Englishहिन्दी മലയാളം தமிழ் తెలుగు

ಈ 10 ಕ್ರೆಡಿಟ್ ಕಾರ್ಡ್ ಶುಲ್ಕಗಳ ಬಗ್ಗೆ ನಿಮಗೆ ಗೊತ್ತಿರಲಿ..

Written By: Siddu
Subscribe to GoodReturns Kannada

ಕ್ರೆಡಿಟ್ ಕಾರ್ಡ್ ಅನ್ನೋದು ಹರಿತವಾದ ಅಲಗಿನ ಕತ್ತಿ ಎನ್ನಬಹುದು. ಈ ಕತ್ತಿಯನ್ನು ಸರಿಯಾಗಿ ಹಿಡಿದು ಬಳಸಿದರೆ ಅದ್ಭುತ ಕಲಾವಂತಿಕೆ ಸಾದ್ಯ. ಅದೇ ಕತ್ತಿಯನ್ನು ಬಳಸಲು ಬಾರದವರು ಕೈ ಕೊಯ್ದುಕೊಂಡರೆ ಕತ್ತಿಯೇ ಸರಿ ಇಲ್ಲವೆಂದು ದೂರುತ್ತಾರೆ. ಹಾಗಾಗಿ ಕ್ರೆಡಿಟ್ ಕಾರ್ಡ್ ಮೂಲಕ ಸಿಗುವ ಲಾಭಗಳನ್ನು ಪಡೆದು ಅನೇಕ ಇಕ್ಕಟ್ಟಿನ ಸಂದರ್ಭಗಳಲ್ಲಿ ಪಾರಾಗಬಹುದು.

ಆದರೆ ಕ್ರೆಡಿಟ್ ಕಾರ್ಡ್ ನ ಹರಿತ ಅಲಗನ್ನು ಹಿಡಿದುಕೊಳ್ಳದೇ ಇರುವುದು ಹೇಗೆ? ಮೊದಲನೆಯದಾಗಿ ಕ್ರೆಡಿಟ್ ಕಾರ್ಡ್ ನಮಗೆ ನೀಡುವುದು ಹಣವಲ್ಲ, ಬದಲಾಗಿ ಸಮಯಾವಕಾಶ ಎಂಬುದನ್ನು ಸ್ಪಷ್ಟವಾಗಿ ಅರಿತುಕೊಳ್ಳಬೇಕು. ಸಾಮಾಗ್ರಿ ಅಥವಾ ಸೇವೆಯನ್ನು ಕೊಂಡಾಗ ಇದರ ಮರುಪಾವತಿಗೆ ಒಂದು ದಿನಾಂಕ ಎಂಬುದಿರುತ್ತದಲ್ಲ, ಇದೇ ವಾಸ್ತವವಾಗಿ ನಮಗೆ ಕ್ರೆಡಿಟ್ ಕಾರ್ಡ್ ನೀಡುವ ಸಮಯಾವಕಾಶ. ಈ ಅವಕಾಶವನ್ನು ಸದುಪಯೋಗಿಸಿಕೊಳ್ಳುವುದರಲ್ಲಿಯೇ ಜಾಣತನ ಅಡಗಿದೆ.

ಆದರೆ ಕ್ರೆಡಿಟ್ ಕಾರ್ಡ್(credit card) ನೀಡುವವರು ತುಂಬಾ ಜಾಣರು. ಅವರು ವಿಧಿಸುವ ಎಷ್ಟೋ ಶುಲ್ಕಗಳ ಬಗ್ಗೆ ನಿಮಗೆ ಹೇಳುವುದೇ ಇಲ್ಲ. ಹೇಳಿದರೂ ಚಿಕ್ಕ ಅಕ್ಷರಗಳಲ್ಲೆಲ್ಲೋ ಬರೆದಿದ್ದು ಇದನ್ನು ಓದುವಷ್ಟು ವ್ಯವಧಾನವನ್ನು ನಾವ್ಯಾರೂ ತೋರುವುದಿಲ್ಲ.

