ಅತಿಕಡಿಮೆ ಬಂಡವಾಳದಲ್ಲಿ ಪ್ರತಿಯೊಬ್ಬರು ಈ ಉದ್ಯಮಗಳನ್ನು ಪ್ರಾರಂಭಿಸಬಹುದು

By Siddu
Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

    ಆಧುನಿಕ ಜಗತ್ತಿನಲ್ಲಿ ಹೆಚ್ಚಿನ ಜನರು ಸ್ವಂತ ಉದ್ಯೋಗ ಅಥವಾ ಬಿಸಿನೆಸ್ ಮಾಡುವ ಕುರಿತು ಆಲೋಚಿಸುತ್ತಾರೆ. ಇದೇ ಕಾರಣದಿಂದ ಪ್ರತಿದಿನ 'ನವೋದ್ಯಮಿ' ಗಳು ಹುಟ್ಟಿಕೊಳ್ಳುತ್ತಿದ್ದು, ಅವರು ಹೊಸ ಉದ್ಯಮ (ಸ್ಟಾರ್ಟ್‌ಅಪ್) ಗಳ ಆರಂಭಕ್ಕೆ ಕೈ ಹಾಕುತ್ತಿದ್ದಾರೆ. ಹೀಗಾಗಿ ಜಗತ್ತಿನಾದ್ಯಂತ ಸ್ಟಾರ್ಟ್‌ಅಪ್ ಗಳ ಭರಾಟೆ ಜೋರಾಗಿ ನಡೆಯುತ್ತಿದೆ. ಜನ್ಮತಾಳುವ ಎಲ್ಲ ಸ್ಟಾರ್ಟ್‌ಅಪ್ ಗಳೂ ಯಶಸ್ಸು ಕಾಣುವುದಿಲ್ಲ ಎಂಬುದು ಗೊತ್ತಿರುವ ಸಂಗತಿ.

    ನಿಮ್ಮಲ್ಲಿ ಆಸಕ್ತಿ ಇದ್ದು, ಸ್ವಂತ ಉದ್ಯಮ ಮಾಡುವ ಇಚ್ಛೆ ಇದ್ದಲ್ಲಿ ಇಲ್ಲಿ ನೀಡಲಾಗಿರುವ ಬಿಸಿನೆಸ್ ಐಡಿಯಾಗಳು ಸಹಕಾರಿಗುತ್ತವೆ.

    1. ಟೀ-ಶರ್ಟ್ ಪ್ರಿಂಟಿಂಗ್

    ಟೀ-ಶರ್ಟ್ ಪ್ರಿಂಟಿಂಗ್ ವ್ಯವಹಾರ ಬಹು ಜನಪ್ರಿಯತೆ ಪಡೆಯುತ್ತಿದೆ. ದೇಶದಲ್ಲಿರುವ ಬಹುತೇಕ ಎಲ್ಲ ದೊಡ್ಡ ಸಂಘ, ಸಂಸ್ಥೆಗಳು ಹಾಗೂ ಕಂಪನಿಗಳಿಗೆ ದೊಡ್ಡ ಪ್ರಮಾಣದಲ್ಲಿ ತಮ್ಮ ಕಂಪನಿ ಹೆಸರಿನ ಪ್ರಿಂಟ್ ಇರುವ ಟೀ-ಶರ್ಟ್ ಗಳ ಅವಶ್ಯಕತೆ ಇರುತ್ತದೆ. ಕಂಪನಿಗಳಿಗೆ ಬೇಕಾದ ಹಾಗೆ, ವೈವಿಧ್ಯಮಯವಾಗಿ ಟೀ-ಶರ್ಟ್ ಪ್ರಿಂಟ್ ಮಾಡಿಕೊಡುವುದು ಲಾಭದಾಯಕ ಉದ್ಯಮವಾಗಿದೆ.

