2014ರಲ್ಲಿ ಭಾರತದಲ್ಲಿ ಡಿಜಿಟಲ್ ಕ್ರಾಂತಿ ಆರಂಭವಾದ ಬಳಿಕ ದೇಶದಲ್ಲಿ ಅದರಲ್ಲೂ ಸ್ಟಾರ್ಟಪ್ ಗಳನ್ನು ಆರಂಭಿಸುವವರಿಗೆ ಶುಕ್ರದೆಸೆ ಕಂಡಿದ್ದು, ಸುಳ್ಳಲ್ಲ. ಆ ಅವಧಿಯಿಂದ ಉದ್ಯಮದಲ್ಲಿ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಬೇಕೆಂಬ ಹಂಬಲ ಹೊಂದಿರುವವರು ಈ ಅವಧಿಯಲ್ಲಿ ಫೀನಿಕ್ಸ್ ನಂತೆ ಮೇಲೆದ್ದು ಬಂದದ್ದು, ಎಲ್ಲರಿಗೂ ತಿಳಿದೇ ಇದೆ.
ಈ ಪೈಕಿ ಭಾರತದ ಪ್ರಮುಖ ಸ್ಟಾರ್ಟ್‌ಅಪ್‌ಗಳಲ್ಲಿ ಒಂದಾದ ಡಂಜೊದ ಮುಖ್ಯಸ್ಥ ಕಬೀರ್ ಬಿಸ್ವಾಸ್ ಕೂಡ ಪ್ರಮುಖರಾಗಿದ್ದಾರೆ. ಇವರು ಸರಳವಾದ ವಾಟ್ಸಾಪ್ ಗುಂಪನ್ನು ರಚಿಸಿಕೊಂಡು ಬರೊಬ್ಬರಿ 6,400 ಕೋಟಿ ಮೌಲ್ಯದ ಅಭಿವೃದ್ಧಿಶೀಲ ವ್ಯಾಪಾರ ಸಂಸ್ಥೆಯನ್ನಾಗಿ ರೂಪಿಸಿದ ಕಾರ್ಯವಂತೂ ರೋಚಕವಾಗಿದೆ. ಆದರೆ ಇದೇ ಸಂಸ್ಥೆಯ ನಂತರದ ದಿನಗಳಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ನಷ್ಟ ಅನುಭವಿಸಿದ್ದು, ಕೂಡ ಅಷ್ಟೇ ಆಘಾತಕಾರಿಯಾಗಿದೆ. ಇಂದು ನಾವು ಇದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯೋಣ.

ಡಂಜೊ ಆರಂಭದ ಪಯಣ ಹೇಗಿತ್ತು?
ಡಂಜೋ ಆರಂಭವಾದ ಪಯಣ 2014 ರಲ್ಲಿ ಆರಂಭವಾಗಿತ್ತು. ತಮ್ಮ ಹಿಂದಿನ ಸಾಹಸೋದ್ಯಮವಾದ ಹಾಪರ್ ಅನ್ನು ಹೈಕ್ ಸಂಸ್ಥೆ ಸ್ವಾಧೀನಪಡಿಸಿಕೊಂಡ ನಂತರ ಬೆಂಗಳೂರಿನತ್ತ ಮುಖಮಾಡಿದ ಕಬೀರ್ ಬಿಸ್ವಾಸ್, ಸಹ-ಸಂಸ್ಥಾಪಕರಾದ ಅಂಕುರ್ ಅಗರ್ವಾಲ್, ದಲ್ವಿರ್ ಸೂರಿ ಮತ್ತು ಮುಕುಂದ್ ಝಾ ಅವರೊಂದಿಗೆ ಸೇರಿಕೊಂಡು ಡಂಜೋ ಆರಂಭಿಸಿದರು.
