ಷೇರು ಮಾರುಕಟ್ಟೆ, ದೀರ್ಘಕಾಲದಿಂದ ಪುರುಷರ ಪ್ರಾಬಲ್ಯವಿರುವ ಕ್ಷೇತ್ರವಾಗಿ ಗುರುತಿಸಿಕೊಂಡಿದ್ದರೂ, ಇತ್ತೀಚಿನ ದಿನಗಳಲ್ಲಿ ಈ ಚಿತ್ರಣ ಬದಲಾಗುತ್ತಿದೆ. ಮಹಿಳೆಯರು ಹೂಡಿಕೆದಾರರಾಗಿ ಹಾಗೂ ಈ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸುವ ನಾಯಕಿಯರಾಗಿ ಹೊರಹೊಮ್ಮುತ್ತಿದ್ದಾರೆ ಅಂದರೆ ತಪ್ಪಾಗಲಾರದು.
ಒಂದು ಕಾಲದಲ್ಲಿ ಷೇರು ಮಾರುಕಟ್ಟೆಯನ್ನು ಪುರುಷರಿಗಷ್ಟೇ ಸೀಮಿತ ಎಂದು ಪರಿಗಣಿಸಲಾಗುತ್ತಿತ್ತು. ಆದರೆ, ಈಗ ಮಹಿಳೆಯರು ಈ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತನ್ನು ಸೃಷ್ಟಿಸಿಕೊಳ್ಳುತ್ತಿದ್ದಾರೆ. ಹೂಡಿಕೆ ವ್ಯವಸ್ಥಾಪಕರು, ವಿಶ್ಲೇಷಕರು ಮತ್ತು ಮಾರ್ಕೆಟಿಂಗ್ ತಜ್ಞರಾಗಿ ಪ್ರಾರಂಭಿಸಿದ ಅನೇಕ ಮಹಿಳೆಯರು ಇಂದು ದೊಡ್ಡ ಹೂಡಿಕೆ ನಿಧಿಗಳನ್ನು ನಿರ್ವಹಿಸುತ್ತಿದ್ದಾರೆ ಮತ್ತು ಬ್ರೋಕಿಂಗ್ ಏಜೆನ್ಸಿಗಳನ್ನು ಮುನ್ನಡೆಸುತ್ತಿದ್ದಾರೆ.

ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (ಎನ್‌ಎಸ್‌ಇ) ದಲ್ಲಿ ನೋಂದಾಯಿತ 10 ಮಿಲಿಯನ್ ಹೂಡಿಕೆದಾರರ ಪೈಕಿ ಐದು ಹೂಡಿಕೆದಾರರಲ್ಲಿ ಒಬ್ಬರು ಮಹಿಳೆಯರಾಗಿದ್ದಾರೆ ಎನ್ನುವುದು ಮಹಿಳಾಮಣಿಗಳ ಮುನ್ನಡೆಗೆ ಸಾಕ್ಷಿಯಾಗಿದೆ. ಹೂಡಿಕೆ ಸಂಶೋಧನಾ ಸಂಸ್ಥೆ ಮಾರ್ನಿಂಗ್‌ಸ್ಟಾರ್ ಇಂಡಿಯಾ ಪ್ರಕಾರ, 2017 ರಲ್ಲಿ ಮಹಿಳಾ ನಿಧಿ ನಿರ್ವಾಹಕರ ಸಂಖ್ಯೆ 18 ರಷ್ಟಿತ್ತು. ಆದರೆ ಮಾರ್ನಿಂಗ್‌ಸ್ಟಾರ್ ಡೇಟಾವನ್ನು ಟ್ರ್ಯಾಕ್ ಮಾಡುತ್ತ ಸಾಗಿದಂತೆ 2023 ರ ವೇಳೆಗೆ ಈ ಸಂಖ್ಯೆ 42 ಕ್ಕೆ ಏರಿತು. ಇದರೊಂದಿಗೆ, ಮಹಿಳಾ ನಿರ್ವಾಹಕರು ನಿಯಂತ್ರಣದಲ್ಲಿರುವ ಆಸ್ತಿ ಮೊತ್ತ ಜನವರಿ 2024 ಕ್ಕೆ 6.66 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. ಈ ಸಂಖ್ಯೆಯು 473 ನಿಧಿಗಳಲ್ಲಿ ಸುಮಾರು 9% ಮಾತ್ರ, ಅದ್ರೂ ಕೂಡಾ, ಇದು ಮಹಿಳಾ ಹೂಡಿಕೆ ನಿರ್ವಾಹಕರ ಸಾಧನೆಯ ಸಂಕೇತವಾಗಿದೆ.
ಅಸಿತ್ ಸಿ ಮೆಹ್ತಾ ಇನ್ವೆಸ್ಟ್‌ಮೆಂಟ್ ಇಂಟರ್ಮೀಡಿಯೇಟ್ಸ್‌ನ ವ್ಯವಸ್ಥಾಪಕ ನಿರ್ದೇಶಕರಾದ 63 ವರ್ಷದ ದೀನಾ ಮೆಹ್ತಾ ಅವರು, " ಲಕ್ಷ್ಮಿ )ಸಂಪತ್ತು, ಅದೃಷ್ಟ ಮತ್ತು ಸಮೃದ್ಧಿಯ ದೇವತೆ) ಮತ್ತು ಸರಸ್ವತಿ (ಜ್ಞಾನ, ಸಂಗೀತ, ಕಲೆ, ದೇವತೆ) ಯನ್ನು ನಾವು ಸ್ತ್ರೀ ರೂಪದಲ್ಲಿ ಪೂಜಿಸುತ್ತೇವೆ. ಹೀಗಾಗಿ ಪುರುಷರು ಮಾತ್ರ ಹಣಕಾಸು ಯೋಜನೆ ಅಥವಾ ಹೂಡಿಕೆ ನಿರ್ವಹಣೆಯನ್ನು ನಿಭಾಯಿಸಬಲ್ಲರು ಎಂಬ ನಮ್ಮಲ್ಲಿರುವ ಮಿಥ್ಯೆಯನ್ನು ತೊಡೆದುಹಾಕುವ ಸಮಯವಿದು ಎನ್ನುತ್ತಾರೆ.