    2. ಡೇ ಕೇರ್

    ಡೇ ಕೇರ್ ಎಂಬುದು ಹೆಸರೇ ಸೂಚಿಸುವಂತೆ ದಿನದ ಅವಧಿಯಲ್ಲಿ ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವ ಕೆಲಸವಾಗಿದೆ. ಇಂದು ಬಹುತೇಕ ಸುಶಿಕ್ಷಿತ ಮಹಿಳೆಯರು ಉದ್ಯೋಗಸ್ಥರಾಗಿದ್ದು, ಮಕ್ಕಳನ್ನೂ ನೋಡಿಕೊಂಡು ಕೆಲಸಕ್ಕೆ ಹೋಗುವುದು ಅವರಿಗೆ ಹೊರೆಯಾಗುತ್ತಿದೆ. ಈ ಸಂದರ್ಭದಲ್ಲಿ ಕಾಳಜಿ ಪೂರ್ವಕವಾಗಿ ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವ ಡೇ ಕೇರ್ ಸೆಂಟರ್ ಆರಂಭಿಸಿ ಯಶಸ್ವಿ ಉದ್ಯಮಿಯಾಗಬಹುದು.

    3. ಮನೆ ಸ್ವಚ್ಛತೆ ಸೇವೆ

    ಮನೆ ಹಾಗೂ ಆಫೀಸುಗಳಲ್ಲಿ ಕಸ ಗುಡಿಸಲು, ಮನೆಯಲ್ಲಿ ಅಡುಗೆ ಮಾಡಲು ಮುಂತಾದ ಕೆಲಸಗಳಿಗೆ ಬಹುತೇಕರು ಮನೆಗೆಲಸದವರನ್ನು ಅವಲಂಬಿಸಿದ್ದಾರೆ. ಆದರೆ ತಮ್ಮ ಮನೆಗೆಲಸದವಳು ತಾವು ಹೇಳಿದಂತೆ ಕೆಲಸ ಮಾಡುವುದಿಲ್ಲ ಎಂಬುದು ಅನೇಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ. ಈ ಕ್ಷೇತ್ರದಲ್ಲಿ ನುರಿತ ಒಳ್ಳೆಯ ಕೆಲಸಗಾರರನ್ನು ತಯಾರು ಮಾಡಿ, ಅವಶ್ಯಕತೆ ಇರುವೆಡೆ ಗಂಟೆಗಳ ಲೆಕ್ಕದ ಆಧಾರದಲ್ಲಿ ಕಳಿಸಲು ವ್ಯವಸ್ಥೆ ಮಾಡಬಹುದು. ಇದಕ್ಕಾಗಿ ಆನ್‌ಲೈನ್ ಸೇರಿದಂತೆ ಇನ್ನಿತರ ಮಾರ್ಗಗಳ ಮೂಲಕ ನೆಟ್ ವರ್ಕ್ ಹೆಣೆಯಬಹುದು.

    4. ಸಾಮಾಜಿಕ ಕೆಲಸಗಳ ಮೂಲಕ ವಂತಿಗೆ ಸಂಗ್ರಹಣೆ

    ಅವಶ್ಯಕತೆ ಇರುವ ಸಂಘ, ಸಂಸ್ಥೆಗಳಿಗೆ ಸಾರ್ವಜನಿಕರಿಂದ ಹಣ ಸಂಗ್ರಹಿಸುವ ಕೆಲಸ ಮಾಡಬಹುದು. ನಿಮ್ಮಲ್ಲಿ ನಂಬಿಕೆ ಇರುವ ಜನರಿಂದ ನೀವು ವಂತಿಗೆ ಸಂಗ್ರಹಿಸಲು ವೇದಿಕೆ ಸಿದ್ಧ ಪಡಿಸಬಹುದು. ಯಾವುದೋ ಹೊಸ ಜನಹಿತ ಕೆಲಸ, ಧರ್ಮಕಾರ್ಯ ಹಾಗೂ ಇನ್ನಿತರ ಸಮಾಜೋಪಯೋಗಿ ಕೆಲಸಗಳಿಗಾಗಿ ಕೈ ಜೋಡಿಸಬಹುದು.