ಕಂಪ್ಯೂಟರ್ ವಿಜ್ಞಾನದ ಹಿನ್ನೆಲೆ ಮತ್ತು ಏರ್‌ಟೆಲ್‌ನಲ್ಲಿ ಮಾರಾಟದಲ್ಲಿನ ತನ್ನ ಅನುಭವವನ್ನು ಬಿಸ್ವಾಸ್ ಅವರು ಡಂಜೊವನ್ನು ಸ್ಥಾಪಿಸಲು ತನ್ನ ಉದ್ಯಮಶೀಲತೆಯ ಒಳನೋಟವನ್ನು ಬಳಸಿಕೊಂಡರು, ಇದು ಆರಂಭದಲ್ಲಿ ದಿನಸಿ ಮತ್ತು ಅಗತ್ಯ ಸರಕುಗಳನ್ನು ಗ್ರಾಹಕರಿಗೆ ಪೂರೈಸುವತ್ತ ಗಮನಹರಿಸಿತು. ಕ್ರಮೇಣವಾಗಿ ಉದ್ಯಮವನ್ನು ವಿಸ್ತರಿಸಿಕೊಳ್ಳುತ್ತಾ ಸಾಗಿದ ಡಂಜೋ ಸಹಜವಾಗಿಯೇ ಹೂಡಿಕೆದಾರರ ಗಮನವನ್ನು ಸೆಳೆದುಕೊಂಡಿತು.
ಅದರಲ್ಲೂ ಮುಖ್ಯವಾಗಿ ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖೇಶ್ ಅಂಬಾನಿ ಅವರು ₹ 1,600 ಕೋಟಿಗಳನ್ನು ಡಂಜೋದಲ್ಲಿ ಹೂಡಿಕೆ ಮಾಡಿದ್ದು, ಕಂಪೆನಿಗೆ ಶುಕ್ರದೆಸೆ ಲಭಿಸುವಂತೆ ಮಾಡಿದ್ದು, ಸುಳ್ಳಲ್ಲ. ಈ ಮೂಲಕ ರಿಲಯನ್ಸ್ ಸಂಸ್ಥೆಯ ಭಾರೀ ಹೂಡಿಕೆಯ ಪರಿಣಾಮ ಕಂಪೆನಿಯ ಮೌಲ್ಯವು ಬರೊಬ್ಬರಿ 775 ಮಿಲಿಯನ್ ಡಾಲರ್ ಗೆ (ಸುಮಾರು 6,400 ಕೋಟಿ ರೂ.ಗಳು) ಏರಿಕೆಯಾಯಿತು.
ಈ ಅವಧಿಯಲ್ಲಿ ಡಂಜೋ ಮಾಡಿದ ಚಾಣಾಕ್ಯನ ಬುದ್ದಿಯಿಂದ ಕಂಪೆನಿಯ ವಿಸ್ತಾರ ಮತ್ತಷ್ಟು ವಿಸ್ತರಣೆಯಾಗುತ್ತಾ ಸಾಗಿತು. ವಾಟ್ಸ್ಯಾಪ್ ನಲ್ಲಿ ಭಾರೀ ಸಂಖ್ಯೆಯ ಗ್ರೂಪ್ ಗಳನ್ನು ರಚಿಕೊಳ್ಳುವ ಮೂಲಕ ಅದರ ಮೂಲಕವೂ ಆರ್ಡರ್ ಗಳನ್ನು ಪಡೆದುಕೊಳ್ಳುವ ವ್ಯವಸ್ಥೆ ಮಾಡಲಾಯಿತು. ಸಹಜವಾಗಿಯೇ ಇಂದು ವಾಟ್ಸ್ಯಾಪ್ ಖಾತೆ ಇಲ್ಲದ ವ್ಯಕ್ತಿ ಬಹುಷಃ ಯಾರೂ ಸಿಗಲಾರರು.
ಸ್ಮ್ಯಾರ್ಟ್ ಫೋನ್ ನ ಬಹುತೇಕ ಎಲ್ಲಾ ಬಳಕೆದಾರರು ವಾಟ್ಸ್ಯಾಪ್ ಬಳಸುವುದು ಸಾಮಾನ್ಯವಾಗಿದೆ. ಹಾಗಾಗಿ ಡಂಜೋ ಸಂಸ್ಥೆಯು ವಾಟ್ಸ್ಯಾಪ್ ಗಳಲ್ಲಿ ಆರ್ಡರ್ ಪಡೆದುಕೊಳ್ಳಲು ಆರಂಭಿಸಿದ್ದು, ಸಾಮಾನ್ಯ ಗ್ರಾಹಕನಿಗೂ ಇದರಿಂದ ಭಾರೀ ನೆರವು ನೀಡಿತು. ಪರಿಣಾಮ ಕಂಪೆನಿಯ ವ್ಯಾಪ್ತಿ ಕೂಡ ವಿಸ್ತರಣೆಯಾಗುತ್ತಾ ಸಾಗಿತು. ಹೀಗೆ ಆರಂಭವಾದ ಡಂಜೋ ನಂತರ ಅದರದೇ ಆದ ವೆಬ್ ಸೈಟ್ ಆರಂಭಿಸಿ, ಸಂಸ್ಥೆಯನ್ನು ಮತ್ತಷ್ಟು ವಿಸ್ತರಿಸಿಕೊಂಡಿತು.
