ತಾಳೆ ಎಣ್ಣೆ (palm oil), ಸೂರ್ಯ ಕಾಂತಿ ಎಣ್ಣೆ (sunflower), ಸೋಯಾಬಿನ್ ಎಣ್ಣೆ (soybean oil) ಬೆಲೆಯು ಲೀಟರ್‌ಗೆ 15 ರೂಪಾಯಿವರೆಗೆ ಇಳಿಕೆ ಮಾಡಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಇಳಿಕೆಯಾದ ಹಿನ್ನೆಲೆಯಿಂದಾಗಿ ದರ ಕಡಿತ ಮಾಡಲಾಗಿದೆ.
ತಾಳೆ ಎಣ್ಣೆ ಲೀಟರ್‌ಗೆ 7-8 ರೂಪಾಯಿ, ಸೂರ್ಯಕಾಂತಿ ಎಣ್ಣೆ ಲೀಟರ್‌ಗೆ 10-15 ರೂಪಾಯಿ ಇಳಿಕೆಯಾಗಿದೆ. ಈ ಸಂದರ್ಭದಲ್ಲೇ ಸೋಯಾಬಿನ್ ಎಣ್ಣೆ ಬೆಲೆಯಲ್ಲಿ ರೂಪಾಯಿ 5 ಇಳಿಕೆಯಾಗಿದೆ ಎಂದು ವರದಿಯು ಉಲ್ಲೇಖ ಮಾಡಿದೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಭಾರತದ ತೈಲ ಉತ್ಪಾದನಾ ಸಂಸ್ಥೆಯ ಅಧ್ಯಕ್ಷ ಸುಧಾಕರ್ ರಾವ್ ದೇಸಾಯಿ, "ತೈಲ ಬೆಲೆಯಲ್ಲಿ ಇಳಿಕೆಯಾದ ಕಾರಣದಿಂದಾಗಿ ಬೇಡಿಕೆಯೂ ಕೂಡಾ ಅಧಿಕವಾಗುವ ಸಾಧ್ಯತೆ ಇದೆ. ಇದು ಆಹಾರ ಹಣದುಬ್ಬರದ ಮೇಲೆಯೂ ಪ್ರಭಾವ ಬೀರಲಿದೆ," ತಿಳಿಸಿದ್ದಾರೆ. ಮೇ ತಿಂಗಳಿನಲ್ಲಿ ಖಾದ್ಯ ತೈಲದ ವಿಭಾಗದಲ್ಲಿ ಶೇಕಡ 13.26ರಷ್ಟು ಹಣದುಬ್ಬರ ಕಂಡು ಬಂದಿದೆ.

ಫ್ರೀಡಂ ಸನ್‌ಪ್ಲವರ್ ಎಣ್ಣೆಯ ಬೆಲೆ ರೂ.15 ಕಡಿತ
ಹೈದಾರಾಬಾದ್ ಮೂಲದ ಜೆಮಿನಿ ಖಾದ್ಯ ತೈಲ ಸಂಸ್ಥೆಯು ಫ್ರೀಡಂ ಸನ್‌ಪ್ಲವರ್ ಎಣ್ಣೆಯ ಬೆಲೆಯಲ್ಲಿ ರೂಪಾಯಿ 15 ಕಡಿತ ಮಾಡಿದ್ದು, ದರವು 220 ರೂಪಾಯಿಗೆ ತಲುಪಿದೆ. ಇನ್ನು ಈ ವಾರದಲ್ಲಿ ಸಂಸ್ಥೆಯು ಫ್ರೀಡಂ ಸನ್‌ಪ್ಲವರ್ ಎಣ್ಣೆಯ ಬೆಲೆಯಲ್ಲಿ ಮತ್ತೆ 20 ರೂಪಾಯಿ ಕಡಿತ ಮಾಡುವ ಸಾಧ್ಯತೆ ಇದೆ.
ಈ ನಡುವೆ ಮೇ ತಿಂಗಳಿಗೆ ಹೋಲಿಕೆ ಮಾಡಿದಾಗ ಮೇ ತಿಂಗಳಿನಲ್ಲಿ ಭಾರತದಲ್ಲಿ ತಾಳೆ ಎಣ್ಣೆ ಆಮದು ಶೇಕಡ ಹತ್ತರಷ್ಟು ಕುಸಿದಿದೆ. ಇಂಡೋನೇಷ್ಯಾ ಖಾದ್ಯ ತೈಲ ಆಮದಿನ ಮೇಲೆ ನಿಷೇಧ ಹೇರಿದ ಬಳಿಕ ಈ ಬೆಳವಣಿಗೆ ಕಂಡು ಬಂದಿದೆ. ಭಾರರದಲ್ಲಿ ಮೇ ತಿಂಗಳಿನಲ್ಲಿ 5,14,022 ಟನ್ ತಾಳೆ ಎಣ್ಣೆ ಆಮದು ಮಾಡಿದ್ದರೆ, ಏಪ್ರಿಲ್‌ನಲ್ಲಿ 5,72,508 ತಾಳೆ ಎಣ್ಣೆ ಆಮದು ಮಾಡಲಾಗಿದೆ.
ಭಾರತವು ತಾಳೆ ಎಣ್ಣೆಯನ್ನು ಹೆಚ್ಚಾಗಿ ಆಮದು ಮಾಡಿಕೊಳ್ಳುತ್ತದೆ. ಮುಖ್ಯವಾಗಿ ಇಂಡೋನೇಷ್ಯಾ, ಮಲೇಷಿಯಾದ ಮೇಲೆ ಭಾರತವು ಅವಲಂಭಿಸಿದೆ. ಭಾರತವು ಪ್ರತಿ ವರ್ಷ ಸರಿಸುಮಾರು 13.5 ಮಿಲಿಯನ್ ಟನ್ ಖಾದ್ಯ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಹಾಗೆಯೇ 8-8.5 ಮಿಲಿಯನ್ ಟನ್ ತಾಳೆ ಎಣ್ಣೆ ಆಮದು ಮಾಡಿಕೊಳ್ಳುತ್ತದೆ. ಭಾರತವು ಶೇಕಡ 45ರಷ್ಟು ಖಾದ್ಯ ತೈಲವನ್ನು ಇಂಡೋನೇಷ್ಯಾದಿಂದ ಆಮದು ಮಾಡಿಕೊಂಡರೆ ಉಳಿದ ಖಾದ್ಯ ತೈಲವನ್ನು ಮಲೇಷಿಯಾದಿಂದ ಆಮದು ಮಾಡಿಕೊಳ್ಳುತ್ತದೆ. ಇಂಡೋನೇಷ್ಯಾವು ಮೇ 23ರಂದು ಆಮದು ನಿಷೇಧವನ್ನು ಹಿಂದಕ್ಕೆ ಪಡೆದಿದೆ.


Click it and Unblock the Notifications