    5. ವೈಯಕ್ತಿಕ ಶಾಪಿಂಗ್

    ಸೌಂದರ್ಯವಂತರಾಗಿ ಕಾಣಲು ಏನು ಮಾಡಬೇಕು, ಯಾವ ರೀತಿಯ ವೇಷ ಭೂಷಣ ತೊಡಬೇಕು ಎಂಬ ಬಗ್ಗೆ ಅನೇಕರಿಗೆ ಗೊಂದಲವಿರುತ್ತದೆ. ಇಂಥವರಿಗೆ ಫ್ಯಾಷನ್ ವೃತ್ತಿಪರರು ಸೂಕ್ತ ಮಾರ್ಗದರ್ಶನ ಮಾಡಬಲ್ಲರು. ಕೆಲ ಹಂತದ ಚರ್ಚೆ ಹಾಗೂ ಲಿಖಿತ ಮಾಹಿತಿಯ ಮೇರೆಗೆ ಈ ಫ್ಯಾಷನ್ ತಜ್ಞರು, ಯಾವ ರೀತಿಯ ಬಟ್ಟೆ ಹಾಗೂ ಇನ್ನಿತರ ವೈಯಕ್ತಿಕ ಸೌಂದರ್ಯ ಆಧಾರಿತ ವಸ್ತುಗಳನ್ನು ಖರೀದಿಸಬೇಕೆಂಬುದರ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ. ಈ ಕ್ಷೇತ್ರದಲ್ಲಿ ಸಾಕಷ್ಟು ಸ್ಟಾರ್ಟ್‌ಅಪ್ ಅವಕಾಶಗಳಿವೆ.

    6. ಹೊರಾಂಗಣ ಜಾಹೀರಾತು

    ಡಿಜಿಟಲ್ ಮಾರ್ಕೆಟಿಂಗ್ ವಿಧಾನ ಅತಿ ಪರಿಣಾಮಕಾರಿ ಹಾಗೂ ಮಿತವ್ಯಯಕಾರಿಯಾಗಿದೆ. ಆದರೂ ಹೋರ್ಡಿಂಗ್ಸ್, ಬಸ್ ಶೆಲ್ಟರ್ ಗಳು ಹಾಗೂ ಇನ್ನಿತರ ಕಡೆ ಹೊರಾಂಗಣ ಜಾಹೀರಾತುಗಳು ತಮ್ಮ ಬೇಡಿಕೆ ಕಳೆದುಕೊಂಡಿಲ್ಲ. ಈ ವಲಯ ಸಹ ಬುದ್ಧಿವಂತ ಉತ್ಸಾಹಿಗಳಿಗೆ ಸಾಕಷ್ಟು ಅವಕಾಶಗಳನ್ನು ಒಳಗೊಂಡಿದೆ.

    7. ಪರ್ಯಾಯ ಮಾರ್ಗಗಳ ಮೂಲಕ ಮಿತವ್ಯಯದ ಇಂಧನ ಉತ್ಪಾದನೆ

    ಪರ್ಯಾಯ ಮಾರ್ಗಗಳ ಮೂಲಕ ಇಂಧನ ಉತ್ಪಾದನೆ ಇಂದಿನ ದಿನಮಾನಗಳಲ್ಲಿ ಅತಿ ಅಗತ್ಯವಾಗಿದೆ. ಸೋಲಾರ್, ಗಾಳಿ ಯಂತ್ರ ಹಾಗೂ ಜಲಮೂಲಗಳಿಂದ ವಿದ್ಯುತ್ ಉತ್ಪಾದನೆ ಘಟಕಗಳು ಭಾರಿ ಬೇಡಿಕೆಯಲ್ಲಿವೆ. ಬೆಳೆಯುತ್ತಿರುವ ನಮ್ಮ ದೇಶದಲ್ಲಿ ಇವುಗಳಿಗೆ ಬೇಡಿಕೆ ಮತ್ತಷ್ಟು ಹೆಚ್ಚಾಗಲಿದೆ.

    8. ಹಳೆಯ ಪುಸ್ತಕಗಳ ಮಾರಾಟ

    ಇಂದಿಗೂ ಭಾರತದಲ್ಲಿ ಹೈಸ್ಕೂಲ್ ನಂತರದ ಶಿಕ್ಷಣ ಬಹಳಷ್ಟು ಜನರಿಗೆ ಮರೀಚಿಕೆಯಾಗಿದೆ. ಶಿಕ್ಷಣದ ಶುಲ್ಕ ಅಥವಾ ಕಲಿಕೆಗೆ ಬೇಕಾಗುವ ಪುಸ್ತಕಗಳಿಗೆ ಹಣ ಹೊಂದಿಸಲಾಗದೆ ಅನೇಕರು ಶಿಕ್ಷಣವನ್ನು ಅರ್ಧದಲ್ಲಿ ನಿಲ್ಲಿಸುತ್ತಾರೆ. ಈ ಪರಿಸ್ಥಿತಿಯಲ್ಲಿ ಒಬ್ಬರು ಓದಿ ಬಿಟ್ಟ ಪಠ್ಯ ಪುಸ್ತಕಗಳ ಮಾರಾಟ ಸಾಕಷ್ಟು ಲಾಭದಾಯಕ ವ್ಯಾಪಾರ ಆಗಬಹುದಾಗಿದೆ. ಇದೊಂದು ದೀರ್ಘಕಾಲದ ವ್ಯವಹಾರವಾಗಿದೆ.

