ಆರ್‌ಬಿಐ ಇತ್ತೀಚೆಗೆ ತೆಗೆದುಕೊಂಡ ಮಹತ್ವದ ನಿರ್ಧಾರ ಭಾರೀ ಸಂಚಲನ ಸೃಷ್ಟಿಸಿತ್ತು. ಭಾರತೀಯ ಆರ್ಥಿಕತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ರೆಪೋ ರೇಟ್ ಕಡಿತದ ನಿರ್ಧಾರ ಹಲವು ಅನುಕೂಲಗಳನ್ನು ನೀಡಲಿದೆ. ರೆಪೋ ದರ ಕಡಿತದ ಬೆನ್ನಲ್ಲೇ ಇದೀಗ, ಗೃಹಸಾಲ ಸಾಲಗಾರರಿಗೆ ಸಿಹಿ ಸುದ್ದಿ ಹೊರಬಿದ್ದಿದೆ. ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ತನ್ನ ರೆಪೋ ಲಿಂಕ್ಡ್ ಲೆಂಡಿಂಗ್ ರೇಟ್ (RLLR) ಅನ್ನು ಕಡಿತಗೊಳಿಸಿದೆ. ಇದರ ನೇರ ಪರಿಣಾಮವಾಗಿ, PNB ಯ RLLR ಗೆ ಲಿಂಕ್ ಆಗಿರುವ ಗೃಹಸಾಲಗಳ ಮಾಸಿಕ ಕಂತುಗಳು (EMI) ಇಳಿಯುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ರೆಪೋ ದರಗಳನ್ನು 25 ಮೂಲಾಂಕಗಳಿಂದ ಕಡಿತಗೊಳಿಸಿದ ಬೆನ್ನಲ್ಲೇ PNB ಈ ಪ್ರಮುಖ ನಿರ್ಧಾರ ಕೈಗೊಂಡಿದೆ.

ಪಿಎನ್‌ಬಿ ಗ್ರಾಹಕರಿಗೆ ಗುಡ್ ನ್ಯೂಸ್!
ಡಿಸೆಂಬರ್ 6, ಶನಿವಾರದಂದು ಸ್ಟಾಕ್ ಎಕ್ಸ್‌ಚೇಂಜ್‌ಗೆ ಸಲ್ಲಿಸಿದ ಅಧಿಸೂಚನೆಯಲ್ಲಿ, PNB ಕೂಡಲೇ ಜಾರಿಗೆ ಬರುವಂತೆ RLLR ಅನ್ನು ಅಪ್ಡೇಟ್ ಮಾಡುವುದಾಗಿ ಘೋಷಣೆ ಮಾಡಿದೆ. "ಡಿಸೆಂಬರ್ 5, 2025 ರಂದು RBI ರೆಪೋ ದರವನ್ನು ಕಡಿಮೆ ಮಾಡಿದ ಪರಿಣಾಮವಾಗಿ, ಪಿಎನ್‌ಬಿ ಬ್ಯಾಂಕ್ ಡಿಸೆಂಬರ್ 6, 2025 ರಿಂದ ಜಾರಿಗೆ ಬರುವಂತೆ ರೆಪೋ ಲಿಂಕ್ಡ್ ಲೆಂಡಿಂಗ್ ರೇಟ್ (RLLR) ಅನ್ನು 8.35% (10 ಬಿಪಿಎಸ್ BSP ಸೇರಿದಂತೆ) ನಿಂದ 8.10% (10 ಬಿಪಿಎಸ್ BSP ಸೇರಿದಂತೆ) ಗೆ ಪರಿಷ್ಕರಿಸಿದೆ," ಎಂದು PNB ಪ್ರಕಟಿಸಿದೆ. ಆದರೆ, ಬ್ಯಾಂಕ್‌ನ ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್ (MCLR) ಮತ್ತು ಬೇಸ್ ರೇಟ್‌ನಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.
