ಕಾಲೇಜು ವಿದ್ಯಾರ್ಥಿ/ಯುವಕರಿಗಾಗಿ ಟಾಪ್ 20 ಕಡಿಮೆ ವೆಚ್ಚದ ಸ್ಟಾರ್ಟ್ಅಪ್ ಐಡಿಯಾಗಳು

By Siddu
Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

    ದಿನಗಳು ಕಳೆದಂತೆ ಆಧುನಿಕ ಜಗತ್ತಿನಲ್ಲಿ ಉದ್ಯೋಗ ಭದ್ರತೆಯು ಕಡಿಮೆಯಾಗತೊಡಗಿದೆ. ಇದೇ ಕಾರಣದಿಂದ ಪ್ರತಿದಿನ 'ನವೋದ್ಯಮಿ' ಗಳು ಹುಟ್ಟಿಕೊಳ್ಳುತ್ತಿದ್ದು, ಅವರು ಹೊಸ ಉದ್ಯಮ (ಸ್ಟಾರ್ಟ್‌ಅಪ್) ಗಳ ಆರಂಭಕ್ಕೆ ಕೈ ಹಾಕುತ್ತಿದ್ದಾರೆ. ಹೀಗಾಗಿ ದೇಶದಲ್ಲಿ ಸ್ಟಾರ್ಟ್‌ಅಪ್ ಗಳ ಭರಾಟೆ ಜೋರಾಗಿ ನಡೆಯುತ್ತಿದೆ. ಜನ್ಮತಾಳುವ ಎಲ್ಲ ಸ್ಟಾರ್ಟ್‌ಅಪ್ ಗಳೂ ಯಶಸ್ಸು ಕಾಣುವುದಿಲ್ಲ ಎಂಬುದು ಗೊತ್ತಿರುವ ಸಂಗತಿಯೇ ಆಗಿದೆ. ಆದರೂ ದೇಶದಲ್ಲಿನ ಸಮಸ್ಯೆಗಳ ನಿವಾರಣೆಗೆ ಅದೆಷ್ಟೋ ವರ್ಷಗಳ ಹಿಂದಿನಿಂದಲೂ ಸ್ಟಾರ್ಟ್‌ಅಪ್ ಗಳು ಆರಂಭವಾಗುತ್ತಲೇ ಇರುವುದನ್ನು ನಾವೆಲ್ಲ ನೋಡಿದ್ದೇವೆ.

    ಯಾವುದೇ ಸ್ಟಾರ್ಟ್ಅಪ್ ಐಡಿಯಾ ತನ್ನಷ್ಟಕ್ಕೆ ತಾನೇ ವಿಭಿನ್ನವಾಗಿರುವುದಿಲ್ಲ ಎಂಬ ಮಾತು ಪ್ರಚಲಿತದಲ್ಲಿದೆ. ಆದರೂ ಸ್ಟಾರ್ಟ್ಅಪ್ ಅನ್ನು ನೀವು ಎಷ್ಟು ವಿಶಿಷ್ಟವಾಗಿ ಜಾರಿಗೆ ತರುತ್ತೀರಿ ಎಂಬುದರ ಮೇಲೆ ಅದರ ಯಶಸ್ಸು ನಿರ್ಧರಿತವಾಗುತ್ತದೆ. ಅದಕ್ಕೇ ಯಾವುದೇ ಸ್ಟಾರ್ಟ್‌ಅಪ್ ನ ವೈಶಿಷ್ಟ್ಯತೆ ಅದನ್ನು ನಿಭಾಯಿಸುವ ವಿಭಿನ್ನತೆಯಲ್ಲಿದೆ ಎಂದು ಹೇಳಲಾಗುತ್ತದೆ. ಇಂದಿನ ಸ್ಟಾರ್ಟ್ಅಪ್ ಜಮಾನಾದಲ್ಲಿ ನೀವೂ ಸಹ ನಿಮ್ಮದೇ ವ್ಯವಹಾರ ಆರಂಭಿಸಬಹುದು. ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಉತ್ಸಾಹಿಗಳು ಈ ಕೆಳಗೆ ವಿವರಿಸಲಾದ ಪ್ರಮುಖ 20 ಸ್ಟಾರ್ಟ್ ಅಪ್ ಗಳಲ್ಲಿ ಯಾವುದನ್ನಾದರೂ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