ಆದ್ದರಿಂದ ಹೆಚ್ಚಿನ ಎಲ್ಲಾ ಕ್ರೆಡಿಟ್ ಕಾರ್ಡ್ ಸಂಸ್ಥೆಗಳು ನಮಗೆ ಗೊತ್ತಾಗದಂತೆ ವಿಧಿಸುವ ಈ ಶುಲ್ಕಗಳ ಬಗ್ಗೆ ತಿಳಿಯುವುದು ಕಾರ್ಡುದಾರರ ಜಾಣತನ. ಕ್ರೆಡಿಟ್ ಕಾರ್ಡ್ ಇದ್ದರೆ ಪ್ರಯೋಜನಗಳೇನು?

ಬನ್ನಿ, ಜಾಣರಾಗಲು ಈ ಶುಲ್ಕಗಳ ಬಗ್ಗೆ ಅರಿತು ಈ ಬಲೆಯಲಿ ಬೀಳದಿರುವಂತೆ ಜಾಗ್ರತೆ ವಹಿಸೋಣ...

1. ವಾರ್ಷಿಕ ಶುಲ್ಕ

ಇದನ್ನು ಸಾಮಾನ್ಯವಾಗಿ ಭಾಗವಹಿಸುವಿಕೆಯ ಅಥವಾ ಸದಸ್ಯತ್ವ ಶುಲ್ಕ ಎಂದೂ ಕರೆಯುತ್ತಾರೆ. ಕ್ರೆಡಿಟ್ ಕಾರ್ಡ್ ಪಡೆದುಕೊಂಡ ತಕ್ಷಣವೇ ಒಂದು ವರ್ಷಕ್ಕೆ ಇಷ್ಟು ಎಂದು ಶುಲ್ಕ ಹೇರುತ್ತಾರೆ. ಆದರೆ ಗ್ರಾಹಕರನ್ನು ಆಕರ್ಷಿಸಲು ಪ್ರಥಮ ವರ್ಷ ಉಚಿತವಾಗಿಸುತ್ತಾರೆ. ಆದರೆ ಒಂದು ವರ್ಷದ ಬಳಿಕ ಯಾವುದೇ ಸೂಚನೆ ಇಲ್ಲದೇ ಹದಿಮೂರನೆಯ ತಿಂಗಳ ಸ್ಟೇಟ್ ಮೆಂಟ್ ನಲ್ಲಿ ಶುಲ್ಕ ಧುತ್ತನೇ ಎದುರಾಗುತ್ತದೆ. ಇದು ಸಾಮಾನ್ಯವಾಗಿ ಐನೂರು ರೂಗಳಿಂದ ಮೂರು ಸಾವಿರದವರೆಗೂ ಇರಬಹುದು. ಉದಾಹರಣೆಗೆ ಐಸಿಐಸಿಐ ರೆಗಾಲಿಯಾ ಕ್ರೆಡಿಟ್ ಕಾರ್ಡ್ ನಲ್ಲಿ ಎರಡೂವರೆ ಸಾವಿರ ಇದ್ದರೆ ಐಸಿಐಸಿಐ ಸಿಗ್ನೇಚರ್ ಕಾರ್ಡ್ ಗೆ ಎರಡು ಸಾವಿರವಿದೆ.

2. ಬಡ್ಡಿ

ನಿಗದಿತ ಅವಧಿಯೊಳಗೆ ಮರುಪಾವತಿಸದ ಮೊತ್ತ ಅಥವಾ ಕನಿಷ್ಟ ಮೊತ್ತವನ್ನು ಕಳೆದ ಬಳಿಕ ಉಳಿದ ಮೊತ್ತಕ್ಕೆ ಬ್ಯಾಂಕುಗಳು ಬಡ್ಡಿ ವಿಧಿಸುತ್ತವೆ. ಇದು ಸಾಮಾನ್ಯವಾಗಿ ತಿಂಗಳಿಗೆ ಶೇ. 3ರ ಆಸುಪಾಸಿನಲ್ಲಿರುತ್ತದೆ. ಅಂದರೆ 36%-38% ವಾರ್ಷಿಕದಷ್ಟು ಭಾರೀ ಮೊತ್ತವಾಗಿರುತ್ತದೆ.

