ಸಾಲವೇ ಇಲ್ಲದೆ ಮನೆ ಕಟ್ಟಲಿಕ್ಕೆ ಸಾಧ್ಯನಾ..? ಇತ್ತೀಚಿನ ದಿನಗಳಲ್ಲಿ ನಿಜಕ್ಕೂ ಇದು ಅಸಾಧ್ಯ. ಏಕೆಂದರೆ ಬದುಕು ಜಟಕಾ ಬಂಡಿಯಾಗಿದೆ. ಸಾಲವಿಲ್ಲದೇ ಬದುಕಿಲ್ಲ. ಎಲ್ಲರಂತೆ ನಾವು ಅನುಕೂಲಸ್ಥರಾಗಿ ಬದುಕಬೇಕು ಅಂದ್ರೆ ಇಂದು ನಾವು ಸಾಲವನ್ನು ಪಾವತಿಸಲೇಬೇಕು. ಇನ್ನು ಅದರಲ್ಲೂ ಮನೆ ವಿಚಾರಕ್ಕೆ ಬಂದರೆ ಕೇಳೋದೇ ಬೇಡ. ಮನೆ ಕಟ್ಟಲಿಕ್ಕೆ ಎಷ್ಟೇ ಹಣವಿದ್ರೂ ಸಾಕಾಗಲ್ಲ. ಅದಕ್ಕಾಗಿಯೇ ಬ್ಯಾಂಕುಗಳಲ್ಲಿ ಗೃಹ ಸಾಲದ ಸೌಲಭ್ಯ ಇದೆ. ಈ ಗೃಹ ಸಾಲದ ವ್ಯವಸ್ಥೆ ಇಂದ ಎಷ್ಟೋ ಜನರ ಸ್ವಂತ ಮನೆಯ ಕನಸು ನನಸಾಗಿದೆ ಎಂದರೂ ತಪ್ಪಾಗಲ್ಲ. ಆದರೆ ಈ ಗೃಹಸಾಲದ ಕಂತುಗಳು ಎಷ್ಟು ದೊಡ್ಡದಿರುತ್ತದೋ ಅಷ್ಟೇ ತಲೆನೋವು ಕೂಡ. ಹಾಗಾದ್ರೆ ಈ ಮನೆ ಸಾಲದ ಕಂತುಗಳನ್ನು ಕಡಿಮೆ ಮಾಡೋಕೆ ಆಗೋದೇ ಇಲ್ವಾ ಅಂತೀರಾ? ಯಾಕಾಗಲ್ಲ ಖಂಡಿತ ಸಾಧ್ಯವಿದೆ. ಈ ಐದು ಮಾರ್ಗಗಳನ್ನು ಅನುಸರಿಸಿದರೆ ನಿಮ್ಮ ಮನೆ ಸಾಲದ ಕಂತನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು.

ಹೌದು, ಮನೆ ಸಾಲ ಎನ್ನುವುದು ಬಹಳ ಉಪಯುಕ್ತವಾಗಿದೆ. ಏಕೆಂದರೆ ಬಾಡಿಗೆ ಮನೆಯಲ್ಲಿದ್ದುಕೊಂಡು ಹೆಚ್ಚು ಬಾಡಿಗೆ ಪಾವತಿ ಮಾಡುವುದಕ್ಕಿಂತ, ಸಾಲ ತೆಗೆದುಕೊಂಡು ಸ್ವಂತ ಮನೆ ಮಾಡಿಕೊಂಡು, ಅದೇ ಬಾಡಿಗೆ ಹಣವನ್ನು ಇಎಂಐಗೆ ಕಟ್ಟಿದರೆ ಕಡೆಪಕ್ಷ ಮನೆಯಾದರೂ ಸ್ವಂತದಲ್ಲಿರುತ್ತದೆ ಎನ್ನುವುದು ಜನರ ಬುದ್ಧಿವಂತಿಕೆ. ಆದರೆ ಸಾಲದ ಕಂತುಗಳನ್ನು ಕಡಿಮೆ ಮಾಡುವ ವಿಧಾನ ಗೊತ್ತಿದ್ದರೆ ಇನ್ನೂ ಸುಲಭ. ಹಾಗಾದರೆ ಆ ಐದು ಮಾರ್ಗಗಳ ಬಗ್ಗೆ ಇಲ್ಲಿ ತಿಳಿಯಿರಿ.
