ಬೆಂಗಳೂರು, ಅಕ್ಟೋಬರ್ 13: ಇ-ಕಾಮರ್ಸ್ ಕಂಪನಿಗಳ ಡೆಲಿವರಿಯನ್ನು ಗುರಿಯಾಗಿಸಿಕೊಂಡು ಎಲೆಕ್ಟ್ರಿಕ್ ಬೈಕ್‌ಗಳನ್ನು ಬಿಡುಗಡೆ ಮಾಡಲು 'ಯುಲೂ' ಮುಂದಾಗಿದೆ. ಈ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಯುಲೂ ನೂತನ ಮಾದರಿಯ ಎಲೆಕ್ಟ್ರಿಕ್ ಬೈಕ್‌ಗಳು ರಸ್ತೆಗೆ ಬರಲಿವೆ. ಬೈಕ್‌ಗಳ ವಿಶೇಷತೆಗಳು, ದರಗಳ ಕುರಿತು ಸದ್ಯಕ್ಕೆ ಹೆಚ್ಚಿನ ಮಾಹಿತಿಗಳು ಲಭ್ಯವಿಲ್ಲ.
ಈಗಾಗಲೇ ಭಾರತದಲ್ಲಿ 'ಯುಲೂ' ಎಲೆಕ್ಟ್ರಿಕ್ ಬೈಕ್‌ಗಳು ಸಂಚಾರ ನಡೆಸುತ್ತಿವೆ. ಆದರೆ ದೇಶದಲ್ಲಿ ವಿಸ್ತಾರವಾಗುತ್ತಿರುವ ಇ-ಕಾಮರ್ಸ್ ಕಂಪನಿಗಳ ಡೆಲಿವರಿಯನ್ನು ಗಮನದಲ್ಲಿಟ್ಟುಕೊಂಡು ನೂತನ ಮಾದರಿ ಎಲೆಕ್ಟ್ರಿಕ್ ಬೈಕ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗುತ್ತದೆ.

'ಯುಲೂ' ಸಹ ಸಂಸ್ಥಾಪಕ ಮತ್ತು ಸಿಇಒ ಅಮಿತ್ ಗುಪ್ತಾ ಈ ಕುರಿತು ಮನಿ ಕಂಟ್ರೋಲ್ ಜೊತೆಗೆ ಮಾತನಾಡಿದ್ದಾರೆ, "ಭಾರತದಲ್ಲಿ ಇ-ಕಾಮರ್ಸ್ ಕಂಪನಿಗಳ ಡೆಲಿವರಿ, ಬೈಕ್ ಟ್ಯಾಕ್ಸಿಗಳ ಬೇಡಿಕೆ ಹೆಚ್ಚಾಗುತ್ತಿದೆ. ಈ ಬೇಡಿಕೆಯನ್ನು ಗಮನಿಸಿ ಹೊಸ ಮಾದರಿ ಬೈಕ್ ಪರಿಚಯಿಸಲಾಗುತ್ತದೆ" ಎಂದರು.
ಬೆಂಗಳೂರು ನಗರ ಮೂಲದ 'ಯುಲೂ' ಈಗಾಗಲೇ ಮಾರುಕಟ್ಟೆಯಲ್ಲಿ ತನ್ನ ಸಾಮರ್ಥ್ಯವನ್ನು ತೋರಿಸಿದೆ. ಬೌನ್ಸ್ ಮತ್ತು ಇತರ ಕಂಪನಿಗಳಿಗೆ ಇದು ಈಗಾಗಲೇ ತೀವ್ರ ಪೈಪೋಟಿ ಒಡ್ಡಿ, ಮಾರುಕಟ್ಟೆಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ.