    9. ಆಟೋ ರಿಕ್ಷಾ ಸರ್ವಿಸ್

    ಚಿಕ್ಕ ನಗರಗಳಲ್ಲಿ ಆಟೋ ರಿಕ್ಷಾಗಳೇ ಜನರ ಪ್ರಮುಖ ಸಾರಿಗೆ ಸಾಧನಗಳಾಗಿವೆ. ಆದರೆ ಕೆಲ ಸಂದರ್ಭಗಳಲ್ಲಿ ಮನೆಯ ಹತ್ತಿರ ಆಟೋ ಸಿಗದೆ ಪರದಾಡುವಂತಾಗುತ್ತದೆ. ಈ ಪರಿಸ್ಥಿತಿಯಲ್ಲಿ ಆಟೋ ರಿಕ್ಷಾ ಸರ್ವಿಸ್ ಸಿಗುವಂತೆ ವ್ಯವಸ್ಥೆ ಮಾಡುವುದು ಒಂದು ಲಾಭದಾಯಕ ವ್ಯವಹಾರವಾಗಬಹುದು. ಅದರಲ್ಲೂ ೨ ಹಾಗೂ ೩ನೇ ಹಂತದ ನಗರಗಳಲ್ಲಿ ಈ ಸರ್ವಿಸ್ ಗೆ ಹೆಚ್ಚು ಬೇಡಿಕೆ ಇದೆ.

    10. ಮಹಿಳೆಯರ ಸುರಕ್ಷತೆ

    ಮಹಿಳೆಯರ ಸುರಕ್ಷತೆಗೆ ಅನುಕೂಲವಾಗುವಂತಹ ಆಪ್ ಹಾಗೂ ವೆಬ್ ಸೈಟ್ ಗಳನ್ನು ರೂಪಿಸುವುದು ಹಾಗೂ ಅವರ ಸುರಕ್ಷತೆಗೆ ಬೇಕಾದ ವ್ಯವಸ್ಥೆ ಮಾಡುವುದು ಇಂದು ಅತಿ ಅವಶ್ಯಕವಾಗಿದೆ. ಇದನ್ನು ಕೇವಲ ಹಣ ಗಳಿಸುವ ಉದ್ದೇಶದಿಂದ ನೋಡಬೇಕಿಲ್ಲ. ಈ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತರಲು ನೀವು ಯಶಸ್ವಿಯಾದಲ್ಲಿ ಹಣವೇ ನಿಮ್ಮನ್ನು ಬೆನ್ನತ್ತಿ ಬರುತ್ತದೆ. ಪ್ರತಿದಿನ ಮಹಿಳೆಯರು ಎದುರಿಸುವ ಸಮಸ್ಯೆ ಹಾಗೂ ಸುರಕ್ಷತೆಯ ಸವಾಲುಗಳನ್ನು ಪರಿಣಾಮಕಾರಿಯಾಗಿ ನಿವಾರಿಸುವಂತೆ ಸೂಕ್ತ ವ್ಯವಸ್ಥೆ ಮಾಡುವುದು ಅಗತ್ಯ.

    11. ಮಹಿಳೆಯರಲ್ಲಿ ನೈರ್ಮಲ್ಯ ಹಾಗೂ ಆರೋಗ್ಯ

    ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಕಾಳಜಿ ಇಂದಿಗೂ ಹಿಂದುಳಿದ ದೇಶಗಳಲ್ಲಿ ಅತಿ ಕಡಿಮೆಯಾಗಿದೆ. ಪ್ರಸ್ತುತ ಮಹಿಳೆಯರು ಋತುಚಕ್ರದ ಅವಧಿಯಲ್ಲಿ ನೇಯದ ಸ್ಯಾನಿಟರಿ ನ್ಯಾಪ್ ಕಿನ್ ಹಾಗೂ ಮೃದು ಬಟ್ಟೆಗಳನ್ನು ಬಳಸುತ್ತಾರೆ. ಈ ಕ್ಷೇತ್ರದಲ್ಲಿ ನವೀನ ಸಂಶೋಧನೆಗಳ ಮೂಲಕ ಹೊಸದನ್ನು ಆವಿಷ್ಕರಿಸುವ ಅವಕಾಶಗಳು ಸಾಕಷ್ಟಿವೆ.

