ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಬಳಕೆ ಬಹಳ ಅಗತ್ಯವಾಗಿಬಿಟ್ಟಿದೆ. ಆಧಾರ್ ಕಾರ್ಡ್‌ನಿಂದ (Aadhaar Card) ಹಿಡಿದು ಬ್ಯಾಂಕ್ ಅಕೌಂಟ್‌ವರೆಗೂ ಕ್ಷಣಮಾತ್ರದಲ್ಲಿ ಮೊಬೈಲ್ ಮೂಲಕ ಮಾಹಿತಿಯನ್ನು ಪಡೆಯಬಹುದು. ಅದೇ ಕಾರಣದಿಂದ ಇಂದಿಗೂ ಮೊಬೈಲ್ ಸುಲಭ ಬಳಕೆಯ ಸಾಧನವಾಗಿ ಮಾರ್ಪಾಡಾಗಿದೆ. ಖಾಲಿ ಮೊಬೈಲ್ ಒಂದಿದ್ದರೆ ಸಾಲದು, ಅದರ ಜೊತೆಗೆ ಸಿಮ್ ಕಾರ್ಡ್ (Sim Card) ಕೂಡಾ ಬೇಕೇ ಬೇಕು. ಇನ್ನು ಟೆಲಿಕಾಂ ಕಂಪನಿಗಳಲ್ಲಿ ಜಿಯೋ ಅಗ್ರಸ್ಥಾನದಲ್ಲಿದ್ದರೆ, ಏರ್‌ಟೆಲ್ (Jio-Airtel) ಎರಡನೇ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಆದರೆ ಇದೀಗ ಮೊಬೈಲ್ ಬಳಕೆದಾರರಿಗೆ ಬಿಗ್ ಶಾಕ್ ಎದುರಾಗಲಿದೆ.

ಹೌದು, ಇದೀಗ ಮೊಬೈಲ್ ರೀಚಾರ್ಜ್‌ಗಳು ಮತ್ತಷ್ಟು ದುಬಾರಿಯಾಗಲಿದೆ. ಈ ತಿಂಗಳಲ್ಲೇ ಟೆಲಿಕಾಂ ಕಂಪನಿಗಳು ತಮ್ಮ ರಿಚಾರ್ಜ್ ಪ್ಲಾನ್‌ಗಳನ್ನು ದುಬಾರಿಗೊಳಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಒಟ್ಟಾರೆ ಸುಂಕದಲ್ಲಿ ಶೇ 15 ರಷ್ಟು ಏರಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಮೊಬೈಲ್ ಬಳಕೆದಾರರಿಗೆ ಬೆಲೆ ಏರಿಕೆಯ ಬಿಸಿ!
ಮೊಬೈಲ್ ಬಳಕೆದಾರರ ಮೇಲೆ ಮತ್ತೊಮ್ಮೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ ಎಂದು ಇದೀಗ ವರದಿಯಾಗಿದೆ. ಇತ್ತೀಚೆಗೆ ಜಿಯೋ ಹೊರತುಪಡಿಸಿ, ಉಳಿದ ಕಂಪನಿಗಳು ತಮ್ಮ ಯೋಜನೆಗಳ ದರವನ್ನು ಹೆಚ್ಚಿಸಿದ್ದರೂ, ಇದೀಗ ಮತ್ತೊಮ್ಮೆ ಸುಂಕ ಏರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಮುಂದಿನ ಕೆಲವು ವಾರಗಳಲ್ಲಿ ಸರ್ಕಾರಿ ಸ್ವಾಮ್ಯದ BSNL, ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ (Vi) ಸೇರಿದಂತೆ ಪ್ರಮುಖ ಟೆಲಿಕಾಂ ಆಪರೇಟರ್‌ಗಳು ಸುಂಕ ಹೆಚ್ಚಳಕ್ಕೆ ಸಜ್ಜಾಗಿವೆ. ಇದು ಮೊಬೈಲ್ ಬಳಕೆದಾರರ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ.
ಕಳೆದ ಕೆಲವು ತಿಂಗಳಿಂದ ಟೆಲಿಕಾಂ ಕಂಪನಿಗಳ ಆದಾಯದಲ್ಲಿ ಭಾರೀ ಇಳಿಕೆಯಾಗಿದೆ ಎಂದು ವರದಿಯಾಗಿದೆ. ಇದನ್ನು ಹೆಚ್ಚಿಸುವ ಸಲುವಾಗಿ ಬಳಕೆದಾರರ ಜೇಬಿಗೆ ಕತ್ತರಿ ಹಾಕಲು ಕಂಪನಿಗಳು ಮುಂದಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಈ ಕಂಪನಿಗಳ ಆದಾಯ ಶೇ 10% ಕ್ಕೆ ಕುಸಿತ ಕಂಡಿದೆ ಎನ್ನಲಾಗಿದೆ. ಹಿಂದಿನ ನಾಲ್ಕು ತ್ರೈಮಾಸಿಕಗಳಲ್ಲಿ ಇವು ಶೇ 14-16% ರಷ್ಟು ಆದಾಯ ಗಳಿಸಿದ್ದವು. ಡಿಸೆಂಬರ್ ತ್ರೈಮಾಸಿಕದಲ್ಲಿ ಆದಾಯ ಮತ್ತಷ್ಟು ಇಳಿಕೆಯಾಗುವ ನಿರೀಕ್ಷೆಯಿದ್ದು, ಇದೇ ಕಾರಣದಿದ ಕಂಪನಿಗಳು ಬೆಲೆ ಏರಿಕೆಗೆ ಮುಂದಾಗಿದೆ ಎಂದು ಹೇಳಲಾಗಿದೆ.
ಒಟ್ಟಾರೆ ಶೇ 15% ರಷ್ಟು ಸುಂಕ ಹೆಚ್ಚಳವನ್ನು ನಿರೀಕ್ಷಿಸಲಾಗಿದೆ. ವರದಿಯ ಪ್ರಕಾರ, ಬ್ರೋಕರೇಜ್ ಸಂಸ್ಥೆ ಮೋತಿಲಾಲ್ ಓಸ್ವಾಲ್, ನಿರಂತರ ಹಣದುಬ್ಬರ ಮತ್ತು ಮುಂದಿನ ಕೆಲವು ತಿಂಗಳಲ್ಲಿ ಯಾವುದೇ ದೊಡ್ಡ ಚುನಾವಣೆ ಇಲ್ಲದಿರುವುದು ಡಿಸೆಂಬರ್‌ನಲ್ಲಿ ಟೆಲಿಕಾಂ ಕಂಪನಿಗಳು ಸುಂಕ ಏರಿಸಲು ಪ್ರಮುಖ ಕಾರಣ ಎಂದು ಹೇಳಿದ್ದಾರೆ. ಈ ಹೆಚ್ಚಳದಿಂದಾಗಿ 28 ದಿನಗಳ ಮಾನ್ಯತೆಯ ಪ್ಲಾನ್ ಸುಮಾರು ₹50 ರಷ್ಟು ದುಬಾರಿಯಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಕಳೆದ ತಿಂಗಳಷ್ಟೇ ಟೆಲಿಕಾಂ ಕಂಪನಿಗಳು ರೀಚಾರ್ಜ್ ದರವನ್ನೂ ಏರಿಕೆ ಮಾಡಿತ್ತು. ಇದೀಗ ಮತ್ತೆ ಏರಿಕೆಯಾಗುವ ಸಾಧ್ಯತೆಯಿದ್ದು, ಈ ಪರಿಣಾಮ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ.


Click it and Unblock the Notifications