ಆನ್‌ಲೈನ್ ಆಹಾರ ಆರ್ಡರ್ ಮತ್ತು ವಿತರಣಾ ಉದ್ಯಮದಲ್ಲಿ ಪ್ರಾಬಲ್ಯ ಹೊಂದಿರುವ ದೀಪಿಂದರ್ ಗೋಯಲ್ ಅವರ ಝೊಮ್ಯಾಟೊ ಸಂಸ್ಥೆಯೂ ಬರೋಬ್ಬರಿ 17.7 ಕೋಟಿ ರೂಪಾಯಿಗಳ ಬಡ್ಡಿ ಮತ್ತು ದಂಡದ ಜೊತೆಗೆ ಹೊಸ ಜಿಎಸ್‌ಟಿ ನೋಟಿಸ್ ಸ್ವೀಕರಿಸಿದೆ. ಪಶ್ಚಿಮ ಬಂಗಾಳದ ಕಂದಾಯ ಸಹಾಯಕ ಆಯುಕ್ತರು ಈ ನೋಟೀಸ್ ನೀಡಿದ್ದು ಇದರಲ್ಲಿ ವಿತರಣಾ ಶುಲ್ಕಗಳು, ಬಡ್ಡಿ ಮತ್ತು ಅದರ ಮೇಲಿನ ದಂಡದ ಮೇಲೆ ಜಿಎಸ್‌ಟಿಯನ್ನು ಪಾವತಿಸದಿರುವ ಬಗ್ಗೆ ಉಲ್ಲೇಖಿಸಲಾಗಿದೆ.
ಆನ್‌ಲೈನ್ ಆಹಾರ ವಿತರಣಾ ದೈತ್ಯ ಸಂಸ್ಥೆ ತೆರಿಗೆ ಪಾವತಿ ವಿಚಾರದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದು, ಇತ್ತೀಚಿನ ದಿನಗಳಲ್ಲಿ ವಿವಿಧ ರಾಜ್ಯದ ಅಧಿಕಾರಿಗಳಿಂದ ತೆರಿಗೆ ಬೇಡಿಕೆಯ ನೊಟೀಸ್ ಗಳನ್ನು ಸ್ವೀಕರಿಸುತ್ತಿದೆ. ಝೊಮ್ಯಾಟೊ ಒಂದೆಡೆ ಈ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಇದರಿಂದ ಕಂಪನಿಯ ಷೇರುಗಳ ಮೇಲೆ ಯಾವುದೇ ಪ್ರಭಾವ ಬಿದ್ದಿಲ್ಲ. ಯಾಕೆಂದರೆ ಈ ಕಂಪನಿಯ ಷೇರುಗಳು ಏರಿಕೆಯಾಗುತ್ತಲೇ ಇವೆ. ಬುಧವಾರ ಎನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಈ ಸಂಸ್ಥೆಯ ಷೇರು ಮೌಲ್ಯ 275.25 ರೂ. ಆಗಿದ್ದು ಕಂಪನಿಯ ಮಾರುಕಟ್ಟೆ ಮೌಲ್ಯವು ಸೆಪ್ಟೆಂಬರ್ 18 ರ ಹೊತ್ತಿಗೆ 2.40 ಲಕ್ಷ ಕೋಟಿ ರೂ. ಆಗಿತ್ತು.

ಪಶ್ಚಿಮ ಬಂಗಾಳದ ಕಂದಾಯ ಸಹಾಯಕ ಆಯುಕ್ತರು ಕಳುಹಿಸುವ ನೊಟೀಸ್ ವಿರುದ್ದ ಮೇಲ್ಮನವಿ ಸಲ್ಲಿಸಲು ಉದ್ದೇಶಿಸಿದೆ ಎಂದು ಕಂಪನಿಯು ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ. "ನಾವು ಅರ್ಹತೆಯ ಮೇಲೆ ಬಲವಾದ ಪ್ರಕರಣವನ್ನು ಹೊಂದಿದ್ದೇವೆ ಮತ್ತು ಕಂಪನಿಯು ಸೂಕ್ತ ಪ್ರಾಧಿಕಾರದ ಮುಂದೆ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುತ್ತದೆ ಎಂದು ನಾವು ನಂಬುತ್ತೇವೆ" ಎಂದು ಝೊಮ್ಯಾಟೊ ಹೇಳಿದೆ. ನೊಟೀಸ್ ನಲ್ಲಿ ಜಿಎಸ್‌ಟಿಯಲ್ಲಿ 11,12,79,712 ರೂ, ಬಡ್ಡಿಯಲ್ಲಿ 5,46,81,021 ರೂ . ಮತ್ತು 1,11,27,971 ರೂ. ದಂಡವನ್ನು ಒಳಗೊಂಡಿದೆ.