    1. ಮನೆಯಲ್ಲಿ ತಯಾರಾದ ಉತ್ಪನ್ನ ಆನ್ಲೈನ್ ಮೂಲಕ ಮಾರುವುದು

    ಮನೆಯಲ್ಲಿಯೇ ಹಲವಾರು ರೀತಿಯ ವಿಶಿಷ್ಟ ವಸ್ತುಗಳನ್ನು ತಯಾರಿಸುವುದು ಭಾರತೀಯ ಹೆಣ್ಣು ಮಕ್ಕಳಿಗೆ ಒಲಿದು ಬಂದ ವರವಾಗಿದೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಮನೆಯಿಂದ ಹೊರ ಹೋಗಿ ತಮ್ಮ ಕೌಶಲ್ಯ ತೋರಿಸುವ ಅವಕಾಶ ಸಿಗದೆ ಅವರ ಪ್ರತಿಭೆ ಬೆಳಕಿಗೆ ಬರುವುದಿಲ್ಲ. ಆದರೆ ಈಗ ಇವರು ತಮ್ಮ ವಸ್ತುಗಳನ್ನು ಆನ್ಲೈನ್ ಮೂಲಕ ಮಾರಬಹುದಾಗಿದೆ. ಮನೆಗಳಲ್ಲಿ ತಯಾರಾದ ವಸ್ತುಗಳನ್ನು ಆನ್ಲೈನ್ ಮೂಲಕ ಮಾರುವ ಕ್ಷೇತ್ರದಲ್ಲಿ ಇನ್ನೂ ಅಂತಹ ಬೆಳವಣಿಗೆಗಳಾಗಿಲ್ಲದ ಕಾರಣ ಇದರಲ್ಲಿ ಸ್ಟಾರ್ಟ್ಅಪ್ ಮಾಡಲು ಅವಕಾಶಗಳಿವೆ. ಮಹಿಳೆಯರು ತಯಾರಿಸಿದ ವಸ್ತುಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಒಂದು ಪ್ಲಾಟ್ ಫಾರ್ಮ್ ನೀಡುವ ರೀತಿಯಲ್ಲಿ ಸ್ಟಾರ್ಟ್‌ಅಪ್ ಮಾಡಬಹುದು. ಇದರಿಂದ ಗ್ರಾಹಕರಿಗೆ ತಮಗಿಷ್ಟವಾದ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳಲು ಸಹ ಅವಕಾಶ ಕಲ್ಪಿಸಿದಂತಾಗುತ್ತದೆ.

    2. ಆರೋಗ್ಯಕರ ಸಾವಯವ ಆಹಾರ ಪದಾರ್ಥಗಳ ಮಾರಾಟ

    ಆರೋಗ್ಯಕರ ತಿನಿಸುಗಳ ಬಗ್ಗೆ ಎಲ್ಲರಿಗೂ ಅರಿವಿದ್ದರೂ, ಜಂಕ್ ಫುಡ್ ತಿನ್ನುವುದನ್ನು ಮಾತ್ರ ಯಾರೂ ಬಿಡಲೊಲ್ಲರು. ಇಂಥ ಸಂದರ್ಭದಲ್ಲಿ ರುಚಿಯಾದ ಆದರೆ ಕಡಿಮೆ ಎಣ್ಣೆ, ಮಸಾಲೆ ಹಾಕಿ ಸಾವಯವ ಧಾನ್ಯ ಬಳಸಿ ಮಾಡಿದ ತಿಂಡಿ-ತಿನಿಸುಗಳನ್ನು ಮಾರಾಟ ಮಾಡಿದರೆ ಯಶಸ್ಸು ಸಿಗುವುದು ಗ್ಯಾರಂಟಿ.

    3. ಆಹಾರ ಪೂರೈಕೆ

    ಆಹಾರ ಮಾರಾಟ ಅಥವಾ ಹೋಟೆಲ್ ಉದ್ಯಮಗಳಲ್ಲಿ ನೌಕರರನ್ನು ಕೈಬಿಡಲಾಗುತ್ತಿದೆ ಎಂಬ ವರದಿಗಳನ್ನು ಕೇಳಿ ಆತಂಕ ಪಡುವ ಯಾವುದೇ ಅಗತ್ಯವಿಲ್ಲ. ಭಾರತದಲ್ಲಿ ಆಹಾರ ಉದ್ಯಮ ಬಿಲಿಯನ್ ಡಾಲರ್ ಉದ್ಯಮವಾಗಿದ್ದು, ಈ ಕ್ಷೇತ್ರದಲ್ಲಿ ಇನ್ನೂ ಅಪರಿಮಿತ ಅವಕಾಶಗಳಿವೆ. ಸರಿಯಾದ ಮಾರ್ಗದಲ್ಲಿ ನಿಪುಣತೆಯಿಂದ ಆಹಾರ ಕ್ಷೇತ್ರದಲ್ಲಿ ಸ್ಟಾರ್ಟ್ಅಪ್ ಪ್ರಾರಂಭಿಸಿದರೆ, ನೀವು ಜನರ ಆಹಾರ ಪದ್ಧತಿಯನ್ನೇ ಬದಲಾಯಿಸಬಲ್ಲಿರಿ.

