2026-27ನೇ ಹಣಕಾಸಿನ ವರ್ಷದ ಬಜೆಟ್ ಮಂಡನೆ ಐತಿಹಾಸಿಕ ಪುಟಗಳಲ್ಲಿ ಸೇರುತ್ತೆ. ಯಾಕೆಂದರೆ ಇದೇ ಮೊದಲ ಬಾರಿ ಫೆಬ್ರವರಿ 1 ಬಜೆಟ್ ಮಂಡನೆ, ಭಾನುವಾರ ಬಂದಿದ್ದು ಅಂದೇ ಬಜೆಟ್ ಮಂಡನೆಯಾಗಲಿದೆ. ಇದು ಇತಿಹಾಸದಲ್ಲಿ ಸೇರುವ ಕ್ಷಣವಾಗಿದೆ. ಈ ಬಜೆಟ್ ನಿರ್ಮಲಾ ಸೀತಾರಾಮನ್ ಅವರ ಒಂಬತ್ತನೇ ಸತತ ಕೇಂದ್ರ ಬಜೆಟ್ ಆಗಿರಲಿದೆ. ಈ ಮೂಲಕ ಅವರು ಸತತವಾಗಿ ಹೆಚ್ಚು ಬಜೆಟ್ ಮಂಡಿಸಿದ ಮೊದಲ ಮಹಿಳಾ ಹಣಕಾಸು ಸಚಿವೆ ಎಂಬ ದಾಖಲೆ ನಿರ್ಮಿಸಲಿದ್ದಾರೆ. ಸ್ವಾತಂತ್ರ್ಯಾನಂತರದ 88ನೇ ಕೇಂದ್ರ ಬಜೆಟ್ ಇದಾಗಿದ್ದು, ಭಾರತದ ಆರ್ಥಿಕ ನೀತಿಯ ದೀರ್ಘ ಪ್ರಯಾಣವನ್ನು ಇದು ತೋರಿಸುತ್ತದೆ. ಹಾಗಾದ್ರೆ ಆ ದಿನ ಷೇರು ಮಾರುಕಟ್ಟೆ ತೆರೆದಿರುತ್ತದಾ? ಈ ಪ್ರಶ್ನೆಗೆ ಉತ್ತರ ತಿಳಿಯಲು ಮುಂದೆ ಓದಿ.

ಫೆಬ್ರವರಿ 1, 2026 ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆ ಬಗ್ಗೆ ಹೂಡಿಕೆದಾರರಲ್ಲಿ ಕುತೂಹಲ ಹೆಚ್ಚಾಗಿದೆ. ಕಾರಣ, ಆ ದಿನ ಭಾನುವಾರವಾಗಿರುವುದು. ಸಾಮಾನ್ಯವಾಗಿ ಭಾರತದಲ್ಲಿ ಶನಿವಾರ ಮತ್ತು ಭಾನುವಾರ ಷೇರು ಮಾರುಕಟ್ಟೆಗಳು ಕಾರ್ಯನಿರ್ವಹಿಸುವುದಿಲ್ಲ. ಆದರೆ ಬಜೆಟ್ ದಿನ ಮಾರುಕಟ್ಟೆ ತೆರೆಯಲಾಗುತ್ತದೆಯೇ ಎಂಬ ಪ್ರಶ್ನೆ ಈಗ ವ್ಯಾಪಕವಾಗಿ ಚರ್ಚೆಯಲ್ಲಿದೆ.
