8ನೇ ವೇತನ ಆಯೋಗದ (8th Pay Commission) ಪರಿಷ್ಕರಣೆ ಯಾವಾಗ ಆಗುತ್ತೆ ಎಂಬ ಪ್ರಶ್ನೆ ಲಕ್ಷಾಂತರ ಕೇಂದ್ರ ಸರ್ಕಾರಿ ನೌಕರರಲ್ಲಿದೆ. ಇದೀಗ ಈ ಬೆನ್ನಲ್ಲೇ ಕೇಂದ್ರ ಸರ್ಕಾರ ಡಿಸೆಂಬರ್ 8, 2025 ರಂದು ಮಹತ್ವದ ಅಪ್‌ಡೇಟ್ ನೀಡಿದೆ. ಕೇಂದ್ರ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಯಲ್ಲಿ, ಈ ಆಯೋಗದಿಂದ 50.14 ಲಕ್ಷ ನೌಕರರು ಮತ್ತು ಸುಮಾರು 69 ಲಕ್ಷ ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ ಎಂದು ವರದಿ ಬಹಿರಂಗ ಪಡಿಸಿದರು.

ಪಂಕಜ್ ಚೌಧರಿ ಅವರು ಎನ್.ಕೆ. ಪ್ರೇಮಚಂದ್ರನ್, ತಂಗ ತಮಿಳ್ಸೆಲ್ವನ್, ಗಣಪತಿ ರಾಜಕುಮಾರ್ ಬಿ, ಧರ್ಮೇಂದ್ರ ಯಾದವ್ ಸೇರಿ ಹಲವು ಸಂಸದರ ಪ್ರಶ್ನೆಗಳಿಗೆ ಲಿಖಿತ ಉತ್ತರ ನೀಡುವ ವೇಳೆ ಈ ವರದಿಯನ್ನು ಬಹಿರಂಗಪಡಿಸಿದರು.
ಯಾವಾಗ ಬರುತ್ತೆ 8ನೇ ವೇತನ!
ಇನ್ನು 8ನೇ ವೇತನ ಆಯೋಗ ಜಾರಿಗೆ ಬರುವ ದಿನಾಂಕವನ್ನು ಕೇಂದ್ರ ಸರ್ಕಾರವೇ ನಿರ್ಧರಿಸಲಿದೆ ಎಂದು ಈ ವೇಳೆ ಸ್ಪಷ್ಟಪಡಿಸಿದರು. ನವೆಂಬರ್ 3, 2025 ರಂದು ಕೇಂದ್ರ ಸರ್ಕಾರ ಆಯೋಗ ರಚಿಸಿದ್ದು, 18 ತಿಂಗಳೊಳಗೆ ತನ್ನ ಶಿಫಾರಸುಗಳನ್ನು ಸಲ್ಲಿಸಲು ಗಡುವು ನೀಡಿದೆ.
ಆಯೋಗವು ನೌಕರರ ಮೂಲ ವೇತನ, ಪಿಂಚಣಿ ಮತ್ತು ಭತ್ಯೆಗಳನ್ನು ಪರಿಶೀಲಿಸಲಿದೆ ಎಂದು ಹೇಳಲಾಗಿದೆ. ಇನ್ನು "ಫಿಟ್‌ಮೆಂಟ್ ಫ್ಯಾಕ್ಟರ್" ಪರಿಚಯಿಸುವ ಮೂಲಕ ಎಲ್ಲಾ ನೌಕರರಿಗೂ ಏಕರೂಪದ ವೇತನ ಹೆಚ್ಚಳ ಪರಿಚಯಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
ಇನ್ನು 8ನೇ ವೇತನ ಆಯೋಗದ ಶಿಫಾರಸುಗಳು 2026ರ ಜನವರಿ 1ರಿಂದ ಜಾರಿಗೆ ಬರಬಹುದು ಎಂದು ನಿರೀಕ್ಷಿಸಲಾಗಿದೆ. ನೌಕರರು ಮತ್ತು ಪಿಂಚಣಿದಾರರಿಗೆ ಶೇ 30-34ರಷ್ಟು ವೇತನ ಹೆಚ್ಚಳ ದೊರೆಯುವ ನಿರೀಕ್ಷೆಯಿದೆ ಎಂದು ತಜ್ಞರು ಈ ಮೂಲಕ ಅಂದಾಜಿಸಿದ್ದಾರೆ.
ಡಿಎ ಮತ್ತು ಡಿಆರ್ ವಿಲೀನ?
ಡಿಎ ಮತ್ತು ಡಿಆರ್ (DA-DR) ವಿಲೀನ ಆಗುತ್ತೆ ಎಂಬ ಚರ್ಚೆ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಆದರೆ ಇದೀಗ ಲೋಕಸಭೆಯಲ್ಲಿ ಈ ವದಂತಿಗಳಿಗೆ ತೆರೆ ಎಳೆದಿದ್ದಾರೆ. 2016ರಲ್ಲಿ 7ನೇ ವೇತನ ಆಯೋಗ ಜಾರಿಯಾದಾಗಿನಿಂದ ವಿಲೀನದ ವದಂತಿ ಮತ್ತಷ್ಟು ವೇಗ ಪಡೆದುಕೊಂಡಿತು. ಅಲ್ಲದೇ ಬೇಡಿಕೆಯೂ ಹೆಚ್ಚಾಗಿತ್ತು. ನೌಕರರ ಸಂಘಟನೆಗಳು ಮತ್ತು ಪಿಂಚಣಿದಾರರ ಸಂಸ್ಥೆಗಳು, DA ಯನ್ನು ಮೂಲ ವೇತನದೊಂದಿಗೆ ಸೇರಿಸಿದರೆ ಉತ್ತಮ ಪಿಂಚಣಿ, ಸುಧಾರಿತ ಗ್ರಾಚ್ಯುಟಿ ಲೆಕ್ಕಾಚಾರಗಳು ಮತ್ತು ಹಣದುಬ್ಬರದ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂಬುದು ವಾದ. ಅದೇ ಕಾರಣದಿಂದ ಬೇಡಿಕೆಯೂ ನೀಡಲಾಗಿತ್ತು.
ಅಲ್ಲದೇ, ವಿಲೀನದಿಂದ ಉಂಟಾಗುವ ಆರ್ಥಿಕ ಸಮಸ್ಯೆಗಳನ್ನು ತಪ್ಪಿಸೋದಕ್ಕಾಗಿ ಸರ್ಕಾರ ಕೂಡ ಇದನ್ನು ನಿರಾಕರಿಸುತ್ತಲೇ ಬರುತ್ತಿದೆ. ಆರ್ಥಿಕ ವಿಶ್ಲೇಷಕರ ಅಂದಾಜಿನ ಪ್ರಕಾರ, ಒಂದು ವೇಳೆ DA ಯನ್ನು ಮೂಲ ವೇತನದೊಂದಿಗೆ ವಿಲೀನ ಮಾಡಿದರೆ ಕೇಂದ್ರದ ವೇತನ ಮತ್ತು ಪಿಂಚಣಿ ವೆಚ್ಚವು ಜಿಡಿಪಿಯ 0.5% ಕ್ಕಿಂತ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಸದ್ಯ ಎಂಟನೇ ವೇತನ ಆಯೋಗ ಜನವರಿಯಲ್ಲಿ ಪರಿಷ್ಕರಣೆಯಾಗಬಹುದು ಎಂದು ಜನ ನಿರೀಕ್ಷೆಯಲ್ಲಿದ್ದಾರೆ.


Click it and Unblock the Notifications