    4. ಕಾರ್ ವಾಶಿಂಗ್

    ಕಾರು ಕೊಂಡಿರುವ ಎಲ್ಲರೂ ಅದಕ್ಕೆ ಡ್ರೈವರ್ ನನ್ನು ನೇಮಿಸಿಕೊಂಡಿರುವುದಿಲ್ಲ. ಹೀಗಾಗಿ ಹಲವಾರು ಬಾರಿ ಕಾರು ತೊಳೆಯುವುದು, ಅದನ್ನು ಸರ್ವಿಸ್ ಗೆ ಬಿಟ್ಟು ಸುಸ್ಥಿತಿಯಲ್ಲಿಡುವುದು ಕಾರು ಮಾಲೀಕರಿಗೆ ಕಿರಿ ಕಿರಿ ಉಂಟು ಮಾಡುತ್ತವೆ. ಇಂಥ ಒಂದು ಅವಕಾಶವನ್ನು ಉಪಯೋಗಿಸಿಕೊಂಡು ಅಟೋಮೆಟೆಡ್ ಕಾರ್ ವಾಶಿಂಗ್ ಸ್ಟಾರ್ಟ್‌ಅಪ್ ಬಗ್ಗೆ ಮುಂದುವರಿಯಬಹುದು.

    5. ಗಿಫ್ಟ್ ಐಟಂ ಮಾರಾಟ ಮಾಡುವುದು

    ಈ ಒಂದು ವಹಿವಾಟು ಮನೆಯಿಂದಲೇ ವಸ್ತುಗಳನ್ನು ತಯಾರಿಸಿ ಮಾರಬೇಕೆನ್ನುವ ಮಹಿಳೆಯರಿಗೆ ಸೂಕ್ತವಾಗಿದೆ. ಗ್ರಾಹಕರ ಅಭಿರುಚಿ ಹಾಗೂ ಅವರು ತಿಳಿಸುವ ಸಂದರ್ಭಕ್ಕನುಗುಣವಾಗಿ ಗಿಫ್ಟ್ ಐಟಂ ತಯಾರಿಸಿ ಆನ್ಲೈನ್ ಮೂಲಕ ಮಾರುವ ವ್ಯವಸ್ಥೆ ಮಾಡಬಹುದು. ಈ ಕ್ಷೇತ್ರ ಸಾಕಷ್ಟು ವಿಶಾಲವಾಗಿದ್ದು, ಐಡಿಯಾಗಳಿದ್ದರೆ ಏನು ಬೇಕಾದರೂ ಸಾಧಿಸಬಹುದು.

    6. ದತ್ತಾಂಶ ಭದ್ರತೆ (Data Security)

    ಆಧುನಿಕ ಜಗತ್ತಿನಲ್ಲಿ ಆನ್ಲೈನ್ ವ್ಯವಹಾರ ಬೆಳೆಯುತ್ತ ಸಾಗುತ್ತಿದೆ. ಹೀಗಾಗಿ ವೆಬ್ಸೈಟ್, ಪೋರ್ಟಲ್ ಗಳಲ್ಲಿನ ಮಾಹಿತಿಯನ್ನು ಹ್ಯಾಕರ್ಸ್ ಗಳು ಹಾಗೂ ವಂಚಕರಿಂದ ಕಾಪಾಡುವುದು ಅವಶ್ಯಕವಾಗಿದೆ. ಇಂಥ ಅವಕಾಶ ಬಳಸಿಕೊಂಡು ಗ್ರಾಹಕರ ಆನ್ಲೈನ್ ಡೇಟಾ ಸೆಕ್ಯುರಿಟಿ ಸೇವೆಯನ್ನು ಆರಂಭಿಸಬಹುದು.

    7. ಸಾಮಾಜಿಕ ಜಾಲತಾಣಗಳ ಬಗ್ಗೆ ಸಲಹಾ ಸೇವೆ

    ಇಂದು ಸೋಶಿಯಲ್ ಮೀಡಿಯಾ ಜಗತ್ತನ್ನು ಆಳುತ್ತಿದೆ. ವ್ಯಾಪಾರ ವಲಯದಲ್ಲಿ ಸೋಶಿಯಲ್ ಮೀಡಿಯಾ 'ಕಿಂಗ್' ಆಗಿದೆ. ಹೀಗಾಗಿ ಸೋಶಿಯಲ್ ಮೀಡಿಯಾ ಕನ್ಸಲ್ಟನ್ಸಿ ಎಂಬುದು ಬಹು ಬೇಡಿಕೆಯ ಸೇವೆಯಾಗಿ ಹೊರ ಹೊಮ್ಮಿದೆ. ಸೂಕ್ತ ಜ್ಞಾನ ಹಾಗೂ ಸರಿಯಾದ ಮಾರ್ಗದಲ್ಲಿ ಕನ್ಸಲ್ಟನ್ಸಿ ಆರಂಭಿಸಿದರೆ ಲಕ್ಷಾಂತರ ರೂಪಾಯಿ ಹಣ ಗಳಿಸುವ ಸಾಧ್ಯತೆಗಳಿವೆ.