ಹಲವು ಕಂಪನಿಗಳ ಸ್ಪರ್ಧೆಯ ನಡುವೆಯೂ 'ಯುಲೂ' ತನ್ನ ಸ್ವಂತ ಬೈಕ್‌ಗಳನ್ನು ಇದುವರೆಗೂ ತಯಾರಿ ಮಾಡಿಲ್ಲ. ಬಜಾಜ್ ಮತ್ತು ಇತರರ ಜೊತೆ ಪಾಲುದಾರಿಕೆ ಮಾಡಿಕೊಂಡು ಮಾರುಕಟ್ಟೆಗೆ ಬೈಕ್ ಪರಿಚಯಿಸಿದೆ. ಈಗಾಗಲೇ ಮಾರುಕಟ್ಟೆಯಲ್ಲಿ 'ಯುಲೂ' ಎರಡು ಮಾದರಿ ಬೈಕ್‌ಗಳಿವೆ.
'ಯುಲೂ' ಡೆಕ್ಸ್ ಮಾದರಿಯ ಎಲೆಕ್ಟ್ರಿಕ್ ಬೈಕ್ ಕಡಿಮೆ ದೂರ ಪ್ರಯಾಣ ಮಾಡುವವರಿಗೆ ಅನುಕೂಲವಾಗುವಂತಿದೆ. 'ಯುಲೂ' ಮಿರಾಕಲ್ ಮಾದರಿ ಬೈಕ್‌ಗಳನ್ನು ದೂರ ಪ್ರಯಾಣದ ಜನರಿಗಾಗಿ ವಿನ್ಯಾಸಗೊಳಿಸಲಾಗಿದೆ.
ಹೊಸ ಮಾದರಿಯ 'ಯುಲೂ' ಎಲೆಕ್ಟ್ರಿಕ್ ಬೈಕ್‌ಗಳು ದೂರ ಪ್ರಯಾಣ ಮತ್ತು ಹೆಚ್ಚು ಲಗೇಜ್ ಹೊಂದುವಂತೆ ವ್ಯವಸ್ಥೆ ಇರಲಿದೆ. ಇ-ಕಾಮರ್ಸ್ ಕಂಪನಿಗಳ ಡೆಲಿವರಿಯ ಬಾಕ್ಸ್‌ಗಳನ್ನು ಇಟ್ಟುಕೊಳ್ಳಲು ಬೈಕ್‌ಗಳಲ್ಲಿ ಹೆಚ್ಚು ಸ್ಥಳಾವಕಾಶ ಇರುವಂತೆ ಬೈಕ್ ವಿನ್ಯಾಸಗೊಳಿಸಲಾಗುತ್ತದೆ ಎಂಬ ಮಾಹಿತಿ ಇದೆ.
ಹೊಸ ಬೈಕ್‌ಗಳು ಮಧ್ಯಮ ವೇಗದಲ್ಲಿ ಅಂದರೆ ಗಂಟೆಗೆ 45 ಕಿ. ಮೀ. ಗರಿಷ್ಠ ವೇಗವನ್ನು ಮಿತಿಗೊಳಿಸಿ ವಿನ್ಯಾಸ ಮಾಡಲಾಗುತ್ತದೆ. ಡೆಲಿವರಿ ಬಾಯ್‌ಗಳು ತಮ್ಮದೇ ಆದ ಗಡುವಿನೊಳಗೆ ವಸ್ತುಗಳನ್ನು ಹಂಚಿಕೆ ಮಾಡಬೇಕಿದೆ. ಆದ್ದರಿಂದ ಬೈಕ್‌ಗಳ ವೇಗವನ್ನು ಸಹ ಸ್ವಲ್ಪ ಹೆಚ್ಚಿಸಲಾಗಿದೆ ಎಂದು 'ಯುಲೂ' ಹೇಳಿದೆ.
ಹೊಸ ಮಾದರಿಯ ಬೈಕ್‌ಗಳು ರಸ್ತೆಗೆ ಬಂದ ಬಳಿಕ 'ಯುಲೂ' ಸರ್ವಿಸಬಲ್ ಅವೈಲಬಲ್ ಮಾರ್ಕೆಟ್ (ಎಸ್‌ಎಎಂ) ಶೇ 10ಪಟ್ಟು ಹೆಚ್ಚಾಗಲಿದೆ ಎಂದು ಕಂಪನಿ ಅಂದಾಜಿಸಿದೆ. ಈ ಮಾದರಿಯ ಬೈಕ್‌ಗಳನ್ನು ಇ-ಕಾಮರ್ಸ್, ಬೈಕ್ ಟ್ಯಾಕ್ಸ್, ಕೊರಿಯರ್ ಮತ್ತು ದೂರದ ಪ್ರಯಾಣಕ್ಕೆ ಬಳಕೆ ಮಾಡಬಹುದಾಗಿದೆ ಎಂದು ಕಂಪನಿ ತಿಳಿಸಿದೆ.
