ಐಐಟಿ, ಐಐಎಂ ಮುಂತಾದ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಹೊರದೇಶಗಳಲ್ಲಿ ಹೇಗೆ ಮಿಂಚುತ್ತಿದ್ದಾರೆ ಎಂಬುದು ಬಹುತೇಕರಿಗೆ ತಿಳಿದಿರುವ ವಿಚಾರ. ವಿದೇಶಗಳಲ್ಲಿ ಹಲವು ಲೋಕ ಪ್ರಖ್ಯಾತ ಕಂಪೆನಿಗಳಲ್ಲಿ ಸಿಇಒ ಸೇರಿದಂತೆ ಪ್ರಮುಖ ಹುದ್ದೆಗಳಲ್ಲಿ ಭಾರತೀಯರು ತಮ್ಮ ತಾಕತ್ತು ಪ್ರದರ್ಶಿಸುತ್ತಿದ್ದಾರೆ. ಈ ಮೂಲಕ ತಮ್ಮ ಹೆಸರನ್ನೇ ಅಲ್ಲದೆ ಭಾರತದ ಹೆಸರನ್ನು ಕೂಡ ಅವರು ಪ್ರಸಿದ್ದಗೊಳಿಸುತ್ತಿದ್ದಾರೆ. ಇನ್ನು ಹೆಚ್ಚಿನ ಐಐಟಿ ಪದವೀಧರರು ಕೇವಲ ವಿದೇಶಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದರ ಹೊರತಾಗಿ ಕೂಡ ಯೋಚಿಸುತ್ತಿದ್ದು, ತಮ್ಮದೇ ಸ್ವಂತ ವ್ಯವಹಾರ ಆರಂಭಿಸಿ, ಇತರರಿಗೆ ಕೆಲಸ ಕೊಡಿಸುವ ಮಹಾನ್ ಕಾರ್ಯದಲ್ಲಿ ಕೂಡ ನಿರತರಾಗಿದ್ದಾರೆ. ಅಂಥವರಲ್ಲಿ ಪ್ರಖ್ಯಾತ Zoho ಸಂಸ್ಥೆಯ ಸ್ಥಾಪಕರಾಗಿರುವ ಶ್ರೀಧರ್ ವೆಂಬು ಪ್ರಮುಖಕರಲ್ಲಿ ಒಬ್ಬರು ಎಂದರೆ ತಪ್ಪಾಗಲಾರದು. ಇವರು ಆರಂಭಿಸಿದ ಕಂಪೆನಿಯು ಸದ್ಯ ಬರೊಬ್ಬರಿ 31493 ಕೋಟಿ ರೂ. ಮೌಲ್ಯವನ್ನು ಹೊಂದಿದೆ. 2023 ರ ಆರ್ಥಿಕ ವರ್ಷದಲ್ಲಿ, ಜೊಹೊ ನಿವ್ವಳ ಲಾಭವು 2,836 ಕೋಟಿ ರೂ.ಗೆ ಏರಿಕೆಯಾಗಿದೆ. ಐಐಟಿ ಬಾಂಬೆ ಹಳೆಯ ವಿದ್ಯಾರ್ಥಿಯಾಗಿರುವ ಶ್ರೀಧರ್ ವೆಂಬು ಅವರು ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಕೂಡ ಪಡೆದುಕೊಂಡಿದ್ದಾರೆ. 1996 ರಲ್ಲಿ, ಅವರು ಮತ್ತು ಟೋನಿ ಥಾಮಸ್ ಎಂಬವರು ಕ್ಲೌಡ್-ಆಧಾರಿತ ವ್ಯಾಪಾರ ಸಾಫ್ಟ್‌ವೇರ್ ಅನ್ನು ಉತ್ಪಾದಿಸುವ ಖಾಸಗಿ ಕಂಪನಿ ಝೋಹೋವನ್ನು ಪ್ರಾರಂಭಿಸಲಾಯಿತು. ಸದ್ಯ ವೆಂಬು ಅವರು ಫ್ರೆಶ್ ವರ್ಕ್ ಸಂಸ್ಥೆಯ ನೀತಿಯನ್ನು ಖಂಡಿಸಿ, ಹೆಚ್ಚು ಸುದ್ದಿಯಲ್ಲಿದ್ದಾರೆ.