    8. ಆನ್ಲೈನ್ ಮೂಲಕ ಕರಕುಶಲ ವಸ್ತುಗಳ ಮಾರಾಟ

    ಸುಂದರವಾದ ವಸ್ತುಗಳನ್ನು ತನ್ನದಾಗಿಸಿಕೊಳ್ಳುವುದು ಮಾನವ ಸಹಜ ಗುಣ. ಹೀಗಾಗಿ ಆಕರ್ಷಕವಾಗಿ ತಯಾರಿಸಲಾದ ಕರಕುಶಲ ವಸ್ತುಗಳು ಎಲ್ಲರ ಮನಸೂರೆಗೊಳ್ಳುತ್ತವೆ. ನಮ್ಮ ಸುತ್ತಲೂ ಅನೇಕ ಕಡೆಗಳಲ್ಲಿ ಕರಕುಶಲ ವಸ್ತುಗಳನ್ನು ತಯಾರಿಸುವವರು ಅನೇಕರು ಇದ್ದೇ ಇರುತ್ತಾರೆ. ಇಂಥವರನ್ನು ಗುರುತಿಸಿ ಇವರು ತಯಾರಿಸಿದ ವಸ್ತುಗಳನ್ನು ಆನ್ಲೈನ್ ಮೂಲಕ ಮಾರಾಟ ಮಾಡಲು ಸ್ಟಾರ್ಟ್‌ಅಪ್ ಆರಂಭಿಸಬಹುದು.

    9. ನಿರ್ದಿಷ್ಟ ಮಾಹಿತಿ ಸೇವೆ ವ್ಯಾಪಾರ

    ಇತ್ತೀಚಿನ ದಿನಗಳಲ್ಲಿ ಶೇ.90 ಕ್ಕೂ ಅಧಿಕ ಕಂಪನಿಗಳು ತಮ್ಮ ಸರಕು ಹಾಗೂ ಸೇವೆಗಳನ್ನು ಮಾರಲು ಮಾಹಿತಿ ವಿನಿಮಯದ ಮೊರೆ ಹೋಗಿವೆ. ಈ ಕಂಪನಿಗಳಿಗೆ ಬೇಕಾದ ರೀತಿಯಲ್ಲಿ ಕಂಟೆಂಟ್ ಸರ್ವಿಸ್ ನೀಡುವ ಏಜೆನ್ಸಿ ಆರಂಭಿಸಿ ಲಾಭ ಗಳಿಸಬಹುದು.

    10. ಯೋಗ ಹಾಗೂ ಸಂಬಂಧಿತ ಚಟುವಟಿಕೆಗಳು

    ಇಂದಿನ ಒತ್ತಡದ ಜೀವನದಲ್ಲಿ ಯೋಗ ಹಾಗೂ ಇನ್ನಿತರ ತಾಳ್ಮೆಯ ವಿಧಾನಗಳು ಉದ್ಯಮಿಗಳು, ವಿದ್ಯಾರ್ಥಿಗಳು, ಪಾಲಕರು ಸೇರಿದಂತೆ ಎಲ್ಲರಿಗೂ ಅವಶ್ಯಕವಾಗಿವೆ. ಹೆಲ್ತ್ ಕ್ಲಬ್ ಗಳು, ಜಿಮ್, ಯೋಗ ತರಬೇತಿ ಶಿಬಿರಗಳು ಹೀಗೆ ಎಲ್ಲೆಡೆ ನುರಿತ ಯೋಗ ತರಬೇತಿದಾರರ ಅವಶ್ಯಕತೆ ಇದೆ. ಇಂಥ ಸಂದರ್ಭದಲ್ಲಿ ನಮ್ಮ ಸುತ್ತ ಮುತ್ತಲಿನವರನ್ನು ಯೋಗ ಹಾಗೂ ಇತರ ಸಂಬಂಧಿತ ಚಟುವಟಿಕೆಗಳತ್ತ ಸೆಳೆಯುವುದು ಅತಿ ಅಗತ್ಯವಾಗಿದೆ. ಆರೋಗ್ಯದ ಬಗ್ಗೆ ಕಾಳಜಿ ಮೂಡಿಸುವ ಈ ಕ್ಷೇತ್ರದಲ್ಲಿ ಹಲವಾರು ಅವಕಾಶಗಳಿದ್ದು, ಸರಿಯಾದ ಯೋಜನೆಯ ಮೂಲಕ ಜನರನ್ನು ತರಬೇತಿ ಶಿಬಿರಗಳತ್ತ ಸೆಳೆಯುವುದು ಅವಶ್ಯವಾಗಿದೆ. ಈ ವಲಯದ ಬಗ್ಗೆ ಗಮನ ಹರಿಸಿದರೆ ಒಳ್ಳೆಯ ಸ್ಟಾರ್ಟ್‌ಅಪ್ ಆರಂಭಿಸುವುದು ಕಷ್ಟವೇನಲ್ಲ.

