ ಲೆಕ್ಕಾಚಾರಗಳು ಶುರುವಾಗಿದೆ.
ಹೀಗಿರುವಾಗ, ಮೋದಿ ಅವರ 3.0 ಸರ್ಕಾರದಲ್ಲಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಿರುವ ಈ ಬಾರಿಯ ಬಜೆಟ್ ಭಾರತವನ್ನು 2047ರಲ್ಲಿ ಅಭಿವೃದ್ಧಿಯ ದೇಶವನ್ನಾಗಿ ರೂಪಿಸುವಲ್ಲಿ ರೋಡ್‌ಮ್ಯಾಪ್ ಆಗಲಿದೆ ಎಂದು ಹೇಳಲಾಗುತ್ತದೆ. ಇತ್ತೀಚೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ತಿನಲ್ಲಿ ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡಿದ ವೇಳೆ, ದೇಶದ ಆರ್ಥಿಕ ಬಲವರ್ಧನೆಗೆ ಐತಿಹಾಸಿಕ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಲಿದೆ ಎಂದು ಹೇಳಿದ್ದರು.

ಈ ಹಿನ್ನೆಲೆಯಲ್ಲಿ ಜು.23ರಂದು ಮಂಡಿಸುವ ಬಜೆಟ್‌ನಲ್ಲಿ ಕೈಗಾರಿಕೆ, ರೈತರು, ತೆರಿಗೆದಾರರು, ಮಧ್ಯಮ ವರ್ಗದವರು ಸೇರಿದಂತೆ ಎಲ್ಲ ವಲಯ, ವರ್ಗದ ಜನರು ಕೂಡ ಗಮನಾರ್ಹವಾದ ತೆರಿಗೆ ವಿನಾಯಿತಿ, ಪ್ರೋತ್ಸಾಹದಾಯಕ ಕ್ರಮಗಳನ್ನು ಎದುರು ನೋಡುತ್ತಿದ್ದಾರೆ. ಮಧ್ಯಮ ವರ್ಗದ ತೆರಿಗೆದಾರರಿಗೆ ಸಂಬಂಧಿಸಿದಂತೆ 80ಸಿ ಕಡಿತ ಹಾಗೂ ಸ್ಟಾಂಡರ್ಡ್ ಡಿಡಕ್ಷನ್ ಮಿತಿಯನ್ನು ಹೆಚ್ಚಿಸಬೇಕೆಂಬುದು ಪ್ರಮುಖ ಬೇಡಿಕೆಯಾಗಿದೆ. ಹೀಗಾಗಿ, ತೆರಿಗೆ ಕಡಿತದ ಬಗ್ಗೆ ಹೆಚ್ಚಿನ ಮಂದಿ ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ.
ಬಸಿಝ್ ಫಂಡ್ ಸರ್ವೀಸ್ ಪ್ರೈವೆಟ್ ಲಿಮಿಟೆಡ್‌ನ ಸ್ಥಾಪಕ ಆದಿತ್ಯ ಶೇಷಾದ್ರಿನಾಥನ್ ಅವರ ಪ್ರಕಾರ, 80ಸಿ ಸೆಕ್ಷನ್ ಕಡಿತದ ಮಿತಿಯನ್ನು 2ಲಕ್ಷಕ್ಕೆ ಏರಿಸಬೇಕು. 2023ರ ಏಪ್ರಿಲ್ ನಂತರ ಹೂಡಿಕೆದಾರರ ಹಂಚಿಕೆಗಳಲ್ಲಿ ಈಕ್ವಿಟಿಗಳ ಕಡೆಗೆ ಗಮನಾರ್ಹವಾದ ಬದಲಾವಣೆ ಕಾಣುತ್ತಿದೆ. ಹೀಗಾಗಿ, ಹೂಡಿಕೆದಾರರು ಮ್ಯುಚುವಲ್ ಫಂಡ್ ಸಾಲದಲ್ಲಿ ಕೆಲವೊಂದು ಪ್ರೋತ್ಸಾಹದಾಯಕ ಕ್ರಮಗಳನ್ನು ನಿರೀಕ್ಷೆ ಮಾಡುತ್ತಿದ್ದಾರೆ. ಜತೆಗೆ ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆಯ ಫಲಾನುಭವಿಗಳ ನೆಲೆಯನ್ನು ವಿಸ್ತರಿಸುವ ಸಾಧ್ಯತೆಯಿದೆ ಎನ್ನುತ್ತಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೂಡ ಈ ಬಾರಿಯ ಬಜೆಟ್‌ನ್ನು ದೇಶದ ಭವಿಷ್ಯದ ಆರ್ಥಿಕ ಬೆಳವಣಿಗೆ ದೊಡ್ಡ ಬುನಾದಿ ಹಾಕುವ ನಿಟ್ಟಿನಲ್ಲಿ ಏನೆಲ್ಲ ಆರ್ಥಿಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಹಲವು ಕ್ಷೇತ್ರಗಳ ತಜ್ಞರೊಂದಿಗೆ ಚರ್ಚೆ ನಡೆಸಿದ್ದಾರೆ. ದೇಶದ ಹಣದುಬ್ಬರವನ್ನು ನಿಯಂತ್ರಿಸುವ ಜತೆಗೆ ದೇಶದ ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸುವ ಮೂಲಕ ಸಾಮಾನ್ಯ ಜನರಿಗೆ ತೆರಿಗೆ ವಿನಾಯಿತಿ ಘೋಷಿಸುವಂತೆ ಹಲವು ತಜ್ಞರು ಅರ್ಥ ಸಚಿವರಿಗೆ ಸಲಹೆಗಳನ್ನು ನೀಡಿರುವುದಾಗಿ ವರದಿಯಾಗಿದೆ.


Click it and Unblock the Notifications