3. ನಗದು ಪಡೆಯುವ ಶುಲ್ಕ

ನಿಮ್ಮ ಕ್ರೆಡಿಟ್ ಕಾರ್ಡ್ ನಲ್ಲಿ ಒಟ್ಟು ಇಂತಿಷ್ಟು ಮೊತ್ತ ಎಂದು ನಿಗದಿಪಡಿಸಲಾಗಿದ್ದು, ಇದರ ಸುಮಾರು ಶೇ. 75-90ರಷ್ಟು ಮೊತ್ತವನ್ನು ನಗದು ರೂಪದಲ್ಲಿ ಪಡೆಯುವ ವ್ಯವಸ್ಥೆಯನ್ನು ಸಂಸ್ಥೆಗಳು ಒದಗಿಸುತ್ತವೆ. ಆದರೆ ಹಣ ಪಡೆಯುವ ನಿರ್ಧಾರ ಅನಿವಾರ್ಯ ಸಂದರ್ಭಗಳಲ್ಲದೇ ಬೇರೆ ಸಂದರ್ಭದಲ್ಲಿ ಮಾಡಬಾರದು. ಏಕೆಂದರೆ ಹಣ ಪಡೆದ ಮರುಕ್ಷಣದಲ್ಲಿಯೇ ಈ ಹಣ ಪಡೆದಕ್ಕಾಗಿ ಕ್ಯಾಶ್ ಅಡ್ವಾನ್ಸ್ ಫೀ ಎಂದು ಒಟ್ಟು ಮೊತ್ತದ ಎರಡೂವರೆ ಅಥವಾ ಮೂರು ಶೇಖಡಾ (ಅಥವಾ ಕನಿಷ್ಟ ರೂ. ಐನೂರರ ಆಸುಪಾಸು) ಶುಲ್ಕ ವಿಧಿಸಲಾಗುತ್ತದೆ. ಅಷ್ಟೇ ಅಲ್ಲ, ಹಣ ಪಡೆದ ಮರುಕ್ಷಣದಿಂದಲೇ ಈ ಮೊತ್ತಕ್ಕೆ ಸುಮಾರು 24%-46% ವಾರ್ಷಿಕ ಬಡ್ಡಿಯನ್ನೂ ವಿಧಿಸಲಾಗುತ್ತದೆ.

4. ಓವರ್ ಲಿಮಿಟ್ ಫೀ

ಸಾಮಾನ್ಯವಾಗಿ ನಮಗೆ ಸಾಲ ಪಡೆಯಲು ಒಂದು ಮಿತಿಯನ್ನು ವಿಧಿಸಲಾಗುತ್ತದೆ. ಉದಾಹರಣೆಗೆ ಐವತ್ತು ಸಾವಿರ ಎಂದಿಟ್ಟುಕೊಳ್ಳೋಣ. ಈಗಾಗಲೇ ಗ್ರಾಹಕ ನಲವತ್ತು ಸಾವಿರ ರೂ. ಬಳಸಿ ಆಗಿದ್ದು, ಇನ್ನು ಹತ್ತು ಸಾವಿರ ರೂ. ಮಾತ್ರವೇ ಬಾಕಿ ಇದೆ. ಸಾಲದ 'ಮಿತಿ' ಅಥವಾ ಲಿಮಿಟ್ ಎಂಬ ಪದಕ್ಕೆ ನಾವು ತಿಳಿದಿರುವಂತೆ ಈ ಮೊತ್ತಕ್ಕೂ ಮಿಗಿಲಾಗಿ ಈ ಕಾರ್ಡ್ ಅನ್ನು ಬಳಸುವಂತಿಲ್ಲ. ಇಲ್ಲೇ ನಾವು ಎಡವುವುದು. ಕಾರ್ಡ್ ಹತ್ತು ಸಾವಿರಕ್ಕೂ ಹೆಚ್ಚಿನ ಮೊತ್ತದ ಖರೀದಿ ಅಥವಾ ಸ್ವೈಪ್ ಮಾಡಲು ಅನುವು ಮಾಡಿಕೊಡುತ್ತದೆ ಹಾಗೂ ಹತ್ತು ಸಾವಿರಕ್ಕೆ ಹತ್ತು ಪೈಸೆ ಜಾಸ್ತಿಯಾದರೂ ಓವರ್ ಲಿಮಿಟ್ ಫೀ ಎಂದು ಸುಮಾರು ಐನೂರು ರೂಪಾಯಿಗಳನ್ನು ವಿಧಿಸಲಾಗುತ್ತದೆ. ಇದನ್ನು ಚಿಕ್ಕ ಅಕ್ಷರಗಳಲ್ಲಿ ನಿಬಂಧನೆಗಳಲ್ಲಿ ಬರೆದಿರಲಾಗುತ್ತದೆ. ಹಾಗಾಗಿ ಒಮ್ಮೆ ಈ ಶುಲ್ಕ ಬಿತ್ತೋ? ಇದನ್ನು ಪಾವತಿಸದೇ ನಿರ್ವಾಹವೇ ಇಲ್ಲವಾಗುತ್ತದೆ.