    11. ಕಥೆಗಾರರಿಗೆ ಆನ್ಲೈನ್ ಒಂದು ವೇದಿಕೆ

    ಕಳೆದ ರಾತ್ರಿ ನೀವು ಯಾವುದೋ ಒಂದು ಅದ್ಭುತ ಸಾಹಸದ ಕೆಲಸ ಮಾಡಿರಬಹುದು ಅಥವಾ ಯಾವತ್ತೋ ಒಬ್ಬರಿಗೆ ನೆರವಾಗಿರಬಹುದು. ಮತ್ತಾರನ್ನೋ ಕಷ್ಟದಿಂದ ರಕ್ಷಿಸಿರಬಹುದು. ಇಂಥ ಅನುಭವಗಳನ್ನು ನಿಮ್ಮ ಗೆಳೆಯರು ಹಾಗೂ ಸಮಾಜದೊಂದಿಗೆ ಹಂಚಿಕೊಳ್ಳಲು ಒಂದು ಸಾಮಾನ್ಯ ವೇದಿಕೆ ಇದ್ದರೆ ಹೇಗೆ ಎಂದು ಚಿಂತಿಸಿ. ನಿಮ್ಮ ವೈಯಕ್ತಿಕ ಬ್ಲಾಗ್ ಹೊರತುಪಡಿಸಿ ಎಲ್ಲರೂ ನೋಡಬಹುದಾದ ಒಂದು ಆನ್ಲೈನ್ ವೇದಿಕೆಯಲ್ಲಿ ನಿಮ್ಮ ಕತೆಯನ್ನು ಹಂಚಿಕೊಳ್ಳಲು ಅವಕಾಶ ಸಿಕ್ಕರೆ ಎಷ್ಟು ಚಂದ ಅಲ್ಲವೆ? ಹೀಗೆ ಎಲ್ಲರೂ ತಮ್ಮ ಕತೆಗಳನ್ನು ಹಂಚಿಕೊಳ್ಳಲೆಂದೇ ಒಂದು ಪೋರ್ಟಲ್ ಆರಂಭಿಸುವ ಪ್ರಯತ್ನ ಮಾಡುವುದರಲ್ಲಿ ತಪ್ಪೇನೂ ಇಲ್ಲ.

    12. ವಿಡಿಯೋ ಡೇಟಿಂಗ್ ವೆಬ್ಸೈಟ್

    ಸಮಾನ ಮನಸ್ಕರು ತಮ್ಮ ವಿಡಿಯೋಗಳನ್ನು ಅಪ್ ಲೋಡ್ ಮಾಡುವ ಮೂಲಕ ಭಾವನೆಗಳನ್ನು ಹಂಚಿಕೊಳ್ಳಲು ಆನ್ಲೈನ್ ಪ್ಲಾಟ್ ಫಾರ್ಮ್ ತಯಾರಿಸಬಹುದು. ತಮ್ಮ ಬಗ್ಗೆ ಮಾಹಿತಿ, ಅಭಿರುಚಿಗಳನ್ನು ಹಂಚಿಕೊಂಡು ಗೆಳೆಯ ಅಥವಾ ಜೀವನ ಸಂಗಾತಿಯನ್ನು ಹುಡುಕಲು ನೆರವಾಗಬಹುದು.

    13. ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ

    ಇತ್ತೀಚಿನ ದಿನಗಳಲ್ಲಿ ನಾವು ಸೇವಿಸುವ ಆಹಾರ ಕಲಬೆರಕೆಯಿಂದ ಕೂಡಿದೆ. ಇದು ಆರೋಗ್ಯದ ಬಗ್ಗೆ ನಾವು ಮತ್ತಷ್ಟು ಕಾಳಜಿ ವಹಿಸುವಂತೆ ಮಾಡಿದೆ. ತೆಳುವಾದ, ಆರೋಗ್ಯಪೂರ್ಣ ದೇಹವನ್ನು ಹೊಂದಿರುವುದು ಸಹ ಈಗ ಟ್ರೆಂಡ್ ಆಗಿದೆ. ಆದರೆ ಆರೋಗ್ಯ ಪೂರ್ಣ ಆಹಾರ ಯಾವುದು? ಏನು ಸೇವಿಸಿದರೆ ಆರೋಗ್ಯವಾಗಿರಬಲ್ಲೆವು ಎಂಬುದು ಬಹುತೇಕರಿಗೆ ಗೊತ್ತಿರುವುದಿಲ್ಲ. ಈ ಎಲ್ಲ ಮಾಹಿತಿ ನೀಡಲು ಒಂದು ಆನ್ ಲೈನ್ ಪ್ಲಾಟ್ ಫಾರ್ಮ್ ಆರಂಭಿಸಬಹುದು.

