ಸಾಫ್ಟ್‌ವೇರ್ ದಿಗ್ಗಜ ಝೋಹೋ (Zoho) ಕಾರ್ಪ್‌ನ ಸ್ಥಾಪಕ ಶ್ರೀಧರ್ ವೆಂಬು ಅವರು ಝೋಹೋ ನ ಸಿಇಒ ಹುದ್ದೆಯಿಂದ ಕೆಳಗಿಳಿದಿದ್ದು ತಮ್ಮ ಈ ನಿರ್ಧಾರವನ್ನು ತಮ್ಮ ಅಧಿಕೃತ ಎಕ್ಸ್'ನಲ್ಲಿನ ಪೋಸ್ಟ್'ನಲ್ಲಿ ಪ್ರಕಟಿಸಿದ್ದರು. ಆದರೆ ಅವರು ಸಿಇಒ ಹುದ್ದೆ ತ್ಯಜಿಸಿದ್ದು, ರಾಜಕೀಯ ಪ್ರವೇಶಕ್ಕಾಗಿಯೇ? ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆಯಾಗಿದ್ದು ಇದಕ್ಕೆ ಶ್ರೀಧರ್ ವೆಂಬು ಅವರೇ ಖುದ್ದು ಉತ್ತರ ನೀಡಿದ್ದಾರೆ.
"ನಾನು ರಾಜಕೀಯಕ್ಕೆ ಸೇರುತ್ತಿದ್ದೇನೆ ಎಂಬ "ಸುದ್ದಿ" ಹಬ್ಬಿರುವುದು ನನಗೆ ತಿಳಿದುಬಂತು. ಇದನ್ನು ಕೇಳಿ ನನಗೆ ನಗು ತಡೆಯಲು ಸಾಧ್ಯವಾಗಲಿಲ್ಲ!" ಎಂದು ಅವರು X (ಹಿಂದಿನ ಟ್ವಿಟರ್) ನಲ್ಲಿ ಹಾಸ್ಯಾಸ್ಪದವಾಗಿ ಬರೆದುಕೊಂಡಿರುವುದು ಮಾತ್ರವಲ್ಲದೇ ರಾಜಕೀಯಕ್ಕೆ ಸೇರುವ ಯಾವುದೇ ಯೋಜನೆಗಳಿಲ್ಲ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಸ್ಪಷ್ಟವಾಗಿ ಈ ವದಂತಿಯನ್ನು ನಿರಾಕರಿಸಿದ್ದಾರೆ.

Zohoದಲ್ಲಿ ಶ್ರೀಧರ್ ವೆಂಬು ಅವರ ಯೋಜನೆಗಳೇನು?
"ಈ ವರ್ಷದ ತಮ್ಮ ಯೋಜನೆಗಳನ್ನು ವಿವರಿಸಿದ ವೇಂಬು ಅವರು, "ಮುಂದಿನ ವಾರ ಆಸ್ಟಿನ್‌ನಲ್ಲಿ ಉದ್ಯಮ ವಿಶ್ಲೇಷಕರ ಸಭೆಯಲ್ಲಿ AI ಕುರಿತು ನಮ್ಮ R&D ಕಾರ್ಯತಂತ್ರವನ್ನು ಪ್ರಸ್ತುತಪಡಿಸಲು ನಾನು ತುಂಬಾ ಶ್ರಮಿಸುತ್ತಿದ್ದೇನೆ. ಹೌದು, ನಾನು ಅಲ್ಲಿಗೆ ಹೋಗುತ್ತೇನೆ. ನನಗೆ ಈಗ ಡೀಪ್ ಟೆಕ್ R&D ನಲ್ಲಿ ಅತ್ಯಂತ ಸವಾಲಿನ ಹೊಸ ಪಾತ್ರವಿದೆ ಮತ್ತು ರಾಜಕೀಯಕ್ಕೆ ಸಮಯ ನೀಡಲು ನನಗೆ ಯಾವುದೇ ಅವಕಾಶವಿಲ್ಲ, ಖಂಡಿತಾ ಇಲ್ಲ" ಎಂದು ಹೇಳಿದರು."
ರಾಜಕೀಯಕ್ಕೆ ಸೇರುವ ಬಗ್ಗೆ ಶ್ರೀಧರ್ ವೇಂಬು ಹೇಳಿಕೆ
"ಇದಲ್ಲದೇ ನಾನು ರಾಜಕೀಯಕ್ಕೆ ಸೇರುವ ಬಗ್ಗೆ ಯಾರೊಂದಿಗೂ ಯಾವುದೇ ಚರ್ಚೆ ನಡೆಸಿಲ್ಲ. ಈ ವಿಚಾರ ಎಲ್ಲರಿಗೂ ಸ್ಪಷ್ಟವಾಗಿದೆ ಎಂದು ಈಗ ನಾನು ಭಾವಿಸುತ್ತೇನೆ. ಹೀಗಾಗಿ ಕೆಲಸಕ್ಕೆ ಮರಳಿ!" ಎಂದು ಹೇಳಿದ್ದಾರೆ. ವೇಂಬು ಅವರು Zoho ಸಿಇಒ ಸ್ಥಾನದಿಂದ ಕೆಳಗಿಳಿದ ಬಳಿಕ ಸಹ ಸಂಸ್ಥಾಪಕ ಶೈಲೇಶ್ ಕುಮಾರ್ ದವೆ ಅವರನ್ನು ಝೋಹೋ ಕಾರ್ಪ್‌ನ ಹೊಸ ಗ್ರೂಪ್ ಸಿಇಒ ಎಂದು ಹೆಸರಿಸಿದ್ದರು.
