ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆ ಜನರ ಜೀವನವನ್ನು ಹಿಂಡಿ ಹಿಪ್ಪೆ ಮಾಡಿದೆ. ಮನೆಗಳಿಗೆ ನುಗ್ಗಿದ ನೀರಿನಿಂದ ಸಾರ್ವಜನಿಕರು ಪರದಾಟ ನಡೆಸಿದ್ದಾರೆ. ಇನ್ನು ನಗರದ ಹಲವು ರಸ್ತೆಗಳು ಜಲಾವೃತವಾಗಿವೆ. ಇನ್ನು ದುರಸ್ಥಿ ಕಾರ್ಯವೂ ಸಹ ಭರದಿಂದ ನಡೆದಿದೆ. ಕಳೆದ ಕೆಲವು ವರ್ಷಗಳಿಂದ ಜನರ ನಿದ್ದೆಯನ್ನು ಗೆಡಿಸಿದ್ದ ಒಂದು ಸಮಸ್ಯೆಗೆ ಈಗ ಪರಿಹಾರ ಸಿಕ್ಕಿದೆ.
ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆ ಐಟಿ ಕ್ಷೇತ್ರವನ್ನು ಕಂಗೆಡಿಸಿದೆ. ಸರ್ಜಾಪುರ ರಸ್ತೆಯಲ್ಲೂ ವಿಪ್ರೋ ಕಂಪನಿ ಇದೆ. ಈ ಕಂಪನಿಯ ಆವಾರಣದಲ್ಲಿ ಮಳೆ ಬಂದಾಗ ನೀರು ನಿಂತು ಕಿರಿ ಕಿರಿ ಉಂಟು ಮಾಡುತ್ತಿತ್ತು. ಇದರಿಂದ ಬೆಸತ್ತ ಸುತ್ತಮುತ್ತಲಿನ ಜನ ಇದನ್ನು ತೆರವು ಗೊಳಿಸುವಂತೆ ಪದೇ ಪದೇ ಬೇಡಿಕೆ ಇಟ್ಟಿದ್ದರೂ ಸಹ ಅದಕ್ಕೆ ಸ್ಪಂದನೆ ಸಿಕ್ಕಿರಲಿಲ್ಲ. ಆದರೆ ಈ ಬಾರಿ ಮಳೆ ಇಲ್ಲಿ ನಿಲ್ಲುತ್ತಿದ್ದ ನೀರಿಗೆ ತಾತ್ಕಾಲಿಕ ಪರಿಹಾರವನ್ನು ನೀಡಿದಂತೆ ಕಾಣುತ್ತಿದೆ.

ಸರ್ಜಾಪುರ ರಸ್ತೆಯಲ್ಲೂ ಕಿರಿಕಿರಿ
ಸರ್ಜಾಪುರದ ವಿಪ್ರೋ ಕಚೇರಿಯ ಸುತ್ತ ನೀರು ತುಂಬಿಕೊಂಡಿತ್ತು. ಇದರಿಂದ ರಸ್ತೆಗಳೆಲ್ಲಾ ಜಲಾವೃತವಾಗಿದ್ದವು. ಈ ನೀರು ಚರಂಡಿಗೆ ಹೋಗಲು ಅನುವು ಮಾಡಿಕೊಡಬೇಕಿತ್ತು. ಆದರೆ ಚರಂಡಿಯನ್ನು ಬ್ಲಾಕ್ ಮಾಡಲಾಗಿತ್ತು. ಮಳೆಯ ನೀರು ರಸ್ತೆಯಲ್ಲಿ ನಿಂತಿದ್ದನ್ನು ಗಮನಿಸಿ ಚರಂಡಿ ಮೇಲಿನ ಕಲ್ಲುಗಳನ್ನು ತೆಗೆಯುವ ಕೆಲಸವನ್ನು ಮಾಡಲಾಗಿದೆ. ಇದರಿಂದ ಜಲಾವೃತವಾದ ರಸ್ತೆಗಳಿಗೆ ಜೀವ ಬಂದಂತೆ ಕಾಣುತ್ತಿದೆ.