    14. ಮೇಕಪ್ ಹಾಗೂ ಸೌಂದರ್ಯವರ್ಧನೆ ಸೇವೆಗಳು

    ಈಗ ಎಲ್ಲವೂ ಆನ್ಲೈನ್ ಆಗುತ್ತಿದೆ. ಬಟ್ಟೆಗಳಿಂದ ಹಿಡಿದು ಗೃಹೋಪಕರಣಗಳು, ಆಹಾರದಿಂದ ಕಾರುಗಳವರೆಗೆ ಎಲ್ಲವೂ ಆನ್ಲೈನ್ ನಲ್ಲಿ ಮಾರಾಟವಾಗುತ್ತಿವೆ. ಈ ಯುಗದಲ್ಲಿ ಮೇಕಪ್ ಸರ್ವಿಸ್ ಮಾತ್ರ ಇನ್ನೂ ಸಂಪ್ರದಾಯಿಕ ಬ್ಯೂಟಿ ಪಾರ್ಲರ್‌ಗೆ ಸೀಮಿತವಾಗಿರಬೇಕು? ಇಂದು ಜನರಿಗೆ ಎಲ್ಲವೂ ಮನೆ ಬಾಗಿಲಿಗೇ ಬಂದು ತಲುಪುವಂತಿರಬೇಕು. ಹೀಗಿರುವಾಗ ಮನೆಗೇ ಹೋಗಿ ಬ್ಯೂಟಿ ಹಾಗೂ ಮೇಕಪ್ ಸರ್ವಿಸ್ ನೀಡುವ ಹಾಗೆ ಸ್ಟಾರ್ಟ್‌ಅಪ್ ಬಗ್ಗೆ ವಿಚಾರ ಮಾಡಬಹುದು.

    15. ವೃತ್ತಿ ಸಮಾಲೋಚನೆ ಸೇವೆ

    ಮುಂದುವರಿದ ದೇಶಗಳಲ್ಲಿ ಶಾಲೆಗಳಲ್ಲಿಯೇ ವಿದ್ಯಾರ್ಥಿಗಳಿಗಾಗಿ ವೈಯಕ್ತಿಕ ವೃತ್ತಿ ಮಾರ್ಗದರ್ಶಕರು ಇರುತ್ತಾರೆ. ಆದರೆ ಭಾರತದಲ್ಲಿ ಇನ್ನೂ ಈ ಸೇವೆ ಲಭ್ಯವಿಲ್ಲ. ನಮ್ಮ ಹಳೆಯ ಕಾಲದ ಶಿಕ್ಷಣ ಪದ್ಧತಿಯಲ್ಲಿ ಮುಳುಗಿರುವ ನಾವು, ಅದರಿಂದ ಸದ್ಯಕ್ಕೆ ಹೊರಬರುವ ಹಾಗೆ ಕಾಣುತ್ತಿಲ್ಲ. ಈ ಸಂದರ್ಭದಲ್ಲಿ ಎಲ್ಲ ವಿದ್ಯಾರ್ಥಿಗಳಿಗೂ ಸಹಾಯಕವಾಗುವಂಥ ವೃತ್ತಿ ಮಾರ್ಗದರ್ಶನ ಮಾಡುವ ಸೇವೆಗಳನ್ನು ಆನ್ಲೈನ್ ಮೂಲಕ ಆರಂಭಿಸಬೇಕಿದೆ. ಇದರಿಂದ ವಿದ್ಯಾರ್ಥಿಗಳು ಸೂಕ್ತ ವೃತ್ತಿಯನ್ನು ಆಯ್ದುಕೊಂಡು ತಮ್ಮ ಭವಿಷ್ಯ ಉಜ್ವಲಗೊಳಿಸಿಕೊಳ್ಳಲು ಸಹಾಯವಾಗುತ್ತದೆ.

