ನವದೆಹಲಿ, ಏಪ್ರಿಲ್ 3: ತಾವು ವಾರದಲ್ಲಿ 80 ರಿಂದ 100 ಗಂಟೆಗಳನ್ನು ತಮ್ಮ ಫಿನ್‌ಟೆಕ್ ಸ್ಟಾರ್ಟ್ಅಪ್ "ನವಿ"ಗಾಗಿ ವಿನಿಯೋಗಿಸುತ್ತಿರುವುದಾಗಿ ಭಾರತದ ಸ್ವಯಂ ನಿರ್ಮಿತ ಬಿಲಿಯನೇರ್, ಫ್ಲಿಪ್‌ಕಾರ್ಟ್ ಸಹ-ಸಂಸ್ಥಾಪಕ ಸಚಿನ್ ಬನ್ಸಾಲಿ ಹೇಳಿದ್ದಾರೆ.
ಫ್ಲಿಪ್‌ಕಾರ್ಟ್ ತೊರೆದ ಕೆಲವೇ ತಿಂಗಳ ನಂತರ ಸಚಿನ್ ಬನ್ಸಾಲ್ ಅವರು ಅಂದರೆ 2018 ರಲ್ಲಿ ನವಿಯನ್ನು ಸ್ಥಾಪಿಸಿದ್ದು, ಇದು ವೈಯಕ್ತಿಕ ಮತ್ತು ಗೃಹ ಸಾಲ, UPI, ವಿಮೆ, ಮ್ಯೂಚುವಲ್ ಫಂಡ್‌ಗಳು ಇತ್ಯಾದಿಗಳ ವಿಚಾರವಾಗಿ ವ್ಯವಹರಿಸುತ್ತದೆ.

"ಕೆಲವೊಮ್ಮೆ ಜನರು( ತಮ್ಮ ಉದ್ಯೋಗಿಗಳು) ನನ್ನನ್ನು ದ್ವೇಷಿಸುತ್ತಾರೆ. ಯಾಕೆಂದರೆ ಈ ಹಿಂದೆ ನಾನು ನಮ್ಮಲ್ಲಿ ವರ್ಕ್ ಫರ್ಮ್ ಹೋಂ ಇಲ್ಲ ಎಂದು ಹೇಳಿದ್ದೆ, ನಂತರ ನೀವು ವಾರಾಂತ್ಯದಲ್ಲಿ ಕೆಲಸ ಮಾಡಬೇಕು ಎಂದಿದ್ದೆ, ಆದರೆ ನಾನು ವಾರಕ್ಕೆ 80-100 ಗಂಟೆಗಳ ಕಾಲ ನವಿ ಗಾಗಿ ವಿನಿಯೋಗ ಮಾಡುತ್ತಿದ್ದೇನೆ " ಎಂದು ಬನ್ಸಾಲ್ ಮನಿ ಕಂಟ್ರೋಲ್‌ಗೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
"ಇತರರು ಕೂಡಾ ವಾರದಲ್ಲಿ 100 ಗಂಟೆಗಳ ಕಾಲ ದುಡಿಯುವುದನ್ನು ನಾನು ನಿರೀಕ್ಷಿಸುವುದಿಲ್ಲ" ಎಂದು ಸಚಿನ್ ಹೇಳಿದ್ದರೂ, ವ್ಯವಹಾರವನ್ನು ಅಭಿವೃದ್ಧಿಪಡಿಸಲು ಸಾಕಷ್ಟು ಸಣ್ಣ ವಿವರಗಳಿಗೆ ಗಮನ ಹರಿಸಬೇಕು ಎಂದು ಅವರು ನಂಬಿರುವುದರಿಂದ, ಅವರು ಸಾಕಷ್ಟು ಸಮಯವನ್ನು ನವಿ ಸ್ಟಾರ್ಟ್ಅಪ್'ಗಾಗಿ ವಿನಿಯೋಗಿಸುತ್ತಿದ್ದಾರೆ.