ಈ ರೀತಿ ರಸ್ತೆಗಳಿಗೆ ನೀರು ನುಗ್ಗಲು ಹಾಲನಾಯಕನಹಳ್ಳಿ ಹಾಗೂ ಸೌಲ್ ಕೆರೆಗಳು ಭರ್ತಿ ಆಗಿವೆ. ಈ ನೀರು ಹೋಗುವ ಕಾಲುವೆಯನ್ನು ವಿಪ್ರೋ ನಿರ್ಭಂದಿಸಿತ್ತು. ಹಿಗಾಗಿ ಇಲ್ಲಿನ ನೀರು ನಿಂತು ಕೊಂಡಿತ್ತು ಎಂದು ಪರಿಸರವಾದಿ ದಿವ್ಯಾ ರಾಧಾಕೃಷ್ಣನ್ ಸಾಮಾಜಿಕ ತಾಣದಲ್ಲಿ ಬರೆದುಕೊಂಡಿದ್ದಾರೆ.
ತಾತ್ಕಾಲಿಕ ಗೆಲುವು
ಇದರಿಂದಾಗಿ ಸುತ್ತಮುತ್ತಲಿನ ಸಾವಿರಾರು ಕುಟುಂಬಗಳು ತೊಂದರೆ ಅನುಭವಿಸುತ್ತಿವೆ. ಕಾಲುವೆಯನ್ನು ತೆರವು ಗೊಳಿಸುವಂತೆ ಈಗಾಗಲೇ ಪರಿಸರವಾದಿಗಳು ವಿಪ್ರೋ ಸಂಸ್ಥೆಗೆ ಹಲವು ಬಾರಿ ಮನವಿಯನ್ನು ಸಲ್ಲಿಸಿದ್ದರು. ಮಳೆಗಾಲದಲ್ಲಿ ಇಲ್ಲಿ ನೀರು ನಿಲ್ಲಲು ಇದು ದೊಡ್ಡ ಕಾರಣವಾಗಿದೆ. ನಾವು ಸಹ ವಿಪ್ರೋ ಸಂಸ್ಥೆಗೆ ಹೇಳಿ ಹೇಳಿ ಸುಸ್ತಾಗಿದ್ದೇವು ಎಂದು ಪರಿಸರವಾದಿ ದಿವ್ಯಾ ತಿಳಿಸಿದ್ದಾರೆ.
ದಿವ್ಯಾ ಅವರು ಬುಧವಾರ ಒಂದು ಟ್ವೀಟ್ ಮಾಡುತ್ತಾರೆ. ಈ ಟ್ವೀಟ್ ಈಗ ಸಖತ್ ವೈರಲ್ ಆಗುತ್ತಿದೆ. ವಿಪ್ರೋ ಸಂಸ್ಥೆ ಮಧ್ಯಾಹ್ನದ ವೇಳೆಗೆ ಚರಂಡಿಯ ಮೇಲೆ ಹಾಕಲಾಗಿದ್ದ ಕಲ್ಲನ್ನು ತೆಗೆದು ನೀರು ಸರಾಗವಾಗಿ ಹೋಗಲು ಅನುವು ಮಾಡಿಕೊಟ್ಟಿದೆ. ಇದು ತಾತ್ಕಾಲಿಕ ಗೆಲುವು. ಇದಕ್ಕಾಗಿ ಸತತ ಎರಡು ಗಂಟೆಗಳ ಕಾಲ ಎಸ್‌ಬಿ ನಿವಾಸಿಗಳು ವಿಪ್ರೋ ಕಂಪನಿಯ ಜೊತೆ ಮಾತುಕತೆ ನಡೆಸಿದರು ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ತಡ ರಾತ್ರಿ ಸಹ ಭಾರೀ ಮಳೆ ಸುರಿದಿದೆ. ಇದರಿಂದ ವಾಹನ ಸವಾರರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಮಳೆಯ ರಭಸಕ್ಕೆ ಹಲವು ಪ್ರದೇಶಗಳಲ್ಲಿ ಗಿಡಗಳು ಧರಾಶಾಹಿ ಆಗಿವೆ.


Click it and Unblock the Notifications