ರಾಜ್ಯ ಸರ್ಕಾರ (Karnataka Govt) ಇದೀಗ ರಾಜ್ಯಾದ್ಯಂತ ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಸ ಸಚಿವ ಸಂಪುಟ ಸಭೆಯಲ್ಲಿ ಹಲವು ನಿರ್ಧಾರ ತೆಗೆದುಕೊಂಡಿದ್ದು, ಅದರಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿ ಖಾತಾಗೆ ಸೇರಿದ ಆಸ್ತಿಗಳನ್ನು ಎ ಖಾತಾಗೆ ವರ್ಗಾಯಿಸುವಂತೆ ಆದೇಶ ಹೊರಡಿಸಿದೆ.

ಹೌದು, ಇದೀಗ ಗುರುವಾರ ನಡೆದ ಸಚಿವ ಸಭೆಯಲ್ಲಿ ಅಕ್ರಮ ಲೇಔಟ್‌ಗಳಲ್ಲಿ ಬಿ ಖಾತಾ ಹೊಂದಿರುವ ಆಸ್ತಿಗಳಿಗೆ ಎ ಖಾತಾ ನೀಡುವ ಪ್ರಸ್ತಾವನೆಗೆ ಸಂಪುಟ ಅಸ್ತು ಎಂದಿದೆ. ಇನ್ನು ಇದು ಬೆಂಗಳೂರು ಮತ್ತು ರಾಜ್ಯದ ಇತರ ನಗರಗಳಲ್ಲಿ ವಾಸಿಸುವ ಲಕ್ಷಾಂತರ ಆಸ್ತಿ ಮಾಲೀಕರಿಗೆ ಬಿಗ್ ರಿಲೀಫ್ ಆಗಿದೆ.
ಆಸ್ತಿ ಮಾಲೀಕರಿಗೆ ಬಿಗ್ ರಿಲೀಫ್!
ಕರ್ನಾಟಕ ಸಚಿವ ಸಂಪುಟವು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಅನಧಿಕೃತ ಲೇಔಟ್‌ಗಳಲ್ಲಿನ ಬಿ-ಖಾತಾ ಆಸ್ತಿಗಳಿಗೆ ಎ-ಖಾತಾ ಪ್ರಮಾಣಪತ್ರಗಳನ್ನು ನೀಡಲು ಅನುಮೋದನೆ ನೀಡಿದೆ. ಜನವರಿ 8ರಂದು ನಡೆದ ಸಂಪುಟ ಸಭೆಯ ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, ಸುದ್ದಿಗೋಷ್ಠಿ ನಡೆಸಿ ಈ ಮಹತ್ವದ ನಿರ್ಧಾರವನ್ನು ಘೋಷಣೆ ಮಾಡಿದರು. ಆದ್ದರಿಂದ ಸರ್ಕಾರದ ಈ ನಿರ್ಧಾರ ಸಾವಿರಾರು ಆಸ್ತಿ ಮಾಲೀಕರಿಗೆ ಪ್ರಯೋಜನಕಾರಿಯಾಗಲಿದೆ.
ಈ ನಿರ್ಧಾರವು ಕಟ್ಟಡಗಳು, ಅಪಾರ್ಟ್‌ಮೆಂಟ್‌ಗಳು ಮತ್ತು ಫ್ಲಾಟ್‌ಗಳಿಗೆ ಅನ್ವಯವಾಗಲಿದೆ. ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ, ಕಡ್ಡಾಯ ಅನುಮೋದನೆಗಳಿಲ್ಲದೆ ಅಭಿವೃದ್ಧಿಪಡಿಸಿದ ಲೇಔಟ್‌ಗಳಲ್ಲಿ ರಚಿಸಲಾದ ಸೈಟ್‌ಗಳು ಮತ್ತು ವಸತಿ ಘಟಕಗಳನ್ನು ಎ-ಖಾತಾಗೆ ಪರಿವರ್ತಿಸಲು ಸಚಿವ ಸಂಪುಟವು ಸಮ್ಮತಿ ನೀಡಿದೆ ಎಂದು ಪಾಟೀಲ್ ಸ್ಪಷ್ಟಪಡಿಸಿದರು.
ಏನಿದು ಖಾತಾ ನಿಯಮ?
ಕರ್ನಾಟಕದಲ್ಲಿ, ಖಾತಾ ಎನ್ನುವುದು ಸ್ಥಳೀಯ ಮುನ್ಸಿಪಲ್ ಪ್ರಾಧಿಕಾರವು ನಿರ್ವಹಿಸುವ ಅಧಿಕೃತ ಆಸ್ತಿ ದಾಖಲೆಯಾಗಿದೆ. ಇದು ಆಸ್ತಿಯ ಗಾತ್ರ, ಸ್ಥಳ, ಮಾಲೀಕತ್ವ ಮತ್ತು ತೆರಿಗೆ ಮೌಲ್ಯಮಾಪನದಂತಹ ವಿವರಗಳನ್ನು ದಾಖಲಿಸುತ್ತದೆ. ಆಸ್ತಿ ತೆರಿಗೆ ಪಾವತಿಸಲು ಮತ್ತು ನಾಗರಿಕ ಉದ್ದೇಶಗಳಿಗಾಗಿ ಕಾನೂನು ಮಾಲೀಕತ್ವವನ್ನು ಸ್ಥಾಪಿಸಲು ಇದು ಅತ್ಯಗತ್ಯ ಸಾಧನವಾಗಿರುತ್ತದೆ.
ಎ-ಖಾತಾ ಎಂದರೇನು?