    12. ಉದ್ಯೋಗಿಗಳ ತರಬೇತಿ

    ಕಂಪನಿಗಳಲ್ಲಿ ನಡೆಯುವ ಉದ್ಯೋಗಿಗಳ ತರಬೇತಿ ಕಾರ್ಯಾಗಾರಗಳು ಎಷ್ಟೋ ಬಾರಿ ತೀರಾ ಗೊಂದಲಕಾರಿ ಹಾಗೂ ನಿರುಪಯೋಗಿಯಾಗಿರುತ್ತವೆ. ಏಕೆಂದರೆ ಬಹುತೇಕ ತರಬೇತಿಗಳು ಕಂಪನಿ ಏನು ಬಯಸುತ್ತವೆಯೋ ಆ ಜ್ಞಾನವನ್ನೇ ನೀಡುವುದಿಲ್ಲ. ಈ ಸಮಸ್ಯೆ ನಿವಾರಿಸಿ ಕಂಪನಿಗಳಿಗೆ ಬೇಕಾದ ಹಾಗೆ ಉದ್ಯೋಗಿಗಳಿಗೆ ತರಬೇತಿ ನೀಡಲು ಉತ್ಸಾಹಿ ಯುವಪಡೆ ಮುಂದೆ ಬರಬಹುದು.

    13. ಗೃಹ ಸುರಕ್ಷತೆಗೆ ಆಪ್

    ಸ್ಮಾರ್ಟ್ ಫೋನ್ ನೊಂದಿಗೆ ಮನೆಯ ಸುರಕ್ಷತೆಯನ್ನು ಜೋಡಿಸುವುದು ಇತ್ತೀಚಿನ ಟ್ರೆಂಡ್ ಆಗುತ್ತಿದೆ. ಇದಕ್ಕಾಗಿ ಹಲವಾರು ಆಪ್ ಗಳು ತಯಾರಾಗಿವೆ. ಮನೆಯಿಂದ ದೂರವಿರುವಾಗ ಸ್ಮಾರ್ಟ್ ಫೋನ್ ಮೂಲಕ ಮನೆಯ ಸುರಕ್ಷತೆ ನಿರ್ವಹಿಸುವುದು ಈ ಆಪ್ ಗಳ ವೈಶಿಷ್ಟ್ಯವಾಗಿದೆ. ಮನೆಯ ಕಿಟಕಿ ಅಥವಾ ಬಾಗಿಲು ಮುರಿದು ಯಾರೇ ಒಳ ಹೋಗಲು ಯತ್ನಿಸಿದರೂ ಕ್ಷಣಾರ್ಧದಲ್ಲಿ ಆ ಮಾಹಿತಿ ಸಂಬಂಧಿತ ಸ್ಮಾರ್ಟ್ ಫೋನ್ ಗೆ ರವಾನೆಯಾಗುತ್ತದೆ. ಈ ಕ್ಷೇತ್ರದಲ್ಲಿ ಸಹ ಸಾಕಷ್ಟು ಅವಕಾಶಗಳಿವೆ.

    14. ರಿವರ್ಸ್ ಲಾಜಿಸ್ಟಿಕ್ಸ್

    ಖ್ಯಾತ ಇ-ಕಾಮರ್ಸ್ ಕಂಪನಿಗಳಿಗೆ ಗ್ರಾಹಕರು ತಾವು ಆರ್ಡರ್ ಮಾಡಿದ ವಸ್ತುವನ್ನು ತಿರಸ್ಕರಿಸಿ ಮರಳಿಸುವುದು ಬಹುದೊಡ್ಡ ಸವಾಲಾಗಿದೆ. ರಿವರ್ಸ್ ಲಾಜಿಸ್ಟಿಕ್ಸ್ ಎಂದು ಕರೆಯುವ ಈ ಪ್ರಕ್ರಿಯೆಯಿಂದ ಕಂಪನಿಗಳಿಗೆ ಸಾಕಷ್ಟು ನಷ್ಟವಾಗುತ್ತಿದೆ. ಆದರೆ ಸೂಕ್ತವಾಗಿ ನಿಭಾಯಿಸಿದಲ್ಲಿ ರಿವರ್ಸ್ ಲಾಜಿಸ್ಟಿಕ್ಸ್‌ನ ಖರ್ಚನ್ನು ಶೇ.೨೫ ರಷ್ಟು ಅಂದರೆ ವಸ್ತುವಿನ ಉತ್ಪಾದನಾ ವೆಚ್ಚದ ಶೇ.೧೦ ರಷ್ಟು ಕಡಿಮೆ ಮಾಡಬಹುದಾಗಿದೆ. ಇಂಥ ಒಂದು ಸ್ಟಾರ್ಟ್‌ಅಪ್ ಇ-ಕಾಮರ್ಸ್ ಕಂಪನಿಗಳಿಗೆ ವರದಾನವಾಗಬಹುದು.