    16. ಕೂಪನ್ ಮೂಲಕ ವ್ಯಾಪಾರ ವೃದ್ಧಿ

    ಹೋಟೆಲ್, ಸ್ಪಾ ಅಥವಾ ಸಲೂನ್ ಹೀಗೆ ಎಲ್ಲೇ ಇರಲಿ, ಬರುವ ಗ್ರಾಹಕರಿಗೆ ಮತ್ತೊಂದು ಹೋಟೆಲ್, ಸ್ಪಾ ಅಥವಾ ಇನ್ನಾವುದೋ ಅಂಗಡಿಯ ಒಂದು ಫ್ರೀ ಕೂಪನ್ ನೀಡಬಹುದು. ತಿಂಗಳು ಅಥವಾ ನಿರ್ದಿಷ್ಟ ಕಾಲಾವಧಿಯಲ್ಲಿ ಕೂಪನ್ ಬಳಸುವಂತೆ ದಿನಾಂಕ ನಿಗದಿಪಡಿಸಬಹುದು. ಇದರಿಂದ ಗ್ರಾಹಕರ ಒಂದು ವಲಯ ನಿರ್ಮಾಣವಾಗಿ ಮಾರಾಟದಲ್ಲಿ ಹೆಚ್ಚಳ ಕಾಣಬಹುದು.

    17. ಬಾಡಿಗೆ ವಸ್ತುಗಳ ಸೇವೆ

    ಸಾಮಾನ್ಯವಾಗಿ ನಾವು ನಮ್ಮ ಕಾರನ್ನು ಯಾರಾದರೂ ಕೇಳಿದರೆ ಬಾಡಿಗೆಗೆ ಕೊಟ್ಟು ಬಿಡುತ್ತೇವೆ. ಆದರೆ ಮನೆಗಳಲ್ಲಿ ಬಳಸುವ ಅನೇಕ ವಸ್ತುಗಳು ಬಾಡಿಗೆಗೆ ಸಿಗುವುದಿಲ್ಲ. ಉದಾಹರಣೆಗೆ- ಮನೆಗೆ ಯಾರೋ ಪ್ರಮುಖ ಅತಿಥಿ ಬರಲಿದ್ದಾರೆ ಎಂದಿಟ್ಟುಕೊಳ್ಳಿ. ಅಂಥ ಸಂದರ್ಭದಲ್ಲಿ ಅವರಿಗೆ ಊಟ, ತಿಂಡಿ ಬಡಿಸಲು ದುಬಾರಿ ತಟ್ಟೆ ಹಾಗೂ ಲೋಟ ಖರೀದಿಸಬೇಕಾಗುತ್ತದೆ. ಆದರೆ ಇವು ನಮಗೆ ಮನೆಯಲ್ಲಿ ಮತ್ತೆ ಯಾವ ಉಪಯೋಗಕ್ಕೂ ಬಾರದಂತಾಗುತ್ತವೆ. ಇಂಥ ಪರಿಸ್ಥಿತಿಯಲ್ಲಿ ತಟ್ಟೆ, ಲೋಟಗಳೂ ಬಾಡಿಗೆಗೆ ಸಿಕ್ಕರೆ ಎಷ್ಟು ಚೆನ್ನಾಗಿರುತ್ತದೆ ಅಲ್ಲವೆ..! ಅದರಂತೆ ಮನೆಯಲ್ಲಿರುವ ಗಿಟಾರ್ ಅನ್ನು ಯಾವತ್ತೋ ಒಂದು ಬಾರಿ ಉಪಯೋಗಿಸುತ್ತೇವೆ. ಇದನ್ನೂ ಸಹ ಬಾಡಿಗೆಗೆ ನೀಡಬಹುದು...! ಭಾರತದಲ್ಲಿ ಈವರೆಗೂ ಇಂಥ ವೈಯಕ್ತಿಕ ವಸ್ತುಗಳನ್ನು ಬಾಡಿಗೆಗೆ ನೀಡುವ ವ್ಯವಸ್ಥೆ ಯಾವುದೂ ಇಲ್ಲ. ಬಟ್ಟೆ, ಫರ್ನಿಚರ್, ಅಡುಗೆ ಪಾತ್ರೆಗಳು, ಗ್ಯಾಜೆಟ್ ಗಳು ಹೀಗೆ ಏನನ್ನಾದರೂ ಬಾಡಿಗೆ ನೀಡುವ ವ್ಯವಹಾರಕ್ಕಾಗಿ ಒಂದು ಪ್ಲಾಟ್ ಫಾರ್ಮ್ ತಯಾರಿಸಬಹುದು.