ಎ-ಖಾತಾ ಎಂದರೆ ಸರ್ಕಾರಿ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸುವ ಆಸ್ತಿಗಳಿಗೆ ನೀಡಲಾಗುವ ಪ್ರಮಾಣಪತ್ರ. ಅನುಮೋದಿತ ಲೇಔಟ್‌ಗಳು, ಮಂಜೂರಾದ ಕಟ್ಟಡ ಯೋಜನೆಗಳು ಮತ್ತು ಅಗತ್ಯ ಪ್ರಮಾಣಪತ್ರಗಳನ್ನು ಹೊಂದಿರುವ ಆಸ್ತಿಗಳು ಇದರ ವ್ಯಾಪ್ತಿಗೆ ಬರುತ್ತವೆ. ಇಂತಹ ಆಸ್ತಿಗಳನ್ನು ಕಾನೂನುಬದ್ಧವಾಗಿ ಮಾನ್ಯವೆಂದು ಪರಿಗಣಿಸಲಾಗುತ್ತದೆ ಮತ್ತು ಬ್ಯಾಂಕ್ ಸಾಲಗಳು, ಬ್ಯುಸಿನೆಸ್ ಲೈಸೆನ್ಸ್‌ಗಳು ಹಾಗೂ ಆಸ್ತಿ ವ್ಯವಹಾರಗಳಿಗೆ ಯಾವುದೇ ಸಮಸ್ಯೆಗಳಾಗುವುದಿಲ್ಲ.
ಬಿ ಖಾತಾ ಎಂದರೇನು?
ಬಿ-ಖಾತಾ ಪ್ರಮಾಣಪತ್ರವನ್ನು ಕಾನೂನು ಮತ್ತು ಯೋಜನಾ ಮಾನದಂಡಗಳನ್ನು ಸಂಪೂರ್ಣವಾಗಿ ಅನುಸರಿಸದ ಆಸ್ತಿಗಳಿಗೆ ನೀಡಲಾಗುತ್ತದೆ. ಅನಧಿಕೃತ ಲೇಔಟ್‌ಗಳಲ್ಲಿನ ಕಟ್ಟಡಗಳು, ಅನುಮೋದಿತ ಯೋಜನೆಗಳಿಲ್ಲದೆ ನಿರ್ಮಿಸಲಾದ ನಿರ್ಮಾಣಗಳು ಅಥವಾ ಆಕ್ಯುಪೆನ್ಸಿ ಪ್ರಮಾಣಪತ್ರಗಳನ್ನು ಹೊಂದಿರದ ಆಸ್ತಿಗಳು ಈ ವರ್ಗಕ್ಕೆ ಸೇರುತ್ತವೆ. ಇವು ಸಂಪೂರ್ಣವಾಗಿ ಕಾನೂನುಬದ್ಧವಾಗಿಲ್ಲದಿದ್ದರೂ, ಮಾಲೀಕರು ಆಸ್ತಿ ತೆರಿಗೆ ಪಾವತಿಸಬೇಕಾಗುತ್ತದೆ ಮತ್ತು ತೆರಿಗೆ ಉದ್ದೇಶಗಳಿಗಾಗಿ ಅವುಗಳ ವಿವರಗಳನ್ನು ದಾಖಲಿಸಲಾಗುತ್ತದೆ.
ಆದರೆ, ಬಿ-ಖಾತಾ ಆಸ್ತಿಗಳನ್ನು ಹೊಂದುವುದು ಹಲವು ಸಮಸ್ಯೆಗಳನ್ನು ಸಹ ತರಬಹುದು ಎಂದು ತಜ್ಞರು ಹೇಳುತ್ತಾರೆ. ಇಂತಹ ಆಸ್ತಿಗಳನ್ನು ಸಂಪೂರ್ಣ ಕಾನೂನುಬದ್ಧ ಎಂದು ಪರಿಗಣಿಸಲಾಗುವುದಿಲ್ಲ. ಅವುಗಳ ಮಾರಾಟ, ಕಟ್ಟಡ ಅನುಮೋದನೆಗಳನ್ನು ಪಡೆಯುವುದು ಅಥವಾ ವ್ಯಾಪಾರ ಪರವಾನಗಿಗಳಿಗೆ ಅರ್ಜಿ ಸಲ್ಲಿಸುವಾಗ ನಿಯಮಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಸಾಮಾನ್ಯವಾಗಿ ಇಂತಹ ಆಸ್ತಿಗಳ ವಿರುದ್ಧ ಸಾಲಗಳನ್ನು ನೀಡುವುದಿಲ್ಲ.
ಎ-ಖಾತಾ ಆಸ್ತಿಗಳಿಗೆ ಹೋಲಿಸಿದರೆ, ಬಿ-ಖಾತಾ ಆಸ್ತಿಗಳ ಮಾರುಕಟ್ಟೆ ಮೌಲ್ಯ ಕೂಡಾ ಕಡಿಮೆ ಇರುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಗ್ರೇಟರ್ ಬೆಂಗಳೂರು ಅಥಾರಿಟಿ ಮಾದರಿಯಲ್ಲೇ ನಿಯಮ ರೂಪಿಸಿ ಎ ಖಾತಾ ನೀಡುವಂತೆ ಸೂಚಿಸಲಾಗಿದೆ. ಆದ್ದರಿಂದ ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ಪುರಸಭೆ, ಪಟ್ಟಣ ಪಂಚಾಯಿತಿ, ನಗರಸಭೆ, ಮಹಾನರ ಪಾಲಿಕೆ ವ್ಯಾಪ್ತಿಯಲ್ಲಿರುವ ಬಿ ಖಾತಾ ಆಸ್ತಿಗಳನ್ನು ಎ ಖಾತಾ ಆಸ್ತಿಗಳಾಗಿ ವರ್ಗಾಯಿಲು ಅವಕಾಶ ಸಿಗಲಿದೆ ಎಂದು ಹೇಳಿದ್ದಾರೆ..


Click it and Unblock the Notifications