ಮಕ್ಕಳ ಲಾಲನೆ ಪೋಷಣೆ ಮತ್ತು ಮನೆಯ ನಿರ್ವಹಿಸುವುದನ್ನು ಹೊರತುಪಡಿಸಿಯೂ ಅನೇಕ ಮಹಿಳೆಯರು ಹೂಡಿಕೆ ಅಂದ್ರೆ ಪುರುಷರಿಗೆ ಮಾತ್ರ ಎಂಬ ಮಿಥ್ಯವನ್ನು ಬದಿಗೆ ಸರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಾರ್ನಿಂಗ್‌ಸ್ಟಾರ್ ಇಂಡಿಯಾ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ಮಹಿಳಾ ನಿಧಿ ನಿರ್ವಾಹಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ.ಮಹಿಳಾ ನಿಧಿ ನಿರ್ವಾಹಕರು ಲಕ್ಷಾಂತರ ಕೋಟಿ ರೂಪಾಯಿಗಳ ಆಸ್ತಿಯನ್ನು ನಿರ್ವಹಿಸುತ್ತಿದ್ದಾರೆ. ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಹೂಡಿಕೆ ಕ್ಷೇತ್ರವು ಹೆಚ್ಚು ಜನರನ್ನು ತಲುಪಿದ್ದು, ಇದು ಮಹಿಳೆಯರಿಗೆ ಹೂಡಿಕೆ ಕ್ಷೇತ್ರದಲ್ಲಿ ಭಾಗವಹಿಸಲು ಸುಲಭವಾಗಿದೆ.
ಬೆಳವಣಿಗೆಯ ಹಾದಿಯಲ್ಲಿ ಮಹಿಳಾ ನಿರ್ವಾಹಕರ ಸಾಧನೆ
ಹೂಡಿಕೆ ನಿರ್ವಾಹಕರ ಸಾಧನೆಗಳು ಇದೀಗ ಗಮನ ಸೆಳೆಯುತ್ತಿವೆ. 473 ಪಂಢ್ ಗಳಲ್ಲಿ ಸುಮಾರು 9% ನಿರ್ವಾಹಕರು ಮಹಿಳೆಯರೇ ಇದ್ದು, ಅವರು ಪ್ರಗತಿಪಥವನ್ನು ಮೆರೆದಿದ್ದಾರೆ. ಇದೇ ವೇಳೆ, ಪುರುಷ ಹೂಡಿಕೆ ನಿರ್ವಾಹಕರಿಗಿಂತ ಮಹಿಳೆಯರು ಹೆಚ್ಚಿನ ನಿಷ್ಠೆ, ಬದ್ಧತೆ ಮತ್ತು ಜವಾಬ್ದಾರಿತ್ವವನ್ನು ತೋರಿಸುತ್ತಿದ್ದಾರೆ ಎಂಬುದು ಅನೇಕ ಅಧ್ಯಯನಗಳಲ್ಲಿ ಹೊರಹೊಮ್ಮಿದ ವಿಚಾರವಾಗಿದೆ.
ಮಹಿಳಾ ಹೂಡಿಕೆ ನಿರ್ವಾಹಕರ ಸಂಖ್ಯೆ ಹೆಚ್ಚುತ್ತಿರುವುದರಿಂದ, ಅವರ ಕೈಯಲ್ಲಿ ನಿರ್ವಹಣೆಯಾದ 6.66 ಲಕ್ಷ ಕೋಟಿ ರೂಪಾಯಿ ಅದ್ಭುತ ಸಾಧನೆಯನ್ನು ಪ್ರತೀಕ ಮಾತ್ರವಲ್ಲ, ಅದು ದೇಶದ ಹೂಡಿಕೆ ಕ್ಷೇತ್ರದಲ್ಲಿ ನಡೆಯುತ್ತಿರುವ ಗಾಂಭೀರ್ಯ ಮತ್ತು ಬದಲಾವಣೆಯ ಸಂಕೇತವೂ ಆಗಿದೆ.ಒಟ್ಟಾರೆ ಭಾರತದ ಹೂಡಿಕೆ ಮಾರುಕಟ್ಟೆಯಲ್ಲಿ ಮಹಿಳೆಯರ ಪ್ರಸ್ತುತ ಸ್ಥಿತಿ, ಹಾಗೆಯೇ ಇವರ ಮುಂದಿನ ದಾರಿ, ಸಮಾನತೆಯ ಮತ್ತು ಬದಲಾಗುತ್ತಿರುವ ಸಾಂಸ್ಕೃತಿಕ ದೃಷ್ಟಿಕೋನಗಳ ಕೈಗನ್ನಡಿಯಾಗಿದೆ.


Click it and Unblock the Notifications