    18. ಆನ್ಲೈನ್ ಕಲಿಕಾ ಕೋರ್ಸ್‌ಗಳು

    ಸದ್ಯ ಇಂಟರ್ನೆಟ್ ನಲ್ಲಿ ಇರುವ ಕೋರ್ಸೆರಾ, ಉಡೆಮಿಯಂತಹ ಆನ್ಲೈನ್ ಕಲಿಕಾ ತಾಣದಲ್ಲಿ ಸಿಗುವ ದುಬಾರಿ ಕೋರ್ಸ್ ಗಳನ್ನು ಖರೀದಿಸಲು ಎಲ್ಲರೂ ಶಕ್ತರಾಗಿರುವುದಿಲ್ಲ. ಅಲ್ಲದೆ ಭಾರತದಲ್ಲಿ ಇಂದಿಗೂ ಪ್ರಾದೇಶಿಕ ಭಾಷೆಗಳಲ್ಲಿಯೇ ಶಿಕ್ಷಣ ನೀಡುವುದರಿಂದ ಇವುಗಳಲ್ಲಿನ ಉನ್ನತ ಮಟ್ಟದ ಇಂಗ್ಲಿಷ್ ಅರ್ಥ ಮಾಡಿಕೊಳ್ಳುವುದು ಸಹ ಕಷ್ಟಕರವಾಗಿದೆ. ಹೀಗಾಗಿ ಎಲ್ಲರಿಗೂ ತಿಳಿಯುವಂತಿರುವ, ಸರಳ ಕೋರ್ಸ್ ಗಳಿಗೆ ಎಲ್ಲೆಲ್ಲೂ ಬೇಡಿಕೆ ಇದೆ. ಹೀಗಿರುವಾಗ ಸ್ಥಳೀಯ ಭಾಷೆಗಳಲ್ಲಿಯೇ ನಿರ್ದಿಷ್ಟ ವಿಷಯಗಳ ಕೋರ್ಸ್ ವಿಡಿಯೋ ತಯಾರಿಸಿ ಆನ್ಲೈನ್ ಮೂಲಕ ವ್ಯವಹಾರ ಆರಂಭಿಸಲು ಅವಕಾಶವಿದೆ.

    19. ದಿನನಿತ್ಯದ ಕೆಲಸಗಳಲ್ಲಿ ಸಹಾಯ

    ಇಂದಿನ ಜಗತ್ತಿನಲ್ಲಿ ಎಲ್ಲರೂ ಅತಿ ಒತ್ತಡದಲ್ಲಿ ಜೀವಿಸುತ್ತಿದ್ದಾರೆ. ಯಾರ ಬಳಿಯೂ ಸಮಯವಿಲ್ಲ. ಇಂಥ ಸಂದರ್ಭದಲ್ಲಿ 10 ರಿಂದ 15 ನಿಮಿಷ ಉಳಿತಾಯ ಮಾಡಬಲ್ಲ ಸ್ಟಾರ್ಟ್‌ಅಪ್ ಸಹ ಲಕ್ಷಾಂತರ ರೂಪಾಯಿ ಗಳಿಸಬಹುದು. ಜನರಿಗೆ ಹೊರಗಡೆ ಹೋಗಿ ಊಟ ಮಾಡಬೇಕಿರುತ್ತದೆ ಅಥವಾ ಮನೆಗೆ ಊಟ ಪಾರ್ಸಲ್ ಬೇಕಾಗಿರುತ್ತದೆ. ಎಲ್ಲಿಗೋ ಹೋಗಲು ಒಂದು ಕ್ಯಾಬ್ ಬುಕ್ ಮಾಡಬೇಕಿರುತ್ತದೆ. ಇಂಥ ಸೇವೆಗಳನ್ನು ನೀಡಲು ಉತ್ಸಾಹಿಗಳು ಮುಂದಾಗಬಹುದು. ಒಂದು ಎಸ್‌ಎಂಎಸ್ ಅಥವಾ ವಾಟ್ಸಾಪ್ ಮೆಸೇಜ್ ಮೂಲಕ ಎಲ್ಲವನ್ನೂ ನಿಭಾಯಿಸಬಹುದು.

    20. ಲಾಂಡ್ರಿ ಸೇವೆ

    ಇತ್ತೀಚಿನ ದಿನಗಳಲ್ಲಿ ಇ-ಲಾಂಡ್ರಿ ಸರ್ವಿಸ್ ಬಹು ಜನಪ್ರಿಯವಾಗತೊಡಗಿವೆ. ಎಲ್ಲವೂ ಆನ್ ಲೈನ್ ಆಗುವಾಗ ಲಾಂಡ್ರಿ ಸರ್ವಿಸ್ ಸಹ ಹಿಂದೆ ಬೀಳುತ್ತಿಲ್ಲ. ಜನದಟ್ಟಣೆಯ ದೇಶ ಭಾರತದಲ್ಲಿ ಲಾಂಡ್ರಿ ಸರ್ವಿಸ್ ಗೆ ಯಾವಾಗಲೂ ಬೇಡಿಕೆ ಇದ್ದೇ ಇರುತ್ತದೆ.

    English summary

    Top 20 low-cost Startup Ideas for College Students and Youths

    Top 20 low-cost Startup Ideas for College Students and Youths
    Story first published: Wednesday, June 6, 2018, 9:51 [IST]
    Company Search
    Enter the first few characters of the company's name or the NSE symbol or BSE code and click 'Go'

    Find IFSC

    Get Latest News alerts from Kannada Goodreturns

    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more