ಮೌಲ್ಯಗಳ ವಿಚಾರದಲ್ಲಿ ಸುದ್ದಿಯಲ್ಲಿರುವ ವೆಂಬು
ಸದ್ಯ ವೆಂಬು ಅವರು ಸಿಲಿಕಾನ್ ವ್ಯಾಲಿಯಲ್ಲಿ ಹೆಚ್ಚು ಸುದ್ದಿಯಲ್ಲಿದ್ದು, ಮೌಲ್ಯಗಳ ವಿಚಾರದಲ್ಲಿ ವೆಂಬು ಅವರ ಹೇಳಿಕೆಗಳ ಬಗ್ಗೆ ಹೆಚ್ಚು ಚರ್ಚೆಗಳು ನಡೆಯುತ್ತಿದೆ. ಶ್ರೀಧರ್ ವೆಂಬು ಅವರು ಅಮೆರಿಕಾ ಮೂಲದ ಐಟಿ ಸಂಸ್ಥೆಯಾಗಿರುವ ಫ್ರೆಶ್‌ವರ್ಕ್ಸ್ ಇತ್ತೀಚಿನ ಉದ್ಯೋಗಿಗಳ ಕಡಿತ ಮತ್ತು ಸ್ಟಾಕ್ ಮರುಖರೀದಿ ಯೋಜನೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಅದೂ ಅಲ್ಲದೆ ಫ್ರೆಶ್ ವರ್ಕ್ ನ ಇತ್ತೀಚಿಗೆ ತೆಗೆದುಕೊಂಡ ಕ್ರಮವನ್ನು ಸಾಮಾಜಿಕ ಜಾಲತಾಣಗಳಲ್ಲಿ ಖಂಡಿಸಿದ್ದು, ಮೌಲ್ಯಗಳ ಬಗ್ಗೆ ಸಾಕಷ್ಟು ಬರೆದುಕೊಂಡಿದ್ದಾರೆ. ವೆಂಬು ಅವರು ನೇರವಾಗಿ ಫ್ರೆಶ್ ವರ್ಕ್ ಸಂಸ್ಥೆಯ ಹೆಸರನ್ನು ಕರೆಯದಿದ್ದರೂ, ಆ ಸಂಸ್ಥೆಯನ್ನೇ ಗುರಿಯಾಗಿಸಿಕೊಂಡಿದ್ದಾರೆ ಎನ್ನಲಾಗಿದೆ. ಬಂಡವಾಳಶಾಹಿ ಹಾಗೂ ಸಮಾಜವಾದದ ಕುರಿತಾದ ಆನ್‌ಲೈನ್ ಚರ್ಚೆಯಲ್ಲಿ ಮಾತನಾಡಿ ಅವರು, ʻಯಾವುದೇ ಕಂಪನಿಯ ಪ್ರಮುಖ ಆಸ್ತಿ - ಅವರ ಸ್ವಂತ ಜನರು ಮತ್ತು ಅವರ ಯೋಗಕ್ಷೇಮದ ಮೇಲೆ ಕೇಂದ್ರೀಕರಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ. ಅದೂ ಅಲ್ಲದೆ ತಮ್ಮ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಅವರು, ಬ್ಯಾಂಕ್‌ನಲ್ಲಿ ಶತಕೋಟಿ ಡಾಲರ್‌ಗಳಿರುವಾಗ ವಜಾಗೊಳಿಸುವ ಮೂಲಕ ಷೇರುದಾರರಿಗೆ ಆದ್ಯತೆ ನೀಡುವ ಅಭ್ಯಾಸವನ್ನು ವೆಂಬು ಪ್ರಶ್ನಿಸಿದ್ದಾರೆ. ಸದ್ಯ ಸಂಸ್ಥೆಯು ತನ್ನ ಸಿಬ್ಬಂದಿಯ ನಿಷ್ಠೆಯನ್ನು ನಿರೀಕ್ಷಿಸಬಾರದು ಎಂದು ಅವರು ಹೇಳಿದರು.

ಏನಿದು ಫ್ರೆಶ್ ವರ್ಕ್ ವಿವಾದ?
ಅಮೆರಿಕಾ ಮೂಲದ ಐಟಿ ಸಂಸ್ಥೆಯಾಗಿರುವ ಫ್ರೆಶ್ ವರ್ಕ್ ಇತ್ತೀಚಿಗೆ ತನ್ನ ಸಂಸ್ಥೆಯ 13 ಪ್ರತಿಶತ ಅಂದರೆ 660 ಮಂದಿ ನೌಕರರನ್ನು ವಜಾಗೊಳಿಸಿತ್ತು. ಆದರೆ ಬಹುತೇಕ ಎಲ್ಲಾ ಕಂಪೆನಿಗಳು ನಷ್ಟದೆಡೆಗೆ ಸಾಗುತ್ತಿದ್ದಾಗ ನೌಕರರನ್ನು ವಜಾಗೊಳಿಸುವುದು ಸಾಮಾನ್ಯವಾಗಿದ್ದರೂ ಫ್ರೆಶ್ ವರ್ಕ್ ಮಾತ್ರ ಇದಕ್ಕೆ ವ್ಯತಿರಿಕ್ತವಾಗಿತ್ತು. ಸಂಸ್ಥೆಯು ಉತ್ತಮ ಲಾಭದ ಹಾದಿಯಲ್ಲಿದ್ದರೂ ನೌಕರರನ್ನು ವಜಾಗೊಳಿಸಿರುವ ಕ್ರಮವನ್ನು ಶ್ರೀಧರ್ ವೆಂಬು ಅವರ ತೀವ್ರವಾಗಿ ಖಂಡಿಸಿದ್ದಾರೆ. ಅದೂ ಅಲ್ಲದೆ ಫ್ರೆಶ್ ವರ್ಕ್ ಸಂಸ್ಥೆಯು ಸುಮಾರು 440 ಮಿಲಿಯನ್ ಡಾಲರ್ ಮೊತ್ತದ ಷೇರು ಮರುಖರೀದಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಒಂದು ಕಡೆಯಲ್ಲಿ ಲಾಭದ ಹಾದಿಯಲ್ಲಿದರೂ ಫ್ರೆಶ್ ವರ್ಕ್ ಸಿಬ್ಬಂದಿಯ ಶ್ರಮವನ್ನು ಮರೆತು ವಜಾಗೊಳಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ಬಂಡವಾಳಶಾಹಿ ಹಾಗೂ ಸಮಾಜವಾದ ಎಂಬ ವಿಚಾರಗಳ ಬಗ್ಗೆ ವೆಂಬು ಅವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದು, ಉದ್ಯೋಗಿಗಳ ವಜಾಗೊಳಿಸುವ ಪ್ರಕ್ರಿಯೆಯನ್ನು ಖಂಡಿಸಿದ್ದಾರೆ. ಇದೊಂದು ವಿದೇಶಗಳ ಸಂಸ್ಕೃತಿಯಾಗಿದ್ದು, ಭಾರತದಲ್ಲೂ ಬರಬಹುದು ಎಂಬ ಆತಂಕವನ್ನು ಅವರು ಹೊರಹಾಕಿದ್ದಾರೆ.


Click it and Unblock the Notifications