ಶೋಕಾಸ್ ನೋಟಿಸಿಗೆ ಕಂಪನಿಯು ಸಂಬಂಧಿಸಿದ ದಾಖಲೆಗಳು ಮತ್ತು ನ್ಯಾಯಾಲಯದ ಪ್ರಸ್ತಾಪಗಳೊಂದಿಗೆ ವಿಷಯವನ್ನು ಸ್ಪಷ್ಟಪಡಿಸಿದೆ, ಆದರೆ ಇಲಾಖೆಯೂ ಆದೇಶ ಹೊರಡಿಸುವಾಗ ಅದನ್ನು ಅರ್ಥಮಾಡಿಕೊಂಡಿಲ್ಲ ಎಂದು zomato ತಿಳಿಸಿದೆ. ಇದೇ ವೇಳೆ ಈ ಸಮಸ್ಯೆಯು ಯಾವುದೇ ಸಂಸ್ಥೆ ಮೇಲೆ ಯಾವುದೇ ಆರ್ಥಿಕ ಪರಿಣಾಮ ಬೀರುವುದಿಲ್ಲ ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ.
"ಸಂಬಂಧಿತ ಮೇಲ್ಮನವಿ ಪ್ರಾಧಿಕಾರದ ಮುಂದೆ ವಿಷಯವನ್ನು ಸಮರ್ಥಿಸಲು ಬಲವಾದ ಕಾರಣ ಹೊಂದಿದೆ ಎಂದು ಕಂಪನಿಯು ನಂಬುತ್ತದೆ ಮತ್ತು ಕಂಪನಿಯ ಮೇಲೆ ಯಾವುದೇ ಹಣಕಾಸಿನ ಪರಿಣಾಮವನ್ನು ನಿರೀಕ್ಷಿಸುವುದಿಲ್ಲ" ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಅಧಿಕಾರಿಗಳಿಂದ ತೆರಿಗೆ ಬೇಡಿಕೆಗಳನ್ನು Zomato ಎದುರಿಸುತ್ತಿರುವುದು ಇದೇ ಮೊದಲಲ್ಲ. ಕಂಪನಿಯು ಇತ್ತೀಚೆಗೆ ವಿವಿಧ ತೆರಿಗೆ ಇಲಾಖೆಗಳಿಂದ ಇದೇ ರೀತಿಯ ನೊಟೀಸ್ ಗಳನ್ನು ಪಡೆಯುತ್ತಿದೆ. ಕರ್ನಾಟಕದ ವಾಣಿಜ್ಯ ತೆರಿಗೆ (ಆಡಿಟ್) ಸಹಾಯಕ ಆಯುಕ್ತರಿಂದ 9.45 ಕೋಟಿ ರೂಪಾಯಿ ಮೊತ್ತದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಬೇಡಿಕೆ, ಹೆಚ್ಚುವರಿ ಕಮಿಷನರ್, (ಕೇಂದ್ರ GST) ಗುರುಗ್ರಾಮ್‌ನಿಂದ 2021 ರಲ್ಲಿ ಬಡ್ಡಿ ಮತ್ತು ದಂಡದ ಶುಲ್ಕಗಳು ಸೇರಿದಂತೆ 11.82 ಕೋಟಿ ರೂಪಾಯಿಗಳನ್ನು ಪಾವತಿಸುವಂತೆ ನೊಟೀಸ್ ಪಡೆದಿತ್ತು. ಈ ಸವಾಲುಗಳ ಹೊರತಾಗಿಯೂ, Zomato ಈ ಎಲ್ಲಾ ವಿಷಯಗಳಲ್ಲಿ ತನ್ನ ಒಂದೇ ರೀತಿಯ ನಿಲುವನ್ನು ಮುಂದುವರಿಸಿದೆ.


Click it and Unblock the Notifications