ಬೆಂಗಳೂರು, ಜನವರಿ 17: ಯಾವುದೇ ಉದ್ಯಮವಿರಲಿ, ಅದರಲ್ಲಿ ಕಠಿನ ಪರಿಶ್ರಮ ಹಾಗೂ ಬದ್ಧತೆಯನ್ನು ಪ್ರದರ್ಶಿಸಿದರೆ ಯಶಸ್ಸು ಸಾಧಿಸಬಹುದು ಎನ್ನುವುದಕ್ಕೆ ಸಾಕಷ್ಟು ಯಶೋಗಾಥೆಗಳು ನಮ್ಮ ಮುಂದಿವೆ. ಈ ರೀತಿ ನಿರಂತರ ಪರಿಶ್ರಮದಿಂದಾಗಿ ಪ್ರಸ್ತುತ ಮಹಿಳೆಯೊಬ್ಬರು ಪ್ರಾರಂಭಿಸಿದ ಪೇಪರ್ ಪುನರ್ ಬಳಕೆ ಬಿಸಿನೆಸ್ 800 ಕೋಟಿ ರೂ. ಮೌಲ್ಯದ ಕಂಪನಿಯಾಗಿ ಬೆಳೆದಿದೆ.
ಹೀಗೆ ಯಶಸ್ವಿನ ಉತ್ತುಂಗಕ್ಕೆ ಏರಿರುವ ಮಹಿಳಾ ಉದ್ಯಮಿ ಪೂನಂ ಗುಪ್ತಾ. ದಿಲ್ಲಿಯಲ್ಲಿ ಹುಟ್ಟಿದ ಇವರು, ದಿಲ್ಲಿಯಲ್ಲಿರುವ ಲೇಡಿ ಐರ್ವಿನ್ ಸ್ಕೂಲ್ ಹಾಗೂ ದಿಲ್ಲಿ ಪಬ್ಲಿಕ್ ಸ್ಕೂಲ್‌ನಲ್ಲಿ ಆರಂಭಿಕ ವಿದ್ಯಾಭ್ಯಾಸವನ್ನು ಪಡೆದುಕೊಂಡಿದ್ದಾರೆ. ಬಳಿಕ ಗುಪ್ತಾ ಅವರು ದಿಲ್ಲಿ ವಿವಿಯಿಂದ ಪದವಿಯನ್ನು ಪಡೆದುಕೊಂಡಿದ್ದು, ದಿಲ್ಲಿಯ ಫೋರ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ಇಂಟರ್ ನ್ಯಾಷನಲ್ ಬಿಸಿನೆಸ್ ಅಂಡ್ ಮಾರ್ಕೆಟಿಂಗ್‌ನಲ್ಲಿ ಎಂಬಿಎ ಪದವಿ ಜತೆಗೆ ಪೋಲೆಂಡ್‌ನ ಮ್ಯಾನೇಜ್‌ಮೆಂಟ್ ಸ್ಕೂಲ್‌ನಿಂದಲೂ ಪದವಿ ಪಡೆದುಕೊಂಡಿದ್ದಾರೆ.

2002ರಲ್ಲಿ ಗುಪ್ತಾ ಅವರು ಪೂನೀ ಗುಪ್ತಾ ಅವರನ್ನು ಮದುವೆಯಾಗಿದ್ದು, ನಂತರ ಸ್ಕಾಟ್ಲೆಂಡ್‌ಗೆ ತೆರಳಿದ್ದಾರೆ. ಸ್ಕಾಟ್ಲೆಂಡ್‌ನಲ್ಲಿ ಸರಿಯಾದ ಉದ್ಯೋಗ ಪಡೆದುಕೊಳ್ಳುವುದಕ್ಕೆ ಸಾಕಷ್ಟು ಪರಿಶ್ರಮ ವಹಿಸಿದ್ದರು. ಈ ವೇಳೆ ಅವರಿಗೆ ಸ್ವಂತ ಉದ್ಯಮವನ್ನು ಪ್ರಾರಂಭಿಸಬೇಕೆಂಬ ಯೋಚನೆ ಬಂದಿತ್ತು. ಅದರಂತೆ ಮುಂದೆ ಅಂದರೆ 2003ರಲ್ಲಿ ಅವರು ಪಜಿ ಪೇಪರ್ ಕಂಪನಿಯನ್ನು ಸ್ಥಾಪಿಸಿದ್ದರು. ಈ ಉದ್ಯಮವನ್ನು ಅವರು ಸ್ಕಾಟ್ಲೆಂಡ್‌ನ ಕಿಲ್ಮಾಕೋಮ್‌ನಲ್ಲಿರುವ ಮನೆಯಿಂದ ಪ್ರಾರಂಭಿಸಿದ್ದರು. ಸ್ಕಾಟಿಷ್ ಸರ್ಕಾರದಿಂದ ಒಂದು ಲಕ್ಷ ರೂ. ಫಂಡ್ ಪಡೆದುಕೊಂಡು ವ್ಯವಹಾರವನ್ನು ಪ್ರಾರಂಭಿಸಿದ್ದರು.
ಗುಪ್ತಾ ಅವರು ಆರಂಭದಲ್ಲಿ ನಿರುಪಯುಕ್ತ ಹಾಗೂ ಮರು ಬಳಕೆ ಉತ್ಪನ್ನಗಳತ್ತ ತಮ್ಮ ಗಮನವನ್ನು ಹರಿಸಿದರು. ಈಗ ಪಿಜಿ ಪೇಪರ್ 53 ದೇಶಗಳಿಂದ ಉತ್ಪನ್ನಗಳನ್ನು ಆಮದು ಹಾಗೂ ರಫ್ತು ಮಾಡಿಕೊಳ್ಳುತ್ತಿವೆ. ಅಷ್ಟೇಅಲ್ಲ, ಯುಕೆಯಲ್ಲಿ ಅತ್ಯಂತ ವೇಗವಾಗಿ ಬೆಳೆದ ಪೇಪರ್ ಕಂಪನಿಗಳ ಸಾಲಿನಲ್ಲಿ ಇದು ಗುರುತಿಸಿಕೊಂಡಿದೆ.
ಗುಪ್ತಾ ಅವರು ತಮ್ಮ ಉದ್ಯಮವನ್ನು ಸ್ಥಾಪಿಸಿ 19 ವರ್ಷಗಳು ಕಳೆದಿವೆ. ಕೇವಲ ಒಂದು ಲಕ್ಷ ರೂ. ಹೂಡಿಕೆಯೊಂದಿಗೆ ಆರಂಭಿಸಿದ ಕಂಪನಿಯು ಈಗ 800 ಕೋಟಿ ರೂ. ಉದ್ಯಮವಾಗಿ ಬೆಳೆದಿದೆ. ಅವರ ಕಂಪನಿಯು ಹಾಸ್ಪಿಟಾಲಿಟಿ, ರಿಯಲ್ ಎಸ್ಟೇಟ್ ಹಾಗೂ ವೈದ್ಯಕೀಯ ಕ್ಷೇತ್ರದ ಜತೆಗೆ ಐಟಿ ವಲಯದಲ್ಲಿಯೂ ಗುರುತಿಸಿಕೊಂಡಿದೆ. ಈ ಕಂಪನಿಯು ಸ್ಕಾಟ್ಲೆಂಡ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಪ್ರಸ್ತುತ ಪೂನಂ ಗುಪ್ತಾ ಅವರ ಕಂಪನಿಯಲ್ಲಿ 350 ಮಂದಿ ಕೆಲಸ ಮಾಡುತ್ತಿದ್ದಾರೆ.


Click it and Unblock the Notifications