PNB ಯ ಈ ದರ ಕಡಿತವು RBI ತನ್ನ ದ್ವೈಮಾಸಿಕ ವಿತ್ತೀಯ ನೀತಿ ಸಮಿತಿ (MPC) ಸಭೆಯಲ್ಲಿ ರೆಪೋ ದರಗಳನ್ನು 25 ಮೂಲಾಂಕಗಳಿಂದ ಕಡಿತಗೊಳಿಸಿದ ಬೆನ್ನಲ್ಲಿ ಕೈಗೊಳ್ಳಲಾಗಿದೆ. RBI ಗವರ್ನರ್ ಸಂಜಯ್ ಮಲ್ಹೋತ್ರಾ ನೇತೃತ್ವದ ಆರು ಸದಸ್ಯರ MPC ಸಭೆ, ರೆಪೋ ದರವನ್ನು 25 ಮೂಲಾಂಕಗಳಿಂದ 5.25% ಕ್ಕೆ ಇಳಿಸಲು ಸರ್ವಾನುಮತದಿಂದ ಮತ ಚಲಾಯಿಸಿ, ರೆಪೋ ದರ ಸಂಬಂಧಿಸಿ ಮಹತ್ವದ ನಿರ್ಧಾರವನ್ನು ಕೈಗೊಂಡಿತ್ತು. 2025ರ ಫೆಬ್ರವರಿಯಿಂದ ಕೇಂದ್ರ ಬ್ಯಾಂಕ್‌ನ ಇದು ನಾಲ್ಕನೇ ದರ ಕಡಿತವಾಗಿದೆ.
RLLR ಎಂದರೇನು?
ರೆಪೋ ಲಿಂಕ್ಡ್ ಲೆಂಡಿಂಗ್ ರೇಟ್ (RLLR) ಎಂದರೆ ಗೃಹ ಸಾಲದ ಬಡ್ಡಿ ದರವಾಗಿದೆ. ಇದು ಆರ್‌ಬಿಐ ರೆಪೋ ದರಕ್ಕೆ ನೇರವಾಗಿ ಲಿಂಕ್ ಆಗಿರುತ್ತದೆ. ಆರ್‌ಬಿಐ ರೆಪೋ ದರ ಕಡಿತಗೊಳಿಸಿದರೆ RLLR ಸಹ ಇಳಿಕೆಯಾಗುತ್ತದೆ, ಅಲ್ಲದೇ ಸಾಲಗಾರರ ಮಾಸಿಕ ಕಂತುಗಳು (EMI) ಕೂಡಾ ಕಡಿಮೆಯಾಗುತ್ತವೆ. ಅಕ್ಟೋಬರ್ 2019 ರ ಆರ್‌ಬಿಐ ಸುತ್ತೋಲೆಯಂತೆ, ಬ್ಯಾಂಕುಗಳು ತಮ್ಮ ಚಿಲ್ಲರೆ ಸಾಲಗಳನ್ನು ಬಾಹ್ಯ ಮಾನದಂಡದ ಸಾಲ ದರಗಳಿಗೆ (E-BLR) ಲಿಂಕ್ ಮಾಡುವುದು ಕಡ್ಡಾಯ. ಇದಕ್ಕಾಗಿ ಹೆಚ್ಚಿನ ಬ್ಯಾಂಕುಗಳು ರೆಪೋ ದರವನ್ನು ಮಾನದಂಡವಾಗಿ ಆಯ್ಕೆಮಾಡಿವೆ.
PNB ಮಾತ್ರವಲ್ಲದೇ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇಂಡಿಯನ್ ಬ್ಯಾಂಕ್ ಸೇರಿದಂತೆ ಇತರ ಬ್ಯಾಂಕುಗಳಿಂದಲೂ ಇದೇ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇಂಡಿಯನ್ ಬ್ಯಾಂಕ್ ಸಹ ತನ್ನ ರೆಪೋ-ಲಿಂಕ್ಡ್ ಬೆಂಚ್‌ಮಾರ್ಕ್ ಲೆಂಡಿಂಗ್ ದರವನ್ನು 8.20% ರಿಂದ 7.95% ಕ್ಕೆ (25 ಮೂಲಾಂಕಗಳ ಕಡಿತ) ಇಳಿಸಿದೆ.


Click it and Unblock the Notifications