    15. ಶಿಕ್ಷಣ ಸೇವೆಗಳು

    ಮಕ್ಕಳ ಕಲಿಕೆಯ ಎಲ್ಲ ಹಂತಗಳಲ್ಲಿ ಜನ ಇತ್ತೀಚೆಗೆ ನುರಿತ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುತ್ತಿದ್ದಾರೆ. ಶೈಕ್ಷಣಿಕ, ಸಾಮಾನ್ಯ ಕಂಪ್ಯೂಟರ್ ಬಳಕೆ, ಅಥ್ಲೆಟಿಕ್ ಸೇರಿದಂತೆ ಇನ್ನೂ ಹಲವಾರು ವಿಷಯಗಳ ಕಲಿಕೆಗೆ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಆದರೆ ಕೆಲ ಸಂದರ್ಭಗಳಲ್ಲಿ ಸೂಕ್ತವಾದ ಶಿಕ್ಷಕರನ್ನು ಹುಡುಕುವುದೇ ಸಮಸ್ಯೆಯಾಗಿ ಪರಿಣಮಿಸುತ್ತದೆ. ಈ ಸಮಸ್ಯೆ ನಿವಾರಣೆಗೆ ಬೇಡಿಕೆ ಇರುವ ಶಿಕ್ಷಕರನ್ನು ಗುರುತಿಸಿ, ಅವರ ಮಾಹಿತಿಯನ್ನು ಅವಶ್ಯಕತೆ ಇರುವವರಿಗೆ ನೀಡಬಹುದು. ಇದು ಆಫ್ ಲೈನ್ ಅಥವಾ ಆನ್ ಲೈನ್ ಮೂಲಕ ಆಗಬಹುದು.

    16. ಭಾಷಾಂತಕಾರರು

    ಬಹುಭಾಷೆಗಳ ದೇಶ ಭಾರತದಲ್ಲಿ ವೈದ್ಯಕೀಯ ಕ್ಷೇತ್ರವೇ ಇರಲಿ, ವಿಮಾ ವಲಯವೇ ಇರಲಿ, ಗ್ರಾಹಕರೊಂದಿಗೆ ವ್ಯವಹರಿಸಲು ಕಂಪನಿಗಳಿಗೆ ಭಾಷಾಂತರಕಾರರ ಅಗತ್ಯವಿದೆ. ಅಲ್ಲದೆ ವಿದೇಶಗಳಲ್ಲಿನ ಗ್ರಾಹಕರೊಂದಿಗೆ ವ್ಯವಹರಿಸಲು ವಿದೇಶಿ ಭಾಷೆಗಳ ನಿಪುಣರ ಅವಶ್ಯಕತೆಯಿದೆ. ಈ ಕ್ಷೇತ್ರದಲ್ಲಿ ಭಾಷಾಂತರಕಾರರ ಕೊರತೆ ನೀಗಿಸುವ ಮೂಲಕ ಲಾಭದಾಯಕ ಉದ್ದಿಮೆ ಆರಂಭಿಸಬಹುದು.