5. ಲೇಟ್ ಫೀ

ಪ್ರತಿ ಕಾರ್ಡಿಗೂ ಒಂದು ನಿಗದಿತ ದಿನಾಂಕಗಳಿರುತ್ತವೆ. ಈ ದಿನಾಂಕಕ್ಕೂ ಮುಂಚಿತವಾಗಿ ಬ್ಯಾಂಕುಗಳಿಗೆ ಪಾವತಿ ಮಾಡಿಬಿಟ್ಟಷ್ಟೂ ಗ್ರಾಹಕ ಸುರಕ್ಷಿತ. ಈ ನಿಗದಿತ ದಿನ ಗರಿಷ್ಠ ತೊಂಭತ್ತು ದಿನಗಳ ಬಳಿಕ ಬರಬಹುದು. ಇದಕ್ಕೂ ಮೀರಿದರೆ ಲೇಟ್ ಫೀ ಎಂಬ ದಂಡ ತೆರಬೇಕಾಗುತ್ತದೆ. ಇದು ಐನೂರರಿಂದ ಇಪ್ಪತ್ತು ಸಾವಿರದವರೆಗಿನ ಮೊತ್ತಕ್ಕೆ ಸುಮಾರು ರೂ. 700-800 ಆಗಬಹುದು. ಅಲ್ಲದೇ ಈ ದಿನಾಂಕ ರಜಾದಿನದಂದು ಬಂದಿದ್ದರೆ ಇದಕ್ಕೂ ಮುಂಚಿನ ರಜೆ ಇಲ್ಲದ ಹಾಗೂ ಕಛೇರಿಯ ವೇಳೆ ಮುಗಿಯುವುದಕ್ಕೂ ಮುನ್ನ (ಸಾಮಾನ್ಯ ಬ್ಯಾಂಕುಗಳು ಮದ್ಯಾಹ್ನ ಮೂರು ಘಂಟೆಯ ಬಳಿಕ ಬಂದ ಹಣವನ್ನು ಮರುದಿನ ಅಥವ ಮುಂದಿನ ಕೆಲಸದ ದಿನವೆಂದು ಪರಿಗಣಿಸುತ್ತವೆ) ಪಾವತಿಸಬೇಕು. ಕೆಲಸದ ದಿನವೇ ಆಗಿದ್ದರೂ ಅವಧಿಯ ಬಳಿಕ ಪಾವತಿಸಿದರೆ ಇದು ಕ್ರೆಡಿಟ್ ಕಾರ್ಡ್ ನಲ್ಲಿ ಮುಂದಿನ ಕೆಲಸದ ದಿನ ಅಥವಾ ಕಾಕತಾಳೀಯವಾಗಿ ನಿಮ್ಮ ಪಾವತಿಗೆ ಕಡೆಯ ದಿನದ ಬಳಿಕವೇ ಬಂದಿರುವಂತೆ ನಮೂದಾಗಿದ್ದದೂ ಈ ಶುಲ್ಕ ಬರುತ್ತದೆ. ಈ ಬಗ್ಗೆ ನೀವು ಎಷ್ಟು ಜಗಳವಾಡಿದರೂ ಉಪಯೋಗವಿಲ್ಲ. ಬ್ಯಾಂಕುಗಳು ಅವರ ಸಮಯದ ಬಗ್ಗೆಯೇ ವಾದಿಸುತ್ತವೆ ಹಾಗೂ ನಿಮಗೆ ಖಂಡಿತಾ ಸೋಲಾಗುತ್ತದೆ.