'ಮುಖ್ಯ ವಿಜ್ಞಾನಿ' ಪಾತ್ರದಲ್ಲಿ ಶ್ರೀಧರ್ ವೇಂಬು
ಶ್ರೀಧರ್ ವೇಂಬು ಅವರು ಸಿಇಒ ಸ್ಥಾನ ತ್ಯಜಿಸಿದ್ದರೂ ಕೂಡಾ ಕಂಪನಿಯ ಸೇವೆಯಲ್ಲೇ ಇರುವ ಅವರು ಮುಖ್ಯ ವಿಜ್ಞಾನಿ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ. ಈ ಬಗ್ಗೆ ಈ ಹಿಂದಿನ ಟ್ವೀಟ್ ನಲ್ಲಿ " ಝೋಹೋ ಕಾರ್ಪ್‌ನ ಸಿಇಒ ಹುದ್ದೆಯಿಂದ ನಾನು ನಿರ್ಗಮಿಸಲಿದ್ದೇನೆ ಮತ್ತು ಆಳವಾದ ಸಂಶೋಧನೆ ಮತ್ತು ಅಭಿವೃದ್ಧಿ (ಆರ್&ಡಿ) ಚಟುವಟಿಕೆಗಳಿಗೆ ನೇತೃತ್ವವಹಿಸುವ ಹೊಸ ಪಾತ್ರವನ್ನು "ಮುಖ್ಯ ವಿಜ್ಞಾನಿ"ಯಾಗಿ ವಹಿಸಿಕೊಳ್ಳಲಿದ್ದೇನೆ. ನಮ್ಮ ಸಹ-ಸಂಸ್ಥಾಪಕ ಶೈಲೇಶ್ ಕುಮಾರ್ ದವೆ ನಮ್ಮ ಹೊಸ ಗ್ರೂಪ್ ಸಿಇಒ ಆಗಿ ಸೇವೆ ಸಲ್ಲಿಸಲಿದ್ದಾರೆ.
ನಮ್ಮ ಸಹ-ಸಂಸ್ಥಾಪಕ ಟೋನಿ ಥಾಮಸ್ ಜೊಹೋ ಯುಎಸ್ ಅನ್ನು ಮುನ್ನಡೆಸಲಿದ್ದಾರೆ. ರಾಜೇಶ್ ಗಣೇಶನ್ ನಮ್ಮ ಮ್ಯಾನೇಜ್ ಎಂಜಿನಿಯರಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ ಮತ್ತು ಮಣಿ ವೆಂಬು http://Zoho.com ವಿಭಾಗವನ್ನು ಮುನ್ನಡೆಸಲಿದ್ದಾರೆ ಎಂದಿದ್ದಾರೆ.
ನಮ್ಮ ಕಂಪನಿಯ ಭವಿಷ್ಯವು ನಾವು ಸಂಶೋಧನೆ ಮತ್ತು ಅಭಿವೃದ್ಧಿ ಸವಾಲನ್ನು ಎಷ್ಟು ಚೆನ್ನಾಗಿ ನಿಭಾಯಿಸುತ್ತೇವೆ ಎಂಬುದರ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ ಈ ಹೊಸ ಜವಾಬ್ದಾರಿಯನ್ನು ಉತ್ಸಾಹದಿಂದ ಎದುರು ನೋಡುತ್ತಿದ್ದೇನೆ. ಮತ್ತೆ ತಾಂತ್ರಿಕ ಕ್ಷೇತ್ರದಲ್ಲಿ ನೇರವಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿರುವುದು ನನಗೆ ತುಂಬಾ ಸಂತೋಷವಾಗಿದೆ." ಎಂದು ವಿವರವಾಗಿ ತಾವು ಸಿಇಒ ಹುದ್ದೆಯಿಂದ ಕೆಳಗೆ ಇಳಿದ ಕಾರಣವನ್ನು ವಿವರಿಸಿದ್ದರು.
ಚೆನ್ನೈ ಮೂಲದ ಝೋಹೋ ಕಾರ್ಪ್ FY23 ರಲ್ಲಿ ₹8,703 ಕೋಟಿಗಳ ಕ್ರೋಢೀಕೃತ ಆದಾಯವನ್ನು ದಾಖಲಿಸಿದೆ, ಇದು ವರ್ಷದಿಂದ ವರ್ಷಕ್ಕೆ ಸುಮಾರು 30 ಪ್ರತಿಶತದಷ್ಟು ಹೆಚ್ಚಳವನ್ನು ಸೂಚಿಸುತ್ತದೆ. ಮುಖ್ಯವಾಗಿ ಇದರ ಎಂಟರ್‌ಪ್ರೈಸ್ ಐಟಿ ನಿರ್ವಹಣಾ ಸಾಫ್ಟ್‌ವೇರ್ ಮತ್ತು ಮ್ಯಾನೇಜ್ ಎಂಜಿನ್ ಮತ್ತು ಝೋಹೋ ಸೇರಿದಂತೆ ವ್ಯವಹಾರ ಅಪ್ಲಿಕೇಶನ್ ಸಾಫ್ಟ್‌ವೇರ್ ಮಾರಾಟದಿಂದ ಆದಾಯವು ಹೆಚ್ಚಾಗಿದೆ. FY23 ರಲ್ಲಿ, ಕಂಪನಿಯು ಇತರ ಕಾರ್ಯಾಚರಣಾ ಚಟುವಟಿಕೆಗಳಿಂದ ₹16.6 ಕೋಟಿಗಳನ್ನು ಗಳಿಸಿದೆ.


Click it and Unblock the Notifications