ಹಲವು ಅಡೆತಡೆಗಳನ್ನು ಎದುರಿಸಿದ ಡಂಜೋ
ಒಂದು ಉದ್ಯಮ ಸಂಸ್ಥೆ ಆರಂಭಿಸಿದ ಬಳಿಕ ಸಮಸ್ಯೆ ಎದುರಾಗುವುದು ಸಹಜ ಹಾಗೂ ಸಾಮಾನ್ಯ ಸಂಗತಿಯೇ ಆಗಿದೆ. ಇದೇ ರೀತಿ ನಿಧಾನವಾಗಿ ಯಶಸ್ಸಿನ ಉತ್ತುಂಗಕ್ಕೆ ಏರುತ್ತಿರುವ ಡಂಜೋ ಕೂಡ ಇದಕ್ಕೆ ಹೊರತಾಗಿರಲಿಲ್ಲ. ಇತ್ತೀಚಿಗಿನ ದಿನಗಳಲ್ಲಿ ಡಂಜೋ ಕೂಡ ಉದ್ಯೋಗಿಗಳಿಗೆ ಸಂಬಳ ಪಾವತಿಸುವ ವಿಚಾರದಲ್ಲಿ ಸಮಸ್ಯೆಗೆ ಸಿಲುಕಿಕೊಂಡಿತ್ತು. 23 ರ ಹಣಕಾಸಿನ ವರ್ಷದಲ್ಲಿ ಸುಮಾರು ಇದೇ ಸಮಸ್ಯೆಯಿಂದ ಕಂಪೆನಿಯು 1,800 ಕೋಟಿ ರೂ.ಗಳ ಸಮಸ್ಯೆಯನ್ನು ಎದುರಿಸಿತ್ತು. ಈ ಮೂಲಕ ಅದರ ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ ನಷ್ಟದ ಪ್ರಮಾಣ 288 ರಷ್ಟು ಏರಿಕೆಯಾಗಿದೆ.
ಕಂಪೆನಿ ತ್ಯಜಿಸಿದ ಸಹ ಸಂಸ್ಥಾಪಕ
ಯಾವ ಕಠಿಣ ಸಮಯದಲ್ಲೂ ಕಂಪೆನಿ ಆರಂಭಿಸಿದವರು ಸಂಸ್ಥೆಯನ್ನೇ ಬಿಟ್ಟು ಹೋಗುವುದು ಕಡಿಮೆ. ಆದರೆ ಈ ವಿಚಾರದಲ್ಲಿ ಡಂಜೋ ದೊಡ್ಡ ಆಘಾತ ಕಂಡಿತ್ತು. ಸತತ ನಷ್ಟ ಅನುಭವಿಸುತ್ತಿದ್ದ ಹಿನ್ನೆಲೆಯಲ್ಲಿ ಕಂಪೆನಿಯ ಸಹ ಸಂಸ್ಥಾಪಕ ಉದ್ಯಮವನ್ನೇ ಬಿಟ್ಟು ಹೋಗಿದ್ದು, ಸಂಸ್ಥೆಗೆ ದೊಡ್ಡ ಆಘಾತವನ್ನೇ ನೀಡಿತ್ತು.
ಅದೂ ಅಲ್ಲದೆ ಹಣಕಾಸು ಮುಖ್ಯಸ್ಥರು ಸೇರಿದಂತೆ ಹಲವಾರು ಪ್ರಮುಖ ವ್ಯಕ್ತಿಗಳ ನಿರ್ಗಮನ ಕೂಡ ಮತ್ತಷ್ಟು ಹಿನ್ನಡೆ ತಂದಿದೆ. ಹೀಗಾಗಿ ಒಂದು ಸಮಯದಲ್ಲಿ ಭರವಸೆಯ ಕಂಪೆನಿಯಾಗಿದ್ದ ಡಂಜೋ ಸದ್ಯ ದೊಡ್ಡ ಸವಾಲನ್ನೇ ಎದುರಿಸುತ್ತಿದೆ.


Click it and Unblock the Notifications