ಈ ಕಾಮರ್ಸ್ ಕಂಪನಿಗಳು ವಸ್ತುಗಳ ಡೆಲಿವರಿಗೆ ಎಲೆಕ್ಟ್ರಿಕ್ ಬೈಕ್‌ಗಳಿಗಾಗಿ ಹುಡುಕಾಟ ನಡೆಸುವಾಗ 'ಯುಲೂ' ಮಾರುಕಟ್ಟೆಗೆ ಬಂದಿತು. ಬೌನ್ಸ್ ಸೇರಿದಂತೆ ಇತರೆ ಕಂಪನಿಗಳು ಮಾರುಕಟ್ಟೆಯನ್ನು ವಿಸ್ತರಣೆ ಮಾಡಿದರೂ ಸಹ 'ಯುಲೂ' ಪ್ರಬಲ ಪೈಪೋಟಿಯನ್ನು ನೀಡಿ ಸ್ಥಿರವಾಗಿ ನಿಂತಿದೆ.
ಎಲೆಕ್ಟ್ರಿಕ್ ಬೈಕ್‌ಗಳಿಗೆ ನಗರದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಮಾರುಕಟ್ಟೆಯಲ್ಲಿ ವೇಗವಾಗಿ ವಸ್ತುಗಳನ್ನು ಡೆಲಿವರಿ ಮಾಡಲು ಬೇಕಾದ ಒಂದು ವಾಹನದ ಅಗತ್ಯವಿದೆ. ಎಲ್ಲಾ ಅಗತ್ಯ ಒಪ್ಪಿಗೆಗಳ ಬಳಿಕ ಈ ಹಣಕಾಸು ವರ್ಷದ ಅಂತ್ಯದಲ್ಲಿ 'ಯುಲೂ' ಹೊಸ ಮಾದರಿ ಬೈಕ್‌ಗಳು ರಸ್ತೆಗೆ ಬರುವ ನಿರೀಕ್ಷೆ ಇದೆ.
ಈಗಾಗಲೇ ಬೈಕ್‌ಗಳ ವಿನ್ಯಾಸವನ್ನು ಅಂತಿಮಗೊಳಿಸಲಾಗಿದೆ. ಪ್ರಾಯೋಗಿಕ ಸಂಚಾರವನ್ನು ನಡೆಸಿ ಕಾರ್ಯಕ್ಷಮತೆ ಪರೀಕ್ಷಿಸಬೇಕಿದೆ. ಇತರ ತಾಂತ್ರಿಕ ಒಪ್ಪಿಗೆಯ ಕೆಲಸಗಳನ್ನು ಪೂರ್ಣಗೊಳಿಸಿ ಆರ್ಥಿಕ ವರ್ಷದ ಕೊನೆಗೆ ಮಾರುಕಟ್ಟೆಗೆ ಬೈಕ್ ತರಲು 'ಯುಲೂ' ತಯಾರಿ ನಡೆಸಿದೆ.
2017ರಲ್ಲಿ ಅಮಿತ್ ಗುಪ್ತಾ ಮತ್ತು ಇತರ ಮೂವರು ಸೇರಿ 'ಯುಲೂ' ಸ್ಥಾಪನೆ ಮಾಡಿದರು. ನಗರ ಸಂಚಾರ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ಆರಂಭಿಸಲಾಯಿತು. ಬೆಂಗಳೂರು, ಮುಂಬೈ, ಹೈದರಾಬಾದ್, ದೆಹಲಿ, ಗುರುಗ್ರಾಮ ಮುಂತಾದ ನಗರದಲ್ಲಿ 'ಯುಲೂ' ಸೇವೆ ಈಗ ಲಭ್ಯವಿದೆ.


Click it and Unblock the Notifications