6. ವಿದೇಶದಲ್ಲಿ ಕಾರ್ಡ್ ಬಳಕೆಯ ಶುಲ್ಕ

ಕ್ರೆಡಿಟ್ ಕಾರ್ಡ್ ಪಡೆದ ದೇಶದ ಹೊರತಾಗಿ ಇತರ ದೇಶಗಳಲ್ಲಿ ಬಳಸಬಹುದಾದರೂ ಇದಕ್ಕೆ ಭಾರೀ ಮೊತ್ತದ ಶುಲ್ಕ ವಿಧಿಸಲಾಗುತ್ತದೆ. ಸಾಮಾನ್ಯವಾಗಿ ಖರೀದಿಯ ಮೊತ್ತದ 3.5% ನಷ್ಟು ವಿಧಿಸಲಾಗುತ್ತದೆ ಹಾಗೂ ಇವು ಯು.ಎಸ್. ಡಾಲರುಗಳಲ್ಲಿರುತ್ತವೆ. ಈ ಡಾಲರುಗಳನ್ನು ಭಾರತದ ರೂಪಾಯಿಗೆ ಪರಿವರ್ತಿಸುವಾಗಲೂ ಸರಿಯಾದ ವಿನಿಮಯ ದರ ದೊರಕದೇ ನಿಮ್ಮ ನಷ್ಟ ಇನ್ನಷ್ಟು ಏರುತ್ತದೆ.

7. ಬದಲಿ ಸ್ಟೇಟ್ ಮೆಂಟ್ ಫೀ

ಪ್ರತಿ ತಿಂಗಳೂ ಬ್ಯಾಂಕು ನಿಮಗೆ ಕಾಗದದಲ್ಲಿ ಮುದ್ರಿತ ವರದಿಯನ್ನು ನೀಡುತ್ತದೆ. ಮಂಥ್ಲಿ ಸ್ಟೇಟ್ಮ್ಂಟ್ ಅನ್ನುವ ಈ ವರದಿಗೂ ಕೊಂಚ ಶುಲ್ಕ ವಿಧಿಸುತ್ತವೆ. ಇದು ಬೇಡ ಎನ್ನುವುದಾದರೆ ಈ-ಸ್ಟೇಟ್ಮೆಂಟ್ ಅಥವಾ ವಿದ್ಯುನ್ಮಾನ ವರದಿಯನ್ನೂ ಪಡೆದುಕೊಳ್ಳಬಹುದು ಹಾಗೂ ಇದೇ ಉತ್ತಮ. ಆದರೆ ಒಂದು ವೇಳೆ ಯಾವುದೋ ಅಗತ್ಯಕ್ಕೆ ಬ್ಯಾಂಕಿನಿಂದ ಈ ವರದಿಯ ಇನ್ನೊಂದು ಪ್ರತಿ ಬೇಕಿದ್ದರೆ ಇದನ್ನು ಮುದ್ರಿಸಲು ಸುಮಾರು ಐವತ್ತರಿಂದ ನೂರು ರೂಪಾಯಿಯವರೆಗೆ ಶುಲ್ಕ ವಿಧಿಸಲಾಗುತ್ತದೆ.