    17. ಹಿರಿಯ ನಾಗರಿಕರ ಸೇವೆ

    ವರದಿಗಳ ಪ್ರಕಾರ, 2021ರ ವೇಳೆಗೆ ವೃದ್ಧರ ಜನಸಂಖ್ಯೆ 143 ಮಿಲಿಯನ್ ಆಗಲಿದೆ. ಆದರೆ ಮನೆಯಲ್ಲಿರುವ ಗಂಡ-ಹೆಂಡತಿ ಇಬ್ಬರೂ ಕೆಲಸ ಮಾಡುವ ಈ ಯುಗದಲ್ಲಿ ವಯೋವೃದ್ಧರ ಸರಿಯಾದ ಆರೈಕೆ ಮಾಡಲು ಸಾಧ್ಯವಾಗುವುದಿಲ್ಲ. ಈ ಪರಿಸ್ಥಿತಿಯಲ್ಲಿ ವಯೋವೃದ್ಧರ ಆರೈಕೆಗಾಗಿ ವಿಶೇಷ ಸೇವೆಗಳನ್ನು ಆರಂಭಿಸಬಹುದು.

    18. ಆರೋಗ್ಯ ವಿಮಾ ಸಲಹೆಗಾರ

    ಬಹಳಷ್ಟು ಕಂಪನಿಗಳು ಪೂರ್ಣಾವಧಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವಷ್ಟು ಆರ್ಥಿಕ ಸಬಲತೆ ಹೊಂದಿರುವುದಿಲ್ಲ. ಅದರಲ್ಲೂ ಅತಿ ಸಂಕೀರ್ಣತೆಯ ಆರೋಗ್ಯ ವಿಮೆ ಕ್ಷೇತ್ರದಲ್ಲಿ ಪರಿಣಿತರನ್ನು ನೇಮಕ ಮಾಡಿಕೊಳ್ಳುವುದು ಕಷ್ಟದ ಕೆಲಸ. ಹೀಗಾಗಿಯೇ ಬಹುತೇಕ ಆರೋಗ್ಯ ವಿಮಾ ಕಂಪನಿಗಳು ತಮ್ಮ ಸೇವೆಗಳನ್ನು ಗ್ರಾಹಕರಿಗೆ ವಿವರಿಸಲು ಹೊರಗುತ್ತಿಗೆ ಏಜೆನ್ಸಿ ಮೊರೆ ಹೋಗುತ್ತವೆ. ಈ ಕ್ಷೇತ್ರದಲ್ಲಿ ಪರಿಣತಿ ಸಾಧಿಸಿದರೆ ಸ್ಟಾರ್ಟ್‌ಅಪ್ ಆರಂಭಿಸಲು ಸಾಧ್ಯ.

    19. ಕಾಪಿ ರೈಟರ್

    ವೆಬ್ ಸೈಟ್ ಹೊಂದಿರುವವರಿಗೆ ಪ್ರತಿ ದಿನ ಅಥವಾ ದಿನದ ಆಯಾ ಸಂದರ್ಭದಲ್ಲಿ ಹೊಸ ಕಂಟೆಂಟ್ ಅಪ್ ಲೋಡ್ ಮಾಡುವ ಅನಿವಾರ್ಯತೆ ಇರುತ್ತದೆ. ಸರ್ಚ್ ಎಂಜಿನ್ ಗಳು ಹೊಸ ಹಾಗೂ ವಿಷಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹುಡುಕುತ್ತವೆ. ಆದರೆ ಕಂಪನಿಗಳು ದಿನವಿಡೀ ಸರ್ಚ್ ಎಂಜಿನ್ ಗಳಿಗೆ ಬೇಕಾದ ಹಾಗೆ ಮಾಹಿತಿಯನ್ನು ಅಪ್ ಲೋಡ್ ಮಾಡುತ್ತ ಇರುವುದು ಸಾಧ್ಯವಾಗದ ಮಾತು. ಇಂಥ ಕಂಪನಿಗಳಿಗೆ ಬೇಕಾದ ಸೂಕ್ತ ಕಂಟೆಂಟ್ ಅನ್ನು ಕಡಿಮೆ ವೆಚ್ಚದಲ್ಲಿ, ನಿಯಮಿತವಾಗಿ ಕೊಡುವುದು ಒಂದು ಪ್ರಮುಖ ವ್ಯವಹಾರವಾಗಿದೆ. ಇದರ ಬಗ್ಗೆ ಸರಿಯಾಗಿ ತಿಳಿದುಕೊಂಡು ಕಾಪಿ ರೈಟರ್ ಕೆಲಸದ ಬಗ್ಗೆ ಸ್ಟಾರ್ಟ್‌ಅಪ್ ಆರಂಭಿಸಬಹುದು.

