ಕಾಂಗ್ರೆಸ್ ಚುನಾವಣೆಗೂ ಮುನ್ನ ಭರವಸೆ ನೀಡಿದಂತೆ ಅಧಿಕಾರಕ್ಕೆ ಬಂದ ಬಳಿಕ ಐದು ಗ್ಯಾರಂಟಿ ಯೋಜನೆಗಳನ್ನು ಕೂಡಾ ಜಾರಿ ಮಾಡಿದೆ. ಈ ಯೋಜನೆಗಳಲ್ಲಿ ಗೃಹ ಲಕ್ಷ್ಮೀ ಯೋಜನೆ ಮಾತ್ರ ಆಗಾಗೆ ಹೆಚ್ಚಾಗಿ ಸುದ್ದಿಯಾಗುತ್ತಿದೆ. ಈ ಯೋಜನೆ ಅಧಿಕ ಮೆಚ್ಚುಗೆ ಲಭಿಸಿದ್ದರೂ ಕೆಲವು ಸಮಸ್ಯೆಗಳು ಮಾತ್ರ ಇಂದಿಗೂ ಹಾಗೆಯೇ ಉಳಿದಿದೆ.
ಈ ಸಮಸ್ಯೆಗಳನ್ನು, ಕುಂದುಕೊರತೆಗಳನ್ನು ಸರಿಪಡಿಸಲು ಇಲಾಖೆಯು ಹಲವಾರು ಪ್ರಯತ್ನಗಳನ್ನು ಮಾಡುತ್ತಾ ಬಂದಿದೆ. ಈಗ ಮೂರು ದಿನಗಳ ಕಾಲ ಕುಂದುಕೊರತೆಗಳ ಪರಿಹಾರಕ್ಕಾಗಿಯೇ ಕ್ಯಾಂಪ್ ಅಥವಾ ಶಿಬಿರವೊಂದನ್ನು ನಡೆಸಲಾಗುತ್ತಿದೆ. ಯಾವ ನಗರದಲ್ಲಿ, ಯಾರಿಗೆ ಇದರ ಪ್ರಯೋಜನ ಲಭ್ಯವಾಗಲಿದೆ, ಯಾವಾಗ ಆರಂಭ ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

ಯಾವ ದಿನ, ಯಾವ ನಗರ?
ಗೃಹ ಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಕುಂದುಕೊರತೆಗಳನ್ನು ಪರಿಹರಿಸಲು ಡಿಸೆಂಬರ್ 27 ರಿಂದ (ಇಂದಿನಿಂದ) ಡಿಸೆಂಬರ್ 29 ರವರೆಗೆ ಮೈಸೂರು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಶಿಬಿರಗಳು ನಡೆಯಲಿವೆ.
ಮನೆಯ ಮಹಿಳಾ ಮುಖ್ಯಸ್ಥರಿಗೆ ಮಾಸಿಕವಾಗಿ ಎರಡು ಸಾವಿರ ರೂಪಾಯಿ ಸಹಾಯವನ್ನು ನೀಡುವ ಯೋಜನೆ ಇದಾಗಿದ್ದು, ಇದರ ಶಿಬಿರವು ಡಿಸೆಂಬರ್ 27 ರಿಂದ 29 ರವರೆಗೆ ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ನಡೆಯಲಿದೆ ಎಂದು ಮೈಸೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಾವೆಲ್ಲ ಸಮಸ್ಯೆ ಪರಿಹಾರಕ್ಕೆ ಸಹಾಯ?
ಬ್ಯಾಂಕ್‌ಗೆ ಸಂಬಂಧಿಸಿದ ವಿಷಯಗಳು, ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆಗಳನ್ನು ಲಿಂಕ್ ಮಾಡುವುದು, ಹೊಸ ಬ್ಯಾಂಕ್ ಖಾತೆಗಳನ್ನು ತೆರೆಯುವುದು, ಇ-ಕೆವೈಸಿ ಅಪ್‌ಡೇಟ್, ಗೃಹ ಲಕ್ಷ್ಮಿ ಅರ್ಜಿಗಳ ಸ್ಥಿತಿಯನ್ನು ಪರಿಶೀಲಿಸುವುದು ಮತ್ತು ಪರಿಹಾರವನ್ನು ಕಂಡುಹಿಡಿಯುವುದು ಸೇರಿದಂತೆ ತಾಂತ್ರಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಫಲಾನುಭವಿಗಳ ಕುಂದುಕೊರತೆಗಳನ್ನು ಪರಿಹರಿಸಲು ಶಿಬಿರವು ಸಹಾಯ ಮಾಡುತ್ತದೆ.
ಗೃಹ ಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಇತರ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನ ಈ ಶಿಬಿರದಲ್ಲಿ ಮಾಡಲಾಗುತ್ತದೆ. ಸಾರ್ವಜನಿಕರು ಈ ಅವಕಾಶವನ್ನು ಬಳಸಿಕೊಳ್ಳುವಂತೆ ಮೈಸೂರು ಜಿಲ್ಲಾ ಪಂಚಾಯತ್ ಸಿಇಒ ಪತ್ರಿಕಾ ಹೇಳಿಕೆಯಲ್ಲಿ ಕೋರಿದ್ದಾರೆ. ಇದು ಮೈಸೂರಿನ ನಾಗರಿಕರಿಗಾಗಿ ಜಿಲ್ಲಾ ಪಂಚಾಯತ್ ಆಯೋಜಿಸಿರುವ ಕ್ಯಾಂಪ್ ಆಗಿದೆ.
ಗೃಹಲಕ್ಷ್ಮೀ ಯೋಜನೆ ತಾಂತ್ರಿಕ ಸಮಸ್ಯೆ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈ ಹಿಂದೆ ದೀಪಾವಳಿಯೊಳಗೆ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೆ ತಾಂತ್ರಿಕ ಸಮಸ್ಯೆ ಮಾತ್ರ ದೀಪಾವಳಿ ಕಳೆದು ಇಷ್ಟು ದಿನಗಳಾದರೂ ಸರಿಯಾಗಿಲ್ಲ.
ಫಲಾನುಭವಿಗಳ ಆಧಾರ್ ಕಾರ್ಡ್ ಮೊದಲಾದವುಗಳಲ್ಲಿರುವ ಹೆಸರು ಮತ್ತು ಖಾತೆಗಳಲ್ಲಿ ಇರುವ ಹೆಸರು ಹೊಂದಾಣಿಕೆಯಾಗದ ಕಾರಣ ಶೇಕಡ 100 ರಷ್ಟು ಮಹಿಳೆಯರಿಗೆ ಈ ಯೋಜನೆಯ ಪ್ರಯೋಜನ ಲಭ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.
ಇನ್ನು ಪ್ರತಿ ತಿಂಗಳು ದಿನಾಂಕ 15-20 ರ ಒಳಗಾಗಿ ಗೃಹ ಲಕ್ಷ್ಮೀ ಯೋಜನೆಯ ಮೊತ್ತವು ವರ್ಗಾವಣೆ ಮಾಡಲಾಗುತ್ತದೆ ಎಂದು ಹಣಕಾಸು ಇಲಾಖೆ ಭರವಸೆ ನೀಡಿದೆ ಎಂದು ಈ ಹಿಂದೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಇದರ ಒಳಗಾಗಿ ಮೊತ್ತ ಬಂದಿಲ್ಲವೆಂದಾದರೆ ಮೈಸೂರಿನ ಜನರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬಹುದು.


Click it and Unblock the Notifications