ಮೂಲಗಳ ಪ್ರಕಾರ, ಮುಂಬರುವ ಬಜೆಟ್ ಅಧಿವೇಶನದ ಸಿದ್ಧತೆಗಳ ಕುರಿತು ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ ಸಭೆಯನ್ನು ಬುಧವಾರ ನಡೆಸಲು ನಿರ್ಧರಿಸಲಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026-27ನೇ ಆರ್ಥಿಕ ವರ್ಷದ ಕೇಂದ್ರ ಬಜೆಟ್ ಅನ್ನು ಫೆಬ್ರವರಿ 1ರಂದು ಮಂಡಿಸಲಿದ್ದಾರೆ. ಈ ದಿನ ಭಾನುವಾರವಾಗಿರುವುದರಿಂದ, ಷೇರು ಮಾರುಕಟ್ಟೆ ತೆರೆಯುವ ಕುರಿತು ಸ್ಪಷ್ಟತೆ ಇಲ್ಲದೆ ಗೊಂದಲ ನಿರ್ಮಾಣವಾಗಿದೆ.
ಹಲವು ಮಾಧ್ಯಮ ವರದಿಗಳ ಪ್ರಕಾರ, ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (ಎನ್‌ಎಸ್‌ಇ) ಭಾನುವಾರದಂದು ಇಕ್ವಿಟಿ ಮಾರುಕಟ್ಟೆಗಳನ್ನು ತೆರೆಯುವ ಸಾಧ್ಯತೆಯನ್ನು ಪರಿಶೀಲಿಸುತ್ತಿದೆ. ಆದರೆ ಈ ಕುರಿತು ಇನ್ನೂ ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ. ಹೀಗಾಗಿ ಈ ವಿಚಾರವನ್ನು ಗುಡ್‌ರಿಟರ್ನ್ಸ್ ಕೂಡ ಸ್ವತಂತ್ರವಾಗಿ ಹೇಳಲಾಗುವುದಿಲ್ಲ. ಪ್ರಸ್ತುತ ಈ ವಿಷಯ ಆಂತರಿಕ ಚರ್ಚೆ ಮತ್ತು ಪರಿಶೀಲನೆಯ ಹಂತದಲ್ಲಿದೆ ಎನ್ನಲಾಗಿದೆ. ಹೀಗಾಗಿ ಹೂಡಿಕೆದಾರರು ಅಧಿಕೃತ ಪ್ರಕಟಣೆಗೆ ಕಾಯಬೇಕಾಗಿದೆ.
ಭಾರತದಲ್ಲಿ ಸಾಮಾನ್ಯವಾಗಿ ವಾರಾಂತ್ಯಗಳಲ್ಲಿ ಮಾರುಕಟ್ಟೆಗಳು ಮುಚ್ಚಿರುತ್ತವೆ. ಆದರೂ, ಬಜೆಟ್ ದಿನ ರಜೆಯಾದರೂ ಮಾರುಕಟ್ಟೆ ತೆರೆಯುವುದು ಹೊಸ ವಿಷಯವಲ್ಲ. ಹಿಂದೆ 2015ರಲ್ಲಿ ಮತ್ತು 2026ರಲ್ಲಿ ಬಜೆಟ್ ಶನಿವಾರದಂದು ಮಂಡನೆಯಾದಾಗ ಷೇರು ಮಾರುಕಟ್ಟೆಗಳು ಕಾರ್ಯನಿರ್ವಹಿಸಿದ್ದವು. ಬಜೆಟ್ ದಿನ ಮಾರುಕಟ್ಟೆ ತೆರೆಯುವುದರಿಂದ ಷೇರುಗಳ ಬೆಲೆ ಸರಿಯಾದ ರೀತಿಯಲ್ಲಿ ನಿರ್ಧಾರವಾಗಲು ಸಹಾಯವಾಗುತ್ತದೆ. ಜೊತೆಗೆ ಅತಿಯಾದ ಚಂಚಲತೆ ಹಾಗೂ ರಜೆ ನಂತರ ಒಂದೇ ವೇಳೆ ಆಗುವ ತೀವ್ರ ಪ್ರತಿಕ್ರಿಯೆಗಳನ್ನು ತಪ್ಪಿಸಲು ಇದು ಉಪಯುಕ್ತವಾಗುತ್ತದೆ.