"ನಾವು ಕಛೇರಿಯಿಂದ ಕೆಲಸ ಮಾಡಲು ಬಯಸುತ್ತೇವೆ ಎಂದು ನಾವು ಸ್ಪಷ್ಟವಾಗಿ ಹೇಳಿದ್ದೇವೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಮನೆಯಿಂದಲೇ ಕೆಲಸ ಮಾಡುವುದು ತಾತ್ಕಾಲಿಕ ವ್ಯವಸ್ಥೆಯಾಗಿದೆ. ಅದು ಎಂದಿಗೂ ಶಾಶ್ವತವಲ್ಲ. ನಾವು ಕಚೇರಿಯಿಂದ 100 ಪ್ರತಿಶತ ಕೆಲಸ ಮಾಡುತ್ತೇವೆ. ನಮ್ಮಲ್ಲಿ ಝೀರೋ ವರ್ಕ್ ಫರ್ಮ್ ಹೋಂ " ಎಂದು ಬನ್ಸಾಲ್ ಹೇಳಿದ್ದಾರೆ.
ಸಚಿನ್ ಬನ್ಸಾಲ್ ಅವರು ಏಂಜೆಲ್ ಹೂಡಿಕೆದಾರರಾಗಿ ಕೆಲಸ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ ಮತ್ತು ನವಿ ಮುಂಬರುವ ಕೆಲವು ತಿಂಗಳುಗಳಲ್ಲಿ IPO ಗಾಗಿ ಹೋಗುವ ಪ್ಲ್ಯಾನ್ ನಲ್ಲಿದ್ದು ಇದಕ್ಕಾಗಿ ತನ್ನ ಯೋಜನೆಗಳನ್ನು ಪುನರುಜ್ಜೀವನಗೊಳಿಸಲು ಉದ್ದೇಶಿಸಿದ್ದಾರೆ.
ಸಚಿನ್ ಬನ್ಸಾಲಿ ಬಗ್ಗೆ: ಚಂಡೀಗಢ ಮೂಲದ ಸಚಿನ್ ಬನ್ಸಾಲಿ ಅವರು 1981ರಲ್ಲಿ ಜನಿಸಿದ್ದಾರೆ. ಅವರು ಪ್ರಸ್ತುತ ನವಿ ಗ್ರೂಪ್‌ನ ಅಧ್ಯಕ್ಷರಾಗಿದ್ದಾರೆ. ಸಚಿನ್ ಅವರು ದಿಲ್ಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಓದಿದ್ದು, 2005ರಲ್ಲಿ ಸಾಫ್ಟ್‌ವೇರ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದುಕೊಂಡರು. ಸಚಿನ್ ಬನ್ಸಾಲಿ ಅವರು ಪದವಿ ಪೂರ್ಣಗೊಳಿಸಿದ ಬಳಿಕ ಅಮೆಜಾನ್‌ಗೆ ಸೇರುವುದಕ್ಕೂ ಮೊದಲು ಸ್ವಲ್ಪ ಅವಧಿಗೆ ಟೆಕ್‌ಸ್ಪಾಮ್‌ಗೆ ಕೆಲಸ ಮಾಡಿದ್ದರು.
ಬಳಿಕ 2006ರಲ್ಲಿ ಅಮೆಜಾನ್ ವೆಬ್ ಸರ್ವೀಸಸ್‌ನಲ್ಲಿ ಹಿರಿಯ ಸಾಫ್ಟ್‌ವೇರ್ ಡೆವಲ್ಪರ್ ಆಗಿ ಸೇರಿಕೊಡರು. 2007ರಲ್ಲಿ ಅಮೆಜಾನ್‌ನಿಂದ ಹೊರಬಂದು ತಮ್ಮದೇ ಸ್ವಂಯ ಬಿಸಿನೆಸ್ ಅನ್ನು ಪ್ರಾರಂಭಿಸಿದರು.2007ರಲ್ಲಿ ಅಮೆಜಾನ್ ಮಾಜಿ ಎಕ್ಸಿಕ್ಯೂಟೀವ್ ಸಚಿನ್ ಬನ್ಸಾಲಿ ತಮ್ಮ ಬಿಲಿಯನೇರ್ ಗೆಳೆಯ ಬಿನ್ನಿ ಬನ್ಸಾಲಿ ಜತೆ ಸೇರಿಕೊಂಡು ಇಂಟರ್‌ನೆಟ್ ಆಧಾರಿತ ಬುಕ್ ರಿಟೇಲರ್ ಫ್ಲಿಪ್‌ಕಾರ್ಟ್‌ನ್ನು ಪ್ರಾರಂಭಿಸಿದರು.


Click it and Unblock the Notifications