1. ಸಾಲದ ಅವಧಿಯನ್ನು ವಿಸ್ತರಿಸಿ:
ನೀವು ತೆಗೆದುಕೊಂಡು ಗೃಹ ಸಾಲದ ಮಾಸಿಕ ಕಂತುಗಳನ್ನು ಕಡಿಮೆ ಮಾಡುವ, ಅತ್ಯಂತ ಸುಲಭ ವಿಧಾನವೆಂದರೆ ಸಾಲದ ಅವಧಿಯನ್ನು ಉದ್ದಗೊಳಿಸುವುದು. ಅದು ಹೇಗೆಂದರೆ ಒಂದು ವೇಳೆ ನೀವು 15 ಅಥವಾ 20 ವರ್ಷಗಳಿಗೆ ಪಾವತಿಸುವ ಬದಲು ಅದನ್ನು 25 ಅಥವಾ 30 ವರ್ಷಗಳವರೆಗೆ ವಿಸ್ತರಿಸಿದರೆ, ತಿಂಗಳಿಗೆ ಪಾವತಿಸಬೇಕಾದ ಮೊತ್ತ ಸ್ಪಷ್ಟವಾಗಿ ಕಡಿಮೆಯಾಗುತ್ತದೆ. ಆದರೆ ಇದರಿಂದ ನಿಮಗೆ ಬಡ್ಡಿದರ ಹೆಚ್ಚಾದರೂ, ಪ್ರತಿ ತಿಂಗಳು ಹೆಚ್ಚು ಹಣ ಹೊಂದಿಸುವ ತಲೆನೋವು ಇರುವುದಿಲ್ಲ. ನಿಮಗೆ ಆದಾಯ ಹೆಚ್ಚಾದ ಸಂದರ್ಭದಲ್ಲಿ ಬೇಕಾದರೆ ಇದನ್ನು ನೀವು ಮತ್ತೆ ಕಡಿತಗೊಳಿಸಬಹುದು. ಅಥವಾ ಪೂರ್ತಿ ಪಾವತಿಸಲೂಬಹುದು. ಆಗ ಒಟ್ಟು ಬಡ್ಡಿದರದಲ್ಲಿ ತಾನಾಗಿಯೇ ಕಡಿಮೆಯಾಗುತ್ತದೆ.
2. ಸಾಲದ ಬಾಕಿ ವರ್ಗಾವಣೆ ಆಯ್ಕೆಮಾಡಿ:
ಈಗಾಗಲೇ ನೀವು ಹೆಚ್ಚಿನ ಬಡ್ಡಿದರ ಪಾವತಿ ಮಾಡುತ್ತಿದ್ದೀರ ಎಂದಾದರೆ, ಕಡಿಮೆ ಬಡ್ಡಿದರ ನೀಡುವ ಇನ್ನೊಂದು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗೆ ಬದಲಾಯಿಸುವುದನ್ನು ಪರಿಗಣಿಸಬಹುದು. ಈ ವಿಧಾನವನ್ನು ಸಾಲ ಬಾಕಿ ವರ್ಗಾವಣೆ ಎಂದು ಹೆಸರಿಸಲಾಗುತ್ತದೆ. ಅಲ್ಲದೇ ಇದು ಮಾಸಿಕ EMI ಪಾವತಿಯನ್ನು ತೀವ್ರವಾಗಿ ಕಡಿಮೆ ಮಾಡುತ್ತದೆ, ವಿಶೇಷವಾಗಿ ನೀವು ಹೆಚ್ಚು ಬಾಕಿ ಹೊಂದಿದ್ದರೆ ಮತ್ತು ಸಾಲ ಅವಧಿ ಇನ್ನೂ ದೀರ್ಘವಾಗಿದ್ದರೆ. ಆದರೆ ಈ ಪ್ರಕ್ರಿಯೆಯಲ್ಲಿ ಇತರ ಶುಲ್ಕಗಳು ಅಥವಾ ಸಂಸ್ಕರಣಾ ವೆಚ್ಚಗಳನ್ನೂ ಗಮನಿಸಬೇಕು.
3. ಹೆಚ್ಚಿನ ಮೊತ್ತವನ್ನು ಮುಂಗಡವಾಗಿ ಪಾವತಿಸಿ:
ಇನ್ನೊಂದು ವಿಧಾನವೆಂದರೆ ನೀವು ಗೃಹಸಾಲ ಪಡೆಯುವಾಗ, ಹೆಚ್ಚಿನ ಮೊತ್ತವನ್ನು ಮುಂಗಡವಾಗಿ ಪಾವತಿಸಿದರೆ, ಇಎಂಐ ಹೊರೆ ಕೊಂಚವಾದರೂ ಕಡಿಮೆಯಾಗುತ್ತದೆ. ಅಂದರೆ ಸಾಮಾನ್ಯವಾಗಿ ಬ್ಯಾಂಕುಗಳಲ್ಲಿ ಸಾಲ ನೀಡುವಾಗ ಇಂತಿಷ್ಟು ಮುಂಗಡವಾಗಿ ಪಾವತಿ ಮಾಡಿಸಿಕೊಂಡಿರುತ್ತಾರೆ. ಈ ಮೊತ್ತವನ್ನು ನೀವು ಹೆಚ್ಚಾಗಿ ಪಾವತಿ ಮಾಡಿದ್ದರೆ, ನಿಮ್ಮ ಸಾಲದ ಅರ್ಹತೆಯನ್ನು ಹೆಚ್ಚಳ ಮಾಡುತ್ತದೆ. ಮತ್ತು ಇದರಿಂದ ಉತ್ತಮ ಬಡ್ಡಿದರಗಳನ್ನು ಕೂಡ ಮಾತುಕತೆ ಮಾಡಿಕೊಳ್ಳಬಹುದು.