8. ಬದಲಿ ಕಾರ್ಡ್ ಶುಲ್ಕ

ಒಂದು ವೇಳೆ ನಿಮ್ಮ ಕಾರ್ಡ್ ಕಳೆದುಹೋದರೆ ತಕ್ಷಣ ಈ ಬಗ್ಗೆ ಬ್ಯಾಂಕಿಗೆ ತಿಳಿಸಿ ಕಾರ್ಡ್ ಬ್ಲಾಕ್ ಮಾಡಲು ಕೇಳಿಕೊಳ್ಳಬೇಕು. ಇಲ್ಲದಿದ್ದರೆ ಇದು ಸಿಕ್ಕಿದ ವ್ಯಕ್ತಿ ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇದೆ. ಅಥವಾ ಕಾರ್ಡ್ ಯಾವುದೋ ಕಾರಣದಿಂದ ಹಾನಿಗೀಡಾಗಿ ಈಗ ಬದಲಿ ಕಾರ್ಡ್ ಪಡೆದುಕೊಳ್ಳುವುದಾದರೆ ಬ್ಯಾಂಕು ಇದಕ್ಕೆ ಸುಮಾರು 250-300 ರೂ. ಶುಲ್ಕ ವಿಧಿಸುತ್ತವೆ. ಹೆಚ್ಡಿಎಫ್ಸಿ ಹಾಗೂ ಐಸಿಐಸಿಐ ಬ್ಯಾಂಕುಗಳು ನೂರು ರೂಪಾಯಿ ಶುಲ್ಕ ವಿಧಿಸುತ್ತವೆ.

9. ಇಸಿಎಸ್ ಪಾವತಿ ಮಾಡದಿರುವ ಶುಲ್ಕ

 ಒಂದು ವೇಳೆ ನೀವು ಕಾರ್ಡಿನ ಮೂಲಕ ಯಾವುದೋ ಶುಲ್ಕವನ್ನು ಮುಂದಿನ ದಿನಾಂಕಕ್ಕೆ ನೀಡುವಂತೆ ನಿರ್ದೇಶಿಸಿದ್ದು ಆ ದಿನಾಂಕದ ಸಮಯದಲ್ಲಿ ಕಾರ್ಡ್ ನಲ್ಲಿ ಸಾಕಷ್ಟು ಹಣವಿಲ್ಲದೇ ಇದ್ದರೆ ಇದಕ್ಕೂ ಶುಲ್ಕ ವಿಧಿಸಲಾಗುತ್ತದೆ. ಅಲ್ಲದೇ ಒಂದು ವೇಳೆ ನೀವು ನೀಡಿದ ಚೆಕ್ ನಲ್ಲಿನ ಹಸ್ತಾಕ್ಷರ ಅನುಮಾನ ಮೂಡಿಸುವಂತಿದ್ದರೂ ಚೆಕ್ ಪಾಸ್ ಆಗದೇ ಇದ್ದುದಕ್ಕಾಗಿಯೂ ಶುಲ್ಕ ವಿಧಿಸಲಾಗುತ್ತದೆ.

10. ಸರ್ವಿಸ್ ಟ್ಯಾಕ್ಸ್

2015-2016ರಲ್ಲಿ ಹೊರಡಿಸಲಾದ ಅಧಿಸೂಚನೆಗಳ ಪ್ರಕಾರ ಕ್ರೆಡಿಟ್ ಕಾರ್ಡ್ ಸೇವೆಗೆ ಸುಮಾರು ಶೇ. 14 ಸೇವಾ ಶುಲ್ಕವನ್ನು ವಿಧಿಸಬಹುದು. 2016ರ ಕೇಂದ್ರ ಬಜೆಟ್ ಪ್ರಕಾರ 2016 ಜೂನ್ ಒಂದರಿಂದ ಈ ತೆರಿಗೆ ಒಟ್ಟು ಶೇಖಡಾ ಹದಿನೈದು ಆಗಲಿದೆ. ಹಾಗಾಗಿ ನಿಮ್ಮ ಯಾವುದೇ ಖರೀದಿಗೆ ಈ ಮೊತ್ತವನ್ನು ಹೆಚ್ಚುವರಿಯಾಗಿ ನೀಡಲೇಬೇಕಾಗುತ್ತದೆ. ಕ್ರೆಡಿಟ್ ಕಾರ್ಡ್ ಕೊಳ್ಳುವ ಮುನ್ನ 9 ಅಂಶ ತಲೆಯಲ್ಲಿರಲಿ

English summary

10 Credit Card charges that you should be aware...

I know so many people who have said the same thing to me time and again. While getting a credit card at the drop of a hat feels good, it may not always be the best offer available.
Story first published: Wednesday, July 19, 2017, 12:11 [IST]
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

Get Latest News alerts from Kannada Goodreturns