    20. ಕಾರ್ಯಾಗಾರಗಳ ನಿರ್ವಹಣೆ

    ಪ್ರತಿವರ್ಷ ಸಾವಿರಾರು ಸಂಖ್ಯೆಯ ಜನ ಕಾರ್ಯಾಗಾರ, ಮೀಟಿಂಗ್, ತರಬೇತಿ ಶಿಬಿರ ಮುಂತಾದುವುಗಳಿಗಾಗಿ ದೊಡ್ಡ ಮೊತ್ತದ ಹಣ ಖರ್ಚು ಮಾಡುತ್ತಾರೆ. ಇನ್ನು ಕೆಲ ಸಂದರ್ಭಗಳಲ್ಲಿ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಇಂಥ ಕಾರ್ಯಾಗಾರಗಳಿಗೆ ಕಳುಹಿಸುತ್ತವೆ.
    ವ್ಯವಹಾರ ನಿರ್ವಹಣೆಯಿಂದ ಹಿಡಿದು ಸಾಮಾನ್ಯ ಗಣಿತ ಜ್ಞಾನದ ಬಗ್ಗೆ ತಿಳಿಸಲು ಕಂಪನಿಗಳು ಸಾಕಷ್ಟು ಹಣ ವ್ಯಯಿಸುತ್ತವೆ.
    ಸಂವಹನ ಕಲೆ, ಮಾರಾಟ ನಿರ್ವಹಣೆ, ಮನೆಯಲ್ಲಿ ಸಂಗಾತಿಯೊಂದಿಗೆ ಹೊಂದಾಣಿಕೆ, ಮಕ್ಕಳೊಂದಿಗೆ ಒಡನಾಟ, ಹಣದ ಹೂಡಿಕೆ ಹೀಗೆ ಹಲವಾರು ವಿಷಯಗಳ ಬಗ್ಗೆ ತರಬೇತಿ ನೀಡಲಾಗುತ್ತದೆ.
    ಈ ಒಂದು ಕ್ಷೇತ್ರ ಸ್ಟಾರ್ಟ್ ಅಪ್ ಗಳಿಗೆ ಹೇಳಿ ಮಾಡಿಸಿದಂತಿದೆ ಎಂಬುದನ್ನು ಪ್ರತ್ಯೇಕವಾಗಿ ತಿಳಿಸಬೇಕಿಲ್ಲ.

    21. ಸಾಕು ಪ್ರಾಣಿಗಳ ಬಟ್ಟೆ ಹಾಗೂ ಇನ್ನಿತರ ವಸ್ತುಗಳು

    ಪ್ರಸ್ತುತ ಭಾರತದಲ್ಲಿ ಸಾಕು ಪ್ರಾಣಿಗಳ ನಿರ್ವಹಣೆಯ ಮಾರುಕಟ್ಟೆ ಸುಮಾರು ೮೦೦ ಕೋಟಿ ರೂಪಾಯಿಗಳಷ್ಟಾಗಿದೆ. ಕೆಲವರು ಪ್ರತಿತಿಂಗಳು ಸುಮಾರು ೧೦ ಸಾವಿರ ರೂಪಾಯಿಗಳವರೆಗೆ ತಮ್ಮ ಸಾಕು ಪ್ರಾಣಿಗಳಿಗಾಗಿ ಖರ್ಚು ಮಾಡುತ್ತಿದ್ದಾರೆ. ಈ ಕ್ಷೇತ್ರ ಮತ್ತಷ್ಟು ವಿಸ್ತಾರವಾಗುವ ಎಲ್ಲ ಸಾಧ್ಯತೆಗಳಿವೆ. ಹೀಗಾಗಿ ಸಾಕು ಪ್ರಾಣಿಗಳಿಗೆ ಬೇಕಾದ ವಸ್ತುಗಳ ಮಾರಾಟ ಅಥವಾ ಅವುಗಳ ಆರೈಕೆಯ ಬಗ್ಗೆ ಸ್ಟಾರ್ಟ್‌ಅಪ್ ಆರಂಭಿಸುವುದು ಲಾಭದಾಯಕವಾಗಬಹುದು.

    English summary

    Business Ideas: Everyone can start these businesses in a very small investment

    Business Ideas: Everyone can start these businesses in a very small investment
    Story first published: Friday, June 8, 2018, 10:38 [IST]
    Company Search
    Enter the first few characters of the company's name or the NSE symbol or BSE code and click 'Go'

    Find IFSC

    Get Latest News alerts from Kannada Goodreturns

    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more