4. ಬಿಡುವು ದೊರೆಯುತ್ತಿದ್ದಂತೆ ಪೂರ್ವಪಾವತಿಯನ್ನು ಮಾಡಿ:
ಸಾಲದ ಅವಧಿಯಲ್ಲಿ ನಿಮಗೆ ಬೋನಸ್, ಆದಾಯವರ್ಧನೆ ಅಥವಾ ತೆರಿಗೆ ಮರುಪಾವತಿ ರೂಪದಲ್ಲಿ ಹಣ ಬಂದರೆ, ಅದನ್ನು ಪೂರ್ವಪಾವತಿಗೆ ಬಳಸಬಹುದು. ಈ ರೀತಿಯ ಭಾಗಶಃ ಪಾವತಿಗಳು ನಿಮ್ಮ ಸಾಲದ ಮೂಲ ಮೊತ್ತವನ್ನು ತಗ್ಗಿಸುತ್ತವೆ, ಇದರೊಂದಿಗೆ ಬಡ್ಡಿಯ ಒತ್ತಡವೂ ಕಡಿಮೆಯಾಗುತ್ತದೆ. ಭಾರತದಲ್ಲಿ ತೇಲುವ ಬಡ್ಡಿದರದ ಗೃಹ ಸಾಲಗಳಿಗಾಗಿ ಸಾಮಾನ್ಯವಾಗಿ ಪೂರ್ವಪಾವತಿ ದಂಡವಿಲ್ಲ. ಆದರೆ ನಿಮ್ಮ ಗುರಿ ಯಾವುದು - ಅವಧಿ ಕಡಿಮೆ ಮಾಡುವುದು ಅಥವಾ EMI ಕಡಿಮೆ ಮಾಡುವುದು - ಎಂಬುದನ್ನು ಬ್ಯಾಂಕ್‌ಗೆ ಸ್ಪಷ್ಟವಾಗಿ ತಿಳಿಸುವುದು ಅಗತ್ಯ.
5. ಸಾಲದಾತನೊಂದಿಗೆ ಪುನರ್‌ಮೌಲ್ಯಮಾಪನಕ್ಕೆ ಒತ್ತಾಯಿಸಿ:
ನೀವು ಶಿಸ್ತುಬದ್ಧವಾಗಿ EMI ಪಾವತಿಸುತ್ತಿದ್ದರೆ ಮತ್ತು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ, ನಿಮ್ಮ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ ಕಡಿಮೆ ಬಡ್ಡಿದರವನ್ನು ನೀಡುವ ಸಾಧ್ಯತೆ ಇದೆ. ಕೆಲವೊಮ್ಮೆ ಹೊಸ ಗ್ರಾಹಕರಿಗೆ ಕಡಿಮೆ ಬಡ್ಡಿದರ ಪ್ರಚೋದನೆ ನೀಡಲಾಗುತ್ತದೆ. ಇಂತಹ ಸಂದರ್ಭಗಳಲ್ಲಿ ನಿಮ್ಮ ಸಾಲದ ಬಡ್ಡಿದರವನ್ನು ಪುನರ್‌ಮೌಲ್ಯಮಾಪನ ಮಾಡುವಂತೆ ಕೇಳಬಹುದು. ಕೇವಲ 0.25% ರಷ್ಟು ಕಡಿತವೂ ದೀರ್ಘಾವಧಿಯಲ್ಲಿ ಸಾಕಷ್ಟು ಉಳಿತಾಯವನ್ನು ತಂದಿಡಬಹುದು.
ಒಟ್ಟಿನಲ್ಲಿ ಗೃಹ ಸಾಲದ EMI ಕಡಿಮೆ ಮಾಡುವುದೆಂದರೆ ಕಠಿಣ ಬದಲಾವಣೆಗಳನ್ನು ಮಾತ್ರ ಅಳವಡಿಸಬೇಕು ಎಂಬ ತಪ್ಪು ಕಲ್ಪನೆ ಅನವಶ್ಯಕ. ಸರಿಯಾದ ಯೋಜನೆಯೊಂದಿಗೆ, ಸೂಕ್ತ ಯುಕ್ತಿಗಳನ್ನು ಅನುಸರಿಸುವುದರಿಂದ, ನೀವು ನಿತ್ಯದ ಹಣಕಾಸಿನ ಒತ್ತಡವನ್ನು ಕಡಿಮೆ ಮಾಡಬಹುದು ಮತ್ತು ಆರ್ಥಿಕ ಸುಸ್ಥಿರತೆಯನ್ನು ಸಾಧಿಸಬಹುದು. ಯೋಜಿತ ಪೂರ್ವಪಾವತಿಗಳು, ಸರಿಯಾದ ಅವಧಿ ಆಯ್ಕೆ, ಬಡ್ಡಿದರದ ಮೇಲೆ ಗಮನ ಇಡುವಿಕೆ ಮತ್ತು ಮುಕ್ತ ಸಂವಹನವು ಈ ದಾರಿ ಸುಗಮವಾಗಿಸಲು ಸಹಾಯ ಮಾಡುತ್ತವೆ.


Click it and Unblock the Notifications