ಈವರೆಗೆ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (ಬಿಎಸ್‌ಇ) ಫೆಬ್ರವರಿ 1ರಂದು ಮಾರುಕಟ್ಟೆ ತೆರೆಯುವ ಕುರಿತು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಭಾನುವಾರದಂದು ವಹಿವಾಟು ನಡೆಸಬೇಕಾದರೆ ಎನ್‌ಎಸ್‌ಇ ಮತ್ತು ಬಿಎಸ್‌ಇ ಎರಡೂ ಸಮನ್ವಯದಿಂದ ಕಾರ್ಯನಿರ್ವಹಿಸುವುದು ಅತ್ಯಂತ ಅಗತ್ಯ. ತಾಂತ್ರಿಕ ಸಿದ್ಧತೆ, ಬ್ಯಾಂಕಿಂಗ್ ವ್ಯವಸ್ಥೆ ಮತ್ತು ವಹಿವಾಟಿನ ಸುಗಮತೆ ಎಲ್ಲವೂ ಸರಿಯಾಗಿರಬೇಕಾಗುತ್ತದೆ.
ಸಾಂಪ್ರದಾಯಿಕವಾಗಿ, ಕೇಂದ್ರ ಬಜೆಟ್ ಮಂಡನೆಯ ಮೊದಲು ಆರ್ಥಿಕ ಸಮೀಕ್ಷೆಯನ್ನು ಬಿಡುಗಡೆ ಮಾಡಲಾಗುತ್ತದೆ. ನಂತರ ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಹಾಗೂ ಹಿರಿಯ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡುತ್ತಾರೆ. ಬಜೆಟ್ ದಿನ ತೆರಿಗೆ ನೀತಿ, ಸರ್ಕಾರಿ ವೆಚ್ಚ, ಅಭಿವೃದ್ಧಿ ಯೋಜನೆಗಳು ಮತ್ತು ಸುಧಾರಣೆಗಳ ಘೋಷಣೆಯ ಕಾರಣ ಷೇರು ಮಾರುಕಟ್ಟೆಯಲ್ಲಿ ಹೆಚ್ಚು ಚಂಚಲತೆ ಕಂಡುಬರುವುದು ಸಾಮಾನ್ಯ.
ಪ್ರಸ್ತುತ ಸ್ಥಿತಿಯಲ್ಲಿ, ಬಿಎಸ್‌ಇ ಮತ್ತು ಎನ್‌ಎಸ್‌ಇ ಎರಡೂ ವಾರಾಂತ್ಯಗಳಲ್ಲಿ ಅಧಿಕೃತವಾಗಿ ಮುಚ್ಚಿರುತ್ತವೆ. ಫೆಬ್ರವರಿ 1, 2026ರಂದು ಭಾನುವಾರ ವಹಿವಾಟು ನಡೆಯುತ್ತದೆ ಎಂದು ದೃಢಪಡಿಸುವ ಯಾವುದೇ ಅಧಿಕೃತ ಸುತ್ತೋಲೆ ಅಥವಾ ಪ್ರಕಟಣೆ ಇನ್ನೂ ಹೊರಬಿದ್ದಿಲ್ಲ. ಆದ್ದರಿಂದ ಹೂಡಿಕೆದಾರರು ಮತ್ತು ಸಾರ್ವಜನಿಕರು ವದಂತಿಗಳಿಗೆ ಬದಲು ವಿನಿಮಯ ಕೇಂದ್ರಗಳ ಅಧಿಕೃತ ಘೋಷಣೆಗೆ ಕಾಯುವುದು ಉತ್ತಮ. ಮುಂದಿನ ದಿನಗಳಲ್ಲಿ ಈ ಕುರಿತು ಸ್ಪಷ್ಟ ನಿರ್ಧಾರ ಹೊರಬೀಳುವ ನಿರೀಕ್ಷೆಯಿದೆ.


Click it and Unblock the Notifications